varthabharthi

ವೈವಿಧ್ಯ

ಹುಸಿಯಾದ ಚುನಾವಣಾ ಭರವಸೆ!

ಬಿಜೆಪಿಯನ್ನು ಪೇಚಿಗೆ ಸಿಲುಕಿಸಿದ ಅಸ್ಸಾಂ ಎನ್‌ಆರ್‌ಸಿ ಅಂತಿಮ ಪಟ್ಟಿ

ವಾರ್ತಾ ಭಾರತಿ : 2 Sep, 2019
ಲಿಝ್ ಮ್ಯಾಥ್ಯೂ ಮತ್ತು ರವೀಶ್ ತಿವಾರಿ, indianexpress.com

ಅಕ್ರಮ ವಲಸಿಗರ ಉಚ್ಚಾಟನೆ ಬಿಜೆಪಿಯ ಪಾಲಿಗೆ ಮುಖ್ಯ ಚುನಾವಣಾ ವಿಷಯವಾಗಿತ್ತು ಮತ್ತು 1980ರ ದಶಕದಿಂದಲೂ ಅಸ್ಸಾಮಿನಲ್ಲಿಯ ವಿದೇಶಿಯರ ವಿರೋಧಿ ಆಂದೋಲನದಲ್ಲಿ ಅದು ಗುರುತಿಸಿಕೊಂಡಿತ್ತು. ಹೀಗಾಗಿ ಎನ್‌ಆರ್‌ಸಿ ಪ್ರಕ್ರಿಯೆಯ ಫಲಿತಾಂಶ ಬಿಜೆಪಿಗೆ ತೀರ ನಿರಾಶೆಯನ್ನುಂಟು ಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆ.31ರಂದು ಪ್ರಕಟಗೊಂಡಿರುವ ಅಸ್ಸಾಂ ಎನ್‌ಆರ್‌ಸಿ ಅಂತಿಮ ಪಟ್ಟಿಯು ಬಿಜೆಪಿಯನ್ನು ಪೇಚಿಗೆ ಸಿಲುಕಿಸಿರುವಂತಿದೆ. ಈ ಅಭೂತಪೂರ್ವ ಕಸರತ್ತಿನ ಫಲಿತಾಂಶ ಬಿಜೆಪಿಯ ಐತಿಹಾಸಿಕ ಬೇಡಿಕೆಗೆ ತಾಳೆಯಾಗಿಲ್ಲ ಮತ್ತು ಪಕ್ಷದ ರಾಜ್ಯ ಘಟಕವನ್ನು ತೀವ್ರ ಅತೃಪ್ತಿಗೆ ತಳ್ಳಿದೆ.

ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದವರನ್ನು ಗಡಿಪಾರುಗೊಳಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ, ಹೀಗಾಗಿ ಈ ಕ್ರಮವನ್ನು ಕೈಗೊಳ್ಳಲಾಗುವುದಿಲ್ಲ ಎಂದು ಒತ್ತಿ ಹೇಳಿರುವ ಹಿರಿಯ ಸರಕಾರಿ ಅಧಿಕಾರಿಯೋರ್ವರು, ಇತರ ರಾಜ್ಯಗಳಲ್ಲಿ ಎನ್‌ಆರ್‌ಸಿ ಪ್ರಕ್ರಿಯೆಯನ್ನು ನಡೆಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಎನ್‌ಆರ್‌ಸಿ ಮತ್ತು ಅದರ ಫಲಿತಾಂಶವನ್ನು ಪರಿಗಣಿಸಿದರೆ ಈ ಪ್ರಕ್ರಿಯೆಯನ್ನು ದೇಶದ ಇತರ ಭಾಗಗಳಲ್ಲಿ ಪ್ರಯತ್ನಿಸಲಾಗುವುದಿಲ್ಲ ಎಂದು ಭಾವಿಸಬಹುದು. ಇದು ಅತ್ಯಂತ ಸಮಸ್ಯಾತ್ಮಕ,ವೆಚ್ಚದಾಯಕ ಮತ್ತು ಅನುತ್ಪಾದಕ ಕಸರತ್ತಾಗಿದೆ ಎಂದು ಅಂತಿಮ ಪಟ್ಟಿಯಿಂದ 19 ಲಕ್ಷಕ್ಕೂ ಅಧಿಕ ಜನರನ್ನು ಹೊರಗಿಟ್ಟಿರುವ ಬಗ್ಗೆ ಅಸ್ಸಾಂ ಬಿಜೆಪಿಯ ಅತೃಪ್ತಿಯನ್ನು ಪ್ರಸ್ತಾಪಿಸಿ ಅವರು ಹೇಳಿದರು.
ಬಿಜೆಪಿ ಕನಿಷ್ಠ ಕಳೆದ ಎರಡು ದಶಕಗಳಿಂದಲೂ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರನ್ನು ಪ್ರಮುಖ ವಿಷಯವನ್ನಾಗಿ ಪ್ರಸ್ತಾಪಿಸುತ್ತಲೇ ಬಂದಿದೆ. ವಿಧಿ 370ರ ರದ್ದು,ರಾಮಮಂದಿರ ನಿರ್ಮಾಣ ಅಥವಾ ಏಕರೂಪ ನಾಗರಿಕ ಸಂಹಿತೆಯಂತಹ ಬಿಜೆಪಿಯ ಪ್ರಮುಖ ಕಾರ್ಯಸೂಚಿಗಳಂತೆ ಈ ವಿಷಯವೂ 2003ರಿಂದೀಚೆಗೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ನಿರ್ಣಯಗಳಲ್ಲಿ ಕನಿಷ್ಠ 17 ಸಲ ಉಲ್ಲೇಖಗೊಂಡಿದೆ. ಅಂತಿಮ ಪಟ್ಟಿಯು ದೋಷಯುಕ್ತವಾಗಿದೆ ಎಂದು ಅಸ್ಸಾಮಿನ ಹಿರಿಯ ಬಿಜೆಪಿ ನಾಯಕರು ಬಣ್ಣಿಸಿದ್ದರೆ,ಪಟ್ಟಿಯು ಇನ್ನಷ್ಟು ಅಕ್ರಮ ವಲಸಿಗರನ್ನು ಒಳಗೊಂಡಿರಬೇಕಾಗಿತ್ತು ಎಂದು ರಾಜ್ಯದ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಪ್ರಾಸಂಗಿಕವಾಗಿ,ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಕ್ರಮ ವಲಸಿಗರನ್ನು ‘ಗೆದ್ದಲುಗಳು ’ ಮತ್ತು ರಾಷ್ಟ್ರೀಯ ಭದ್ರತೆಗೆ ಪ್ರಮುಖ ಬೆದರಿಕೆ ಎಂದು ಬಣ್ಣಿಸಿದ್ದಾರೆ. 2003ರಲ್ಲಿ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಅಕ್ರಮ ವಲಸಿಗರ ಸಂಖ್ಯೆ ಸುಮಾರು 10 ಲಕ್ಷವಿರಬಹುದು ಎಂದು ಅಂದಾಜಿಸಿದ್ದರು. ಭಾರತದಲ್ಲಿ ಸುಮಾರು ಎರಡು ಕೋಟಿ ಬಾಂಗ್ಲಾದೇಶಿ ವಲಸಿಗರು ವಾಸವಾಗಿದ್ದಾರೆ ಎಂದು ಸಹಾಯಕ ಗೃಹಸಚಿವ ಕಿರಣ್ ರಿಜಿಜು 2013ರಲ್ಲಿ ರಾಜ್ಯಸಭೆಯಲ್ಲಿ ತಿಳಿಸಿದ್ದರು.
ಆದರೆ ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಡಿ ಸಿದ್ಧಗೊಂಡಿರುವ ಎನ್‌ಆರ್‌ಸಿ ಅಂತಿಮ ಪಟ್ಟಿಯು ಈ ಸಂಖ್ಯೆಯನ್ನು 19 ಲಕ್ಷಕ್ಕೆ ಇಳಿಸಿರುವ ಹಿನ್ನೆಲೆಯಲ್ಲಿ ಶರ್ಮಾ ಅವರು,ಇಡೀ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಕೇವಲ 5ರಿಂದ 6 ಲಕ್ಷ ಜನರು ಎನ್‌ಆರ್‌ಸಿಯಿಂದ ಹೊರಗುಳಿಯುವ ನಿರೀಕ್ಷೆಯಿದೆ ಎಂದು ಬೆಟ್ಟು ಮಾಡಿದ್ದಾರೆ.
ಅಡ್ವಾಣಿಯವರಿಂದ ಹಿಡಿದು ಶಾ ಅವರವರೆಗೂ ಬಿಜೆಪಿಯು ನಿರ್ದಿಷ್ಟವಾಗಿ ಅಕ್ರಮ ವಲಸಿಗರ ಬಗ್ಗೆ ಧ್ವನಿಯೆತ್ತುತ್ತಲೇ ಬಂದಿದೆ ಮತ್ತು ಅವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಬೇಕೆಂದು ಸದಾ ಪ್ರತಿಪಾದಿಸುತ್ತಲೇ ಇದೆ. ಆದರೆ ಪಟ್ಟಿಯಿಂದ ಹೊರಗಿರುವವರನ್ನು ಗಡಿಪಾರುಗೊಳಿಸುವ ಯೋಜನೆಯಿಲ್ಲ ಎಂದು ಕೇಂದ್ರದಲ್ಲಿಯ ಬಿಜೆಪಿ ಸರಕಾರವು ಕನಿಷ್ಠ ಎರಡು ಸಂದರ್ಭಗಳಲ್ಲಿ ಸುಳಿವು ನೀಡಿದೆ.
2014, ಆ.4ರಂದು ಆಗಿನ ಗೃಹಸಚಿವ ರಾಜನಾಥ್ ಸಿಂಗ್ ಅವರು ಗಡಿಪಾರಿನ ಯಾವುದೇ ಪ್ರಸ್ತಾವವಿಲ್ಲ ಎಂದು ಬಾಂಗ್ಲಾದೇಶದ ಗೃಹಸಚಿವ ಅಸದುಝ್ಝಮಾನ್ ಖಾನ್ ಅವರಿಗೆ ಭರವಸೆ ನೀಡಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು. ಉಭಯ ದೇಶಗಳ ಸಂಬಂಧಗಳಲ್ಲ್ಲಿ ಹಿನ್ನಡೆಯನ್ನು ತಡೆಯುವುದು ಅವರ ಭರವಸೆಯ ಉದ್ದೇಶವಾಗಿತ್ತು. ಹಾಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಅವರು ಇತ್ತೀಚೆಗೆ ಢಾಕಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎನ್‌ಆರ್‌ಸಿಯು ಭಾರತದ ಆಂತರಿಕ ವಿಷಯವಾಗಿದೆ ಎಂದು ಹೇಳುವ ಮೂಲಕ ಗಡಿಪಾರು ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಮತ್ತೊಮ್ಮೆ ಸುಳಿವು ನೀಡಿದ್ದರು.
‘ ಎನ್‌ಆರ್‌ಸಿ ಪ್ರಕ್ರಿಯೆ ಬಿಜೆಪಿ ಪಾಲಿಗೆ ಮುಗಿದಿಲ್ಲ,ಯಾವುದೇ ನಿಜವಾದ ಪ್ರಜೆ ಪಟ್ಟಿಯಿಂದ ಹೊರಗಿರುವುದನ್ನು ಮತ್ತು ಒಬ್ಬನೇ ಒಬ್ಬ ವಿದೇಶಿಯ ಪಟ್ಟಿಯಲ್ಲಿರುವುದನ್ನು ನಾವು ಬಯಸುತ್ತಿಲ್ಲ,ಹೀಗಾಗಿ ಅಂತ್ಯದವರೆಗೂ ನಾವು ಅದರ ಬೆನ್ನು ಬೀಳಲಿದ್ದೇವೆ ’ಎಂದು ಶರ್ಮಾ ಈಗಾಗಲೇ ಘೋಷಿಸಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಎನ್‌ಆರ್‌ಸಿ ಮರುಪರಿಶೀಲನೆಯನ್ನು ಕೋರಿ ಬಿಜೆಪಿ ಮತ್ತು ರಾಜ್ಯ ಸರಕಾರ ಈಗ ಮತ್ತೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಲಿವೆ ಎಂದೂ ಅವರು ಹೇಳಿದ್ದಾರೆ.
ಎನ್‌ಆರ್‌ಸಿ ಪ್ರಕ್ರಿಯೆ ಸಂಪೂರ್ಣಗೊಂಡ ಬಳಿಕವೇ ಬಿಜೆಪಿಯ ಅಧಿಕೃತ ಹೇಳಿಕೆ ಹೊರಬೀಳಲಿದೆ ಎಂದು ಶರ್ಮಾ ಹೇಳಿದರಾದರೂ,ಎನ್‌ಆರ್‌ಸಿ ಫಲಿತಾಂಶ ತಮಗೆ ತೃಪ್ತಿಯನ್ನು ನೀಡಿಲ್ಲ ಎಂದು ರಾಜ್ಯದ ಮೂಲನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
ಪಟ್ಟಿಯಿಂದ ಹೊರಗುಳಿದಿರುವ 19 ಲ.ಜನರಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ಬಯಸಿರದಿದ್ದ ಸುಮಾರು 3.80 ಲ.ಜನರು ಮತ್ತು ಈಗಾಗಲೇ ಮೃತಪಟ್ಟವರೂ ಸೇರಿರುವುದರಿಂದ ಎನ್‌ಆರ್‌ಸಿಯು ಅಸ್ಸಾಮಿನ ಜನತೆಯ ನಿರೀಕ್ಷೆಯನ್ನು ಈಡೇರಿಸಿಲ್ಲ. ಹೀಗಾಗಿ ಈಗ ಪಟ್ಟಿಯಿಂದ ಹೊರಗುಳಿದಿರುವವರ ವಾಸ್ತವ ಸಂಖ್ಯೆ 15 ಲ.ದಷ್ಟಿದೆ. ಈ ಪೈಕಿ ಸುಮಾರು ಐದಾರು ಲಕ್ಷ ಜನರು 1971ಕ್ಕೆ ಮೊದಲೇ ಧಾರ್ಮಿಕ ಕಿರುಕುಳಗಳಿಂದಾಗಿ ಬಾಂಗ್ಲಾದೇಶದಿಂದ ವಲಸೆ ಬಂದವರಾಗಿದ್ದಾರೆ. ಎನ್‌ಆರ್‌ಸಿಯು 1971ಕ್ಕೆ ಮುನ್ನ ವಿತರಿಸಲಾಗಿದ್ದ ನಿರಾಶ್ರಿತ ಪ್ರಮಾಣಪತ್ರಗಳನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಮೇಲ್ಮನವಿಗಳ ವಿಚಾರಣೆ ನಡೆಸುವ ನ್ಯಾಯಾಧಿಕರಣಗಳು ಇವುಗಳನ್ನು ಪರಿಗಣಿಸಲಿವೆ. ಹೀಗಾಗಿ ಅವರೂ ಪಟ್ಟಿಯಲ್ಲಿ ಸೇರ್ಪಡೆಗೊಂಡ ಬಳಿಕ ಪಟ್ಟಿಯಿಂದ ಹೊರಗುಳಿದಿರುವವರ ಸಂಖ್ಯೆ ಸುಮಾರು 11 ಲಕ್ಷಕ್ಕಿಳಿಯುತ್ತದೆ. ಈಗಿನ ಪಟ್ಟಿಯಲ್ಲಿ ತಮ್ಮ ಹೆತ್ತವರ ಹೆಸರುಗಳಿದ್ದು,ತಮ್ಮ ಹೆಸರುಗಳು ಬಿಟ್ಟುಹೋಗಿರುವ ಬಹಳಷ್ಟು ಜನರಿದ್ದಾರೆ. ಅವರೂ ಪಟ್ಟಿಯಲ್ಲಿ ಸೇರಿಸಲ್ಪಟ್ಟ ನಂತರ ಹೊರಗುಳಿಯುವವರ ಒಟ್ಟು ಸಂಖ್ಯೆ ಕೇವಲ ಆರೇಳು ಲಕ್ಷಗಳಷ್ಟಾಗುತ್ತದೆ ಮತ್ತು ಇದು ತೀರ ಕಡಿಮೆಯಾಗಿದೆ ಎಂದು ಹೇಳಿರುವ ಶರ್ಮಾ, ಪಟ್ಟಿಯಿಂದ ಹೊರಗುಳಿಯುವವರ ಸಂಖ್ಯೆ ನಿರೀಕ್ಷೆಗಿಂತ ತುಂಬ ಕಡಿಮೆಯಾಗುವುದರಿಂದ ಅಸ್ಸಾಮಿನ ಜನತೆಗೆ ಇದು ಹರ್ಷ ತಂದಿಲ್ಲ. ಈ ಸಂಖ್ಯೆ ಇನ್ನೂ ಹೆಚ್ಚಾಗಬೇಕಿತ್ತು ಎಂದಿದ್ದಾರೆ.
ಕರಡು ಎನ್‌ಆರ್‌ಸಿ ಪಟ್ಟಿಯಲ್ಲಿನ ಶೇ.20ರಷ್ಟು ಹೆಸರುಗಳ,ವಿಶೇಷವಾಗಿ ಮುಸ್ಲಿಂ ಬಾಹುಳ್ಯದ ಜಿಲ್ಲೆಗಳಲ್ಲಿ ಮರುಪರಿಶೀಲನೆಯನ್ನು ಕೋರಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಳೆದ ಜುಲೈನಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿಡವಿಟ್‌ಗಳನ್ನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಶರ್ಮಾರ ಈ ಹೇಳಿಕೆಗಳು ಮಹತ್ವವನ್ನು ಪಡೆದುಕೊಂಡಿವೆ.
ಆದರೆ ಸರ್ವೋಚ್ಚ ನ್ಯಾಯಾಲಯವು ಮರುಪರಿಶೀಲನೆ ಕೋರಿಕೆಗಳನ್ನು ತಳ್ಳಿಹಾಕಿದೆ. ಈಗ ಪಟ್ಟಿಯಿಂದ ಹೊರಗುಳಿದಿರುವವರ ಸಂಖ್ಯೆಯು ಮುಸ್ಲಿಂ ವಲಸಿಗರು ಹೆಚ್ಚಾಗಿರುವ ಗಡಿಜಿಲ್ಲೆಗಳಲ್ಲಿ ಮರುಪರಿಶೀಲನೆಯ ತಮ್ಮ ಬೇಡಿಕೆಗೆ ಮತ್ತೆ ಜೀವ ನೀಡಲು ಬಿಜೆಪಿ ಮತ್ತು ರಾಜ್ಯ ಸರಕಾರಕ್ಕೆ ಕಾರಣವನ್ನೊದಗಿಸಿದೆ. ನಾವು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಅಕ್ರಮ ವಲಸಿಗರ ಉಚ್ಚಾಟನೆ ಬಿಜೆಪಿಯ ಪಾಲಿಗೆ ಮುಖ್ಯ ಚುನಾವಣಾ ವಿಷಯವಾಗಿತ್ತು ಮತ್ತು 1980ರ ದಶಕದಿಂದಲೂ ಅಸ್ಸಾಮಿನಲ್ಲಿಯ ವಿದೇಶಿಯರ ವಿರೋಧಿ ಆಂದೋಲನದಲ್ಲಿ ಅದು ಗುರುತಿಸಿಕೊಂಡಿತ್ತು. ಹೀಗಾಗಿ ಎನ್‌ಆರ್‌ಸಿ ಪ್ರಕ್ರಿಯೆಯ ಫಲಿತಾಂಶ ಬಿಜೆಪಿಗೆ ತೀರ ನಿರಾಶೆಯನ್ನುಂಟು ಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಕ್ರಮ ವಲಸಿಗರ ವಿಷಯ 1996ರಿಂದಲೂ ಬಿಜೆಪಿ ಪ್ರಣಾಳಿಕೆಗಳ ಭಾಗವಾಗಿದೆ. ರಾಷ್ಟ್ರೀಯ ಸುರಕ್ಷತೆ ಪಕ್ಷದ ಪ್ರಮುಖ ಚುನಾವಣಾ ವಿಷಯವಾಗಿರುವುದರೊಂದಿಗೆ ಅದರ ಹಿರಿಯ ನಾಯಕರ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಮತ್ತು ಪಕ್ಷದ ನಿರ್ಣಯಗಳಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರು ಆಗಾಗ್ಗೆ ಉಲ್ಲೇಖಗೊಳ್ಳುತ್ತಲೇ ಇದ್ದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ 10 ವರ್ಷಗಳ ಆಡಳಿತದ ಅವಧಿಯಲ್ಲಿ ಈ ವಿಷಯದಲ್ಲಿ ಬಿಜೆಪಿಯ ವಾಗ್ದಾಳಿ ತೀವ್ರ ಕಾವು ಪಡೆದುಕೊಂಡಿದ್ದು, ಅಕ್ರಮ ವಲಸಿಗರು ಮತ್ತು ಎನ್‌ಆರ್‌ಸಿ ಪರಿಷ್ಕರಣೆಯ ಭರವಸೆಯನ್ನು ಉಲ್ಲೇಖಿಸಿ ಪಕ್ಷವು ವಿಶೇಷ ನಿರ್ಣಯವನ್ನು ಅಂಗೀಕರಿಸಿತ್ತು. ಭಾರತದ ನೆರೆರಾಷ್ಟ್ರಗಳಿಂದ ಧಾರ್ಮಿಕ ಕಿರುಕುಳದಿಂದಾಗಿ ಪರಾರಿಯಾಗುವ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು ಮತ್ತು ಕ್ರೈಸ್ತರಿಗೆ ಪೌರತ್ವವನ್ನು ಒದಗಿಸಲು ಪೌರತ್ವ ಕಾಯ್ದೆಯನ್ನು ತಿದ್ದುಪಡಿಗೊಳಿಸುವ ಬಗ್ಗೆಯೂ ಬಿಜೆಪಿ ನಿರ್ಣಯಿಸಿತ್ತು.
ಎನ್‌ಆರ್‌ಸಿಯ ಮೊದಲ ಪಟ್ಟಿ ಪ್ರಕಟಗೊಂಡ ಬಳಿಕ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ನಡೆದಿದ್ದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಜೆಪಿಯು ಅಂಗೀಕರಿಸಿದ್ದ ರಾಜಕೀಯ ನಿರ್ಣಯವು ಎನ್‌ಆರ್‌ಸಿಯ ಮೇಲೆ ಗಮನವನ್ನು ಕೇಂದ್ರೀಕರಿಸಿತ್ತು, ಆದರೆ ಸರಕಾರ ನುಸುಳುವಿಕೆಯ ವಿರುದ್ಧವಾಗಿದೆಯೇ ಹೊರತು ಪ್ರಜೆಗಳ ವಿರುದ್ಧವಲ್ಲ ಎಂದು ಹೇಳಿತ್ತು.
‘ಬಾಂಗ್ಲಾದೇಶಿ ನುಸುಳುಕೋರರನ್ನು ಗುರುತಿಸಲು ಮತ್ತು ಅವರನ್ನು ಸ್ವದೇಶಕ್ಕೆ ಗಡಿಪಾರುಗೊಳಿಸಲು ಕೇಂದ್ರ ಗೃಹಸಚಿವಾಲಯವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಹೊರಕ್ಕೆ ತಳ್ಳುವಲ್ಲಿ ತೊಡಕನ್ನುಂಟು ಮಾಡುತ್ತಿರುವ ‘ಅಕ್ರಮ ವಲಸಿಗರ (ನ್ಯಾಯಾಧಿಕರಣದಿಂದ ನಿರ್ಣಯ) ಕಾಯ್ದೆ ’ಯನ್ನು ಹಿಂದೆಗೆದುಕೊಳ್ಳಲು ಕೇಂದ್ರ ಸರಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಷ್ಟ್ರೀಯ ಕಾರ್ಯಕಾರಿಣಿಯು ಬಯಸುತ್ತದೆ ಎಂದು 2003ರಲ್ಲಿ ಇಂದೋರ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಂಗೀಕರಿಸಲಾಗಿದ್ದ ನಿರ್ಣಯದಲ್ಲಿ ಹೇಳಲಾಗಿತ್ತು.
2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸಮಾವೇಶದಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು,ಬಾಂಗ್ಲಾದೇಶದ ವಲಸಿಗರಿಂದ ಭಾರತದ ಆಕ್ರಮಣ ಮುಂದುವರಿದಿದೆ. ಈ ಅಕ್ರಮ ವಲಸಿಗರು ಭಾರತದ ಸಾರ್ವಭೌಮತೆಗೆ ಮತ್ತು ಜನಸಂಖ್ಯಾ ಸ್ವರೂಪಕ್ಕೆ ಬೆದರಿಕೆಯಾಗಿದ್ದಾರೆ ಎಂದು ಭಾರತ ಸರಕಾರ ಮತ್ತು ಯುಪಿಎ ಭಾವಿಸುತ್ತಿಲ್ಲ. ಅವರು ಈ ಅಕ್ರಮ ವಲಸಿಗರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದ್ದರು.
ಕೃಪೆ: indianexpress.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)