varthabharthi

ಸುಗ್ಗಿ

ಕಥಾಸಂಗಮ

ತಮ್ಮಣ್ಣನೂ ತೋಟವೂ ಕಾಮತರೂ

ವಾರ್ತಾ ಭಾರತಿ : 1 Sep, 2019
ವಿ.ಎಸ್. ಶ್ಯಾನ್ ಭಾಗ ಮುಂಬೈ

ಒಡಗೆರೆ ಒಂದು ಚಿಕ್ಕ ಹಳ್ಳಿ. ಇಂತಹ ಹಲವು ಹಳ್ಳಿಗಳು ರಿಪ್ಪನ್ ಪೇಟೆಗೆ ವೈವಿಧ್ಯತೆಯನ್ನು ವಿಸ್ತಾರವನ್ನು ಕೊಟ್ಟಿದೆ. ಸುತ್ತಲೂ ಹಸಿರಾದ ಕಾಡು ಸುತ್ತಲೂ ನಡೆಯುವ ಉದ್ವಿಘ್ನತೆಯ ಮಧ್ಯೆಯೂ ಶಾಂತತೆಯನ್ನು ರಿಪ್ಪನ್‌ಪೇಟೆಗೆ ಅಂದರೆ ಊರಿಗೆ ಕೊಟ್ಟಿದೆ. ಮನುಷ್ಯ ಕೊನೆಗೆ ಆಶಿಸುವುದು ಇಂತಹ ಉದ್ವಿಘ್ನತೆ ಇಲ್ಲದ ಶಾಂತತೆಯನ್ನೇ.ಊರು ಬೆಳೆಯುವುದು ಅದೃಷ್ಟ ಹುಡುಕಿಕೊಂಡು ಹೋದವರಿಗೆ ಆ ಊರಲ್ಲಿ ನೆಲೆ ಕಂಡಿದ್ದರಿಂದ. ಬಡಗೆರ ತಮ್ಮಣ್ಣ ಎಂದೇ ಹೆಸರಾದ ತಮ್ಮಣ್ಣ ಈ ತೋಟದಲ್ಲಿ ಕೆಲಸ ಮಾಡುವ ಅತ್ಯಂತ ಹಳೆಯ ವ್ಯಕ್ತಿ. ಅವನ ಅಪ್ಪ ಮೊದಲು ಇಲ್ಲಿ ಕೆಲಸ ಮಾಡುತ್ತಿದ್ದ. ಬಡಗೆರೆಯಲ್ಲಿ ನಾಲ್ಕನೇ ಈಯತ್ತೆವರೆಗೆ ಓದಿದ ನಂತರ ರಿಪ್ಪನ್ ಪೇಟೆಯಲ್ಲಿ ಹತ್ತನೇ ತರಗತಿಯವರೆಗೆ ಓದಿದ ತಮ್ಮಣ್ಣ ಅಪ್ಪನೊಂದಿಗೆ ತೋಟದಲ್ಲಿ ಕೆಲಸ ಮಾಡಲು ತೊಡಗಿದ. ತಮ್ಮಣ್ಣ ತನ್ನ ಕೆಲಸದಲ್ಲಿ ತೋರಿಸಿದ ಮುಂದಾಳುತನ ಅಲ್ಲಿ ಕೆಲಸ ಮಾಡುವ ಹೆಚ್ಚಿನ ಸಿಬ್ಬಂದಿಯ ಕೆಲಸವನ್ನು ನೋಡಿಕೊಳ್ಳುವಂತೆ ಕಾಮತರು ಅವನನ್ನು ನೇಮಿಸಿದ್ದರು. ಅವನಿಗೆ ಇದರಿಂದ ಬಡಗೆರೆ ತಮ್ಮಣ್ಣನನ್ನು ಸೂಪರ್‌ವೈಸರ್ ತಮ್ಮಣ್ಣ ಎಂದು ಕರೆಯುವುದು ವಾಡಿಕೆಯಾಗಿದೆ. ಕಾಮತರು ಮುಂಬೈಯಿಂದ ಬಂದು ಈ ತೋಟ ವನ್ನು ಪಡೆದದ್ದು ಒಂದು ಆಕಸ್ಮಿಕವೇ. ತನ್ನ ಸಡ್ಡುಗ ಶಿವಮೊಗ್ಗ ದವರಾದ ನಾಗೇಶ ರಾವ್ ತನ್ನ ನಿವೃತ್ತಿ ಜೀವನವನ್ನು ಶಿವಮೊಗ್ಗದಲ್ಲಿ ಕಳೆಯಬೇಕು ಎಂಬ ಆಸೆ ಯಿಂದ ಈ ತೋಟದ ಜಾಗವನ್ನು ಕೊಂಡು ತೋಟವನ್ನು ಮಾಡಲು ಸುಮಾರು ಐದು ವರ್ಷ ಬೇಕಾ ಯಿತು. ಅವರು ತೀರಿಕೊಂಡಾಗ ತನ್ನ ಅಕ್ಕನನ್ನು ಉಳಿಸಲು ಹೆಂಡತಿ ಯ ಒತ್ತಾಯದ ಮೇರೆಗೆ ಈ ತೋಟವನ್ನು ಕೊಂಡರು. ಐವತ್ತು ತುಂಬಿದಾಗ ತಮ್ಮ ವೃತ್ತಿ ಜೀವನವನ್ನು ಮೊಟಕುಗೊಳಿಸಿ ರಿಪ್ಪನ್ ಪೇಟೆಗೆ ಬಂದರು. ಈಗ ಕಾಮತರಿಗೆ 75 ಮಿಕ್ಕಿರಬೇಕು.

ಈ ಸಾರಿ ಊರಿಗೆ ಬಂದಾಗ ಮನೆಯಲ್ಲಿ ನನ್ನನ್ನು ನೋಡಿದವನೇ ‘‘ರಮೇಶಣ್ಣನಿಗೆ ನಮಸ್ಕಾರ’’ ಎಂದು ಒಳಗೆ ನೇರವಾಗಿ ಬಂದ. ತಾನು ತಂದ ಸೈಕಲನ್ನು ಮನೆಯೆದುರು ನಿಲ್ಲಿಸಿ ತನ್ನ ಶರ್ಟು ಮತ್ತು ಪಂಚೆ ಯನ್ನು ಸರಿಪಡಿಸಿಕೊಂಡು ಒಳಗೆ ಬಂದವನ್ನನ್ನು ನೋಡಿ ‘ಏನು ತಮ್ಮಣ್ಣ ಹೇಗಿದ್ದೀರಾ’ ಎಂದೆ. ಧರ್ಮಸ್ಥಳದ ಒಡೆಯನಿಂದ ಚೆನ್ನಾಗಿದ್ದೇನೆ ಎಂದ. ಐವತ್ತು ವಯಸ್ಸು ದಾಟಿದೆ. ಕುರುಚಲು ಗಡ್ಡ. ಶೇವಿಂಗ್ ಕಿರಿಕಿರಿ, ಹಣನೂ ಉಳಿಯುತ್ತಲ್ಲ ಎಂದ. ಅವನ ಹಾಸ್ಯ ನನಗೆ ಹಿಡಿಸಿತು. ತಮ್ಮಣ್ಣ ನಿಗೆ ತಂಗಿ ಚಹಾ ಮತ್ತು ತಿಂಡಿಯನ್ನು ತಂದು ಇಟ್ಟಳು. ಅವನಿಗೆ ಎರಡು ಹೆಣ್ಣು ಮತ್ತು ಎರಡು ಗಂಡು. ಗಂಡು ಹುಡುಗರು ಬಿಕಾಂ ಕಲಿತು ಸರಕಾರಿ ಕೆಲಸದಲ್ಲಿದ್ದಾರೆ. ಒಂದು ಹೆಣ್ಣು ಮದುವೆಯಾಗಿ ಸಾಗರದಲ್ಲಿದ್ದಾಳೆ. ಇನ್ನೊಂದು ಮಗಳಿಗೆ ಮದುವೆಯಾಗಿ ಮುಂಬೈ ಯಲ್ಲಿ ಇದ್ದಾಳೆ. ತಿಂಡಿ ತಿಂದು ಸೀದಾ ಅವನು ಹಿತ್ತಲಿಗೆ ಹೋದ. ಸಸ್ಯಗಳಿಗೆ ಅವನೇ ಡಾಕ್ಟರ್. ತೆಂಗಿನ ಮರವೊಂದನ್ನು ನೋಡಿಯೇ ಹೇಳಿದ. ‘ಶೈಲಕ್ಕ, ಈ ಮರಕ್ಕೆ ದುಂಬಿ ತಾಗಿದೆ. ತಡಮಾಡಿದರೆ ಕಾಯಿ ಬರುವುದು ನಿಂತು ಸತ್ತು ಹೊಗುತ್ತೆ’ ಎಂದವನೇ ಕಬ್ಬಿಣದ ಸರಳೊಂದನ್ನು ಕೈಯಲ್ಲಿ ಹಿಡಿದು ಸರಸರನೆ ಹತ್ತಿ ಸರಳಿನಿಂದ ಹತ್ತಕ್ಕೂ ಹೆಚ್ಚು ದುಂಬಿಗಳನ್ನು ಕೊಂದು ಕೆಳಗೆ ಬಿಸಾಡಿದ. ಏನೋ ಅಂಟನ್ನು ದುಂಬಿ ಕೊರೆದ ಒಟ್ಟೆಯಲ್ಲಿ ತುಂಬಿದ.ಇಳಿವಾಗ ಹತ್ತು ಎಳನೀರನ್ನು ಕೆಡವಿದ. ನಮ್ಮ ಸಾಮಾನ್ಯ ಕಣ್ಣಿಗೆ ಮರ ಆರೋಗ್ಯವಾಗಿ ಕಾಣುತ್ತಿತ್ತು. ‘‘ನಿನ್ನ ತಂಗಿಗೆ ಅಲ್ಪ ಸೇವೆ’’ ಎಂದ. ಬರ್ತಿನಿ ಎಂದು ತನ್ನ ಸೈಕಲ್ ಮೇಲೆ ಹೊರಟ. ಅವನು ಬಂದು ಆಗಾಗ ಮಾಡುವ ಸಹಾಯದ ಬಗ್ಗೆ ತಂಗಿ ನನ್ನಲ್ಲಿ ತೋಡಿಕೊಳ್ಳುತ್ತಿದ್ದಳು. ನಾನು ಒಂದು ದಿನ ಶಿವಮೊಗ್ಗದಿಂದ ಬಸ್ಸಿನಲ್ಲಿ ಬರುವಾಗ ಕೋಟು ಹಾಕಿಕೊಂಡು ಒಬ್ಬ ನನ್ನನ್ನೇ ನೋಡುತ್ತಿದ್ದ. ನನ್ನ ಪಕ್ಕದಲ್ಲಿ ಜಾಗ ಖಾಲಿ ಯಾದಾಗ ಅವನು ಕುಳಿತ. ‘ನೀವು ರಮೇಶ ಅಲ್ವಾ’ ಎಂದ. ಹೌದು ಎಂದೆ. ನಾನು ರಮಾನಾಥ ಭದ್ರಾವತಿ ಎಂದ. ಗುರುತು ಹಿಡಿಯಿತು.

ನನ್ನೊಂದಿಗೆ ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದ ರಮಾನಾಥ ಊರಿನ ಡಿಗ್ರಿ ಕಾಲೇಜಿಗೆ ಪ್ರಿನ್ಸಿಪಾಲನಾಗಿ ಬಂದದ್ದು ತುಂಬಾ ಖುಷಿ ಕೊಟ್ಟ ವಿಷಯವಾಗಿತ್ತು. ಎಂಎಸ್ಸಿ ಮಾಡಿ ಪಿ.ಎಚ್.ಡಿ ಮಾಡಿದ.ಸುಮಾರು 25 ವರ್ಷಗಳಿಂದ ಕಲಿಸುವ ವೃತ್ತಿಯಲ್ಲಿದ್ದಾನೆ. ಪ್ರವೃತ್ತಿ ಕಥೆಗಾರನಾಗಿ ಪ್ರಸಿದ್ಧನಾಗಿದ್ದಾನೆ. ಮಾತಮಾತನಾಡುತ್ತ ತಮ್ಮಣ್ಣನ ಬಗ್ಗೆ ಅವನಲ್ಲಿ ಪ್ರಸ್ಥಾಪಿಸಿದೆ. ತಮ್ಮಣ್ಣ ನನ್ನ ಕ್ಲಾಸ್‌ಮೇಟ್ ಎಂದು ಹೇಳಿದಾಗ ರಮಾನಾಥ ‘‘ನೀವೂ ಅವನನ್ನು ಕುರಿತು ಏನಾದರೂ ಮಾಡಬೇಕು’’ಎಂದ.

‘‘ನೀವು ತಮ್ಮಣ್ಣನ್ನು ಎಫ್‌ಎಮ್‌ಜಿಸಿ ಕಂಪೆನಿಯವರಿಗೆ ಪರಿಚ ಯಿಸಿದರೆ ದೊಡ್ಡ ಹೆಸರು ಮಾಡಿಯಾನು. ಪಕ್ಕಾ ದೇಸಿ ಪ್ರತಿಭೆ. ಊರಿಗೆ ಹೆಸರು ತರುವುದು ಮತ್ತು ಅವನ ಮೂಲಕವೇ ಊರನ್ನು ಗುರುತಿಸುವ ಕಾಲ ದೂರವಿಲ್ಲ ಎಂಬುದು ಸತ್ಯ.

ಮಾರನೆಯ ದಿನ ರಮಾನಾಥನ ಅಪೇಕ್ಷೆ ಮೇರೆಗೆ ಅವನನ್ನು ಕಾಣಲು ಅವನ ಮನೆಗೆ ಹೋದೆ. ನಾನು ತಿಳಿದುಕೊಂಡದ್ದಕ್ಕಿಂತ ಬಹಳ ಚೆನ್ನಾಗಿತ್ತು. ಅದನ್ನೇ ಅವನಿಗೆ ಹೇಳಿದೆ. ಅದಕ್ಕೆ ‘‘ಎಲ್ಲವೂ ಕಾಮತರದೊಡ್ಡತನ. ಅವರೇ ಎಲ್ಲಾ ಕೊಟ್ಟಿದ್ದು. ಮತ್ತೆ ನನ್ನ ಮಕ್ಕಳು ಚೆನ್ನಾಗಿ ಇಟ್ಟಿದ್ದಾರೆ. ಇಲ್ಲದಿದ್ದರೆ ಕಾಮತರು ಅವರ ಕ್ಲಾಸ್ ತೆಕ್ಕೊಳ್ತಾರೆ’’ಎಂದು ನಕ್ಕ. ನಂತರ ಏನೋ ಯೋಚಿಸಿದಂತೆ ‘‘ಅಲ್ಲ ರಮೇಶಣ್ಣ ನೀನು ಬಂದದ್ದು ಬಹಳ ಖುಷಿಯಾಯಿತು. ಶಾಲೆಯಲ್ಲಿದ್ದಾಗ, ಶಾಲೆ ಮುಗಿದ ಕೂಡ್ಲೆ ಮನೆಗೆ ಹೋಗಿ ನಂತರ ನಿಮ್ಮ ಮನೆಗೆ ಬರ್ತಿದ್ದೆ. ನಿನ್ನ ನೋಟ್ಸ್ ತೆಕೊಳ್ಳಿಕ್ಕೆ. ನಿಮ್ಮ ಅಮ್ಮ ತಿಂಡಿ ಕೊಡ್ತಿದ್ದರು. ಯಾಕೊ ದೇವ್ರ ನಿಮ್ಮನ್ನ ನನ್ನ ಮನೆಗೆ ಕಳ್ಸಿದ್ದಾರೆ. ಕರೆದ ಕೂಡಲೆ ಬಂದಿರೋದು ದೊಡ್ಡದು. ಕೆಲ್ಸ ಇತ್ತ ಈ ಕಡೆಗೆ?’’ ಎಂದು ಕೇಳಿದ. ‘‘ನಾನು ಹೀಗೆ ನಿನ್ನ ನೋಡಲಿಕ್ಕೆ ಬಂದೆ. ನೀನೂ ಕರೆದಿದ್ದೆ. ಹಿಂದೆ ಊರಿಗೆ ಬರುತ್ತಿದ್ದರೂ ನಿನ್ನ ಮನೆಗೆ ಬರಲು ಆಗಲಿಲ್ಲ’’ ಎಂದೆ. ಸೊಸೆ ಕಾಫಿ ಮಾಡಿ ತಂದಳು.

‘‘ಹೆಂಡ್ತಿ ಮಗಳ ಮನೆಗೆ ಹೋಗಿದ್ದಾಳೆ’’ ಎಂದ.

ಕಾಮತರ ಬಗ್ಗೆ ಕೇಳಿದೆ.

‘‘ಏನ್ ರಮೇಶಣ್ಣ, ನಮ್ ಧಣಿಗಳು ದೇವ್ರಂತಹ ಮನುಷ್ಯ. ಮೂಗು ನೇರ ಎರಡು ತುಂಡಾಗ್ಬೇಕು ಎಡ್ವಟ್ ಮಾಡಿದ್ರೆ. ಜನಕ್ಕೆ ಅವ್ರೆಂದರೆ ಯಾಕೋ ಉದಾಸೀನ. ಆದ್ರೆ ಈಗಿನ ಮಕ್ಳೂ ಜೊತೆ ಎಂಥಾ ಕುಶಾಲು ನೋಡಬೇಕು.. ನನ್ನ ಅಪ್ಪ ಹೆಣ್ಮಕಳಿಗೆ ಮದ್ವೇಗೆ ಅಡ್ವಿಟ್ಟಿದ್ದ ಮಲ್ಲಾಪುರದ ಗೌಡ್ರಹತ್ರ ಜಮಿನು ಕೊಡ್ಲು ಒಲ್ರು. ಲೆಕ್ಕ ಸಮ ಆಗ್ಯತೆ’’ ಎಂದ್ಬುಟ. ಅಪ್ಪಹೋಗಿ ಧಣೀರ ಹತ್ರ ಕೆಲ್ಸ ಮಾಡ್ತಿದ್ದದು ಗೊತ್ತಾಗಿ ಧಣಿ ಮತ್ತು ಅಮ್ಮವ್ರ ಇಂಗಲಿಷಲ್ಲಿ ಮತ್ತು ಕನ್ನಡ್‌ದಲ್ಲಿ ಹೀಗ್ ಮಾತಾಡ್ದರು. ರಮೇಶಣ್ಣ , ಅವ್ರಿಗೆ ಜಮೀನು ಬಿಟ್ಕೊಡಬೇಕಾಯ್ತು. ಇನ ಕೆಲವು ಜನ್ರಿಗೆ ಎಲ್ಪ್ ಮಾಡವ್ರೆ. ನನ್ನನ್ನು ಸೇರ್ಸಿ ಕೆಲವ್ ಜನಕ್ಕೆ ಜನಕ್ಕೆ ಕೆಲ್ಸಕೊಟ್ರು.’’

ತಮ್ಮಣ್ಣನ ಗ್ರಾಮ್ಯ ಭಾಷೆ ಕೇಳಿ ‘‘ಶಾಲೆಯಲ್ಲಿ ಮಾತಾಡುತ್ತಿದೆಯಲ್ಲ ಹಾಗೆ ಮಾತಾಡು ಮಹರಾಯ’’ ಎಂದೆ. ಅವ ನಕ್ಕು ಸುಮ್ಮನಾದ.

‘‘ನೋಡಿ ರಮೇಶಣ್ಣ, ಈ ಜಮೀನುದಾರರಿಂದ ಕೆಲವು ತೊಂದರೆ ಗೆ ಒಳಗಾದರು. ಆದ್ರೆ ಪೊಲೀಸರು ಮೇಲಿನ ಅಧಿಕಾರಿಗಳು, ಬಂದ್ರೆ ಇವರೇ ಮಾತಾಡೋದು. ಈಗೆಲ್ಲ ಕಲ್ತಿದ್ದಾರೆ. ಈಗ ಯಾರೂ ತಂಟೆಗೆ ಬರೋದಿಲ್ಲ. ನಾವು ಧಣಿಯೊಂದಿಗಿದ್ದೇವೆ’’

***

ಮಾರನೇ ದಿನ ಸಾಯಂಕಾಲ ನಾನು, ನನ್ನ ಮಗ ಮತ್ತು ಹೆಂಡತಿ ಯನ್ನು ಕರೆದು ಬಹು ವರ್ಷಗಳ ನಂತರ ಕಾಮತರ ತೋಟಕ್ಕೆ ಹೋದೆ. ತೋಟದ ಮಧ್ಯೆ ಹಲವು ಕಟ್ಟಡಗಳು ಬಂದಿದ್ದು ಗೋಚರಿಸು ತ್ತಿದೆ. ‘ತಮ್ಮಣ್ಣ ಎಲ್ಲಿದ್ದಾನೆ’ ಎಂದು ಕೆಲಸದ ವ್ಯಕ್ತಿಯಲ್ಲಿ ಕೇಳಿದ. ಒಂದು ಹಸು ಹಸಿಹಸಿಗಬ್ಬ. ಕರು ಹಾಕಲು ಈಗಲೋ ಆಗಲೋ ಎನ್ನೋ ಸಮಯ ತಮ್ಮಣ್ಣ ಕೊಟ್ಟಿಗೆಯಲ್ಲಿದಾರೆ. ಮಗ ಮತ್ತು ಹೆಂಡತಿ ಯನ್ನು ಕುಳಿತುಕೊಳ್ಳಲು ಹೇಳಿ ಸ್ವಲ್ಪ ಸುತ್ತು ಬಿರೋಣ ಎಂದು ರೂಂನಿಂದ ಹೊರಗೆ ಬಂದಾಗ ಕಾಮತರು ಹೆಂಡತಿ ಯೊಂದಿಗೆ ವಾಕಿಂಗ್ ಹೊರಟಿದ್ದವರು ದಾರಿಯಲ್ಲಿ ಸಿಕ್ಕಿದರು. ನಮಸ್ಕಾರ ಕಾಮತ್‌ಮಾಮ್ ಎಂದೆ. ತಲೆ ಎತ್ತಿ ‘‘ನಮಸ್ಕಾರಾ’’ ಎಂದರು ಕಾಮತರು. ‘‘ನಿಮ್ಮಿಂದ ಬಹಳ ಉಪಕಾರವಾಗಿದೆ. ನಿನ್ನ ರಮಾನಾಥ ಇಸ್ ಗುಡ್ ಸಪೋರ್ಟ್’’ ಎಂದರು. ಒಂದು ನಿಮಿಷ ತಡೆದು ‘‘ನೀನು ಮುಂಬೈ ನಿಂದ ಬಂದದು ್ದಯಾವಾಗ’’ ಎಂದು ಕೇಳಿದರು. ‘ಎರಡು ದಿನ ಆಯ್ತು’ ಎಂದೆ. ‘ವಾಕಿಂಗ್ ಹೊರಟಿದ್ವಿ ಮನೆಗೆ ಬಾ’ ಎಂದರು. ನನ್ನ ಹೆಂಡತಿ ಮತ್ತು ಮಗ ನಿಮ್ಮ ರೂಂನಲ್ಲಿ ಕುಳ್ತಿದ್ದಾರೆ ಎಂದೆ. ‘‘ಹಾಗಾದರೆ ಅಲ್ಲಿಗೇ ಹೋಗುವ. ನಂತರ ಮನೆಗೆ ಅವಳೂ ನಿನ್ನ ಮಗನೂ ಬರಲಿ ಮೈಡಿಯರ್’’ ಎಂದರು. ‘ನಿಮ್ಮ ವಾಕಿಂಗ್’ ಎಂದಾಗ ‘‘ನಿಮಗಾಗಿ ವಾಕಿಂಗ್ ರದ್ದು’’ ಎಂದು ಹೇಳಿದಾಗ, ‘ನಿಮ್ಮ ದೊಡ್ದತನ’ ಎಂದೆ.

ಕಾಮತರು ಮನೆಗೆ ಹೋದ ಕೂಡಲೇ ಹಾರಿ ಬಂದ ನಾಯಿ ಯನ್ನು ನೇವರಿಸಿ ಹೆದರಿದ ನನ್ನ ಹೆಂಡತಿಗೆ ‘ಮೈ ಟೈಗರ್ ಬಾರ್ಕಸ್ ನೆವರ್ ಬೈಟ್ಸ್’ ಎಂದು ಹೇಳಿ ಸಮಾಧಾನಿಸಿದರು. ಹಾಲ್‌ನಲ್ಲಿರುವ ಕಾಮತರ ತಂದೆ ತಾಯಿಯವರ ಫೋಟೊಗೆ ಗಂಧದ ಹಾರ ವಿಶೇಷ ವಾಗಿ ಕಲಾತ್ಮತೆಗಾಗಿ ಗಮನ ಸೆಳೆಯಿತು. ಅದು ಕುಂಚ ದಿಂದ ಬಿಡಿಸಿದ ಚಿತ್ರ. ಕಪ್ಪು ಬಿಳುಪಿನಲ್ಲಿ ಈಗಲೂ ಸಹಜದಂತೆ ತೋರು ತ್ತಿತ್ತು. ಮನೆಯಲ್ಲಿ ಅಪರೂಪದ ವಸ್ತುಗಳನ್ನು ಅಲ್ಲಲ್ಲಿ ಇಟ್ಟಿದ್ದು ಗೋಚರಕ್ಕೆ ಬಂತು. ಮನೆಯ ಮುಂದೆ ಇಟ್ಟಿದ್ದ ನೀರಿನಿಂದ ಕೈಕಾಲು ತೊಳೆದುಕೊಂಡು ಅಲ್ಲೇ ಇದ್ದ ಬಿಳಿ ಟವಾಲಿನಿಂದ ಕೈ ಒರೆಸಿಕೊಂಡ ರು. ನನ್ನನ್ನು ಸೋಫಾದಲ್ಲಿ ಕುಳ್ಳಿರಿಸಿ ತಾವು ಆರಾಮ ಖುರ್ಚಿಯೊಳಗೆ ಕುಳಿತು ನನ್ನ ಮಗನನ್ನು ಮಾತನಾಡಿಸಿ ಒಳಗೆ ಹೋದರು. ಕಾವೇರಿ ತಿಂಡಿಯ ಪ್ಲೇಟುಗಳೊಂದಿಗೆ ಹೊರಗೆ ಬರುವಾಗ ಮೂರು ಕಪ್ಪು ಮತ್ತು ಒಂದು ಹಿಡಿಕೆಯಿಂದ ಸ್ಟೀಲ್ ಪಾತ್ರೆಯನ್ನು ಹೊರಗೆ ತಂದು ಎದುರು ಇಟ್ಟ ಮರದ ಟಿಪಾಯಿಯ ಮೇಲಿಟ್ಟರು. ತಮ್ಮ ಆರಾಮ ಖುರ್ಚಿಯಲ್ಲಿ ಕುಳಿತು ಕೊಳ್ಳುವಾಗ ‘‘ರಮೇಶ ಈವತ್ತು ನಮ್ಮ ಕಾವೇರಿ ಯ ಹುಟ್ಟುಹಬ್ಬ. ಪಾಯಸ ಮಾಡಿದ್ದಳು’’ ಎಂದರು. ಕಾವೇರಿ ‘‘ಏನು ಸಾಹೇಬ್ರ’’ಎನ್ನುತ್ತ ಒಳನಡೆದಳು.

ಸುಮ್ಮನೆ ಕುಳಿತ ಕಾಮತರು ಮಾತನಾಡುವುದು ಬಹಳ ಕಡಿಮೆ ಎನ್ನಿಸಿತು. ಮುಗಳು ನಗುತ್ತಾ ಎಲ್ಲವನ್ನು ಗಮನಿಸುತ್ತಿದ್ದಂತೆ ಕಾಣುತ್ತಿ ದ್ದರು. ಊರಿನವರಂತೆ ಕನ್ನಡದಲ್ಲಿಯೇ ಮಾತನಾಡಲು ಕಲಿತ ಕಾಮತರು ಓದಲೂ ಕಲಿತಿದ್ದಾರೆ ಎನ್ನುವುದು ಅವರ ಕೈಯಲ್ಲಿದ್ದ ಕನ್ನಡದಪುಸ್ತಕವನ್ನು ನೋಡಿದಾಗ ಖುಷಿಯಾಯಿತು. ವಿಚಾರಿಸಿದಾಗ ‘‘ಇಪ್ಪತ್ತೈದು ವರ್ಷದಿಂದ ರಿಪ್ಪನ್‌ಪೇಟೆಯಲ್ಲಿ ಇದ್ದೇನೆ. ಇಷ್ಟು ವರ್ಷದಿಂದ ಕನ್ನಡ ಕಲಿಯುವ ಅಗತ್ಯದ ಜೊತೆಗೆ ಒಂದು ಭಾಷೆ ಯನ್ನು ಓದಲು ಕಲಿಯುವ ಮೂಲಕ ನನ್ನ ಆಲೋಚನೆಗಳನ್ನು, ಕಲಿತಿದ್ದನ್ನು, ಮತ್ತೊಮ್ಮೆ ಪರಾಮರ್ಶಿಸುವ ಅವಕಾಶವನ್ನು ನನಗೆ ಒದಗಿಸಿದೆ ಮೈ ಡಿಯರ್’’ ಎಂದು ಹೇಳಿದ್ದನ್ನು ಕೇಳಿ, ನನಗೆ ತಾನು ಕೇಳಿದ ಪ್ರಶ್ನೆಯೇ ಸರಿಯಲ್ಲ ಎಂದೆನಿಸಿತು. ಸಂಭಾಷಣೆಯು ನಡೆಯುತ್ತಿದ್ದಂತೆ ಮನೆಯ ಹಿಂದೆ ಹೋಗಿ ಸ್ನಾನ ಮಾಡಿ, ಬಟ್ಟೆ ಬದಲಾಯಿಸಿ, ದೇವರ ಕೋಣೆಗೆ ಹೋಗಿ ಕುಂಕುಮ ಹಚ್ಚಿ, ಅವರು ಕುಳಿತ ಹಾಲಿಗೆ ಬಂದ ತಮ್ಮಣ್ಣ, ಕೆದರಿದ ತಲೆಯ ಮೇಲೆ ಟವಲು ಸುತ್ತಿ ತಂದ ಕೆಲವು ಹಣ್ಣು, ಸಿಯಾಳ ಮತ್ತು ಮಲ್ಲಿಗೆ ಹಾರ ವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕಾಮತರ ಎದುರಿನ ಟೀಪಾಯಿ ಯಲ್ಲಿ ಇಟ್ಟು, ಹಾಲ್‌ನ ಹೊರಗೆ ಇದ್ದ ಖುರ್ಚಿಯನ್ನು ತಂದು ಕಾಮತರ ಬದಿಗೆ ಕುಳಿತ. ‘ಕಾಮತ ಮಾಮ್’ ಎಂದು ಮಾತಿಗೆ ಇಳಿದದ್ದನ್ನು ನೋಡಿ ಅವನ ಬಗ್ಗೆ ಕಾಮತರಿಗಿರುವ ಸಂಬಂಧ ಕೆಲವು ಗಡಿಗಳನ್ನು ದಾಟಿದ ಪ್ರೀತಿಯಂತೆ ಕಂಡಿತು. ಸಂಬಂಧಗಳು ಕೊಡುಕೊಳ್ಳುವಿಕೆಯ ಮೇಲಿದ್ದರೆ ವ್ಯವಹಾರವಾಗುತ್ತದೆ. ಪರಸ್ಪರ ಆದರ ಮತ್ತು ವಿಶ್ವಾಸದ ಕಳಶದ ಮೇಲೆ ಅವರ ಸಂಬಂಧವಿತ್ತು.

‘‘ಸರ್. ನಿಮ್ಮ ತೋಟ ನೋಡುವ ಆಸೆ’’ ಎಂದ ಕೂಡಲೇ ‘‘ಬನ್ನಿ ಹೋಗುವ. ನೀನು ಸಹ ಬಾ. ತಮ್ಮಣ್ಣ ನೀನಿಲ್ಲದಿದ್ದರೆ ಬಣ್ಣವಿಲ್ಲದೇ ಚಿತ್ರ ಬಿಡಿಸಿದ ಹಾಗೆ ನನಗೆ’’ ಎಂದರು ಕಾಮತರು.

 ನಾನೇ ಕಾಮತರಿಗೆ ಹೇಳಿದೆ ‘‘ತಮ್ಮಣ್ಣ ನನ್ನೊಂದಿಗೆ ಓದಿದವ. ನನ್ನ ಕ್ಲಾಸ್‌ಮೇಟ್’’ ಎಂದೆ. ಕಾಮತರು ನಕ್ಕು ‘‘ತೋಟದಲ್ಲಿ ಪ್ರತೀ ಗಿಡದೊಂದಿಗೆ ಮಾತನಾಡುವ ತಮ್ಮಣ್ಣ ಈ ತೋಟದ ಪ್ರಿನ್ಸಿಪಾಲ್’’ ಎಂದರು. ಅದಕ್ಕಾಗಿ ಅವರನ್ನೇ ನೋಡಿದೆ. ಸುಮಾರು ನೂರು ಎಕರೆ ಜಮೀನಿನಲ್ಲಿ ಹರಡಿದ ತೋಟ ಆಕರ್ಷಣೆಯ ತಾಣದಂತೆ ಕಂಡಿತು. ಸರಿಸುಮಾರು ಎಲ್ಲಾ ರೀತಿಯ ಹಣ್ಣಿನ ಮರಗಳು, ಹೂಗಿಡಗಳು, ತರಕಾರಿಗಳು, ಐವತ್ತು-ಐವತ್ತೈದು ಜನರಿಗೆ ಸದಾ ಕೆಲಸ ಒದಗಿಸುವ ಈ ತೋಟ ರಿಪ್ಪನ್‌ಪೇಟೆಯ ಜನಜೀವನದ ಪ್ರಮುಖ ಅಂಗವೆನಿಸಿ ರೂಪಗೊಂಡು ತಮ್ಮಣ್ಣನ ಮಾತಿನಲ್ಲಿ ಸ್ಟಷ್ಟಗೊಂಡು ವ್ಯವಹಾರಿಕ ನೆಲೆಗೆ ವೈಚಾರಿಕ ನೆಲೆಯನ್ನೂ ಒದಗಿಸಿತು.

ಇದೆಲ್ಲ ಸಾಮಾನ್ಯ ಸಂಗತಿ ಎಂದು ಹೇಳಲು ಮನಸ್ಸು ಒಪ್ಪಲಿಲ್ಲ. ಪುಢಾರಿಗಳು ಹೆದರುತ್ತಾರೆ ಎಂದ ತಮ್ಮಣ್ಣ. ಅವರನ್ನು ನೋಡಿಕೊಳ್ಳಲು ಅವರಿಗೆ ಏನೂ ಆಗದಂತೆ ನಾವು ಐವತ್ತು ಜನರಿದ್ದೀವಿ ಎನ್ನುವುದು ಈ ಪುಢಾರಿಗಳಿಗೆ ಗೊತ್ತು ಎನ್ನುವಲ್ಲಿ ತಮ್ಮಣ್ಣ ಎಷ್ಟು ಮುಖ್ಯ ಎಂದು ಕಾಮತರಿಗೆ ಗೊತ್ತಿದೆ.

 ಕಾಮತರು ತನ್ನ ಎಲ್ಲ ಕ್ರಿಯಾಶೀಲತೆಯನ್ನ್ನು ಹೊರಗೆ ಹಾಕಲು ಪಕೃತಿ ದತ್ತವಾಗಿ ಬಂದ ತೋಟವನ್ನು ಚಿತ್ರಕಲೆಯ ಕ್ಯಾನ್‌ವಾಸ್‌ನಂತೆ ಕಂಡರು. ತಮ್ಮಣ್ಣನಿಗೆ ಸಹಜದತ್ತವಾಗಿ ಬಂದ ಕುತೂಹಲ, ಸೃಜನಶೀಲತೆ ಚಿತ್ರಕಲೆಯ ಕಾಮತರ ಕಣ್ಣಿಗೆ ಹೊಸ ದೃಷ್ಟಿಯನ್ನು ನೀಡಿತು .ಸುಮಾರು ನೂರು ಎಕರೆ ಜಮೀನು ಹೊಂದಿರುವ ತೋಟ ಈಗ ಮ್ಯತುಂಬ ಬೆಳೆದು ನಿಂತಿದೆ.

ಒಂದು ಕಿ.ಮೀ. ನಡೆದಿದ್ದೇವೆ ಎನಿಸಿದಾಗ ಹತ್ತಿರದಲ್ಲಿಯೇ ಇದ್ದ ತೆಂಗಿನ ಮರವನ್ನು ಸರಸರನೇ ಏರಿ ಹತ್ತು ಎಳನೀರನ್ನು ಕೆಡವಿ ಸರಸರನೇ ಇಳಿದು ಬಂದದ್ದು ನೋಡಿಯೇ ನನ್ನ ಮಗನಿಗೆ, ಹೆಂಡತಿಗೆ ಆಶ್ಚರ್ಯವೆನಿಸಿತ್ತು. ಈ ವಯಸ್ಸಿನಲ್ಲಿ ಅವನ ಚುರುಕುತನ ಮೆಚ್ಚುವಂತ ಹದ್ದು ಎಂದು ನನ್ನನ್ನು ಹೆಂಡತಿ ತಿವಿದಳು. ಅಲ್ಲೇ ಕೆಲಸ ಮಾಡುತ್ತಿದ್ದ ಕತ್ತಿಯನ್ನು ಬೆನ್ನಿನ ಕೆಳಗೆ ತೂಗಿಸಿದ ವ್ಯಕ್ತಿ ಹತ್ತಿರ ಬಂದು ಅವನ ಕತ್ತಿಯಿಂದ ಎರಡು ನಿಮಿಷದಲ್ಲಿ ಹತ್ತೂ ಎಳನೀರನ್ನು ಕೆತ್ತಿಕೊಟ್ಟ. ಚಡ್ಡಿಯ ಒಳಗಿನ ಕಿಸೆಯಿಂದ ಪ್ಲಾಸ್ಟಿಕ್ ಚೀಲವನ್ನು ತೆಗೆದು ಒಂದೊಂದುಚೀಲದಲ್ಲಿ ಐದರಂತೆ ಹಾಕಿ ಒಂದನ್ನು ಆ ವ್ಯಕ್ತಿಯಲ್ಲಿ ಕೊಟ್ಟು ಹುಷಾರಿಲ್ಲದ ತನ್ನ ಅಪ್ಪನಿಗೆ ಕೊಡಲು ಮತ್ತು ಉಳಿದ ಎರಡನ್ನು ಸಾಹೇಬ್ರ ಮನೆಗೆ ಕೊಡು ಎಂದು ಮೂರು ಎಳನೀರನ್ನು ಕುಡಿಯಲು ಕೊಟ್ಟ. ಈ ಮರ ಹುಳುವಿನ ಕಾಟದಿಂದ ಸಾಯುವುದರಲ್ಲಿತ್ತು. ಈಗ ಹೇಗೆ ಬೆಳೆದಿದೆ ನೋಡಿ ಎಂದು ತಾನು ಹತ್ತಿದ ಮರವನ್ನು ತೋರಿಸಿದ.ಮುಂದೆ ಹೋದಾಗ ದನಗಳಿದ್ದ ಕೊಟ್ಟಿಗೆಗೆ ಹೋಗಿ ಇವತ್ತು ಕರು ಹಾಕಿದ ದನ ‘ಶುಕ್ರಿ’ ಇದು ಎಂದು ಅದರ ಬೆನ್ನನ್ನು ನೇವರಿಸಿದ. ‘‘ಶುಕ್ರಿಗೆ ಹೆರಿಗೆ ನೋವು ಸುಮಾರು ಮೂರಕ್ಕೆ ಶುರುವಾಗಿತ್ತು. ನನಗೆ ಬೆಳಗ್ಗೆಯೇ ಸಂಶಯ ಇತ್ತು. ಹೊರಗೆ ಬಿಡಲಿಲ್ಲ ಕಟ್ಟುಹಾಕಿದ್ದೆ. ಸುಮಾರು ಐದಕ್ಕೆ ಹೋರಿ ಕರುವನ್ನು ಹಾಕಿದೆ ಎಂದೆಲ್ಲ ಸಹಜ ವೆಂಬಂತೆ ತಮ್ಮಣ್ಣ ತಿಳಿಸಿದ. ಶುಕ್ರಿ ಎಂದರೆ ದನದ ಹೆಸರು ಎಂದು ನಗುತ್ತ ತಮ್ಮಣ್ಣ ನನಗೆ ಹೇಳಿದ.

ಸುಮಾರು ಇನ್ನೂರಕ್ಕಿಂತ ಹೆಚ್ಚು ದನಗಳನ್ನು ಹೊಂದಿದ್ದ ಕೊಟ್ಟಿಗೆ ಯಲ್ಲಿ ಎಲ್ಲಾ ಸೌಕರ್ಯಗಳಿದ್ದವು. ಇನ್ನೂರು ಜನರು ತೊಟದ ನೀರು ಕೊಳ, ಅದರಲ್ಲಿ ಎಲ್ಲಾ ಜಾತಿಯ ಮೀನುಗಳು, ಪ್ರತಿಯೊಂದು ತೆಂಗಿನ ಮರದಿಂದ ತೆಗೆದ ಕಾಯಿಗಳನ್ನು ಒಂದೇ ಜಾಗದಲ್ಲಿ ಬೀಳುವಂತೆ ಪಾಸ್ಟಿಕ್ ಕೊಳವೆಯ ಮೂಲಕ ಮರಗಳನ್ನು ಜೋಡಿಸಿದ ರೀತಿ, ಹಾಗೆಯೇ ಬಂಬುವಿನಿಂದ ಮಾಡಿದ ಪ್ರಾಣಿಗಳಿರುವ ಸಂಗ್ರಹಾಲ ಯ, ಅಡಿಕೆ ಮರಗಳನ್ನು ಜೊಡಿಸಿ ಮಾಡಿದ ತೇರು, ಇಲ್ಲಿ ಇರುವ ಎಲ್ಲಾ ಕಟ್ಟಡಗಳ ವಿನ್ಯಾಸವನ್ನು ಸಾಹೇಬ್ರೇ ಮಾಡಿ ಕಟ್ಟಿಸಿದ್ದು, ಅವರು ತನಗೆ ಬೇಕಾದ ರೀತಿಯಲ್ಲಿ ಈ ತೋಟದಲ್ಲಿ ಸೌಕರ್ಯವನ್ನು ಕಲ್ಪಿಸಿದ್ದಾರೆ. ಅವರೇ ಸ್ವತಃ ನಿಂತು ಎಲ್ಲವನ್ನೂ ಮಾಡಿಸಿದ್ದಾರೆ ಎಂದು ಮಂದಣ ್ಣಹೇಳಿದ್ದು ಕಾಮತರ ಅಭಿರುಚಿಗೆ ಕನ್ನಡಿ ಹಿಡಿದಂತಿದ್ದವು. ಸೊಳ್ಳೆಗಾಗಿ ಸೆಗಣಿಯಿಂದ ಮಾಡಿದ ರೊಟ್ಟಿಯಂತಿದ್ದ ವಸ್ತುವಿಗೆ ಬೆಂಕಿ ಯನ್ನು ಹೊತ್ತಿಸಿ ಈಗಷ್ಟೇ ಜನಿಸಿದ ಕರುವಿನ ಹತ್ತಿರ ಇಡಲು ಅಲ್ಲೇ ಇದ್ದ ಹೆಂಗಸಿಗೆ ಸೂಚನೆಕೊಟ್ಟ. ದೂರದಲ್ಲಿ ಕಟ್ಟಿದ ಇನ್ನೊಂದು ದನದ ಮೇಲೆ ಕೈಯಿಟ್ಟು ತಮ್ಮಣ್ಣ ನಾಳೆ ಕರು ಹಾಕುವ ಸಂಭವ ಇದೆ ಎಂದು ಉಬ್ಬಿದ ಅದರ ಹೊಟ್ಟೆಯ ಮೇಲೆ ಕೈಯಿಟ್ಟು ನಂತರ ಅದೇ ಹೆಂಗಸನ್ನು ಕರೆದು ‘‘ಲಕ್ಕವ್ವ ನಾಳೆ ಬೆಳಗ್ಗೆ ಚಾಂದಿ ಕರು ಹಾಕಲಿದೆ. ನೀನು ಎಂಟು ಗಂಟೆಗೆ ಎಲ್ಲಾ ತಯಾರು ಮಾಡಿಡು. ಶುಂಠಿಯನ್ನು ಬಾಯಿಗೆ ಹಾಕಲು ಅದನ್ನು ಮೆಣಸು ಕಾಳು ಮತ್ತು ಬೆಲ್ಲದೊಂದಿಗೆ ಗುಳಿಗೆ ಮಾಡಿ ಈಗಲೇ ಇಡು. ನಾಳೆ ನಾನು ಬಂದು ಹೆರಿಗೆ ಮಾಡಿ ಸುತ್ತೇನೆ’’ ಎಂದ. ಇದೆಲ್ಲ ನಮಗೆ ರೂಢಿ ವಿವೇಕಣ್ಣ ಎಂದು ವಿಷಯಸಾಮಾನ್ಯವೆಂಬಂತೆ ತಿಳಿಸಿದ. ಸುಮಾರು ಮೂರು ಮೈಲಿಯಷ್ಟು ವಿಶಾಲವುಳ್ಳ ತೋಟದಲ್ಲಿ ಕಾಯಿಬಿಟ್ಟ ಹಲವು ಹಣ್ಣಿನ ಮರ ಗಳನ್ನು, ಹೂವು ಬೆಳೆಯುವ, ತರಕಾರಿ ಬಿಡುವ ಎಲ್ಲಾ ಜಾಗವನ್ನು ತೋರಿಸಿದ. ಪ್ರತಿಯೊಂದು ಮರಗಳ ವಿವರವನ್ನು, ಅದರ ತಳಿಗಳ ವಿಶೇಷಗಳನ್ನು ಒಬ್ಬ ಸಸ್ಯ ಶಾಸ್ತ್ರಜ್ಞನಂತೆ ಅಲ್ಲಲ್ಲಿ ಇಂಗ್ಲಿಷಿನ ಹೆಸರನ್ನು ಓದಿ ಅದರ ವಿಶೇಷತೆಯನ್ನು ನಮಗೆ ತಿಳಿಸಿದ ರೀತಿಯಲ್ಲಿಯೇ ಅವನ ಅಪಾರ ಜ್ಞಾನದ ವಿಸ್ತಾರದ ಪರಿಚಯ ಕೊಡುವಂತಿತ್ತು. ಅದು ಅವನಿಗೆ ಅನುಭವದಿಂದ ಬಂದದ್ದೋ ಅಥವಾ ತಾನು ಪಡೆದ ಅರಿವಿನಿಂದ ತನ್ನನ್ನೇ ತೊಡಗಿಸಿಕೊಂಡು ಪಡೆದ ತಜ್ಞತೆಯ ಪ್ರಮಾಣ ವೋ, ಅನುಭವದಿಂದ ಪರಿಣತೆಯಾಗಿ ಆದ ಮಾರ್ಪಾಡೋ ಎಂದು ಆಶ್ಚರ್ಯಗೊಳಿಸುವಂತಿತ್ತು. ನನ್ನನ್ನು ಮರುಯೋಚಿ ಸುವಂತೆ ಮಾಡಿತು. ಅಪಾರ ಓದಿನಿಂದ, ಅನುಭವದಿಂದ ಅರಿವಿಗೆ ಹಾದು ಬಂದ ಕಾಮತರ ಜ್ಞಾನದ ವ್ಯಕ್ತಿತ್ವ ಜನಸಾಮಾನ್ಯರೊಂದಿಗೆ ಬೆರೆಯಲು ಸಾಧ್ಯವಾಗದೇ ಇದ್ದಾಗ ಅವರೊಂದಿಗೆ ಸಂವಹನಿಸಲು ತನಗೇ ಅರಿವಿರದಂತೆ ಎತ್ತರಕ್ಕೇರಿಸಿಕೊಂಡ ತಮ್ಮಣ್ಣ, ಕಾಮತರ ತೋಟದ ಚಿತ್ರ ಕಲೆಗೆ ಬಣ್ಣವೇ ಆಗಿದ್ದ. ತುಂಬಿದರೆ ಕಾಮತರು ದೊಡ್ಡ ಪರದೆ ಯಂತೆ ನಿಂತಿದ್ರು ನನಗೆೆ ಇಬ್ಬರೂ ಮುಖ್ಯ ಎನಿಸಿತು. ಎನೋ ಯೋಚಿಸುವಂತಿದ್ದ ಕಾಮತರು ಕಾಲೇಜು ಪ್ರಿನ್ಸಿಪಾಲ್ ಇತ್ತೀಚಿನ ಎರಡು ವರ್ಷಗಳಿಂದ ‘ಹೆಲ್ಪಿಂಗ್ ಮಿ ಎ ಲಾಟ್’ ಎಂದರು. ನನಗೆ ಸಂತೋಷವಾಯಿತು.

***

ಮನೆಗೆ ವಾಪಸ್ಸು ಬಂದಾಗ ಕತ್ತಲಾಗುತ್ತಿತ್ತು. ಸಣ್ಣದಾಗಿ ಸಂಗೀತ ದ ನಾದ ಕೇಳಿಸಲು ಶುರುವಾಯಿತು, ದಾರಿಯಲ್ಲಿ ಅಪ್ಪನ ಅನಾ ರೋಗ್ಯ, ಊರಿನವರು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗದೇ ಬರೀ ಅವರಿವರ ವಿಷಯದ ಬಗ್ಗೆಯೇ ಮಾತನಾಡುವ ಜನಗಳು, ಸಿಕ್ಕ ಅವಕಾಶವನ್ನು ಉಪಯೋಗಿಸಿ ಹೊರಗಿನಿಂದ ಬಂದು ಶ್ರೀಮಂತ ಗೊಂಡು ಊರಿನವರೇ ಆದ ತರುಣರು, ಈ ಎಲ್ಲ ರೀತಿಯ ಜನಗಳ ಪರಿಚಯ ಕೊಟ್ಟ ತಮ್ಮಣ್ಣನ ಈ ರೀತಿಯೇ, ಊರಿನ ಬದಲಾದ ಪರಿಸ್ಥಿತಿಯ ವ್ಯಾಖ್ಯೆಯಂತೆ ನನ್ನನ್ನು ಯೋಚಿ ಸುವಂತೆ ಮಾಡಿದವು. ಬದಲಾದ ಅಭಿರುಚಿಯನ್ನು ಅರಿಯದೇ ಹೋದ ರಿಪ್ಪನ್ ಪೇಟೆಯ ಪ್ರತಿನಿಧಿಯಂತಿದ್ದ ಜೈ ಹಿಂದ್ ಹೋಟೆಲು, ಬಲ್ಲಾಳರ ಊಟದ ಹೋಟೆಲ್, ಪ್ರಭುಗಳ ದಿನಸಿ ಅಂಗಡಿ ಎಲ್ಲವೂ ಮುಚ್ಚಿದ ಕತೆಗಳು ಬದಲಾವಣೆಗೆ ಸಿದ್ಧರಾಗು ವುದು ಅನಿವಾರ್ಯ ಎಂಬ ಪಾಠವನ್ನು ಕಲಿಸಿತ್ತು. ಮನುಷ್ಯನನ್ನು ಅರಿಯುವ ಕೌಶಲತೆ ತಮ್ಮಣ್ಣನಲ್ಲಿ ಢಾಳಾಗಿ ಬಂದಿವೆ ಎನಿಸಿತು. ತಮ್ಮಣ್ಣನೆಂದ ‘‘ರಮೇಶಣ್ಣ, ಸ್ಕ್ಕೂಲಿಗೆ ಹೋಗದ ಯುವಕರಿಗೆ ಬೇರೆ ಬೆರೆ ಮರಗಳನ್ನು ಹತ್ತುವ ಕೌಶಲತೆಯನ್ನು ಕಲಿಸುತ್ತಿದ್ದೇನೆ. ಕಲಿತ ಜನರಿಗೆ ಅಡಿಕೆ ತೋಟಗಳಲ್ಲಿ ಕೆಲಸ ಸಿಕ್ಕಿ ಖುಷಿಯಲ್ಲಿದ್ದಾರೆ’’ಎಂದ

 ತಮ್ಮಣ್ಣ ನನ್ನ ಮತ್ತು ಕಾಮತರನ್ನು ಬೀಳ್ಕೊಟ್ಟ. ಇನ್ನೂರಕ್ಕೂ ಮಿಕ್ಕಿ ಕೆಲಸಗಾರರು ಯಾವ ಯೂನಿಯನ್ ಇಲ್ಲದೆ ತನ್ನದೇ ತೋಟವೆಂದು ಇಷ್ಟು ವರ್ಷ ಸ್ಥಿತಪ್ರಜ್ಞನಂತೆ ಕಂಡರು ಕಾಮತರು.

‘‘ಅಲ್ಲ ರಮೇಶ, ಒಂದು ಮಾತು ನಿಜ. ತಮ್ಮಣ್ಣ ಜೀನಿಯಸ್ ನೋಡ್ರಿ... ಕಾಮತರು, ಮಿತ ಭಾಷಿ ಕೆಲಸದಲ್ಲಿ ಇರುವವರು ತೋಟದ ಬದಿಯಲ್ಲಿ ಇದ್ದ ತಮ್ಮ ಜಮೀನನ್ನು ಒತ್ತೆ ಇಟ್ಟದ್ದನ್ನ ಬಿಡಿಸಿ ಕೊಟ್ಟವರು. ತೋಟದಲ್ಲಿಯೇ ಕೆಲಸಕ್ಕೆ ಸೇರಿಸಿದವರು, ಕೆಲಸದವರು. ವರ್ಷದ ಎಲ್ಲಾ ದಿನ ಕೆಲ್ಸ ಮಾಡ್ತಾರೆ. ಹಲವಾರು ಅಂಥಹ ಜನರ ಮಧ್ಯೆ ತಮ್ಮಣ್ಣ, ಇಷ್ಟು ದೊಡ್ಡ ನೂರು ಎಕರೆ ತೋಟವನ್ನು ಒಬ್ಬನೇ ಸೂಪರ್‌ವೈಸ್ ಮಾಡ್ತಾನಲ್ಲ, ಗ್ರೇಟ್ ಅಲ್ವಾ?’’ ನಾನೆಂದೆ ಸಮ್ಮತಿಸಿ ‘‘ಅವನ ಗಿಡ ಮತ್ತು ವೃಕ್ಷಗಳ ಮತ್ತು ಸಾಕು ಪ್ರಾಣಿಗಳ ಜ್ಞಾನ ಅಪರೂಪದ್ದು. ನಿನ್ನೆ ನೀನು ಹೇಳಿದೆ. ಆದರೆ ಊರಿನವರಿಗೂ ಇವನ ಬಗ್ಗೆ ಆಸ್ಥೆ ಇಲ್ಲ ಎಂದು ಕೊರಗಿದೆ.

***

ನನ್ನ ಸಲಹೆ ಮೇರೆಗೆ ಪದವಿ ಓದುವ ಜೀವಶಾಸ್ತದ ವಿದ್ಯಾರ್ಥಿಗಳಿಗೆ ಕಾಮತರ ತೋಟದಲ್ಲಿ ಸಸ್ಯಗಳ ಮತ್ತು ಪ್ರಾಣಿಗಳ ಪೋಷಣೆ ಮತ್ತು ಸಾಕುವಿಕೆಯ ಬಗ್ಗೆ ತಮ್ಮಣ್ಣನಿಂದ ಕಲಿಸುವುದು ಎಂದು ಪದವಿ ಕಾಲೇಜಿನ ಪ್ರಿನ್ಸಿಪಾಲ ರಮಾನಾಥ ಜೊತೆ ಸೇರಿ ತೀರ್ಮಾನಿಸಲಾಯಿತು.

ರಮಾನಾಥ ‘‘ಮಕ್ಕಳು ತಮ್ಮಣ್ಣ ಸರ್ ಪಾಠ ಕೇಳುವರು’’ ಎಂದ. ಇಬ್ಬರೂ ನಕ್ಕೆವು.

ಮಾರನೇ ದಿನ ತಮ್ಮಣ್ಣನಿಗೆ ‘‘ನೀನು ಕಾಲೇಜಿನಲ್ಲಿ ಮಕ್ಕಳಿಗೆ ನಿನಗೆ ಗೊತ್ತಿದ್ದನ್ನೆಲ್ಲವನ್ನು ಹೇಳಿ ಕೊಡಬೇಕು.’’

‘‘ಏನು ರಮೇಶಣ್ಣ ಈ ಬಡವನ ಮೇಲೆ ಜೋಕಾ?’’

‘‘ನೀನು ಒಪ್ಪಿಕೋ. ಕಡೆಗೆ ಜೋಕಾ ನೋಡೊಣ. ಕಾಮತ ರಿಂದ ಈ ಕಾರ್ಯಕ್ರಮದ ಉದ್ಘಾಟನೆ.’’

‘‘ನಾನು ಎಸೆಸೆಲ್ಸಿ ಎರಡು ಸಲ ಫೇಲು. ನಂದು ಗ್ರಾಮ ಕನ್ನಡ. ನಾನು ಒಪ್ಪಿಕೊಂಡ್ರೆ ಜನರು ಮಂಡೆ ಸಮಾ ಉಂಟಾ ಎಂದು ಕೇಳ್ಬಹುದು’’ ಹೇಗೋ ಮಾಡಿ ಅವನನ್ನು ಒಪ್ಪಿಸಿದೆ.

‘‘ಧಣಿ ಬಂದ್ರೆ ಎಡವಟ್ಟಾದೀತು’’

‘‘ಎಲ್ಲ ನನ್ಮೇಲೆ ಬಿಡು’’ ಎಂದೆ. ಬಹಳ ಕಷ್ಟದಿಂದ ಒಪ್ಪಿದ.

ತಮ್ಮಣ್ಣ ಕ್ಲಾಸ್ ತಗೆದುಕೊಳ್ಳುವ ಬಗ್ಗೆ ಬಿಎಸ್ಸಿ ವಿದ್ಯಾರ್ಥಿಗಳು ಜೋಕ್ಸ್ಸ್ ಮಾಡಿ ಮೆಸ್ಸೇಜುಗಳು ಬರಲು ಶುರುವಾಯಿತು.ಆವನು ಕ್ಲಾಸಿನ ಒಳಗೆ ಬಂದಾಗ ‘ವೆಲ್ಕಮ್ ತಮ್ಮಣ್ಣ ಸರ್’ ಎಂದು ಸ್ವಾಗತಿಸಿದರು. ನನ್ನ ಸೂಚನೆಯಂತೆ ಉಟ್ಟ ಪಂಚೆಯನ್ನು ಎತ್ತಲಿಲ್ಲ.

ತಮ್ಮಣ್ಣ ಮಕ್ಕಳಂತೆ ನಾಚಿದ. ಹಣೆಯಲ್ಲಿ ಬೆವರು. ಧೈರ್ಯಮಾಡಿ ತನಗೆ ತಿಳಿದ ರೀತಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟ. ಮಕ್ಕಳಿಗೆ ಸಿಲೆಬಸ್‌ನಲ್ಲಿಲ್ಲದ ವಿಷಯಗಳು ಹೊಸತೆನಿಸಿದವು. ಇದೊಂದು ಉತ್ತಮ ಪ್ರಯೋಗವೆಂದು ಕಾಮತರು ರಮಾನಾಥ ನನ್ನು ಅಭಿನಂದಿಸಿದರು. ಕಾಮತರು ತನಗೂ ಗೊತ್ತಿರದ ವಿಷಯ ಗಳೂ ಇದ್ದವೆಂದು ತಮ್ಮಣ್ಣನನ್ನು ಅಭಿನಂದಿಸಿದರು.

ಕಾಮತರ ಸ್ನೇಹಿತನೊಬ್ಬ ಖಾಸಗಿ ವಲಯದಲ್ಲಿ ತೋಟಗಾರಿಕೆ ಬಗ್ಗೆ ಅಭ್ಯಸಿಸಲು ಅಮೆರಿಕದ ಕೆಲವು ರೈತರು ಭಾರತಕ್ಕೆ ಬರಲಿದ್ದಾರೆ.ಸಹಕರಿಸು ಎಂದು ಸಂದೇಶ ಕಳಿಸಿದ್ದರು. ಅವರ ಭೇಟಿಯನ್ನು ಅಕಾಡೆಮಿಕ್ ಮಾಡಲು ಕಾಲೇಜಿನ ಥ್ರೂ ಮಾಡಿಸಿದ್ದರು. ಎರಡು ದಿನದಲ್ಲಿ ಬರ್ತಾರೆ ಅಂತ ರಮಾನಾಥ ಫೋನ್ ಮಾಡಿದ್ದ. ನನ್ನ ಅಮೆರಿಕದ ಸ್ನೇಹಿತರು ನನ್ನ ಕೋರಿಕೆ ಮೇಲೆ ಮಿಚಿಗನ್‌ನ ಕೃಷಿ ವಿಶ್ವ ವಿದ್ಯಾನಿಲಯದವರ ಪ್ರತಿನಿಧಿಗಳಿಗೆ ಬರಲು ಆಮಂತ್ರಣ ನೀಡಲಾಯಿತು.

ನನಗೆ ಇದು ಹೊಸ ಅನುಭವವಾಗಿತ್ತು. ಅಮೆರಿಕನ್ ಎರಡು ಸಂಶೋಧಕರು ಮತ್ತು ಮಿಚಿಗನ್ ಯೂನಿವರ್ಸಿಟಿಯ ವಿದ್ಯಾರ್ಥಿ ಗಳಿಗೆ, ಯಾವ ರಸಾಯನಿಕ ಗೊಬ್ಬರವನ್ನು ಉಪಯೋಗಿಸದೇ, ತೋಟದಲ್ಲಿಯೇ ತಯಾರಿಸಿದ ಗೊಬ್ಬರದಿಂದ ಇಷ್ಟು ವಿವಿಧ ಹಣ್ಣುಗಳನ್ನು ಬೆಳೆಸುವುದು, ಬೇರುಗಳ ಬಣ್ಣದಲ್ಲಿ ಆಗುವ ವ್ಯತ್ಯಾಸದಿಂದ ತಾಗಿದ ರೋಗವನ್ನು ಗುರುತಿಸುವುದು, ತೆಂಗಿನ ಕಾಂಡವನ್ನು ತಿನ್ನುತ್ತಿರುವ ದುಂಬಿಯು ಬರದ ಹಾಗೆ ತೋಟದಲ್ಲೇ ತಯಾರಿಸಿದ ಅಂಟಿನಂತಹ ವಸ್ತುವನ್ನು ತಯಾರು ಮಾಡುವುದು, ಇವೆಲ್ಲ ಸಸ್ಯಗಳಿಗೆ ಸಂಬಂಧ ಪಟ್ಟವಾದರೆ ಗೊರಸು ಗಳಿಗೆ ಸಂಬಂಧಿಸಿದಂತೆ, ದನದ ನಾಬಿಯ ಮೇಲೆ ಕೈಯಿಟ್ಟು ಅಥವಾ ಬೆನ್ನನ್ನು ಸವರಿ ಎಷ್ಟು ತಿಂಗಳ ಬಸುರಿ, ಕರು ಗಂಡೊ ಹೆಣ್ಣೊ ಎಂದು ಗುರುತಿಸುವುದು, ತೆಂಗಿನ ಮರ ಬರಿಗಾಲಲ್ಲಿ ಹತ್ತುವುದು, ಜಾನುವಾರದ ಮೂತ್ರದಿಂದ ಕೀಟನಾಶಕ, ಕಸಿಯ ಮೂಲಕ ಒಂದೇ ಗಿಡದಲ್ಲಿ ಹಲವು ಬಣ್ಣದ ದುಗುಣ ಸಂಖ್ಯೆಯಲ್ಲಿ ಹೂವುಗಳ ಉತ್ಪಾದನೆ ಮತ್ತು ನೌಕರರ ನಡುವೆ ಆಂತರಿಕ ಶಿಸ್ತು ಮತ್ತು ಆಡಳಿತ... ಎಲ್ಲದರ ಬಗ್ಗೆ ಕಾಮತರು ಮತ್ತು ತಮ್ಮಣ್ಣನು ಕೊಟ್ಟ ವಿಶೇಷ ಕೊಡುಗೆಯನ್ನು ವಿವರಿಸಿದೆ.

ಅಮೆರಿಕದ ಮಿಚಿಗನ್ ವಿ. ವಿದ್ಯಾಲಯದವರು ತಮ್ಮಣ್ಣನನ್ನು ಸಂದರ್ಶಿಸಲು ಎರಡು ವಿದ್ಯಾರ್ಥಿಗಳನ್ನು ಕಳಿಸಿದ್ದರು. ಕಾಮತರು ನಾನು ಮತ್ತು ರಮಾನಾಥ, ತಮ್ಮಣ್ಣನೊಂದಿಗೆ ಇದ್ದು ಇಂಗ್ಲಿಷ್ ಮತ್ತು ಕನ್ನಡ ತರ್ಜುಮೆಗಾಗಿ ಸಹಕಾರ ನೀಡಿದೆವು.

‘‘ನಾಲ್ಕು ದಿವಸ ಈ ಊರಲ್ಲೆ ಇರ್ತಾರೆ’’ ಎಂದ ರಮಾನಾಥ. ನಾಳೆ ಮತ್ತೆ ಅಮೆರಿಕರಿಗೆ ಕೆಲವು ನಾಟಿ ಮದ್ದುಗಳು ಮತ್ತು ಇತರ ವಿದ್ಯೆಗಳನ್ನು ಪರೀಕ್ಷಿಸಲು ವಿವರಣೆ ಕೊಡಲಿಕ್ಕಿದೆ’’ಎಂದ. ಈ ಸಂತಸದಲ್ಲಿ ಊರಿನವರು ಎಲ್ಲಿದ್ದಾರೆ? ಎಂದು ವಿಷಾದಿಸಿದೆ. ಎಲ್ಲವೂ ಇಚ್ಛಿಸಿದಂತೆ ಆಯಿತು. ಊರವರಿಗೆ ವ್ಯಾಪಾರ, ಲಾಡ್ಜ್ ನವರಿಗೆ ಪರದೇಶದವರ ಅಗತ್ಯಗಳು ಎಲ್ಲವೂ ಅರಿವಾದವು.

***

ರಮಾನಾಥರ ಬಳಿ ಒಟ್ಟು ವಿಮರ್ಶೆ ಕೇಳಿದೆ.

‘‘ನೋಡು ರಮೇಶ, ಅಮೆರಿಕನ್ನರಿಗೆ ವಿಶೇಷವಾಗಿ ಆಕರ್ಷಿ ಸಿದ್ದು ತಮ್ಮಣ್ಣನ ವಿಶೇಷ ಕುಶಲತೆಗಳಲ್ಲ. ಕೆಲವನ್ನು ತಮ್ಮಣ್ಣನ ನಾಭಿ ಅಥವಾ ಬೆನ್ನಿನ ಹುರಿ ಸವರಿ ಕರು ಗಂಡೂ ಹೆಣ್ಣೋ ಎಂದು ಹೇಳುವುದಕ್ಕೆ ಯಾವ ಪುರಾವೆಗಳಿಲ್ಲ. ಅವನು ತನ್ನ ಅನುಭವದಿಂದ ಹೇಳುವುದು.ಹೆಚ್ಚು ಕಡಿಮೆ ಸರಿ ಇರುತ್ತೆ. ಆದರೆ ಅವರಿಗೆ ಯೋಚನೆಗೆ ಹಚ್ಚಿದ್ದು ಪೂರ ದೇಸೀ ರೀತಿಯಲ್ಲಿ ತೋಟದ ಆಡಳಿತವನ್ನು ನಡಸುವುದು. ಇಷ್ಟು ದೊಡ್ಡ ತೋಟವನ್ನು ಹತ್ತನೇ ತರಗತಿಯಲ್ಲಿ ಫೇಲಾದ ಒಬ್ಬ ಸಾಮಾನ್ಯ ನಡೆಸುವುದು ಮತ್ತು ಕಲಿತ ಮಾಲಕ ಇಂತಹ ದೊಡ್ಡ ಹೂಡಿಕೆಯನ್ನು ಇಷ್ಟು ಚಿಕ್ಕ ಊರಿನಲ್ಲಿ ಮಾಡಿ ಯಶಸ್ವಿ ಆಗುವುದು ಒಂದು ಅಧ್ಯಯನದ ವಿಷ ಯವಾಗಿದೆ. ಇದರಲ್ಲಿ ತಮ್ಮಣ್ಣನ ವಿಶೇಷ ಕುಶಲತೆ ಮತ್ತು ಅವನಲ್ಲಿ ನೂರು ಶತ ಕಾಮತರ ನಂಬಿಕೆ. ಇದು ಅವರಿಗೆ ಅಚ್ಚರಿಯ ವಿಷಯ. ಸುಮಾರು 25 ವರ್ಷಗಳಿಂದ ತೋಟ ಇದ್ದದ್ದೇ ಅದರೆ ಯಶಸ್ಸು’’ ಎಂದು ಅಮೆರಿಕನ್ನರ ಮನಸ್ಸನ್ನು ತೆರೆದಿಟ್ಟ.

ಅದು ಅವನ ಅಭಿಪ್ರಾಯವೂ ಆಗಿತ್ತು ಎನ್ನುವುದರಲ್ಲಿ ಯಾವ ಅನುಮಾನವು ಬೇಡ ಅನಿಸಿತು.

ಆಗಾಗ ಊರಿಗೆ ಹೋಗುವ ಪ್ರಕ್ರಿಯೆ ಮುಂಬೈಯಲ್ಲಿ ಬಂದು ನಿಂತವರಿಗೆ ಸಾಮಾನ್ಯ. ಆದರೆ ಮುಂಬೈಯವರಾಗಿ ಜೀವನದ ಬಹಳಷ್ಟು ಸಮಯವನ್ನು ಕಳೆದ ಕಾಮತರು ತಮ್ಮ ಬದುಕಿನಲ್ಲಿ ಕಂಡಂತಹ ಸ್ಥಿತ್ಯಂತರಗಳನ್ನು ಅರಿಯುವ ಕುತೂಹಲ ಕಾಡ ತೊಡಗಿದ್ದು ನೋಡಿ ನನ್ನ ಹೆಂಡತಿಗೆ ಆಶ್ಚರ್ಯದಂತೆ ತರಿತು. ಹಲವು ಸಲ ಊರಿಗೆ ನೀವು ಬಂದು ಹೋದರೂ ತಮ್ಮಣ್ಣನನ್ನು ಹತ್ತಿರದಿಂದ ನೋಡಿದವನಾದರೂ ಅವನ ಬಗ್ಗೆ, ಕಾಮತರ ಬಗ್ಗೆ ಕುತೂಹಲ ಈಗ್ಯಾಕೆ ಹುಟ್ಟಿತು ಎಂದು ಕೇಳಿದ ಪ್ರಶ್ನೆಗೆ ಉತ್ತರ ನನ್ನಲ್ಲಿರಲಿಲ್ಲ. ಹೊರಗಿನ ಜನ ಊರನ್ನು ದೊಡ್ಡದನ್ನಾಗಿ ಮಾಡಿ ತಾವು ದೊಡ್ಡವರಾಗಿದ್ದಾರೆ. ಆದರೆ ಕಾಮತರು ಅವರೊಂದಿಗಿರುವ ಜನಗಳನ್ನು ದೊಡ್ಡದು ಮಾಡಿ ಆ ಜನಗಳೇ ತೋಟವನ್ನು ದೊಡ್ಡದು ಮಾಡಿದ್ದಾರೆ. ಕಾಮತರು ತೋಟವನ್ನು ಒಂದು ಹಣವನ್ನು ಗಳಿಸುವ ಮಾಧ್ಯಮವೆಂದು ಬಯಸಲಿಲ್ಲ. ತಮ್ಮ ಅಭಿವ್ಯಕ್ತಿ ಮಾಧ್ಯಮವಾದ ಚಿತ್ರಕಲೆಯನ್ನು ತಮ್ಮ ಕಾರ್ಯ ಬಾಹುಳ್ಯದಿಂದ ಅಪೇಕ್ಷಿತ ಮಟ್ಟಕ್ಕೆ ತರಲು ಸಾಧ್ಯವಾಗಲಿಲ್ಲ ಎಂಬ ಬೇಸರ ಅವರನ್ನು ಕಾಡುವುದು ಸಹಜ. ಆದರೆ, ತನ್ನ ಎಲ್ಲ ಕ್ರಿಯಾಶೀಲತೆಯನ್ನು ಹೊರಗೆ ಹಾಕಲು ಪಕೃತಿ ದತ್ತವಾಗಿ ಬಂದ ತೋಟವನ್ನು ಚಿತ್ರಕಲೆಯ ಕ್ಯಾನ್‌ವಾಸ್‌ನಂತೆ ಕಂಡರು. ತಮ್ಮಣ್ಣನಿಗೆ ಸಹಜದತ್ತವಾಗಿ ಬಂದ ಕುತೂಹಲ, ಸೃಜನಶೀಲತೆ, ಚಿತ್ರಕಲೆಯ ಕಾಮತರ ಕಣ್ಣಿಗೆ ಹೊಸ ದೃಷ್ಟಿಯನ್ನು ನೀಡಿತು. ರಮಾನಾಥನ ವಿಮರ್ಶೆಯಿಂದ ನನಗೆ ತೋಟ, ತಮ್ಮಣ್ಣ, ಕಾಮತರು ನನ್ನ ಮುಂದಿನ ಕಥೆಗೆ ವಸ್ತು ಎಂದು ಅನಿಸಿತು

ಒಂದು ಹೊಸ ಪ್ರಪಂಚವನ್ನು ತೆರೆದ ತಮ್ಮಣ್ಣ ಮತ್ತು ಕಾಮತರು ನನ್ನ ಸ್ನೇಹಿತರೊಂದಿಗೆ ರಾತ್ರಿಯ ಸಂಭಾಷಣೆಯಲ್ಲಿ ವಿಶೇಷ ಪಾತ್ರ ವಹಿಸಿದ್ದು, ಗೌರವಕ್ಕೆ ಪಾತ್ರನಾಗಿ ಬಿಟ್ಟಿದ್ದರು. ಕಾಮತರು ಕೊಟ್ಟ ಹಣ್ಣಿನ ಚೀಲದಲ್ಲಿ ತಮ್ಮಣ್ಣ ಹಾಕಿದ್ದ ಎರಡು ಮೂರು ಉಡುಪಿ ಗುಳ್ಳದಂತಿರುವ ಬದನೆಯ ಗಾತ್ರ ನೋಡಿ ಯಾರಿಗಾದರೂ ಅಚ್ಚರಿ ಆಗಬಹುದು. ತಮ್ಮಣ್ಣ ಹೇಳಿದ ಮಾತು ನೆನಪಿಗೆ ಬಂದಿತು ‘ನಾನು ಡಿಗ್ರಿ ಮಾಡದಿದ್ದರೂ ನಾನು ಕಲಿತ ವಿದ್ಯೆ ನನ್ನನ್ನು ಬದುಕಲು ಕಲಿಸಿತು..’’ ತಮ್ಮಣ್ಣ ಒಬ್ಬ ದಡ್ಡ ವಿದ್ಯಾರ್ಥಿ ಎಂದೇ ನೋಡಿದ ನಮ್ಮ ಕಂಗಳನ್ನು ಮಿಕ್ಕಿದ ವ್ಯಕ್ತಿತ್ವ ತಮ್ಮಣ್ಣನದು ಎಂದು ಯಾರು ಹೇಳಿಯಾರು? ಯಾವಾಗಲೂ ಅನ್ನಿಸುತಿತ್ತು. ‘‘ಒಂದೇ ಮಣ್ಣಿನಲಿ ನಾನೂ ಮತ್ತು ತಮ್ಮಣ್ಣ ಇಬ್ಬರೂಬೆಳೆದವರು. ಆದರೆ ಮಣ್ಣಿನೊಂದಿಗೆ ಸದಾ ಸಂಪರ್ಕ ಹೊಂದಿ ತನಗೇ ಗೊತ್ತಿರದ ಅಮೂಲ್ಯತೆ ಅವನಿಗೆ ಸಿಕ್ಕಿದೆ. ತಾನು ಎಷ್ಟೇ ಪ್ರಭಾವಿ ಯಾದರೂ ಅದು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಿರಬಹುದು. ಅದಕ್ಕಾಗಿ ಎಮ್‌ಬಿಎ ಕಲಿತು ಮುಂಬೈಗೆ ಹೋಗಬೇಕಾಯಿತು’’ ಎಂದೆಲ್ಲ ಯೋಚನೆಗೆ ಬಂತು.

ರಮಾನಾಥನು ಬರೆದ ಲೇಖನ ರವಿವಾರದ ವಿಶೇಷ ಲೇಖನವಾಗಿ ಬಂದಿತ್ತು. ಕೃಷಿಮಂತ್ರಿಗಳು ಕೊಟ್ಟ ಸೂಚನೆ ಮೇರೆಗೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಎರಡು ದಿನಗಳ ನಂತರ ಕಾಮತ್ ಮತ್ತು ತಮ್ಮಣ್ಣನಿಗಾಗಿ ತೋಟದಲ್ಲಿ ಕಾಯುತ್ತಿದ್ದರಂತೆ. ಅಷ್ಟರಲ್ಲಿ ಕಾಮತರಿಗೆ ಮತ್ತು ತಮ್ಮಣ್ಣಗೆ ಆಮೆರಿಕ ವಿ.ವಿ.ಯೊಂದು ಭಾಷಣ ಕೊಡಲು ಆಹ್ವಾನಿಸಿತ್ತು. ಕಾಮತರು ರಮಾನಾಥನನ್ನು ಕರೆದುಕೊಂಡು ಹೋಗಲು ಮರೆಯಲಿಲ್ಲ.

ಮುಂಬೈಯ ನನ್ನ ಆಫೀಸಲ್ಲಿ ತಮ್ಮಣ್ಣ ಮತ್ತು ಕಾಮತರ ಫೋಟೋ ರಾರಾಜಿಸುತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)