varthabharthi

ನಿಮ್ಮ ಅಂಕಣ

ಎ‌.ಕೆ.ಸುಬ್ಬಯ್ಯರ ಅಂತಿಮ ಸಂಸ್ಕಾರದ ವೇಳೆ ಯುವತಿಯರು ಬಿಕ್ಕಿ ಬಿಕ್ಕಿ ಅತ್ತ ಹಿಂದಿನ ಕಾರಣ…

ವಾರ್ತಾ ಭಾರತಿ : 2 Sep, 2019
ಇಸ್ಮತ್ ಪಜೀರ್

ಮೊನ್ನೆ ನಮ್ಮನ್ನಗಲಿದ ಎ.ಕೆ.ಸುಬ್ಬಯ್ಯ ಹಿಂದೆ ಜನಸಂಘದಲ್ಲಿದ್ದರಂತೆ, ಒಂದು ತಿಂಗಳ ಕಾಲ ಆರೆಸ್ಸೆಸ್ ಶಾಖೆಗೂ ಹೋಗಿದ್ದರಂತೆ ಮತ್ತು ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷರಾಗಿದ್ದರಂತೆ, ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರಂತೆ ಇತ್ಯಾದಿ ಇತ್ಯಾದಿ ಓದಿ, ಕೇಳಿ ಬಲ್ಲೆ.

ಆದರೆ ಕಳೆದೊಂದು ದಶಕದಲ್ಲಿ ಅವರು ನಮ್ಮ ಹೋರಾಟದ ಸಂಗಾತಿಯಾಗಿದ್ದನ್ನು ಕಣ್ಣಾರೆ ಕಂಡು ಬಲ್ಲೆ..

ಕಳೆದೊಂದು ದಶಕದಲ್ಲಿ ಕೋಮು ಸೌಹಾರ್ದ ವೇದಿಕೆಯ ಯಾವುದೇ ಚಳವಳಿಗಳಿರಲಿ ಅಲ್ಲೆಲ್ಲಾ ಸುಬ್ಬಯ್ಯ ಹಾಜರಿರುತ್ತಿದ್ದರು. ತಮ್ಮ ನಿರ್ಭೀತ ಮಾತುಗಾರಿಕೆಯಿಂದ ನಮ್ಮನ್ನು (ಸಂಗಾತಿಗಳನ್ನು) ರೋಮಾಂಚನಗೊಳಿಸುತ್ತಿದ್ದರು. ನಮ್ಮಲ್ಲಿ ಅದಮ್ಯವಾದ ಧೈರ್ಯವನ್ನು ತುಂಬುತ್ತಿದ್ದರು. ಅವರು ಭಾಷಣಕ್ಕೆ ನಿಂತರೆಂದರೆ ನಾವು ಮೈಯೆಲ್ಲಾ ಕಿವಿಯಾಗಿಸಿ ಕೇಳುತ್ತಿದ್ದೆವು. ಅವರು ಆಡುತ್ತಿದ್ದ ಮಾತುಗಳಲ್ಲಿ ಅಷ್ಟು ‘ಡೆಪ್ತ್’ ಇರುತ್ತಿತ್ತು. ನಾನು ಅದೆಷ್ಟೋ ಪ್ರಸಿದ್ಧ ವ್ಯಕ್ತಿಗಳ ಸಾಮಾಜಿಕ ಹೋರಾಟದ ಸಂದರ್ಭಗಳ ಭಾಷಣಗಳನ್ನು ಆಲಿಸಿದ್ದೇನೆ. ಅವರಲ್ಲಿ ಕೆಲವರು ಸಿಲೆಬ್ರಿಟಿ ಎಂಬ ನೆಲೆಯಲ್ಲಿ ನಮ್ಮ ಗಮನ ಸೆಳೆಯುತ್ತಿದ್ದರೇ ಬಿಟ್ಟರೆ ಅವರಲ್ಲಿ  (ಕೆಲವರಿಗೆ) ನಾವು ಮಾಡುತ್ತಿರುವ ಹೋರಾಟದ ಹಿಂದಿನ ಅಸಲಿಯತ್ತು ಮತ್ತು ದರ್ದು ಗೊತ್ತಿರುವುದೇ ಇಲ್ಲ.

ಅತಿಥಿಗಳಾಗಿ ಆಗಮಿಸುವವರಿಗೆ ನಮ್ಮ ಮೇಲೆ ವಿಶ್ವಾಸ ಮತ್ತು ನಮ್ಮ ಕಾನ್ಸೆಪ್ಟ್ ‌ನ ಅರಿವು ಮಾತ್ರವಿರುತ್ತದೆ. ಅದರಾಚೆಗೆ ಅವರಿಗೆ ಅದರ ಕುರಿತಂತೆ ಆಳವಾದ ಜ್ಞಾನವೂ ಇರುವುದಿಲ್ಲ. ಕೆಲವರು ಪ್ರಾರಂಭ ಮತ್ತು ಕೊನೆಯಲ್ಲಿ ಮಾತ್ರ ನಮ್ಮ ಹೋರಾಟದ ವಿಷಯಗಳನ್ನು ಉಲ್ಲೇಖಿಸುತ್ತಾರೆ ಬಿಟ್ಟರೆ ಕಂಟೆಂಟ್ ಕುರಿತು ಮಾತನಾಡುವ ಸಂದರ್ಭಗಳಲ್ಲಿ ಎಲ್ಲೆಲ್ಲಿಗೋ ತಮ್ಮ ಮಾತುಗಳನ್ನು ಕೊಂಡೊಯ್ಯುವುದನ್ನೂ ನಾನು ನೋಡಿದ್ದೇನೆ. (ಅದಾಗ್ಯೂ ನಮ್ಮ ಗುರಿಯ ಬಗ್ಗೆ ಅವರಿಗಿರುವ ಸಹಮತವನ್ನು ಗೌರವಿಸುತ್ತೇನೆ)  ಆದರೆ ಸುಬ್ಬಯ್ಯ ಸರ್ ಹಾಗಿರಲಿಲ್ಲ. ಅವರು ಮಾತನಾಡಲು ನಿಂತರೆ ತಮ್ಮ ಮಾತುಗಳಲ್ಲಿ ಪ್ರಭುತ್ವವನ್ನು ನಗ್ನಗೊಳಿಸಿಬಿಡುತ್ತಿದ್ದರು. ಓರ್ವ ಪ್ರಸಿದ್ಧ ವಕೀಲರೂ ಆಗಿದ್ದುದರಿಂದ ಅವರಿಗೆ ವಿಷಯವನ್ನು ಅಭ್ಯಸಿಸುವುದು ಕರತಲಾಮಲಕವಾಗಿತ್ತು.

ಉದಾಹರಣೆಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಸರಕಾರ ಗೋಹತ್ಯಾ ಪ್ರತಿಬಂಧಕ ಖಾಯಿದೆಯನ್ನು ಜಾರಿಗೆ ತರಲು ಹೊರಟಾಗ ನಾವು ರಾಜ್ಯದ ಮೂಲೆಮೂಲೆಗಳಲ್ಲಿ ಹಮ್ಮಿಕೊಂಡಿದ್ದ ಅನೇಕ ಕಾರ್ಯಕ್ರಮಗಳಲ್ಲಿ ಸುಬ್ಬಯ್ಯನವರು ಬಂದು ತಮ್ಮ ವಿದ್ವತ್ಪೂರ್ಣ ಭಾಷಣ ಮಾಡುತ್ತಿದ್ದರು. ಅವರು ಓರ್ವ ಗೋಸಾಕಣೆಕಾರನಾಗಿ ದನಗಳನ್ನು ಸಾಕುವ ರೈತರ ಸಂಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದರು. ದನವನ್ನೇ ಸಾಕದವರ ಡೋಂಗಿ ಗೋಪ್ರೇಮವನ್ನು ಬಟಾಬಯಲುಗೊಳಿಸಿದ್ದರು. ದನ ಸಾಕದವರು ದನ ಸಾಕುವವರಿಗೆ ಬುದ್ಧಿ ಹೇಳುವುದರ ಬಗ್ಗೆ "ಒಂದೂ ಹೆರದವಳು ಹತ್ತು ಹೆತ್ತವಳಿಗೆ ಬುದ್ಧಿ ಹೇಳುತ್ತಿದ್ದಾಳೆ " ಎಂದು ವ್ಯಂಗ್ಯವಾಗಿ ಚುಚ್ಚಿ ಮಾತನಾಡುತ್ತಿದ್ದರು. ಹಲವು  ಗೋ ಆಶ್ರಮಗಳ ದನಗಳನ್ನು ಖುದ್ದಾಗಿ ಕಂಡದ್ದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು. ಸ್ವಘೋಷಿತ ಗೋ ಪ್ರೇಮಿಗಳು ಆಶ್ರಮದಲ್ಲಿ ಸಾಕುವ ದನಗಳಿಗೆ ಎಷ್ಟು ಪೌಷ್ಟಿಕಾಂಶದ ಆಹಾರ ಹಾಕುತ್ತಾರೆಂದು ಬಿಡಿಸಿ ಹೇಳುತ್ತಿದ್ದರು. ಅಲ್ಲಿನ ದನಗಳಿಗೆ ಬರೀ ಒಂದಿಷ್ಟು ಒಣ ಹುಲ್ಲು ಮತ್ತು ತಣ್ಣೀರು ಮಾತ್ರ ನೀಡುತ್ತಾರೆ, ಆಶ್ರಮಕ್ಕೆ ಬಂದು ವಾರ ಕಳೆಯುವುದರೊಳಗೆ ಅವು ಅರ್ಧಕ್ಕರ್ಧ ನಿತ್ರಾಣವಾಗಿಬಿಡುತ್ತವೆ. ಗುಡ್ಡಗಳಲ್ಲಿ, ಮಾಲೀಕನ ಮನೆಯಲ್ಲಿ ಹೊಟ್ಟೆ ತುಂಬಾ ತಿಂದು ಕುಡಿದು ಆರಾಮವಾಗಿ ಬದುಕುತ್ತಿದ್ದ ದನಗಳು ತಿಂಗಳಾಗುವ ಹೊತ್ತಿಗೆ ಎಲುಬಿನ ಮೇಲೆ  ಚರ್ಮ ಹೊದಿಸಿದ ಆಕಾರಕ್ಕೆ ತಲುಪುತ್ತವೆ. ಅವುಗಳ ಹಾಲು ಮತ್ತು ಸಗಣಿ ಮಾರಿ ದುಡ್ಡು ಮಾಡುವುದೂ ಒಂದು ದಂಧೆ. ಹಾಗೆ ಬೇಕಾದರೆ ಅವರೇ ಖರೀದಿಸಿ ಸಾಕಲಿ, ಯಾರ್ಯಾರೋ ದುಡ್ಡು ಕೊಟ್ಟು ಖರೀದಿಸಿದ್ದನ್ನು ಕದ್ದು ತಂದು ದುಡ್ಡು ಮಾಡುವುದರ ಬಗ್ಗೆ ನನಗೆ ತಕರಾರಿದೆ ಎಂದು ಸುಬ್ಬಯ್ಯ ಹೇಳುತ್ತಿದ್ದರು.

ಮೈಸೂರಿನ ಗೋ ಆಶ್ರಮವೊಂದರಿಂದ ಕಸಾಯಿಗಳಿಗೆ ದನಗಳನ್ನು ಮಾರಾಟ ಮಾಡುವ ಬಗ್ಗೆ ಆಗಾಗ ಸುಬ್ಬಯ್ಯನವರು ಹೇಳುತ್ತಿದ್ದುದನ್ನು ನಾನು ಆಲಿಸಿದ್ದೆ. ಒಮ್ಮೆ ಅವರು ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಗೋ ಹತ್ಯಾ ಪ್ರತಿಬಂಧಕ ಖಾಯಿದೆಯನ್ನು  ವಿರೋಧಿಸಿ ಮಾತನಾಡುತ್ತಾ "ನಾನು ಈವರೆಗೆ ದನದ ಮಾಂಸ ತಿಂದಿಲ್ಲ,ನೀವು ವಿರೋಧಿಸುತ್ತಿರುವುದರಿಂದ ಇಂದಿನಿಂದ ನಾನೂ ದನದ ಮಾಂಸ ತಿನ್ನುತ್ತೇನೆ" ಎಂದು ವಿರೋಧಿಗಳಿಗೆ ಸವಾಲೆಸೆದಿದ್ದರು.

ಅವರು ತನಗೆ ಸರಿ ಕಂಡದ್ದನ್ನು ಹೇಳಲು ಎಂದೂ ಹಿಂದೆ ಮುಂದೆ ನೋಡುತ್ತಿರಲಿಲ್ಲ. ಅವರೋರ್ವ ಪ್ರಸಿದ್ಧ ವಕೀಲರಾದುದರಿಂದ ಅವರ ಮೇಲೆ ಕೇಸು ಹಾಕಿ ಗೆಲ್ಲುವ ಧೈರ್ಯ ಯಾರಿಗೂ ಇರಲಿಲ್ಲ.

ಟಿಪ್ಪುವಿನ ಬಗ್ಗೆ ಕೊಡವ ಸಮಾಜದ ಬಹುದೊಡ್ಡ ಸಂಖ್ಯೆಯವರು ವಿರೋಧ ವ್ಯಕ್ತಪಡಿಸುತ್ತಿದ್ದಾಗ ಸುಬ್ಬಯ್ಯನವರು ಟಿಪ್ಪು ಪರ ವಹಿಸಿ ಇತಿಹಾಸದ ದಾಖಲೆಗಳನ್ನಿಟ್ಟು ಮಾತನಾಡುತ್ತಿದ್ದರು. ಟಿಪ್ಪು ಕೊಡವರನ್ನು ಮತಾಂತರಿಸಿದ್ದಕ್ಕೆ ದಾಖಲೆ ಕೊಡಿ ಎಂದು ಸವಾಲು ಹಾಕುತ್ತಿದ್ದರು. ಕೊಡಗಿನ ಮೂರು ಸಾವಿರ ಮಂದಿ ಕೆಳಜಾತಿಯವರು ಮತಾಂತರ ಹೊಂದಿದ್ದು ನಿಜ. ಅದು ಬಲವಂತದ ಮತಾಂತರವಲ್ಲ. ಮೇಲ್ಜಾತಿಯವರ ಶೋಷಣೆಯ ವಿರುದ್ಧದ ಪ್ರತಿಭಟನೆಯಾಗಿಯಷ್ಟೆ ಎಂದು ಸುಬ್ಬಯ್ಯ ಇತಿಹಾಸದ ದಾಖಲೆಗಳನ್ನಿಟ್ಟು ಮಾತನಾಡುತ್ತಿದ್ದರು.

ಕೊಡಗಿನ ಪಾಳೆಗಾರರನ್ನು ಮಟ್ಟ ಹಾಕಿದ್ದಕ್ಕೆ ಕೊಡಗಿನ ಪಾಳೆಗಾರರು ಕಟ್ಟಿದ ಕಟ್ಟು ಕತೆಗಳನ್ನೇ ಇತಿಹಾಸ ಎಂದು ಪ್ರಚಾರ ಮಾಡಲಾಗುತ್ತಿದೆ. ರಾಜ್ಯದ್ರೋಹವೆಸಗಿ ಬ್ರಿಟಿಷರೊಂದಿಗೆ ಕೈ ಜೋಡಿಸಿದವರೆಲ್ಲರ ಮೇಲೂ ಟಿಪ್ಪು ಉಗ್ರ ನೀತಿ ತಾಳಿದ್ದರು. ಅದು ಕೇವಲ ಕೊಡವರ ಮೇಲೆಂದಲ್ಲ.‌ ಮಂಗಳೂರಿನ ಕೆಲ ಕ್ರೈಸ್ತರ ಮೇಲೆ,  ಮಲಬಾರಿನ ನಾಯರರು ಮತ್ತು ಕೆಲ ಮಾಪಿಳ್ಳ ಮುಸ್ಲಿಮರ ಮೇಲೂ ಟಿಪ್ಪು ಉಗ್ರ ಕ್ರಮ ಕೈಗೊಂಡಿದ್ದರು. ಅದು ಅಂದಿನ ರಾಜನೀತಿಯೇ ಹೊರತು ಧಾರ್ಮಿಕ ನೀತಿಯಲ್ಲ ಎಂದು ಸುಬ್ಬಯ್ಯ ಬಲವಾಗಿ ಪ್ರತಿಪಾದಿಸುತ್ತಿದ್ದರು.

ಅವರ ಹೋರಾಟ ಕೇವಲ ವೈಚಾರಿಕತೆಯ ವಿಚಾರಗಳಿಗಷ್ಟೇ ಸೀಮಿತವಾಗಿರಲಿಲ್ಲ. ಕಳೆದೆರಡು ವರ್ಷಗಳಿಂದ ಭೂಮಿ, ವಸತಿ ವಂಚಿತರ ಪರ ಹೋರಾಟದಲ್ಲೂ ಸಕ್ರಿಯರಾಗಿದ್ದರು. ಕೊಡಗಿನ ದಿಡ್ಡಳ್ಳಿ ಎಂಬ ಪ್ರದೇಶದ ಅರಣ್ಯವಾಸಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಿಸಿದರ ವಿರುದ್ಧ ನಡೆದ ಹೋರಾಟದ ಫಿಲಾಸಫಿಕಲ್ ಮತ್ತು ಲೀಗಲ್ ಮೈಂಡ್ ಸುಬ್ಬಯ್ಯರೇ ಆಗಿದ್ದರು. ದಿಡ್ಡಳ್ಳಿಯ ಆದಿವಾಸಿಗಳು ಇಂದು ಅಲ್ಲಿಂದಲ್ಲಿಗೆ ಬದುಕು ಕಟ್ಟಿಕೊಂಡದ್ದರ ಹಿಂದಿನ ಮಹಾಶಕ್ತಿ ಸುಬ್ಬಯ್ಯರಾಗಿದ್ದರು.

ಮೊನ್ನೆ ಎ‌.ಕೆ.ಸುಬ್ಬಯ್ಯರ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಕೆಲವು ಯುವತಿಯರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅವರ ಭಾವ ‘ನಮಗಾರಿನ್ನು ಗತಿ’ ಎಂಬುವುದನ್ನು ಧ್ವನಿಸುತ್ತಿತ್ತು. ಅವರು ಯಾರಿರಬಹುದೆಂಬ ಸಂಶಯ ನಿವಾರಣೆ ಮಾಡಲು ನಮ್ಮ ಹಿರಿಯ  ಸಂಗಾತಿಯೊಬ್ಬರನ್ನು ಕೇಳಿದಾಗ ಅವರು ಕೊಡಗಿನ‌ ದಿಡ್ಡಳ್ಳಿಯಿಂದ ಒಕ್ಕಲೆಬ್ಬಿಸಲ್ಪಟ್ಟ ಆದಿವಾಸಿಗಳೆಂದು ತಿಳಿಯಿತು. ಅವರಿಗೆ ಸುಬ್ಬಯ್ಯರೇ ಎಲ್ಲವೂ ಆಗಿದ್ದರು.

ಗೌರಿ ಲಂಕೇಶ್, ದೊರೆಸ್ವಾಮಿ ಮುಂತಾದವರು ಕೆಲವು ನಕ್ಸಲ್ ಹೋರಾಟಗಾರರನ್ನು ಶರಣಾಗಿಸಿ ಮುಖ್ಯವಾಹಿನಿಯ ಚಳವಳಿಗೆ ತಂದುದರ ಹಿಂದಿನ ಕಾನೂನಾತ್ಮಕ ಶಕ್ತಿ ಸುಬ್ಬಯ್ಯರಾಗಿದ್ದರು.

ಎಂಬತ್ತೈದರ ಹರೆಯದ ಸುಬ್ಬಯ್ಯರ  ಆರೋಗ್ಯ ತೀರ ಹದಗೆಟ್ಟ ಸಂದರ್ಭದಲ್ಲೂ ಅವರು ಹೋರಾಟದಿಂದ ವಿಮುಖರಾಗಿರಲಿಲ್ಲ..  ಒಂದೆಡೆ ಅವರ ಮೂತ್ರಪಿಂಡ‌ಗಳು ವೈಫಲ್ಯಗೊಂಡಿತ್ತು, ಇನ್ನೊಂದೆಡೆ ಮಾರಣಾಂತಿಕ ಕ್ಯಾನ್ಸರ್ ಅವರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಅಷ್ಟಾಗಿಯೂ ಅವರ ಪ್ರತಿರೋಧದ ಹುಮ್ಮಸ್ಸು ಒಂದಿನಿತೂ‌ ಕುಂದಿರಲಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಅವರು ತೀವ್ರ ಅನಾರೋಗ್ಯ ಪೀಡಿತರಾಗಿದ್ದೂ ಜನಪರ ಹೋರಾಟಗಳಲ್ಲಿನ ಅವರ ಬದ್ಧತೆ ಇನಿತೂ ಕಡಿಮೆಯಾಗಿರಲಿಲ್ಲ.

ಸುಬ್ಬಯ್ಯರ ಅಗಲಿಕೆಯೂ ವಿಶಿಷ್ಟವಾಗಿತ್ತು. ಅವರನ್ನು ಕಾಡುತ್ತಿದ್ದ ಕ್ಯಾನ್ಸರ್ ಮತ್ತು ಮೂತ್ರಪಿಂಡದ ಕಾಯಿಲೆ ಉಲ್ಭಣಗೊಂಡಿತ್ತು.‌ಅವರಿಗೆ ಮತ್ತು ಅವರ ವೈದ್ಯರಿಗೆ ಅವರಿನ್ನು ಬದುಕುವುದಿಲ್ಲವೆಂಬುವುದು ಖಚಿತವಾಗಿತ್ತು. ಅವರಿಗೆ ಕ್ಯಾನ್ಸರ್‌ ನ ಅಸಾಧ್ಯ ನೋವು ಸಹಿಸಲು ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ ಅವರು ಅಪ್ರಜ್ಞಾ ಸ್ಥಿತಿಗೆ ಹೋಗಲು ಬಯಸಿದರು. ತನ್ನ ಕುಟುಂಬಿಕರು ಮತ್ತು ಹೋರಾಟದ ಕೆಲವು ಸಂಗಾತಿಗಳನ್ನು ಕರೆದು ಮಾತನಾಡಿದರು. ಕೊನೆಯಲ್ಲಿ ಕೈ ಎತ್ತಿ ಎಲ್ಲರಿಗೂ ಧನ್ಯವಾದ ಹೇಳುತ್ತಾ ಅಪ್ರಜ್ಞಾ ಸ್ಥಿತಿಗೆ ಹೊರಟರು.. ಅದಾಗಿ ಒಂದು ಗಂಟೆಯೊಳಗಾಗಿ ಅವರ ಉಸಿರಾಟ ನಿಂತು ಹೋಯಿತು.

ಸುಬ್ಬಯ್ಯನವರ ವಿದಾಯದಿಂದ ನಿಸ್ಸಂಶಯವಾಗಿಯೂ ಕನ್ನಡ ನಾಡಿನ ಸಾಮಾಜಿಕ ಹೋರಾಟ ಬಡವಾಗಿದೆ. ‌ಅವರು ಹೊತ್ತಿಸಿದ ಹೋರಾಟದ ಪಂಜನ್ನು ಮುಂದಕ್ಕೊಯ್ಯುವುದೇ ಅವರಿಗೆ ಸಲ್ಲಿಸುವ ನೈಜ ಶ್ರದ್ಧಾಂಜಲಿ. ‌ಅವರ ಅಂತ್ಯ ಸಂಸ್ಕಾರದ ವೇಳೆ ನಾವು ಸತೀಶ್ ಕುಲಕರ್ಣಿಯವರ "ಕಟ್ಟುತ್ತೇವ... ನಾವು ಕಟ್ಟುತ್ತೇವ.... ಕಟ್ಟೇ ಕಟ್ಟುತ್ತೇವ.... ಕಂಡ ಕನಸುಗಳ, ಮುರಿದ ಮನಸುಗಳ ಕಟ್ಟೇ ಕಟ್ಟುತ್ತೇವ.... " ಎಂದು ಹಾಡಿಯೇ ಅವರ ವ್ಯಕ್ತಿತ್ವಕ್ಕೆ ಅತ್ಯಂತ ಅರ್ಹವಾದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದೆವು..

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)