varthabharthi

ನಿಮ್ಮ ಅಂಕಣ

ಕಣ್ಗಾವಲು ದೇಶದಲ್ಲಿ ಕದ್ದು ನೋಡುವ ಚಟ

ವಾರ್ತಾ ಭಾರತಿ : 1 Sep, 2019
ಸಿರಿಶ್ ನಾನಿಸೆಟ್ಟಿ

ಸಿಸಿಟಿವಿ ಕ್ಯಾಮರಾಗಳ ಅಖಿಲ ಭಾರತ ಜಾಲದ ವಿಸ್ತರಣೆಯ ವಾಸ್ತವದೊಂದಿಗೆ ಮಾಹಿತಿ ರಕ್ಷಣಾ ಕಾನೂನುಗಳು ತುರ್ತಾಗಿ ಹೆಜ್ಜೆಹಾಕದೆ ಇದ್ದಲ್ಲಿ ನಾವು ಒಂದು ಕಣ್ಗಾವಲಿನ, ಗೂಢಚಾರಿಕೆಯ ಸರಕಾರದ ಅಡಿಯಲ್ಲೇ ಬದುಕುತ್ತಿರಬೇಕಾಗುತ್ತದೆ.


ಎಪ್ರಿಲ್ ತಿಂಗಳಲ್ಲಿ ಹೈದರಾಬಾದ್‌ನ ಅಪಾರ್ಟ್‌ಮೆಂಟ್ ಸಂಕೀರ್ಣವೊಂದರ ಉದ್ಯಾನದಲ್ಲಿ ಬೆಂಚಿನ ಮೇಲೆ ಆರು ವರ್ಷದ ಬಾಲಕನೊಬ್ಬ ಕುಳಿತಿದ್ದ ಆ ಬೆಂಚು ಸ್ವಲ್ಪ ಅಲ್ಲಾಡುತ್ತಿದ್ದುದರಿಂದ ಆತ ಅದನ್ನು ಹಿಂದಕ್ಕೂ ಮುಂದಕ್ಕೂ ಉಯ್ಯಿಲೆಯಂತೆ ಜಗ್ಗುತ್ತಿದ್ದ. ಅನಿರೀಕ್ಷಿತವಾಗಿ ಆ ಕಾಂಕ್ರಿಟ್ ಬೆಂಚು ಮುರಿದು ಬಾಲಕನ ಮೇಲೆ ಬಿತ್ತು. ಆತ ಮೃತಪಟ್ಟ. ಸಿಸಿಟಿವಿ ಕ್ಯಾಮರಾ ವೊಂದರಲ್ಲಿ ದಾಖಲಾದ ಆ ಇಡೀ ಘಟನೆ ಕೆಲವೇ ತಿಂಗಳ ಗಂಟೆಗಳೊಳಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಯಿತು. ಜುಲೈ ತಿಂಗಳಲ್ಲಿ ದಿಲ್ಲಿಯ ಮೆಟ್ರೋ ಒಳಭಾಗದಲ್ಲಿ ಜೋಡಿಯೊಂದು ಆತ್ಮೀಯ ಕ್ಷಣದಲ್ಲಿ ಸರಸವಾಡುತ್ತಿದ್ದ ದೃಶ್ಯವನ್ನು ಅಶ್ಲೀಲ (ಪೋರ್ನೋಗ್ರಾಫಿಕ್) ವೀಡಿಯೊವೊಂದರಲ್ಲಿ ಅಪ್‌ಲೋಡ್ ಮಾಡಲಾಯಿತು.

ಭಾರತದ ನಗರಗಳಲ್ಲಿ ಅಳವಡಿಸಲಾಗುತ್ತಿರುವ ಸಿಸಿಟಿವಿ ಕ್ಯಾಮರಾಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಕದ್ದು ನೋಡುವ ಚಟ (ಮೊಯೂರಿಸಂ) ಕೂಡ ಹೆಚ್ಚುತ್ತಿದೆ. ಜನರ ಪ್ರತಿಯೊಂದು ಚಲನವಲನ ಈ ಕ್ಯಾಮರಾಗಳಲ್ಲಿ ಸೆರೆಯಾಗುತ್ತಿವೆ. ಸರಕಾರದ ಕಣ್ಗಾವಲು ಪ್ರಯೋಗ ಕದ್ದು ನೋಡುವವರ ಪಾಲಿಗೆ ಮನರಂಜನೆಯ ಸ್ವರ್ಗವಾಗುತ್ತ್ತಿದೆ. ಭಾರತದ ಬಹುತೇಕ ನಗರಗಳಲ್ಲಿ ಸಾರ್ವಜನಿಕರ ಚಲನವಲನಗಳ ಮೇಲೆ ನಿಗಾ ಇಡಲು ಬೇಕಾಗುವಷ್ಟು ಪೊಲೀಸ್ ಸಿಬ್ಬಂದಿಯಿಲ್ಲ. ಈ ನಗರಗಳಾದ್ಯಂತ ಇಡಲಾಗಿರುವ ಮಿಲಿಯಗಟ್ಟಲೆ ಸಿಸಿಟಿವಿ ಕ್ಯಾಮರಾಗಳು ಅಪರಾಧಗಳನ್ನು ಹತ್ತಿಕ್ಕಲು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಗುತ್ತವೆ. ನಗರಗಳನ್ನು ಸ್ವಚ್ಛವಾಗಿಡುವ ಹಾಗೂ ಸಾರಿಗೆ ವ್ಯವಸ್ಥೆ ಸುಸೂತ್ರವಾಗಿರುವಂತೆ ಮಾಡುವುದರಲ್ಲೂ ಪೊಲೀಸರಿಗೆ ಕ್ಯಾಮರಾಗಳ ನೆರವು ಸಿಗುತ್ತದೆ. ಆದರೆ ಕ್ಯಾಮರಾಗಳಿಂದ ಪಡೆದ ಮಾಹಿತಿಯನ್ನು ಉದ್ದೇಶಿತ ಗುರಿ ಸಾಧನೆಗಾಗಿ ಬಳಸಿಕೊಳ್ಳುವ ಬದಲು ಕೆಲವು ಮಂದಿ ಅನೈತಿಕ ಅಧಿಕಾರಿಗಳು ಜನರ ಕೀಳು ಅಭಿರುಚಿಯನ್ನು ಪೂರೈಸಲು, ಕದ್ದು ನೋಡುವ ಪ್ರವೃತ್ತಿಯನ್ನು ತೃಪ್ತಿಪಡಿಸಲು ಆ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಿಗೆ ಸೋರಿಕೆ ಮಾಡುತ್ತಿದ್ದಾರೆ.

ಅಂತಹ ಆತ್ಮೀಯವಾದ, ಖಾಸಗಿಯಾದ ಮಾಹಿತಿಗಳು, ದೃಶ್ಯಗಳು ವೀಡಿಯೊಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ, ಮೊಬೈಲ್‌ಗಳಲ್ಲಿ ಜಾಹೀರಾದಾಗ ಸಂಬಂಧಿತ ಕುಟುಂಬಗಳಿಗೆ ಹಾಗೂ ಗೆಳೆಯ ಗೆಳತಿಯರ ಮನಸ್ಸಿಗೆ ತುಂಬಾ ನೋವಾಗುತ್ತದೆ.

ಇಷ್ಟಾಗಿಯೂ ದಿನ ಕಳೆದಂತೆ ಹೆಚ್ಚು ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ ಉದಾಹರಣೆಗೆ, ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೊಸದಾಗಿ 1,439 ಕ್ಯಾಮರಾಗಳನ್ನು ಅಳವಡಿಸಲು ಯೋಜಿಸುತ್ತಿದೆ. ದಿಲ್ಲಿ ಸರಕಾರವು ತರಗತಿ ಕೋಣೆಗಳಲ್ಲಿ, ಅಪಾರ್ಟ್‌ಮೆಂಟ್ ಬ್ಲಾಕ್‌ಗಳಲ್ಲಿ ಹಾಗೂ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುತ್ತಿದೆ. ಇವು ಕೇವಲ ಅಧಿಕೃತ ಸಂಖ್ಯೆಗಳು. ಅಪಾರ್ಟ್ ಮೆಂಟ್ ಸಂಕೀರ್ಣಗಳು, ಹೊಟೇಲ್‌ಗಳ ಅಡುಗೆ ಮನೆಗಳು ಹಾಗೂ ಅಂಗಡಿಗಳಲ್ಲಿ ಖಾಸಗಿಯವರು ಇರಿಸಲಾಗುವ ಕ್ಯಾಮರಾಗಳು ಈ ಸಂಖ್ಯೆಯಲ್ಲಿ ಸೇರಿಲ್ಲ. 68 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ಹೈದರಾಬಾದ್ ನಗರದಲ್ಲಿ ಸದ್ಯದಲ್ಲೇ ಒಂದು ಲಕ್ಷಕ್ಕಿಂತಲೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ದೇಶದ ಇತರ ನಗರಗಳೂ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಮುಂದುವರಿದ ತಂತ್ರಜ್ಞಾನವನ್ನು ಈ ಕ್ಯಾಮರಾಗಳಲ್ಲಿ ಅಳವಡಿಸಿದಲ್ಲಿ ಪರಿಸ್ಥಿತಿ ಊಹಿಸಲು ಕೂಡ ಭಯವಾಗುತ್ತದೆ. ಉದಾಹರಣೆಗೆ ಹೈದರಾಬಾದ್ ಮತ್ತು ಬೆಂಗಳೂರು ನಗರಗಳು ತಮ್ಮ ವಿಮಾನ ನಿಲ್ದಾಣಗಳಲ್ಲಿ ಮುಖ ಗುರುತು ಹಿಡಿಯುವ ತಂತ್ರಜ್ಞಾನ (ಫೇಸ್ ರೆಕಗ್ನಿಷನ್ ಟೆಕ್ನಾಲಜಿ) ಯನ್ನು ಪ್ರಾಯೋಗಿಕವಾಗಿ ಬಳಸುತ್ತಿವೆ.

ಜುಲೈಯಲ್ಲಿ ಈ ತಂತ್ರಜ್ಞಾನದ ಪ್ರಾಯೋಗಿಕ ಹಂತದಲ್ಲಿ ಹಲವಾರು ಮಂದಿ ತಾವಾಗಿಯೇ ಈ ಪ್ರಯೋಗದಲ್ಲಿ ಸ್ವಇಚ್ಛೆಯಿಂದ ಭಾಗಿಯಾದರು. ಈ ತಂತ್ರಜ್ಞಾನವು ಪ್ರಯಾಣಿಕರಿಗೆ ಯಾವುದೇ ದಾಖಲೆಗಳಿಲ್ಲದೆ ಹಾಗೂ ಹಲವು ತಪಾಸಣೆಗಳ ಮೂಲಕ ಹಾದು ಹೋಗದೆ ನೇರವಾಗಿ ವಾಕ್ ಇನ್ ಮಾಡಲು ಅವಕಾಶ ಕಲ್ಪಿಸಿಕೊಡುತ್ತದೆ. ಅವರ ಮುಖ ಒಂದೇ ಅವರ ಗುರುತು ಹೇಳುವ ದಾಖಲೆಯಾಗಿರುತ್ತದೆ. ವೈಯಕ್ತಿಕ ವಿವರಗಳನ್ನು, ಗುಪ್ತಚರ ಹಾಗೂ ಬೇಹುಗಾರಿಕಾ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದರಿಂದ ಖಾಸಗಿತನದ, ಖಾಸಗಿ ಬದುಕಿನ ಆಪ್ತ ವಿಷಯಗಳು ಬಹಿರಂಗವಾಗುವ ಅಪಾಯ ಎದುರಾಗುವ ಇಂದಿನ ದಿನಗಳಲ್ಲಿ ದೇಶ ದತ್ತಾಂಶ ಸಂಗ್ರಹಿಸುವ ಓಟದಲ್ಲಿ ಮುನ್ನುಗ್ಗುತ್ತಿದೆ.

ಕೆಲ ವರ್ಷಗಳ ಹಿಂದೆ ಗೂಗಲ್ ನೀತಿ ನಿರೂಪಕ ಎರಿಕ್ ಸ್ಕಿಮಿಡಿಟ್ ಹೇಳಿದ್ದ: ‘‘ಹೈಟೆಕ್ ಸಾಮಾನ್ಯ ವ್ಯವಹಾರಕ್ಕಿಂತ ಮೂರು ಪಟ್ಟು ಹೆಚ್ಚು ವೇಗವಾಗಿ ಓಡುತ್ತದೆ ಮತ್ತು ಸರಕಾರ ಸಾಮಾನ್ಯ ವ್ಯವಹಾರದ ವೇಗಕ್ಕಿಂತ ಮೂರು ಪಟ್ಟು ಹೆಚ್ಚು ನಿಧಾನವಾಗಿ ಓಡುತ್ತದೆ. ನಮ್ಮಲ್ಲಿ ಒಂಬತ್ತು ಪಟ್ಟು ಅಂತರ ಇದೆ. ಆದ್ದರಿಂದ ಸರಕಾರ ನಮ್ಮ ಹಾದಿಗೆ ಅಡ್ಡ ಬಂದು ನಮ್ಮ ಕೆಲಸವನ್ನು ನಿಧಾನವಾಗಿ ಮಾಡದಂತೆ ನೀವು ಖಂಡಿತವಾಗಿ ನೋಡಿಕೊಳ್ಳಬೇಕು.’’

ಮಾಹಿತಿ ಸುರಕ್ಷತೆಗೆ ಸಂಬಂಧಿಸಿದಂತೆ ಅಂತರ್ಜಾಲದ ಕಾನೂನು ಗಡಿಗಳನ್ನು ಗುರುತಿಸುವ ಕೆಲಸವನ್ನು ದತ್ತಾಂಶ ತಜ್ಞರು ಮಾಡಿದ್ದಾರೆ. ಆದರೆ ‘‘ಆನ್‌ಲೈನ್ ಜಗತ್ತು ನಿಜವಾಗಿ ಲೌಕಿಕವಾದ ಆನ್‌ಲೈನ್ ಕಾನೂನುಗಳಿಗೆ ಅಡಿಯಾಳಾಗಿಲ್ಲ. ಸೀಮಿತವಾಗಿಯೂ ಇಲ್ಲ... ಆನ್‌ಲೈನ್ ಜಗತ್ತು ಯಾರ ಅಂಕೆಗೂ ಒಳಪಡದ ವಿಶ್ವದ ಅತ್ಯಂತ ವಿಸ್ತಾರವಾದ ಪ್ರದೇಶ’’ ಎಂದು ಎರಿಕ್ ಸ್ಕಿಮಿಡಿಟ್ ಮತ್ತು ಜಾರ್ಡ್ ಕೊಹೆನ್ ಡಿಜಿಟಲ್ ಆಡಳಿತದ ಬಗ್ಗೆ 2013ರಲ್ಲಿಯೇ ಹೇಳಿದ್ದರು.

ಸಿಸಿಟಿವಿ ಕ್ಯಾಮರಾಗಳ ಅಖಿಲ ಭಾರತ ಜಾಲದ ವಿಸ್ತರಣೆಯ ವಾಸ್ತವದೊಂದಿಗೆ ಮಾಹಿತಿ ರಕ್ಷಣಾ ಕಾನೂನುಗಳು ತುರ್ತಾಗಿ ಹೆಜ್ಜೆಹಾಕದೆ ಇದ್ದಲ್ಲಿ ನಾವು ಒಂದು ಕಣ್ಗಾವಲಿನ, ಗೂಢಚಾರಿಕೆಯ ಸರಕಾರದ ಅಡಿಯಲ್ಲೇ ಬದುಕುತ್ತಿರಬೇಕಾಗುತ್ತದೆ. ಸರಕಾರ ಹೀಗೆ ಮಿಲಿಯಗಟ್ಟಲೆ ಸಿಸಿಟಿವಿಯ ಮೂಲಕ ಸಂಗ್ರಹಿಸುವ ಮಾಹಿತಿ ದತ್ತಾಂಶ ಎಲ್ಲಿಗೆ ಹೋಗುತ್ತದೆ, ಯಾರ ಕೈ ಸೇರುತ್ತದೆ ಮತ್ತು ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತದೆಯೆಂಬುದು ನಮಗೆ ಗೊತ್ತೇ ಆಗುವುದಿಲ್ಲ.

ಕೃಪೆ: ದಿ ಹಿಂದೂ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)