varthabharthi


ಸಿನಿಮಾ

ಪುಣ್ಯಾತ್ಗಿತ್ತೀರು: ನಾಲ್ವರು ಪುಣ್ಯಾತ್ಗಿತ್ತಿ ಚತುರೆಯರು!

ವಾರ್ತಾ ಭಾರತಿ : 1 Sep, 2019

ಸಾಮಾನ್ಯವಾಗಿ ಮಹಿಳಾ ಪ್ರಧಾನ ಚಿತ್ರಗಳೆಂದರೆ ಮಹಿಳೆಯ ಪಾತ್ರಕ್ಕೆ ಪ್ರಾಧಾನ್ಯತೆ ಇರುವ ಕೌಟುಂಬಿಕ ಕತೆಗಳಾಗಿರುತ್ತವೆ. ಆದರೆ ಚಿತ್ರದಲ್ಲಿ ನಾಯಕರೇ ಇಲ್ಲದ ಆ್ಯಕ್ಷನ್ ಲೇಡಿ ನಾಯಕಿಯಾಗಿ ಸ್ಟಾರ್ ನಾಯಕರ ಚಿತ್ರಗಳನ್ನು ನೀಡಿರುವ ನಾಯಕಿಯರೂ ನಮ್ಮಲ್ಲಿದ್ದಾರೆ. ’ಪುಣ್ಯಾತ್ಗಿತ್ತೀರು’ ಚಿತ್ರದಲ್ಲಿ ಮಮತಾ ರಾಹುತ್ ಅವರಿಗೆ ಅಂಥದೊಂದು ಪಾತ್ರ ದೊರಕಿದೆ. ಅದಕ್ಕೆ ಶಕ್ತಿ ನೀಡಲು ಮಮತಾ ಮಾತ್ರವಲ್ಲ, ‘ಪ್ಯಾಟೆ ಹುಡುಗೀರು..’ ರಿಯಾಲಿಟಿ ಶೋ ಖ್ಯಾತಿಯ ಐಶ್ವರ್ಯಾ ಮತ್ತು ಒಂದಿಬ್ಬರು ಹೊಸ ಮುಖದ ನಾಯಕಿಯರು ಕೂಡ ಜತೆ ಸೇರಿದ್ದಾರೆ. ಆದರೆ ನಾಲ್ಕು ಮಂದಿ ನಾಯಕಿಯರಿದ್ದರೂ ನಾಲ್ವರ ಬದುಕನ್ನು ಒಂದೇ ರೀತಿ ಎನ್ನುವಂತೆ ತೋರಿಸುವ ಮೂಲಕ ನಿರ್ದೇಶಕರು ವೈವಿಧ್ಯದ ಸಾಧ್ಯತೆಗೆ ಕಡಿವಾಣ ಹಾಕಿದ್ದಾರೆ.

ಇದು ನಾಲ್ಕು ಮಂದಿ ಅನಾಥ ಹುಡುಗಿಯರ ಆಟಾಟೋಪಗಳ ಕತೆ. ಪೊಲೀಸ್ ಸ್ಟೇಷನ್‌ನಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಅದರ ಕುರಿತಾದ ವಿಚಾರಣೆ ನಡೆಸುವ ವಿವಿಧ ಹಂತದಲ್ಲಿ ಅವರ ಫ್ಲ್ಯಾಶ್‌ಬ್ಯಾಕ್ ಕತೆಗಳು ಹೊರಬೀಳುತ್ತಾ ಹೋಗುತ್ತವೆ. ಇರುವವರಿಂದ ಕೊಳ್ಳೆ ಹೊಡೆದು ಇರದವರಿಗೆ ಹಂಚುವ ರಾಬಿನ್ ಹುಡ್ ವ್ಯಕ್ತಿತ್ವದವರು ಅವರೆಂಬ ಅರಿವು ಪೊಲೀಸರಿಗಾಗುತ್ತದೆ. ಆದರೆ ಮೈ ಮಾರುವ ಸೋಗು ಹಾಕಿ ಹಣ ವಂಚಿಸುವ ವಿಚಾರದಲ್ಲಿ ಮಾತ್ರ ಅವರು ಮಾಡಿರುವುದು ದೊಡ್ಡ ತಪ್ಪುಎಂದು ಪೊಲೀಸ್ ಅಧಿಕಾರಿಯೊಬ್ಬರು ಚೆನ್ನಾಗಿ ಮನವರಿಕೆ ಮಾಡಿಕೊಡುತ್ತಾರೆ. ಆದರೆ ಅವರಿಗೆ ನೃತ್ಯ ಸ್ಪರ್ಧೆಯ ಮೂಲಕ ಹೆಸರಾಗಲು ಬಯಸುವ ಬಡ ಹುಡುಗನೊಬ್ಬನಿಗೆ ಸಹಾಯ ಮಾಡಲು ದುಡ್ಡು ಬೇಕಾಗಿರುತ್ತದೆ. ಆ ದುಡ್ಡನ್ನು ಅವರು ಹೇಗೆ ಹೊಂದಿಸುತ್ತಾರೆ, ನೃತ್ಯ ಸ್ಪರ್ಧೆಯಲ್ಲಿ ಆ ಹುಡುಗ ವಿಜೇತನಾಗುತ್ತಾನಾ? ಆತನ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಏನು ಎಂದು ತಿಳಿಯಲು ಆಸಕ್ತಿ ಇದ್ದರೆ ಪುಣ್ಯಾತ್ಗಿತ್ತೀರು ಚಿತ್ರವನ್ನು ನೋಡಬಹುದು.

ಚಿತ್ರದಲ್ಲಿ ನಾಲ್ವರು ಹುಡುಗಿಯರಿಗೂ ಒಂದೊಂದು ಬಿರುದುಗಳಿವೆ. ಆರ್ಟಿಸ್ಟ್ ಆರತಿಯಾಗಿ ಮಮತಾ ರಾಹುತ್ ಮತ್ತು ಬಾಯ್ಬಡುಕಿ ಭವ್ಯಾಳಾಗಿ ಐಶ್ವರ್ಯ ನಟಿಸಿದ್ದರೆ ಮೀಟ್ರು ಮಂಜುಳ ಮತ್ತು ಸುಳ್ಳಿ ಸುಜಾತಾ ಪಾತ್ರದಲ್ಲಿ ಉಳಿದ ಇಬ್ಬರು ನಟಿಸಿದ್ದಾರೆ. ಹೊಡೆದಾಟ, ಸೆಂಟಿಮೆಂಟ್‌ಗೆ ಸಂಬಂಧಿಸಿದ ಹಾಗೆ ಪ್ರತಿಯೊಂದು ಪಾತ್ರಕ್ಕೂ ಸಮಾನ ಅವಕಾಶಗಳನ್ನು ನೀಡಲಾಗಿದೆ. ಇಬ್ಬರು ಸ್ಟಾರ್‌ಗಳು ಸೇರಿ ಖಳನನ್ನು ಹೊಡೆಯುವಾಗ ಸಮಾನ ರೀತಿಯಲ್ಲಿ ಹೇಗೆ ಅವಕಾಶಗಳನ್ನು ನೀಡಲಾಗುತ್ತದೆಯೋ, ಅದೇ ರೀತಿಯಲ್ಲಿ ನಾಟಕೀಯ ಹೊಡೆದಾಟವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅವರವರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಡೈಲಾಗ್ ಡೆಲಿವರಿ ಮತ್ತು ಸಹಜಾಭಿನಯದ ವಿಚಾರಕ್ಕೆ ಬಂದರೆ ಐಶ್ವರ್ಯಾ ಹೆಚ್ಚು ಗಮನ ಸೆಳೆಯುತ್ತಾರೆ ಎನ್ನುವುದು ನಿಜ. ಉಳಿದಂತೆ ನಾಲ್ವರು ಕೂಡ ಸಾಹಸ ದೃಶ್ಯಗಳಲ್ಲಿ ಎಗರಿ ಎಗರಿ ಹೊಡೆದಾಡಿದ್ದಾರೆ! ಜತೆಗೆ ಅವರಿಂದ ಕನ್ನಡದ ಸ್ಟಾರ್‌ಗಳ ಸಂಭಾಷಣೆಯನ್ನು ಕೂಡ ಡಬ್ಬಿಂಗ್ ಮೂಲಕ ಹೇಳಿಸಲಾಗಿದೆ.

ಸಾಧಾರಣ ರೀತಿಯಲ್ಲಿ ಸಾಗುವ ಕತೆಗೆ ತಿರುವು ತಂದುಕೊಡುವುದು ಕ್ಲೈಮ್ಯಾಕ್ಸ್ ಸನ್ನಿವೇಶ. ಅದರಲ್ಲಿ ಅನಾಥ ಬಾಲಕನ ಪಾತ್ರದಲ್ಲಿ ನಟಿಸಿ ತಮ್ಮ ನೃತ್ಯ ಪ್ರತಿಭೆ ತೋರಿಸಿರುವ ಬಾಲನಟ ನಟನಾಗಿಯೂ ನೆನಪಲ್ಲಿ ಉಳಿಯುತ್ತಾರೆ. ಚಿತ್ರದ ನೃತ್ಯ ನಿರ್ದೇಶಕ ತ್ರಿಭುವನ್ ಮಾಸ್ಟರ್ ಕ್ಯಾಮಿಯೋ ರೋಲ್‌ನಲ್ಲಿ ಕಾಣಿಸಿದ್ದಾರೆ. ಅನಾಥ ಬಾಲಕನ ಕತೆ ಆಸಕ್ತಿ ಮೂಡಿಸುವ ಹಾಗೆ ಇದ್ದರೂ ಅದನ್ನೇ ಧಾರಾವಾಹಿಯಂತೆ ಎಳೆದಾಡಿರುವುದು ತಲೆ ನೋವು ಮೂಡಿಸುತ್ತದೆ. ಎಷ್ಟೋ ಸಿನೆಮಾಗಳಲ್ಲಿ ಕಂಡ ದೃಶ್ಯಗಳಂತೆ ಸಪ್ಪೆಯಾಗಿ ಮೂಡಿ ಬರುವ ಸನ್ನಿವೇಶಗಳಿಗೆ ಹೊಸತನ ತುಂಬಿ ಆಸಕ್ತಿ ಮೂಡಿಸುವಂತೆ ಮಾಡುವಲ್ಲಿ ಚಿತ್ರಕ್ಕೆ ಸಂಭಾಷಣೆ ಬರೆದವರ ಪಾತ್ರ ಪ್ರಮುಖವಾಗಿದೆ. ರಾಮಾನುಜಂ ಸಂಗೀತದಲ್ಲಿ ಕಶಿ ಮೋಹನ್ ಕುಮಾರ್ ಅವರ ರಚನೆಗಳು ಆಕರ್ಷಕವಾಗಿವೆ. ಒಟ್ಟಿನಲ್ಲಿ ಇತರರ ವಿಘ್ನಗಳನ್ನು ಪರಿಹರಿಸಲೆಂದು ಖುದ್ದಾಗಿ ವಿಘ್ನಕ್ಕೆ ಸಿಲುಕುವ ಚತುರ ಮಹಿಳಾ ಮಣಿಯರು ಈ ಬಾರಿಯ ವಿಘ್ನ ವಿನಾಶಕನ ಹಬ್ಬಕ್ಕೆ ಸರಿಯಾಗಿ ಚಿತ್ರಮಂದಿರಕ್ಕೆ ಬಂದಿದ್ದಾರೆ. ಮಹಿಳಾಮಣಿಗಳ ಸಾಹಸ, ನೃತ್ಯಗಳನ್ನು ಕಾಣಲು ಆಸಕ್ತಿ ಇರುವವರು ಖಂಡಿತವಾಗಿ ನೋಡಬಹುದಾದ ಸಿನೆಮಾ ಇದು.

ತಾರಾಗಣ: ಮಮತಾ ರಾಹುತ್, ಐಶ್ವರ್ಯಾ
ನಿರ್ದೇಶನ: ರಾಜು ಬಿ. ಎನ್.
ನಿರ್ಮಾಣ: ಸತ್ಯನಾರಾಯಣ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)