varthabharthi

ಸಂಪಾದಕೀಯ

ತುರ್ತು ಪರಿಸ್ಥಿತಿಗಿಂತ ಕೆಟ್ಟ ದಿನಗಳು

ವಾರ್ತಾ ಭಾರತಿ : 4 Sep, 2019

ಹಿಂದಿನ ಪ್ರಧಾನಿ ಇಂದಿರಾ ಗಾಂಧಿಯವರು 1975ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಿ ಹೋರಾಡಿದ್ದಾಗಿ ಹೇಳಿಕೊಳ್ಳುವವರೇ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ಇವರ ಕಾಲದಲ್ಲಿ ಭಾರತ ಆ ಪರಿಸ್ಥಿತಿಗಿಂತ ಕೆಟ್ಟ ದಿನಗಳನ್ನು ನೋಡುವಂತಾಗಿದೆ. ಚುನಾವಣಾ ಆಯೋಗ, ರಿಸರ್ವ್ ಬ್ಯಾಂಕ್, ಮುಂತಾದ ಸ್ವಾಯತ್ತ ಸಂಸ್ಥೆಗಳ ಹಲ್ಲು ಕಿತ್ತು ನಿಷ್ಕ್ರಿಯಗೊಳಿಸಿದ ಮೋದಿ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಗಂಡಾಂತರ ತಂದಿದೆ. ಮಾಧ್ಯಮಗಳ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ಪತ್ರಿಕಾ ಮಂಡಳಿ ಪ್ರಭುತ್ವದ ಸೂತ್ರದ ಗೊಂಬೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ಕಳೆದ ಒಂದು ತಿಂಗಳಿನಿಂದ ಅಕ್ಷರಶಃ ಒಂದು ಬಂದಿಖಾನೆಯಂತಾಗಿದೆ. ಅಲ್ಲಿನ ಪ್ರಜೆಗಳು ಮನೆಯಿಂದ ಹೊರಗೆ ಬರುವಂತಿಲ್ಲ, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಗೃಹ ಬಂಧನದಲ್ಲಿದ್ದಾರೆ. ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅಸ್ವಸ್ಥರಾಗಿರುವ ತಮ್ಮ ಪಕ್ಷದ ನಾಯಕ ಹಾಗೂ ಕಾಶ್ಮೀರದ ಮಾಜಿ ಶಾಸಕ ಯೂಸುಫ್ ತಾರಿಗಾಮಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ಸುಪ್ರೀಂ ಕೋರ್ಟ್ ಅನುಮತಿ ಪಡೆದು ಶ್ರೀ ನಗರಕ್ಕೆ ಹೋಗಬೇಕಾಗಿ ಬಂದಿದೆ. ಇದಿಷ್ಟೇ ಆಗಿದ್ದರೆ ಭದ್ರತಾ ಸಮಸ್ಯೆ ಎಂದು ಹೇಳಬಹುದಾಗಿತ್ತು, ಆದರೆ ಅಲ್ಲಿ ಮಾಧ್ಯಮಗಳ ಬಾಯಿಗೂ ಬೀಗ ಹಾಕಿ ಕಣ್ಣಿಗೆ ಪಟ್ಟಿ ಕಟ್ಟಲಾಗಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಗೊಳಿಸಿದ ನಂತರ ಸರಕಾರ ಎಲ್ಲ ಸಂವಹನ ಮೂಲಗಳನ್ನು ನಿರ್ಬಂಧಿಸಿದೆ. ಫೋನ್, ಇಂಟರ್ನೆಟ್ ಮುಂತಾದ ಸಾಧನಗಳಿಲ್ಲದೆ ಪತ್ರಿಕೆಗಳು ಹೊರಗೆ ಬರುವುದೇ ಕಷ್ಟವಾಗಿದೆ. ಒಂದೆರಡು ದಿನ ಹೀಗೆ ಮಾಡಿದ್ದರೆ ಸಹಿಸಬಹುದಿತ್ತು. ಆದರೆ ತಿಂಗಳುಗಳಷ್ಟು ಸುದೀರ್ಘ ಕಾಲ ಈ ನಿರ್ಬಂಧ ವಿಧಿಸುವುದು ಸರಿಯಲ್ಲ. ಈ ಬಗ್ಗೆ ಭಾರತದ ಎಡಿಟರ್ಸ್ ಗಿಲ್ಡ್ ಹೇಳಿಕೆ ನೀಡಿ ಈ ನಿರ್ಬಂಧಗಳನ್ನು ಜನತಂತ್ರ ವಿರೋಧಿ ಎಂದು ಖಂಡಿಸಿದೆ, ಆದರೆ ಇಂತಹ ಸನ್ನಿವೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಪರ ದಿಟ್ಟ ನಿರ್ಧಾರ ಕೈಗೊಳ್ಳಬೇಕಿದ್ದ ಭಾರತೀಯ ಪತ್ರಿಕಾ ಮಂಡಳಿ ಮಾತ್ರ ನಿರ್ಬಂಧವನ್ನು ಬೆಂಬಲಿಸಿರುವುದು ಖಂಡನೀಯವಾಗಿದೆ. ಕೇಂದ್ರ ಸರಕಾರದ ಈ ನಿರ್ಬಂಧ ಪ್ರಶ್ನಿಸಿ ‘ಕಾಶ್ಮೀರ ಟೈಮ್ಸ್’ನ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಸಿನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿರುವುದರಿಂದ ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾದ ಕಾರಣ ಈ ನಿರ್ಬಂಧವನ್ನು ವಾಪಸು ಪಡೆಯಬೇಕೆಂದು ಅವರು ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಅನುರಾಧಾ ಭಾಸಿನ್ ಪರವಾಗಿ ನಿಲ್ಲಬೇಕಾದ ಭಾರತೀಯ ಪತ್ರಿಕಾ ಮಂಡಳಿ ಸರಕಾರದ ಸಮರ್ಥನೆಗೆ ಮುಂದಾಗಿದೆ. ದೇಶದ ಸಮಗ್ರತೆ ದೃಷ್ಟಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವುದು ಸಮರ್ಥನೀಯ ಎಂದು ಪತ್ರಿಕಾ ಮಂಡಳಿ ಹೇಳಿಕೆ ನೀಡಿದೆ. ಮಾಧ್ಯಮ ಸ್ವಾತಂತ್ರ್ಯದ ಪರವಾಗಿ ನಿಲ್ಲಬೇಕಾದ ಪತ್ರಿಕಾ ಮಂಡಳಿ ಸುಪ್ರೀಂ ಕೋರ್ಟಿಗೆ ತಾನೇ ಸ್ವಯಂ ಪ್ರೇರಿತವಾಗಿ ಅರ್ಜಿ ಸಲ್ಲಿಸಿ ಸರಕಾರದ ಬೆಂಬಲಕ್ಕೆ ನಿಂತಿರುವುದು ಲಜ್ಜೆಗೇಡಿತನದ ಪರಮಾವಧಿಯಾಗಿದೆ. ಪತ್ರಿಕಾ ಮಂಡಳಿ ಅಧ್ಯಕ್ಷರಾದ ಚಂದ್ರಕುಮಾರ ಪ್ರಸಾದ್ ಜೈನ್ ತಮ್ಮ ಜೊತೆಗೆ ಸಮಾಲೋಚನೆ ಮಾಡದೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿರುವುದರ ಬಗ್ಗೆ ಪತ್ರಿಕಾ ಮಂಡಳಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಇದು ನಿಯಮಾವಳಿಗಳಿಗೆ ವಿರುದ್ಧವಾಗಿದೆ, ಪತ್ರಿಕಾ ಮಂಡಳಿಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ತುರ್ತು ಪರಿಸ್ಥಿತಿಗಿಂತ ಕೆಟ್ಟ ಕಾಲವಲ್ಲದೆ ಬೇರೇನೂ ಅಲ್ಲ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತನ್ನ ಹಿತಾಸಕ್ತಿ ರಕ್ಷಣೆಗಾಗಿ ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಚುನಾವಣಾ ಆಯೋಗಗಳನ್ನು ದುರುಪಯೋಗ ಪಡಿಸಿಕೊಂಡಂತೆ ಪತ್ರಿಕಾ ಮಂಡಳಿಯನ್ನು ದುರ್ಬಳಕೆ ಮಾಡಿಕೊಂಡಿರುವುದು ಇದರಿಂದ ಸ್ಪಷ್ಟವಾಗಿದೆ. ಪತ್ರಿಕಾ ಮಂಡಳಿಯ ಈಗಿನ ಅಧ್ಯಕ್ಷರು ಕೇಂದ್ರದಲ್ಲಿ ಮೋದಿ ಸರಕಾರ ಮೊದಲ ಬಾರಿ ಅಸ್ತಿತ್ವಕ್ಕೆ ಬಂದ ನಂತರ ನೇಮಕಗೊಂಡವರು. ಹೀಗಾಗಿ ಇವರಿಗೆ ಸರಕಾರದ ಉಪಕಾರ ತೀರಿಸುವ ಆತುರ ಎದ್ದು ಕಾಣುತ್ತದೆ. ಪತ್ರಿಕಾ ಸ್ವಾತಂತ್ರ್ಯ ಕಾಪಾಡಬೇಕಾದ ಪತ್ರಿಕಾ ಮಂಡಳಿಯಂತಹ ಸ್ವಾಯತ್ತ ಸಂಸ್ಥೆಗಳು ಅಧಿಕಾರದಲ್ಲಿರುವವರ ಮರ್ಜಿಗೆ ಒಳಗಾಗಿ ಅವರ ಸೇವೆಗೆ ಲಜ್ಜೆಗೆಟ್ಟು ನಿಂತರೆ ಜನ ಸಾಮಾನ್ಯರ ಹಕ್ಕುಗಳಿಗೆ ಧಕ್ಕೆ ಬರುವುದರಲ್ಲಿ ಸಂದೇಹವಿಲ್ಲ. ಪತ್ರಿಕಾ ಸ್ವಾತಂತ್ರ್ಯವೆಂದರೆ ಪ್ರಜೆಗಳ ಸ್ವಾತಂತ್ರ್ಯ. ಪತ್ರಕರ್ತರು ಸ್ವತಂತ್ರವಾಗಿ ಯಾರ ಭಯವಿಲ್ಲದೆ ಕಾರ್ಯ ನಿರ್ವಹಿಸುವ ಅವಕಾಶ ಇದ್ದರೆ ಮಾತ್ರ ಪ್ರಜೆಗಳ ಹಕ್ಕುಗಳನ್ನು ರಕ್ಷಿಸಲು ಸಾಧ್ಯ. ಪ್ರಜೆಗಳನ್ನು ಬಿಟ್ಟು ರಾಷ್ಟ್ರವಿಲ್ಲ. ಪ್ರಜೆಗಳ ಹಿತವೇ ರಾಷ್ಟ್ರ ಹಿತ. ಪತ್ರಿಕಾ ಮಂಡಳಿ ಅಸ್ತಿತ್ವಕ್ಕೆ ಬಂದಿರುವುದು ಪತ್ರಿಕಾ ಸ್ವಾತಂತ್ರ್ಯ ರಕ್ಷಿಸುವ ಉದಾತ್ತ ಉದ್ದೇಶದಿಂದ. ಆದರೆ ಅದು ತನ್ನ ಕರ್ತವ್ಯ ಮರೆತು ಅಧಿಕಾರದಲ್ಲಿರುವವರ ಹಿತಾಸಕ್ತಿ ರಕ್ಷಣೆಗೆ ಮುಂದಾಗಿರುವುದು ಖಂಡನೀಯವಾಗಿದೆ. ಕಾಶ್ಮೀರ ಮಾತ್ರವಲ್ಲ ಒಟ್ಟಾರೆ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಭಿನ್ನಮತವನ್ನು ದಮನ ಮಾಡುವ ಫ್ಯಾಶಿಸ್ಟ್ ಪ್ರವೃತ್ತಿ ಆತಂಕಕಾರಿಯಾಗಿದೆ. ದಕ್ಷಿಣದ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಹೇರುವ ಹುನ್ನಾರ, ಗುಂಪು ದ್ವೇಷದ ದಾಳಿಗಳಲ್ಲಿ ಅಸುನೀಗುತ್ತಿರುವ ಅಮಾಯಕ ಜನರು, ಜನಪರ ಹೋರಾಟಗಾರರನ್ನು ‘ನಗರ ನಕ್ಸಲ’ರೆಂದು ಕರೆದು ಅವರ ಧ್ವನಿಯನ್ನು ಹತ್ತಿಕ್ಕುವ ಯತ್ನ ಇವೆಲ್ಲ ಹಿಂದಿನ ತುರ್ತು ಪರಿಸ್ಥಿತಿಗಿಂತ ಭಯಾನಕವಾಗಿವೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸುರಕ್ಷಿತವಾಗಿರಬೇಕಾದರೆ ಅದಕ್ಕೆ ರಕ್ಷಾ ಕವಚವಾದ ಪತ್ರಿಕಾ ಸ್ವಾತಂತ್ರ್ಯ ಅಬಾಧಿತವಾಗಿರಬೇಕು. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ಪತ್ರಿಕಾ ಮಂಡಳಿಯೇ ಅಧಿಕಾರದಲ್ಲಿರುವವರ ಹಿತಾಸಕ್ತಿ ರಕ್ಷಿಸಲು ಹೊರಟರೆ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವವರಾರು?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)