varthabharthi

ನಿಮ್ಮ ಅಂಕಣ

ಶೌಚಾಲಯ ಸ್ವಚ್ಛತೆಯ ಹೊಣೆ ಯಾರದ್ದು?

ವಾರ್ತಾ ಭಾರತಿ : 3 Sep, 2019
-ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ, ಕಲಬುರಗಿ

ಮಾನ್ಯರೇ, ಸರಕಾರಗಳು ಸಾರ್ವಜನಿಕ ಶಿಕ್ಷಣ ಇಲಾಖೆಗಾಗಿ ಕಾಲಕಾಲಕ್ಕೆ ಸಾಕಷ್ಟು ಅನುದಾನ ಯೋಜನೆಗಳು ರೂಪಿಸಿ ಅನುಷ್ಠಾನ ಮಾಡುತ್ತವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಉಂಟಾಗಿ ಈ ಯೋಜನೆಗಳು ವಿಫಲವಾಗುತ್ತವೆ. ಸರಕಾರಿ ಶಾಲೆಗಳಲ್ಲಿ ಮೂಲಭೂತ ಅಗತ್ಯಗಳಲ್ಲಿ ಬಹು ಮುಖ್ಯವಾಗಿರುವುದು ಸ್ವಚ್ಛತೆ ಮತ್ತು ಅದರ ನಿರ್ವಹಣೆ. ಒಂದು ಶಾಲೆ ಎಂದ ಮೇಲೆ ನೂರಾರು ಮಕ್ಕಳಿರುತ್ತಾರೆ. ಅವರಿಂದ ಅನುಪಯುಕ್ತ ಕಸ ನಿತ್ಯವೂ ಹುಟ್ಟುವುದು. ಶಾಲಾ ಆಟದ ಮೈದಾನ ಸ್ವಚ್ಛತೆ, ತರಗತಿ ಕೊಠಡಿಗಳ ಸ್ವಚ್ಛತೆ, ಶೌಚಾಲಯ ಸ್ವಚ್ಛತೆ, ಕಚೇರಿ ಸ್ವಚ್ಛತೆ ಹೀಗೆ ಇಡೀ ಶಾಲಾ ಸಂಕೀರ್ಣ ಅಚ್ಚುಕಟ್ಟಾಗಿ ನಿರ್ವಹಣೆಯ ಅಗತ್ಯವಿದೆ. ಆದರೆ ಈ ನಿರ್ವಹಣೆಗಾಗಿ ಸರಕಾರ ಅತ್ಯಲ್ಪಮೊತ್ತದ ಹಣ ನೀಡುತ್ತಿದೆ. ಹಾಗಾಗಿ ಈ ಮೊತ್ತದಿಂದ ಗುಣಮಟ್ಟದ ನಿರ್ವಹಣೆ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರತಿ ಶಾಲೆಯಲ್ಲೂ ಶೌಚಾಲಯ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವೇ ಹೇಳಿದೆ. ಅದರಂತೆ ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳೂ ನಿರ್ಮಿಸಲಾಗಿದೆ. ಆದರೆ, ಇವುಗಳ ನಿರ್ವಹಣೆ ಮಾಡುವುದೇ ಬಹುದೊಡ್ಡ ಸವಾಲು. ಗ್ರಾಮೀಣ ಭಾಗದಲ್ಲಿ ಕೆಲವೆಡೆ ಶಾಲೆಯ ಶೌಚಾಲಯ ಶುಚಿಮಾಡಲು ಯಾರೂ ಬರುವುದಿಲ್ಲ. ಶೌಚಾಲಯಗಳನ್ನು ವಾರಕ್ಕೆ ಎರಡು ಬಾರಿಯಾದರೂ ಶುಚಿಮಾಡಬೇಕು. ಹೆಚ್ಚಿನ ಖರ್ಚು ಮಾಡಿ ಶೌಚಾಲಯ ಸ್ವಚ್ಛಗೊಳಿಸುವ ಶಕ್ತಿ ಹೆಚ್ಚಿನ ಗ್ರಾಮೀಣ ಶಾಲೆಗಳಿಗೆ ಇರಲಾರದು. ಹೀಗಾಗಿ ಶಿಕ್ಷಕರೇ ಮಕ್ಕಳ ಜೊತೆ ಸೇರಿ ಶೌಚಾಲಯ ಶುಚಿ ಮಾಡುವ ಅನಿವಾರ್ಯವಿದೆ. ಈ ಸಮಸ್ಯೆಯಿಂದಾಗಿಯೇ ಮಕ್ಕಳನ್ನು ಶೌಚಾಲಯ ಶುಚಿಗಾಗಿ ಬಳಿಸಿಕೊಳ್ಳಲಾಗಿದೆ ಎಂಬ ಆಪಾದನೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಶೌಚಾಲಯ ಶುಚಿ ಸಣ್ಣ ವಿಚಾರವಾದರೂ ಶುಚಿತ್ವದ ದೃಷ್ಟಿಯಲ್ಲಿ ಸರಕಾರಿ ಶಾಲೆಗಳ ಮಟ್ಟಿಗೆ ಇದೊಂದು ಗಂಭೀರ ಸಮಸ್ಯೆಯಾಗಿದೆ. ಸರಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜವಾನರು ಇರುವುದಿಲ್ಲ. ಅಲ್ಲದೆ ಬಹುತೇಕ ಪ್ರೌಢಶಾಲೆಗಳಲ್ಲಿ ‘ಡಿ’ ದರ್ಜೆ ಹುದ್ದೆಗಳು ಖಾಲಿ ಇವೆ. ಹಾಗಾಗಿ ಸರಕಾರಿ ಶಿಕ್ಷಕನಾಗಿ ಸೇವೆ ಸೇರಿದ ತಪ್ಪಿಗಾಗಿ ಶಿಕ್ಷಕರೇ ಶೌಚಾಲಯ ಶುಚಿಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇವೆ. ಇನ್ನೂರು ಮುನ್ನೂರು ಮಕ್ಕಳಿರುವ ಶಾಲೆಯಲ್ಲಿ ಕನಿಷ್ಠ ಇಬ್ಬರು ‘ಡಿ’ ದರ್ಜೆಯ ನೌಕರರಾದರೂ ಇರಬೇಕು. ಕಿರಿಯ ಪ್ರಾಥಮಿಕ ಶಾಲೆಯಲ್ಲಂತೂ ಸಣ್ಣ ಮಕ್ಕಳು ಇರುವುದರಿಂದ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇ ಬೇಕು. ಶಾಲೆಯಲ್ಲಿ ಶುಚಿತ್ವ ಇಲ್ಲದೆ ಗುಣಮಟ್ಟದ ಶಿಕ್ಷಣ ನಿರೀಕ್ಷಿಸುವುದಾದರೂ ಹೇಗೆ ಸಾಧ್ಯ? ಅಧಿಕಾರಿಗಳು ಯಾವತ್ತೋ ಒಂದು ದಿನ ಶಾಲೆಗೆ ಭೇಟಿ ನೀಡಿ ಶಾಲಾ ಆವರಣ ಸ್ವಚ್ಛವಾಗಿಲ್ಲ ಎಂದು ಗದರಿ ನೋಟಿಸ್ ನೀಡಿದರೆ ಬಡಪಾಯಿ ಶಿಕ್ಷಕ ಏನು ಮಾಡಲು ಸಾಧ್ಯವಿದೆ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)