varthabharthi


ಪ್ರಚಲಿತ

‘ನಮ್ಮ ಧ್ವನಿ’ ಎಂಬ ಭರವಸೆಯ ಬೆಳಕು

ವಾರ್ತಾ ಭಾರತಿ : 1 Sep, 2019
ಸನತ್ ಕುಮಾರ್ ಬೆಳಗಲಿ

ಮಹೇಂದ್ರ ಕುಮಾರ್ ಅದ್ಬುತ ಸಂಘಟಕ. ಇವರ ತಂಡ ನಾಡಿನಲ್ಲಿ ಮನಸ್ಸು ಕಟ್ಟುವ ಕನಸು ಕಟ್ಟುವ ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದೆ. ಇವರ ‘ನಮ್ಮ ಧ್ವನಿ’ ಸಂಘಟನೆಯಲ್ಲಿ ಜಾತಿ, ಮತ ಭೇದವಿಲ್ಲ, ಎಲ್ಲ ಸಮುದಾಯಗಳ ಜನರಿದ್ದಾರೆ. ಅನೇಕ ಅಲ್ಪಸಂಖ್ಯಾತ ಯುವಕರು ತೊಡಗಿಸಿ ಕೊಂಡಿದ್ದಾರೆ. ಈಗಿರುವ ಹಳೆಯ ಸಂಘಟನೆಗಳಿಗಿಂತ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ ಆದರೆ ಒಂದು ಜೀವಪರ ವಿಚಾರಧಾರೆಗೆ ಬದ್ಧವಾದ ಇಂಥ ಹೊಸ ಸಂಘಟನೆಯನ್ನು ಇಂದಿನ ಪೀಳಿಗೆಯ ಯುವಕರು ಇಷ್ಟಪಡುತ್ತಾರೆ.ಇದು ದಟ್ಟ ನಿರಾಸೆಯ, ಘೋರ ಅಂಧಕಾರದ ಕಾಲ. ಇಂಥ ಕಾರ್ಗತ್ತಲಲ್ಲೂ ಅಲ್ಲಲ್ಲಿ ಬೆಳಕಿನ ಕಿರಣಗಳು ಗೋಚರಿಸುತ್ತವೆ. ಅವುಗಳು ಕಂಡಾಗ ಹೊಸ ಉತ್ಸಾಹ ಮೂಡುತ್ತದೆ. ಮತ್ತೆ ಬೆಳಕಿನ ದಾರಿ ಗೋಚರಿಸಬಹುದೆಂಬ ಭರವಸೆ ಮೂಡುತ್ತದೆ. ಇಂಥ ಭರವಸೆಯೇ ವ್ಯಕ್ತಿಯ ಮಾತ್ರವಲ್ಲ ಸಾಮಾಜಿಕ ಬದುಕಿಗೆ ಆಸರೆಯಾಗಿದೆ.

ಒಂದು ಕಾಲದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವೆಂದು ರಾಷ್ಟ್ರಕವಿ ಕುವೆಂಪು ಅವರಿಂದ ವರ್ಣಿಸಲ್ಪಟ್ಟಿದ್ದ ಭಾರತ ಎಂಬ ಈ ದೇಶದಲ್ಲಿ ಇತ್ತೀಚೆಗೆ ಜನಾಂಗೀಯ ದ್ವೇಷದ ವಿಷ ಸರ್ಪಗಳು ಭುಸುಗುಡುತ್ತಿವೆ. ಜನತಂತ್ರ ಅತಂತ್ರವಾಗಿದೆ. ಇಂಥ ಸನ್ನಿವೇಶದಲ್ಲಿ ಈ ಶಾಂತಿಯ ತೋಟ ಬೆಂಗಾಡಾಗದಂತೆ ಕಾಪಾಡಲು ಅಲ್ಲಲ್ಲಿ ಸೌಹಾರ್ದದ ಜೀವಸೆಲೆಗಳು ಕಾಪಾಡುತ್ತಿವೆ. ಕರ್ನಾಟಕದಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವ ‘ನಮ್ಮ ಧ್ವನಿ(ಬಳಗ)’ ಇಂಥ ಭರವಸೆಯ ಬೆಳಕಾಗಿದೆ.

ಒಂದು ಕಾಲದಲ್ಲಿ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದ ತರುಣರು ಅಲ್ಲಿನ ಕೋಮು ರಾಜಕೀಯದ ಬಗ್ಗೆ ರೋಸಿ ಹೋಗಿ ಅದರಿಂದ ಹೊರಗೆ ಬಂದು ಈ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ. ರಾಜ್ಯ ಬಜರಂಗದಳದ ಸಂಚಾಲಕರಾಗಿದ್ದ ಕೊಪ್ಪದ ಮಹೇಂದ್ರ ಕುಮಾರ್, ವಕೀಲರಾದ ಸುಧೀರ್‌ಕುಮಾರ್ ಮರೋಳಿ ಹಾಗೂ ತುಮಕೂರಿನ ನಿಕೇತ ರಾಜ ಅವರು ಕೋಮುವಾದಿ ಸಂಘಟನೆಯಿಂದ ಹೊರಗೆ ಬಂದ ನಂತರ ಗಾಂಧಿ, ಕುವೆಂಪು, ಅಂಬೇಡ್ಕರ್, ಬಸವಣ್ಣ ನವರ ಸಾಹಿತ್ಯವನ್ನು ಓದಿಕೊಂಡು ಬದಲಾವಣೆಗೆ ಮನಸ್ಸನ್ನು ತೆರೆದಿಟ್ಟು ಈ ಸಂಘಟನೆಯನ್ನು ಕಟ್ಟಿದ್ದಾರೆ.

 ಇತ್ತೀಚೆಗೆ ಸ್ವಾತಂತ್ರ ದಿನದ ಸಂದರ್ಭದಲ್ಲಿ ‘ನಮ್ಮ ಧ್ವನಿ’ ವಿದ್ಯಾರ್ಥಿ ಗಳಿಗಾಗಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಿತ್ತು. ‘ಜಾತ್ಯತೀತ ಸಮಾಜದ ನಿರ್ಮಾಣಕ್ಕೆ ಇರುವ ಅಡೆತಡೆಗಳು’ ಎಂಬುದು ಭಾಷಣದ ವಿಷಯ. ರಾಜ್ಯದ ನಾನಾ ಜಿಲ್ಲೆಗಳ ಶಾಲೆ, ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅತ್ಯುತ್ತಮವಾಗಿ ವಿಷಯ ಪ್ರತಿಪಾದನೆ ಮಾಡಿದರು.

 ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಹೇಂದ್ರ ಕುಮಾರ್ ನನಗೂ ಆಹ್ವಾನ ನೀಡಿದ್ದರು. ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ, ಚಿತ್ರ ನಿರ್ದೇಶಕ ಎಸ್. ನಾರಾಯಣ್, ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು, ಗಾಂಧಿ ಭವನದ ಅಧ್ಯಕ್ಷ ವೊಡೆ ಕೃಷ್ಣ ಮುಂತಾದವರು ಇದರಲ್ಲಿ ಅತಿಥಿಗಳಾಗಿ ಮಾತಾಡಿದರು. ಅದರಲ್ಲೂ ನಿಕೇತರಾಜ ಮತ್ತು ಸುಧೀರ್ ಕುಮಾರ್ ಮರೊಳಿ ಮಾತುಗಳು ಪರಿಣಾಮಕಾರಿಯಾಗಿದ್ದವು.

ಈ ಮಹೇಂದ್ರ ಕುಮಾರ್ ಅವರನ್ನು ನಾನು ಮೊದಲು ನೋಡಿದ್ದು ಹದಿನಾರು ವರ್ಷಗಳ ಹಿಂದೆ ಶೃಂಗೇರಿಯಲ್ಲಿ. ಅಲ್ಲಿ ತುಂಗಾ ಮೂಲ ಉಳಿಸಿ ಸಂಘಟನೆ ಪ್ರತಿಭಟನಾ ಸಭೆಯೊಂದನ್ನು ನಡೆಸಿತ್ತು. ಅದರಲ್ಲಿ ಮೇಧಾ ಪಾಟ್ಕರ್, ದೊರೆಸ್ವಾಮಿ, ಮುಂತಾದವರು ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಮಹಿಳಾ ಸಂಘಟನೆ ಕಾರ್ಯಕರ್ತರು ವಿವಿಧ ಪ್ರಗತಿಪರ ಸಾಹಿತ್ಯವನ್ನು ಮಾರಾಟ ಮಾಡುತ್ತಿದ್ದರು. ಅದರಲ್ಲಿ ಕೋಮುವಾದದ ಸಂಚನ್ನು ಬಯಲಿಗೆಳೆಯುವ ಪುಸ್ತಕಗಳೂ ಇದ್ದವು. ಆಗ ಮಲೆನಾಡಿನ ಬಾಬಾ ಬುಡಾನ್‌ಗಿರಿಯಲ್ಲಿ ಸಂಘ ಪರಿವಾರ ಬಿರುಸಾದ ಚಳವಳಿ ಅದೇ ತಾನೆ ಆರಂಭಿಸಿತ್ತು. ಆಗ ಮಹೇಂದ್ರ ಕುಮಾರ್ ಪುಸ್ತಕ ಮಾರಾಟ ಮಾಡುವ ಕಾರ್ಯಕರ್ತರ ಬಳಿ ಬಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಗಲಾಟೆಯಾಗಿ ಮರುದಿನ ಶೃಂಗೇರಿ ಬಂದ್ ನಡೆಯಿತು. ಆಗ ನಾನು ಕಡಿದಾಳು ಶಾಮಣ್ಣ, ರವಿವರ್ಮಕುಮಾರ್, ಕೆ.ರಾಮದಾಸ್ ಮುಂತಾದವರು ಪೊಲೀಸ್ ಭದ್ರತೆಯಲ್ಲಿ ಶಿವಮೊಗ್ಗಕ್ಕೆ ಬರಬೇಕಾಯಿತು. ಈ ಕಾರ್ಯಕ್ರಮ ಸಂಘಟಿಸಿದ್ದ ಕಲ್ಕುಳಿ ವಿಠಲ ಹೆಗ್ಡೆ ಅವರ ಮೇಲೆ ಕೋಮುವಾದಿಗಳು ಹಲ್ಲು ಕಡಿಯುತ್ತಿದ್ದರು. ಆಗ ನಾನು ನೋಡಿದ ಮಹೇಂದ್ರ ಕುಮಾರರಿಗೂ ಈಗ ನೋಡುತ್ತಿರುವ ಮಹೇಂದ್ರ ಕುಮಾರರಿಗೂ ಅಜ ಗಜಾಂತರ ವ್ಯತ್ಯಾಸವಿದೆ.

ಆಗ ನೋಡಿದ ಮಹೇಂದ್ರ ಕುಮಾರ್ ಈಗ ಸಾಕಷ್ಟು ಬದಲಾಗಿದ್ದಾರೆ. ದೂರದ ಬೆಟ್ಟ ಸಮೀಪಕ್ಕೆ ಬಂದಾಗ ಕಣ್ಣಿಗೆ ನುಣ್ಣಗೆ ಕಾಣಲಿಲ್ಲ ಎಂದು ಅರಿವಾಗಿದೆ. ರಾಷ್ಟ್ರೀಯತೆ ಪ್ರತಿಪಾದಿಸುವ ಸಂಘಟನೆಯೊಂದು ಆಚರಣೆಯಲ್ಲಿ ಹೇಗೆ ರಾಷ್ಟ್ರ ವಿರೋಧಿಯಾಗಿದೆ, ಜನವಿರೋಧಿಯಾಗಿದೆ ಎಂದು ಅವರಿಗೆ ಅರಿವಾಗಿದೆ. ಇದರ ಜೊತೆಗೆ ಕುವೆಂಪು, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದರನ್ನು ಓದಿಕೊಂಡ ನಂತರ ತಾನು ಈ ವರೆಗೆ ನಡೆದು ಬಂದ ದಾರಿ ಸರಿಯಿಲ್ಲ ಎಂದು ಗೊತ್ತಾಗಿದೆ. ಇವರ ಆತ್ಮೀಯ ಮಿತ್ರರಾದ ಸುಧೀರ್ ಕುಮಾರ್ ಮರೋಳಿ, ನಿಕೇತರಾಜ ಮೌರ್ಯ ಅವರಿಗೂ ಸತ್ಯ ಗೊತ್ತಾಗಿದೆ. ಅಂತಲೆ ಅಧಿಕಾರ ಮತ್ತು ಹಣಕ್ಕಾಗಿ ಎಲ್ಲರೂ ಬಿಜೆಪಿಯನ್ನು ಸೇರುತ್ತಿರುವ ಕಾಲದಲ್ಲಿ ಈ ಮೂವರು ಮಿತ್ರರು ಅದರಿಂದ ಹೊರಗೆ ಬಂದು ಬೆಳಕಿನ ದಾರಿ, ಕುವೆಂಪು, ವಿವೇಕಾನಂದರ ದಾರಿ ಹಿಡಿದಿದ್ದಾರೆ.

ಮೊನ್ನೆ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಅಲ್ಲಿ ಕಂಡ ಹೊಸ ಮುಖಗಳನ್ನು ನೋಡಿ ಸಂತಸವಾಯಿತು. ಬಹುತೇಕ ಇಂದು ನಾವು ಭಾಗವಹಿಸುವ ಸಭೆ, ಸಮ್ಮೇಳನಗಳಲ್ಲಿ ಅನೇಕ ವರ್ಷಗಳಿಂದ ಕಂಡ ಮುಖಗಳೇ ಕಾಣುತ್ತೇವೆ. ಅಲ್ಲಿ ನಾವಾಡುವ ಮಾತುಗಳನ್ನು ನಾವೇ ಮತ್ತೆ ಮತ್ತೆ ಕೇಳಿಸಿಕೊಳ್ಳುತ್ತಿರುತ್ತೇವೆ. ಅದರಲ್ಲೂ ಮೂವತ್ತರೊಳಗಿನ ಯುವಕರು ಕಾಣುವುದೇ ಅಪರೂಪ. ಆದರೆ ನಮ್ಮ ಧ್ವನಿ ಕಾರ್ಯಕ್ರಮದಲ್ಲಿ ಹಿಂದೆಂದೂ ಕಾಣದ ಹೊಸ ಮುಖಗಳು ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳನ್ನು ನೋಡಿ ಈ ಬಹುಮುಖಿ ಭಾರತದ ಭವಿಷ್ಯದ ಬಗ್ಗೆ ಭರವಸೆ ಮೂಡಿತು
 ಇವರೆಲ್ಲ ಆರೆಸ್ಸೆಸ್ ಗರ್ಭಗುಡಿಯನ್ನೂ ನೋಡಿ ಬಂದವರು. ಅದರ ಎಲ್ಲ ಅಂತರಂಗದ ಕತೆ ಇವರಿಗೆ ಗೊತ್ತು. ನಿಕೇತರಾಜ ಮೌರ್ಯ ಅವರಂತೂ ಅತ್ಯಂತ ಪ್ರಭಾವೀ ಭಾಷಣಕಾರ. ಸುಧೀರ್ ಕುಮಾರ್ ಮರೋಳಿ ಕೂಡ. ಇವರ ಮಾತುಗಳನ್ನು ಕೇಳಿ ದೊರೆಸ್ವಾಮಿ ಅವರೂ ಮೆಚ್ಚುಗೆ ವ್ಯಕ್ತಪಡಿಸಿದರು. ಮಹೇಂದ್ರ ಕುಮಾರ್ ಅದ್ಬುತ ಸಂಘಟಕ. ಇವರ ತಂಡ ನಾಡಿನಲ್ಲಿ ಮನಸ್ಸು ಕಟ್ಟುವ ಕನಸು ಕಟ್ಟುವ ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದೆ. ಇವರ ನಮ್ಮ ಧ್ವನಿ ಸಂಘಟನೆಯಲ್ಲಿ ಜಾತಿ, ಮತ ಭೇದವಿಲ್ಲ, ಎಲ್ಲ ಸಮುದಾಯಗಳ ಜನರಿದ್ದಾರೆ. ಅನೇಕ ಅಲ್ಪಸಂಖ್ಯಾತ ಯುವಕರು ತೊಡಗಿಸಿಕೊಂಡಿದ್ದಾರೆ. ಈಗಿರುವ ಹಳೆಯ ಸಂಘಟನೆಗಳಿಗಿಂತ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ ಆದರೆ ಒಂದು ಜೀವಪರ ವಿಚಾರಧಾರೆಗೆ ಬದ್ಧವಾದ ಇಂಥ ಹೊಸ ಸಂಘಟನೆಯನ್ನು ಇಂದಿನ ಪೀಳಿಗೆಯ ಯುವಕರು ಇಷ್ಟಪಡುತ್ತಾರೆ.

 ನಮ್ಮ ಧ್ವನಿಯಂಥ ಸಂಘಟನೆಗಳು ಬೆಳೆಯಬೇಕು. ವಿದ್ಯಾರ್ಥಿ, ಯುವಜನರಿಗೆ ಹೊಸ ದಾರಿಯನ್ನು ಸತ್ಯದ ದಾರಿಯನ್ನು ಬೆಳಕಿನ ದಾರಿಯನ್ನು ತೋರಿಸಬೇಕು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)