varthabharthi

ಸುಗ್ಗಿ

ಖುಷಿಯಿಂದಲೇ ಹೆಚ್ಚು ಸಂಬಂಧಗಳು ಹಾಳಾಗುತ್ತಿವೆ!

ವಾರ್ತಾ ಭಾರತಿ : 1 Sep, 2019
ಮಧುಕುಮಾರ್ ಬಿಳಿಚೋಡು

ಮಾನವ ಸಂಘಜೀವಿ. ಸಮಾಜದಲ್ಲಿ ಮನುಷ್ಯ ನೆಮ್ಮದಿ ಯಿಂದ ಬದುಕಲು ಒಬ್ಬರಿಂದ ಮತ್ತೊಬ್ಬರ ನಡುವೆ ಸಂಬಂಧ ಅತಿ ಅವಶ್ಯಕ. ಇಂತಹ ಸಂಬಂಧಗಳನ್ನು ನಾವಾಗಿಯೇ ಹಾಳುಮಾಡಿಕೊಳ್ಳುತ್ತಿದ್ದೇವೆ ಹೊರತು ಮತ್ತೊಬ್ಬರಿಂದಲ್ಲ. ಕೆಲವು ಸಂಬಂಧಗಳು ಸಣ್ಣಪುಟ್ಟ ನೋವಿನಿಂದ ಹಾಳಾಗುತ್ತವೆ. ಇನ್ನು ಬಹುತೇಕ ಸಂಬಂಧಗಳು ಅತಿಯಾದ ಖುಷಿ, ಬಯಕೆಯಿಂದಲೇ ಹಾಳಾಗುತ್ತಿರುವುದಂತೂ ನೂರಕ್ಕೆ ನೂರರಷ್ಟು ಸತ್ಯ.

ದುಃಖದಿಂದ ಬಿರುಕು ಬಿಟ್ಟ ಸಂಬಂಧಗಳು ಕೆಲವು ದಿನಗಳ ನಂತರ ಒಂದಾಗಿಬಿಡುತ್ತವೆ ಆದರೆ, ನಗು ನಗುತ್ತಲೇ ಇರುವವರ ಮಧ್ಯೆ ಬಿರುಕು ಬಿಟ್ಟ ಸಂಬಂಧಗಳು ಮತ್ತೆ ಒಂದಾಗುವುದು ನೂರರಲ್ಲಿ ಅರ್ಧದಷ್ಟು ಎಂಬುದು ನಾವಿಲ್ಲಿ ಯೋಚಿಸಬೇಕಾದ ಸಂಗತಿ. ಈ ಖುಷಿಯ ಸಂಗತಿಗೆ ಬೇರೆಯಾದ ಸಂಬಂಧಗಳು ಪುರುಷರಲ್ಲಿ ತುಂಬಾ ವಿರಳ. ಅದೇ ಸ್ತ್ರೀಯರ ವಿಚಾರದಲ್ಲಿ ಹೆಚ್ಚು. ಇನ್ನು ಹೆಣ್ಣು, ಗಂಡಿನ ನಡುವಿನ ಸಂಬಂಧಗಳು ಸಂದರ್ಭಕ್ಕನುಗುಣವಾಗಿ ಬೇರೆಯಾಗಿರುತ್ತವೆ ಹೊರತು ಸಂಪೂರ್ಣವಾಗಿ ದೂರವಾಗುತ್ತವೆ ಎಂದುಕೊಳ್ಳುವುದು ಶುದ್ಧಸುಳ್ಳು. ಸಂಬಂಧಗಳು ಬಹುಬೇಗನೆ ಹಾಳಾಗುವುದಕ್ಕೆ ಕೆಲವೊಂದಿಷ್ಟು ಕಾರಣಗಳು ಹುಡುಕತ್ತಾ ಹೋದಲ್ಲಿ ಪ್ರಮುಖವೆನಿಸಿದವು.

ಒಂಟಿತನ:

ಮೊದಲೇ ಹೇಳಿದಂತೆ ಮಾನವ ಸಂಘಜೀವಿ. ಅದನ್ನು ಮರೆತು ಅದರ ವಿರುದ್ಧ ನಡೆದುಕೊಳ್ಳುವ ಪ್ರಯತ್ನದಲ್ಲಿ ನಾವಿ ದ್ದಾಗ ಜೊತೆಯಾದ ಸಂಬಂಧಗಳು ಹೆಚ್ಚುಕಾಲ ಸಮಸ್ಥಿತಿಯಲ್ಲಿರು ವುದು ಅಸಾಧ್ಯ. ಬ್ಯಾಚುಲರ್ ಲೈಫ್ ಸಾಗಿಸುತ್ತಿರುವ ಯುವಜನತೆ ಯಲ್ಲೇ ಒಂಟಿತನ ಎಂಬುದು ಆಳವಾಗಿ ಬೇರೂರಿರುತ್ತದೆ. ಆ ಒಂಟಿತನಕ್ಕೆ ಮತ್ತೊಬ್ಬರ ನಂಟು ಸಹಿಸಲಾಗದು. ಒಂಟಿತನದಲ್ಲಿ ಹೆಚ್ಚು ಖುಷಿಯಾಗಿದ್ದೇವೆ ಎಂದು ಹೇಳುವವರ ಬಳಿ ಒಮ್ಮೆ ಕೇಳಿ ಈ ಒಂಟಿತನಕ್ಕೆ ಕಾರಣವೇನೆಂದು. ಬರುವ ಉತ್ತರ ಈ ಹಿಂದೆ ಮತ್ತೊಬ್ಬರೊಂದಿಗೆ ಹಳಸಿದ ಸಂಬಂಧಗಳ ಸರಮಾಲೆಗಳನ್ನೇ ಹೇಳುತ್ತಾರೆ. ಕೊನೆಗೂ ಒಂಟಿತನವೇ ಜೀವನಕ್ಕೆ ಒಂದಿಷ್ಟು ಹಿತ ನೀಡುತ್ತಿದೆ, ಮತ್ತೆ ಅದನ್ನು ಹಾಳು ಮಾಡಿಕೊಳ್ಳುವ ದುಸ್ಸಾಹಸ ಬೇಡ ಎಂಬ ಅಸಡ್ಡೆತನದ ಮಾತುಗಳೇ ಅವರ ಉತ್ತರಗಳಾಗಿರುತ್ತವೆ.

ಯಾಂತ್ರೀಕೃತ ಬದುಕು:

ಈ ಕಾರಣವೇ ನೋಡಿ ಇಂದಿನ ಬಹುತೇಕ ಸಂಬಂಧಗಳು ಕೂಡಿಸಿರುವುದಕ್ಕಿಂತ ಅಗಲಿಸಿರುವುದೇ ಹೆಚ್ಚು. ಅಕ್ಕಪಕ್ಕದ ಮನೆಯಲ್ಲಿ ಯಾರಿರುವರೆಂದು ತಿಳಿಯುವ ತವಕ ವಿರದ ನಮ್ಮಲ್ಲಿ ಅದೆಲ್ಲೋ ಸಾಮಾಜಿಕ ಮಾಧ್ಯಮಗಳಲ್ಲಿರುವ ಪ್ರೊಫೈಲ್‌ಗಳನ್ನು ಮೇಲೆ, ಕೆಳಗೆ ಎಳೆದಾಡುತ್ತಾ ಸಮಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇಂದು ಸಿಟಿಯ ಲೈಫ್‌ನಲ್ಲಿ ಯಾಂತ್ರೀಕೃತ ಬದುಕಿನಿಂದಾಗಿ ಸಂಬಂಧಗಳು ಮೌಲ್ಯವನ್ನು ಕಳೆದುಕೊಂಡು ಹಳ್ಳಿಗಳತ್ತಾ ಕಾಲಿಟ್ಟಿದೆ. ಅತಿಯಾದ ಯಾಂತ್ರೀಕೃತ ಬದುಕೇ ಇಂದು ಹಳ್ಳಿಯಲ್ಲೂ ಹಲವರ ನಡುವಿನ ಸಂಬಂಧಗಳು ಹಳಸಿರುವುದಕ್ಕೆ ಮೂಲಕಾರಣ ಎಂಬುದು ನಾವಿಲ್ಲಿ ನಂಬಲೇಬೇಕಾದ ವಿಷಯ. ಕಾಲಕ್ಕೆ ತಕ್ಕಂತೆ ತಾಂತ್ರಿಕತೆ ಬಳಕೆಯಾದರೆ ಚೆಂದ. ಆದರೆ ತಂತ್ರಜ್ಞಾನದ ಬಳಕೆ ಇಂದು ಮಿತಿಮೀರಿದ ಪರಿಣಾಮ ಕೈಯ ಲ್ಲೊಂದು ಮೊಬೈಲ್ ಎನ್ನುವ ಮಿಷಿನ್ ಇರದಿದ್ದರೆ ಯಂತ್ರವೇ ಅಲ್ಲದ ಮೆದಳು ಕೆಲಸ ಮಾಡದೆ, ಜೀವನವೇ ನಶ್ವರ ಎನಿಸುವಂತೆ ಮಾಡಿಬಿಟ್ಟಿದೆ!.

ಅತಿಯಾದ ಕೋಪ:

ಕೋಪ ಯಾರಲ್ಲಿ ಇಲ್ಲ ಹೇಳಿ? ಕೋಪ ಕೆಲವು ಸಂದರ್ಭಗಳಿಗೆ ಎಷ್ಟು ಕೆಟ್ಟದ್ದೋ, ಅಷ್ಟೇ ಒಳ್ಳೆಯದು ಕೂಡ. ಹೆಚ್ಚು ಕೋಪ ಎಲ್ಲಿರುತ್ತದೆಯೋ ಅಲ್ಲಿನ ನೆಮ್ಮದಿ ಜೀವನಕ್ಕೆ ಬರೆ ಎಳೆದಂತೆ ಎಂಬುದನ್ನು ನೀವಿಲ್ಲಿ ನಂಬಲೇಬೇಕು. ಹಾಗಂತ ಕೋಪವೇ ಇಲ್ಲದ ಜೀವನ ಉಪ್ಪಿನಕಾಯಿ ಇಲ್ಲದ ಊಟ ಸವಿದಂತೆ.ಅಂತಹ ಊಟದಲ್ಲಿ ತೃಪ್ತಿ ಕಡಿಮೆ. ಸಂಬಂಧಗಳು ಕೋಪದ ಕೂಪಕ್ಕೆ ಸಿಲುಕಿದ ಕೂಡಲೇ ಹಾಳಾಗುವುದಿಲ್ಲ. ಅದೇ ಕೋಪ ಪದೇ ಪದೇ ಮಿತಿಮೀರಿದರೆ ಸಂಬಂಧಗಳು ಹದಗೆಡುವುದು ಹೆಚ್ಚು, ಅದೇ ಕೋಪ ಇತಿ-ಮಿತಿಯಲ್ಲಿದ್ದರೇ ಪ್ರೀತಿ, ಕಾಳಜಿ, ಅಕ್ಕರೆತನ್ನಿಂತ್ತಾನೆ ಹೆಚ್ಚಾಗಿ ಬಿರುಕು ಬಿಟ್ಟ ಸಂಬಂಧಗಳ ಮುಂದೆ ಸೋತು ಒಂದಾಗಿಬಿಡುತ್ತದೆ. ಕೋಪದಲ್ಲಿ ದೂಷಿಸಿ ಸಂಕಟಪಡುವ ಬದಲು, ಕೋಪವಿಳಿದ ನಂತರ ಒಂದಿಷ್ಟು ಸಮಯ ತಾಳ್ಮೆಯ ಒಂಟಿತನಕ್ಕೆ ಒತ್ತು ಕೊಟ್ಟು ಆಲೋಚಿಸಿ. ಅದುವೇ ಸುಖ ಜೀವನಕ್ಕೆ ಮುನ್ನುಡಿ ಯಾಗಲಿದೆ.

ಖುಷಿ:

ಕೆಲವೊಂದು ಸಂಗತಿ ಎಷ್ಟ್ಟು ಖುಷಿ ನೀಡಲಿದೆಯೋ ಅಷ್ಟೇ ದುಃಖವನ್ನು ಕೊಡಲಿದೆ. ಮತ್ತೊಬ್ಬರ ನೋಯಿಸಿ ಸಣ್ಣ ಪುಟ್ಟ ಖುಷಿ ಹುಡುಕುವ ಪ್ರಯತ್ನ ಮಾಡಿದಾಗಲೇ ಸ್ನೇಹ ಸಂಬಂಧಗಳು ಹೆಚ್ಚು ಹಾಳಾಗುವುದು. ಈ ಮನಃಸ್ತಾಪ ಯುವತಿ/ಸ್ತ್ರೀಯರಲ್ಲೇ ಜಾಸ್ತಿ. ಅತಿಯಾದ ಉಲ್ಲಾಸ, ಅರ್ಥವೇ ಇಲ್ಲದ ಆನಂದಕ್ಕೆ ಅಪಾಯ ಗ್ಯಾರಂಟಿ. ಖುಷಿ ತಾನಾಗಿಯೋ ಬರುವಂತಹದ್ದು. ನಾವೇ ಅದನ್ನು ಬಲವಂತವಾಗಿ ಎಳೆಯುವ ಪ್ರಯತ್ನ ಮಾಡಿದರೆ ಅಲ್ಲೊಂದಿಷ್ಟು ಸಂಬಂಧಗಳನ್ನು ನಾವಲ್ಲಿ ದೂರ ಮಾಡಿಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಂತಹ ಸಂದರ್ಭಗಳಲ್ಲಿ ಬೇರೆಯಾದ ಸಂಬಂಧಗಳು ಮತ್ತೆ ಒಂದಾಗುತ್ತವೆ ಬಿಡಿ ಎನ್ನುವುದಾದರೆ ಅವು ಬೆರಳೆಣಿಕೆಯಷ್ಟು ಮಾತ್ರ. ಸಾಲದ ಸುಳಿ:

ಗಾದೆಯೇ ಹೇಳುವಂತೆ ಸಾಲ ಕೇಳಿ ಸ್ನೇಹ ಕಳೆದು ಕೊಳ್ಳಬಾರದು. ಸಾಲದಿಂದ ಸಂಬಂಧಗಳು ಹಾಳಾಗುತ್ತಿರುವುದು ಪುರುಷರಲ್ಲೇ ಹೆಚ್ಚು. ಸ್ನೇಹವೂ ಕೂಡ ಒಂದು ಸಂಬಂಧ. ಆದ್ದರಿಂದ ಸ್ನೇಹದ ಬದುಕಿನಲ್ಲಿ ಸಾಲ ಕೇಳಿ ಆದರೆ ಅದನ್ನು ಸಮಯಕ್ಕೆ ಸರಿಯಾಗಿ ಪ್ರಾಮಾಣಿಕವಾಗಿ ತೀರಿಸುವ ಪ್ರಯತ್ನ ಅತಿ ಅವಶ್ಯ. ಇಲ್ಲವಾ ದಲ್ಲಿ ಆ ಸ್ನೇಹದ ಸಂಬಂಧಕ್ಕೆ ಫುಲ್‌ಸ್ಟಾಪ್ ಬಿದ್ದಂತೆ. ಸಾಲಗಾರನ ಕಿರಿಕಿರಿ ಸಂಬಂಧಗಳ ನಡುವೆ ಅಸಮಾಧಾನದ ವಿಷಬೀಜ ಬಿತ್ತಿ ದಿನ ದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತದೆ. ಅಲ್ಲಿ ಬೆಳೆದ ಅಸಮಾಧಾನ ದ ಮರಕ್ಕೆ ಕೊಡಲಿ ಏಟಿನ ಪೆಟ್ಟು ಕೇವಲ ಚಾಚಿದ ರೆಂಬೆ-ಕೊಂಬೆಗ ಳನ್ನು ಕಡಿದು ಹಾಕಬಹುದೇ ಹೊರೆತು ಬುಡದ ಬೇರನ್ನಲ್ಲ.

ಇನ್ನು ನಮ್ಮಲ್ಲಿನ ಸಂಬಂಧಗಳು ಹಾಳಾಗುವುದಕ್ಕೆ ಸಾಕಷ್ಟು ಕಾರಣಗಳಿವೆ. ಅದರಲ್ಲಿ ಪ್ರಮುಖವಾದವುಗಳನ್ನ್ನು ಮಾತ್ರ ನಾನಿಲ್ಲಿ ಹೇಳಿದ್ದೇನೆ. ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವಲ್ಲಿ, ಬೇಡವಲ್ಲದ ವಿಚಾರಗಳಲ್ಲಿ ಹಸ್ತಕ್ಷೇಪ, ಆಕ್ಷೇಪ, ಕ್ಷುಲ್ಲಕ ಕಾರಣಗಳಿಗೆ ಮನ ಸ್ತಾಪ, ವಾದ-ಪ್ರತಿವಾದ, ನಿಂದನೆಯಂತಹ ಅನೇಕ ಕಾರಣಗಳಿಂದ ಸಂಬಂಧಗಳು ಹಾಳಾಗುತ್ತಿವೆ. ಸಂಬಂಧಗಳನ್ನು ಸೃಷ್ಟಿಸಿಕೊಳ್ಳುವುದು ಸುಲಭ, ಆದರೆ ಅವುಗಳನ್ನು ಯಥಾಸ್ಥಿತಿಯಲ್ಲಿ ಇರುವಂತೆ ನಿಭಾ ಯಿಸುವುದು ಕಷ್ಟ. ಅದರಲ್ಲೂ ದೀರ್ಘಾವಧಿ ಸಂಬಂಧಗಳಂತೂ ಬದುಕೇ ಸಾಕೆನಿಸುವಷ್ಟು ಹಂತಕ್ಕೆ ಬಂದು ವಿವಾಹ ವಿಚ್ಛೇದನ, ಮತ್ತೊಂದು ಮದುವೆ, ಹುಚ್ಚು, ಆತ್ಮಹತ್ಯೆ ಇಲ್ಲವೇ ಕುಟುಂಬದ ಸಹವಾಸವೇ ಬೇಡ ಎನಿಸಿ ದೂರದ ಪಯಣಕ್ಕೆ ಕುಮ್ಮಕ್ಕು ನೀಡಲಿದೆ.

 ಇಲ್ಲಿ ತಪ್ಪು ಒಬ್ಬರಿಂದಲ್ಲ. ಎರಡೂ ಕಡೆಯಿಂದ. ಇದನ್ನು ಅರಿತು ನೆಮ್ಮದಿ ಬದುಕಿನ ಬಾಳ್ವೆಗೆ ಒತ್ತು ನೀಡಿ. ಸಂಬಂಧಗಳಿಗೆ ಬೆಲೆಕೊಟ್ಟು ದಿನದಲ್ಲಿ ಇಂತಿಷ್ಟು ಸಮಯವನ್ನು ಮೀಸಲಿಡಿ. ಇದಕ್ಕೆ ಇಬ್ಬರ ನಡುವೆ ಸಕಾಲಕ್ಕೆ ಶಾಬ್ಧಿಕ ಅಥವಾ ಅಶಾಬ್ಧಿಕ ಸಂವಹನ ಅಗತ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)