varthabharthi

ನಿಮ್ಮ ಅಂಕಣ

ಅತೃಪ್ತ ಶಾಸಕರ ಮೇಲಿನ ಪ್ರೀತಿ, ನೆರೆ ಪೀಡಿತರಿಗೆ ಯಾಕಿಲ್ಲ?

ವಾರ್ತಾ ಭಾರತಿ : 1 Sep, 2019
ಸದ್ದಾಂ ಹುಸೇನ ಬಿ. ಬಳಗಾನೂರ ಗಣಿಹಾರ, ವಿಜಯಪುರ.

ಮಾನ್ಯರೇ,

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದ ಕಂಡರಿಯದ ನೆರೆಹಾವಳಿ ಹೆಚ್ಚಾಗಿದೆ. ಮಳೆನಾಡು ಎಂದು ಖ್ಯಾತಿ ಪಡೆದಿರುವ ಮಲೆನಾಡು ಹಾಗೂ ಬಿಸಿಲುನಾಡು ಎಂದು ಖ್ಯಾತಿ ಪಡೆದಿರುವ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ನೆರೆ ಹಾವಳಿಗೆ ತುತ್ತಾಗಿವೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರು ಮನೆ-ಮಠ, ಜಾನುವಾರು, ಆಸ್ತಿ-ಪಾಸ್ತಿ, ಬೆಳೆಗಳು, ಇತರ ದಿನ ಬಳಕೆ ವಸ್ತುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. 58 ಜನರು ಪ್ರಾಣ ಕಳೆದುಕೊಂಡಿದ್ದು, 50 ಸಾವಿರ ಜಾನುವಾರುಗಳು ಮೃತ ಪಟ್ಟಿವೆ. ಭಾರೀ ಮಳೆಯ ಅವಾಂತರದಿಂದ ನೆರೆಹಾವಳಿ ಹೆಚ್ಚಾಗಿರುವ ಕಡೆಗಳಲ್ಲಿ ಭೇಟಿ ನೀಡಲು ರಾಜ್ಯ ಸರಕಾರದಲ್ಲಿ ಯಾವುದೇ ಮಂತ್ರಿಗಳು ಇರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಏಕಾಂಗಿಯಾಗಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆದರೆ ಅವರೊಬ್ಬರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಆದಷ್ಟು ಬೇಗ ಕೇಂದ್ರ ಸರಕಾರಕ್ಕೆ ಮನವಿ ಮಾಡಿ ತಕ್ಷಣ ಪರಿಹಾರ ಸೂಚಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಅಂತಹದರಲ್ಲಿ ಮುಖ್ಯಮಂತ್ರಿ ಅವರಿಗೆ ಸಚಿವ ಸಂಪುಟ ರಚನೆ ಮಾಡಲು 15ರಿಂದ 20 ದಿನಗಳು ಬೇಕಾದವು. ಸಚಿವ ಸ್ಥಾನ ನೀಡಲು ಮತ್ತೆ ಒಂದು ವಾರ ಸಮಯ ಬೇಕಾಯಿತು.

ಕೇಂದ್ರದಲ್ಲಿ ಕೂಡ ಬಿಜೆಪಿ ಆಡಳಿತದಲ್ಲಿದೆ. ಕೇಂದ್ರ ಸರಕಾರವಾದರೂ ತಕ್ಷಣ ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ಕೊಡಿಸಬೇಕಿತ್ತು. ಆದರೆ ಇನ್ನೂ ಕೆಲವು ಕಡೆ ಪರಿಹಾರದ ಬಗ್ಗೆ ಮಾತುಗಳನ್ನು ಸಹ ಎತ್ತುತ್ತಿಲ್ಲ. ಸರಕಾರ ಸಚಿವ ಸಂಪುಟದ ಸಚಿವರಿಗೆ ಹೊಸ ಬಂಗಲೆ, ಹೊಸ ಕಾರುಗಳಿಗೆ ಹಾಗೂ ಕಚೇರಿಯ ಸಲುವಾಗಿ ಲಕ್ಷ ಗಟ್ಟಲೆ ಹಣ ನೀಡುತ್ತದೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನವಾದಾಗ ಬಿಜೆಪಿ, ಅತೃಪ್ತ ಶಾಸಕರಿಗೆ ಲಕ್ಷಗಟ್ಟಲೆ ಹಣ ವೆಚ್ಚ ಮಾಡಿತು. ಅವರಿಗೆ ಪಂಚತಾರಾ ರೆಸಾರ್ಟ್‌ಗಳಲ್ಲಿ ಇರುವಂತೆ ವ್ಯವಸ್ಥೆ ಮಾಡಿದ್ದರು. ರಾಜಧಾನಿ ಬೆಂಗಳೂರಿನಿಂದ ಮುಂಬೈಗೆೆ ವಿಮಾನದ ಮೂಲಕ ಅವರನ್ನು ಪ್ರಯಾಣಿಸುವಂತೆ ನೋಡಿಕೊಳ್ಳಲಾಯಿತು. ಆದರೆ ನೆರೆ ಪೀಡಿತ ಪ್ರದೇಶಗಳಿಗೆ ಮಾತ್ರ ಇನ್ನೂ ನಯಾ ಪೈಸೆ ಬಿಡುಗಡೆಯಾಗುತ್ತಿಲ್ಲ. ಬಿಜೆಪಿಯ ಕೆಲ ಸಚಿವರು ನೆರೆ ಪೀಡಿತ ಪ್ರದೇಶಗಳಿಗೆ ತಕ್ಷಣ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅದು ಯಾವಾಗ? ನೆರೆ ಸಂತ್ರಸ್ತರ ಜೀವನ ಮೊದಲಿನ ಸ್ಥಿತಿಗೆ ಬರಲು ಅದೆಷ್ಟೂ ಸಮಯ ಬೇಕಾಗುತ್ತದೆಯೋ ಗೊತ್ತಿಲ್ಲ. ಅವರ ಜೀವನ ಸಾಗಲು ಆದಷ್ಟು ಬೇಗ ಹಣ ಮಂಜೂರು ಮಾಡಬೇಕು. ರಾಜ್ಯ ಬಿಜೆಪಿ ಸರಕಾರ ಕೇಂದ್ರ ಸರಕಾರಕ್ಕೆ ಹೆಚ್ಚಿನ ಪರಿಹಾರ ಘೋಷಿಸುವಂತೆ ಕೇಳಿಕೊಳ್ಳಬೇಕು. ಅವರಿಗೆ ಮನೆ ನಿರ್ಮಾಣ, ಇತರ ವ್ಯವಸ್ತೆಗೆ ಸರಕಾರ ಮುಂದಾಗಬೇಕು. ಅತೃಪ್ತ ಶಾಸಕರ ಮೇಲಿನ ಪ್ರೀತಿ ಈ ನೆರೆ ಪೀಡಿತ ಪ್ರದೇಶಗಳಿಗೆ ಯಾಕಿಲ್ಲ?

ಮಳೆಗಾಲ ಆರಂಭವಾಗಿ ಮೂರು ತಿಂಗಳು ಕಳೆದಿದ್ದರೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಮಳೆಯಿಲ್ಲ. ವಿಜಯಪುರ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಇನ್ನು ಮಳೆಯಾಗಿಲ್ಲ. ಮಳೆಯಿಲ್ಲದ ಕಾರಣ ರೈತರು ಬಿತ್ತನೆ ಮಾಡಿಲ್ಲ. ಈ ಬಗ್ಗೆಯೂ ಮಾನ್ಯ ಮುಖ್ಯಮಂತ್ರಿ ಗಮನ ಹರಿಸಿ ತಕ್ಷಣ ರೈತರಿಗೆ ಮುಂಗಾರು ಬೆಳೆಯ ಬೆಳೆ ಪರಿಹಾರ ಒದಗಿಸಬೇಕು. ಇದರ ಜೊತೆಗೆ ವಿಜಯಪುರ ಜಿಲ್ಲೆಯ ಕೆಲವೊಂದು ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಪರದಾಡುವಂತಾಗಿದ್ದು, ತಕ್ಷಣ ಇದಕ್ಕೆ ಪರಿಹಾರ ದೊರಕಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)