varthabharthi

ವಿಶೇಷ-ವರದಿಗಳು

ಪ್ರತಿಯೋರ್ವ ನಾಗರಿಕ ತಿಳಿದುಕೊಳ್ಳಬೇಕಾದ ಅಗತ್ಯ ಮಾಹಿತಿಯಿದು…

ಆಸ್ತಿ ಖರೀದಿ, ಹಣ ವಿದ್ ಡ್ರಾ, ರೈಲ್ವೆ ಟಿಕೆಟ್, ಶಾಪಿಂಗ್ ಗೆ ಹೊಸ ನಿಯಮ: ಸೆಪ್ಟಂಬರ್ 1ರಿಂದ ಏನೆಲ್ಲಾ ಬದಲಾಗಲಿದೆ?

ವಾರ್ತಾ ಭಾರತಿ : 31 Aug, 2019

ಹೊಸದಿಲ್ಲಿ, ಆ.31: ನಾಳೆ, ಸೆಪ್ಟಂಬರ್ 1ರಿಂದ  ಕೇಂದ್ರ ಸರಕಾರ ಈ ಬಾರಿ ಬಜೆಟ್ ನಲ್ಲಿ ಘೋಷಿಸಿದ ಹಲವಾರು ಆದಾಯ ತೆರಿಗೆ ಸಂಬಂಧಿತ ಬದಲಾವಣೆಗಳು ಹಾಗೂ ಇನ್ನಿತರ ಕೆಲವೊಂದು ಬದಲಾವಣೆಗಳು ಜಾರಿಯಾಗಲಿವೆ.

ಅವುಗಳು ಇಂತಿವೆ

ಆಸ್ತಿ ಖರೀದಿ ಸಂಬಂಧಿಸಿದ ಟಿಡಿಎಸ್ : ಆಸ್ತಿ ಖರೀದಿಸಿದಾಗ ನೀವು ಪಾವತಿಸಬೇಕಾದ ಟಿಡಿಎಸ್ ಹೆಚ್ಚಾಗಲಿದೆ. ಟಿಡಿಎಸ್  ಲೆಕ್ಕ ಹಾಕಲು ಸಂಬಂಧಿಸಿದವರು ಖರೀದಿಸಿದ ಆಸ್ತಿಯ ಭಾಗವಾಗಿರುವ ಕ್ಲಬ್  ಮೆಂಬರ್‍ ಶಿಪ್,  ಕಾರು ಪಾರ್ಕಿಂಗ್ ಮತ್ತಿತರ ಸವಲತ್ತುಗಳಿಗೆ ಮಾಡಿದ ಖರ್ಚನ್ನೂ ಸೇರಿಸಿ ಟಿಡಿಎಸ್ ನಿರ್ಧರಿಸಲಾಗುತ್ತದೆ.

ನಗದು ವಿದ್ ಡ್ರಾ:  ಒಂದು ವರ್ಷದ ಅವಧಿಯಲ್ಲಿ ಒಂದು ಕೋಟಿ ರೂಪಾಯಿಗೂ ಅಧಿಕ ಕ್ಯಾಶ್ ವಿದ್‍ ಡ್ರಾ ಮಾಡಿದರೆ ಶೇ 2ರಷ್ಟು ಟಿಡಿಎಸ್ ಪಾವತಿಸಬೇಕು.

ಮನೆ ನವೀಕರಣ : ಮನೆ ನವೀಕರಣಕ್ಕಾಗಿ ಗುತ್ತಿಗೆದಾರರಿಗೆ ಅಥವಾ ಮದುವೆ ಸಮಾರಂಭ ಆಯೋಜಕರಿಗೆ ವಾರ್ಷಿಕ 50 ಲಕ್ಷ ರೂ. ನೀಡಿದ್ದೇ ಆದಲ್ಲಿ ಶೇ. 5ರಷ್ಟು ಟಿಡಿಎಸ್ ಕಡಿತಗೊಳಿಸಬೇಕು.

ಆಧಾರ್ ಹಾಗೂ ಪಾನ್ ಜೋಡಣೆ ಮಾಡಿರದೇ ಇದ್ದರೆ:  ಪಾನ್ ಗೆ ಜೋಡಿಸದ ಆಧಾರ್ ಸಂಖ್ಯೆ ನೀಡುವವರಿಗೆ ಹೊಸ ಪಾನ್ ಕಾರ್ಡನ್ನು ಆದಾಯ ತೆರಿಗೆ ಇಲಾಖೆ ನೀಡುವುದು.

ವಿಮಾ ಹಣ : ನಿಮಗೆ ಸೇರುವ ವಿಮಾ ಹಣಕ್ಕೆ ತೆರಿಗೆ ಅನ್ವಯಿಸುತ್ತದೆ ಎಂದಾದರೆ  ನಿಮಗೆ  ದೊರಕುವ ನಿವ್ವಳ ಮೊತ್ತ (ದೊರೆತ ಒಟ್ಟು  ಮೊತ್ತದಿಂದ ಪಾವತಿಸಿದ ಪ್ರೀಮಿಯಂ ಕಳೆದು) ಶೇ. 5ರಷ್ಟು ಟಿಡಿಎಸ್ ನೀಡಬೇಕು.

ಆನ್ ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್:  ಆನ್ ಲೈನ್  ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ಐಆರ್‍ಸಿಟಿಸಿ ಸೇವಾ ಶುಲ್ಕ ವಿಧಿಸಲಿದೆ. ಎಸಿ ರಹಿತ ಕ್ಲಾಸ್ ಬುಕಿಂಗ್ ಮಾಡುವವರಿಗೆ 15 ರೂ. ಸೇವಾ ಶುಲ್ಕ ಮತ್ತು ಎಸಿ ಹಾಗು, ಫಸ್ಟ್ ಕ್ಲಾಸ್ ಟಿಕೆಟ್ ಬುಕ್ ಮಾಡುವವರಿಗೆ 30 ರೂ. ಶುಲ್ಕ ವಿಧಿಸಲಾಗುವುದು.

ತೆರಿಗೆ ಬಾಕಿ: ಬಾಕಿಯಿರುವ ತೆರಿಗೆ ವ್ಯಾಜ್ಯ ಪ್ರಕರಣಗಳಲ್ಲಿ ಹಾಗೂ ಸೇವಾ ಮತ್ತು ಸೆಂಟ್ರಲ್ ಅಬಕಾರಿ ಸುಂಕ  ಬಾಕಿಯಿರುವವರಿಗೆ ಸ್ವಲ್ಪ ಮಟ್ಟಿನ ನಿರಾಳತೆಯುಂಟು ಮಾಡುವ ಹೊಸ ಯೋಜನೆ ಜಾರಿಗೊಳ್ಳಲಿದೆ.

ಮೋಟಾರ್ ವಾಹನ ಕಾಯಿದೆ: ಮೋಟಾರು ವಾಹನಗಳ ತಿದ್ದುಪಡಿ ಕಾಯಿದೆ ಜಾರಿಯಾಗಲಿದ್ದು, ಅದರನ್ವಯ ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ಮೊತ್ತ ಹತ್ತು ಪಟ್ಟಿಗೂ  ಹೆಚ್ಚು ಏರಿಕೆಯಾಗಲಿದೆ.

ಶಾಪಿಂಗ್ ಮೊತ್ತ : ಇಲ್ಲಿಯ ತನಕ 50,000 ರೂ.ಗಿಂತ ಹೆಚ್ಚು ಹಣಕಾಸು ವ್ಯವಹಾರಗಳ ಕುರಿತಂತೆ ಮಾತ್ರ ಬ್ಯಾಂಕುಗಳು ಆದಾಯ ತೆರಿಗೆಗೆ ಮಾಹಿತಿ ನೀಡಬೇಕಿತ್ತು. ಆದರೆ ಇನ್ನು ಮುಂದೆ ಸಣ್ಣ  ಹಣಕಾಸು ವ್ಯವಹಾರಗಳ ಕುರಿತಾದ ವರದಿಯನ್ನೂ ಕೇಳಿ ತೆರಿಗೆ ರಿಟರ್ನ್ ಪರಿಶೀಲಿಸಲು  ಇಲಾಖೆ ಕ್ರಮ ಕೈಗೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)