varthabharthi

ನಿಮ್ಮ ಅಂಕಣ

ಭಾರತದ ಆರ್ಥಿಕತೆ ಕುಸಿತದತ್ತ: ಜನಸಾಮಾನ್ಯರ ಬದುಕು ಎತ್ತ?

ವಾರ್ತಾ ಭಾರತಿ : 4 Sep, 2019
ನಂದಕುಮಾರ್ ಕೆ. ಎನ್.

ಭಾರತದ ಈಗಿನ ಆರ್ಥಿಕ ಹಿಂಜರಿಕೆಯ ಕಾರಣಕರ್ತರಲ್ಲಿ ಪ್ರಮುಖವಾಗಿರುವ ವಿದೇಶಿ ನೇರ ಹೂಡಿಕೆದಾರರಿಗೆ ಅದೇ ನೆಪದಲ್ಲಿ ದೇಶದ ಮತ್ತಷ್ಟು ಅವಕಾಶಗಳನ್ನು ತೆರೆದಿಡಲಾಗುತ್ತಿದೆ. ಇದು ಭಾರತ ದೇಶವನ್ನು ಯಾವ ಮಟ್ಟದ ಪ್ರಪಾತಕ್ಕೆ ಇಳಿಸಬಹುದೆನ್ನುವುದನ್ನು ಸಹಜವಾಗಿ ಊಹಿಸಿಕೊಂಡರೂ ಯಾರಿಗಾದರೂ ಅರ್ಥವಾದೀತು. ಯುದ್ಧ ಸನ್ನಿ ಇಲ್ಲವೇ ಸಮೂಹಸನ್ನಿಗೆ ಜನಸಾಮಾನ್ಯರು ಈಡಾಗದೆ ಈ ವಾಸ್ತವಗಳನ್ನು ಅರಿತು ತಮ್ಮ ಹೆಜ್ಜೆಗಳನ್ನಿಡದಿದ್ದರೆ ಅಪಾಯ ಭೀಕರವಾಗಬಹುದು.

ದೇಶದಲ್ಲಿ ಜನಸಾಮಾನ್ಯರ ಬದುಕುವ ಅವಕಾಶ ಹೆಚ್ಚಿಸುವ, ಬದುಕಿನ ಭದ್ರತೆ ಕಲ್ಪಿಸುವ, ಬದುಕಿನ ಗುಣಮಟ್ಟವನ್ನು ಹೆಚ್ಚಿಸುವ, ಯುವಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ವಿಚಾರಗಳು ಇಂದಿನ ಸುದ್ದಿಗಳಾಗಿ ಉಳಿದಿಲ್ಲ. ಉದ್ಯೋಗಾವಕಾಶಗಳ ನಷ್ಟಗಳದ್ದೇ ಸುದ್ದಿ. ಅದೂ ಕೂಡ ಸಾವಿರ ಸಂಖ್ಯೆಯಲ್ಲಲ್ಲ. ಲಕ್ಷಗಳ ಸಂಖ್ಯೆಗಳಲ್ಲಿ ಉದ್ಯೋಗಾವಕಾಶಗಳು ನಷ್ಟವಾಗುತ್ತಾ ಸಾಗುತ್ತಿವೆ. ಹೊಟೇಲುಗಳು, ವ್ಯಾಪಾರ ವಹಿವಾಟುಗಳು ತೀವ್ರವಾಗಿ ಕಡಿತವಾಗುತ್ತಾ ಸಾಗಿವೆ. ಮಹಾನಗರ, ನಗರ, ಪಟ್ಟಣ, ಪೇಟೆಗಳು ಬಿಕೋ ಎನ್ನತೊಡಗಿವೆ. ಮಹಾನಗರ ಬೆಂಗಳೂರಿನ ಪೇಟೆಬೀದಿಗಳಲ್ಲಿ ಮೊದಲಿದ್ದ ಲವಲವಿಕೆ ಈಗ ಕಾಣುತ್ತಿಲ್ಲ. ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ.

ದೇಶದ ಎಲ್ಲಾ ನಗರಗಳ ಕತೆಯೂ ಇದೇ ಆಗಿದೆ. ತೀವ್ರಗೊಳ್ಳುತ್ತಿರುವ ಆರ್ಥಿಕ ಹಿಂಜರಿತ ಜಾಗತಿಕವಾಗಿಯೂ ಹಲವು ರಾಷ್ಟ್ರಗಳ ವಿದ್ಯಮಾನಗಳಾಗಿವೆ. ಇದುವರೆಗೆ ಜಾಗತಿಕ ಮಟ್ಟದಲ್ಲಿ ಸಾಪೇಕ್ಷವಾಗಿ ಆರ್ಥಿಕ ಸ್ಥಿರತೆಯಲ್ಲಿ ಚೀನಾ ನಂತರ ಭಾರತ ಎರಡನೇ ಸ್ಥಾನ ಪಡೆದಿತ್ತು. ಇದುವರೆಗೂ ಜಾಗತಿಕ ಆರ್ಥಿಕ ಹಿಂಜರಿತವನ್ನು ತಡೆಯುವಲ್ಲಿ ಚೀನಾ ಹಾಗೂ ಭಾರತದ ಆರ್ಥಿಕತೆಗಳು ಕೊಡುಗೆ ಕೊಡುವ ನಿರೀಕ್ಷೆಯಿತ್ತು. ಯಾಕೆಂದರೆ ಇವೆರಡು ಅತೀ ಹೆಚ್ಚು ಜನಸಂಖ್ಯೆಯಿರುವ ದೇಶಗಳಾಗಿದ್ದು ದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದವು. ಭಾರತದ ಮಧ್ಯಮ ವರ್ಗದ ಜನಸಂಖ್ಯೆಯೇ ಸುಮಾರು ಶೇ. 30 ರಷ್ಟಿದೆ. ಅಂದರೆ ಭಾರತದ ಸುಮಾರು 36 ಕೋಟಿಗೂ ಹೆಚ್ಚು ಜನರು. ಇದು ಒಂದು ದೊಡ್ಡದಾದ ಜನಸಂಖ್ಯೆಯಾಗಿದೆ. ಆದರೆ ಆ ನಿರೀಕ್ಷೆಯಿಂದ ಭಾರತ ಈಗ ಹೊರಬಿದ್ದಿದೆ. ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹಾಗೂ ಮಾಧ್ಯಮಗಳು ಈಗ ಭಾರತದ ಆರ್ಥಿಕ ಹಿಂಜರಿತದ ಬಗ್ಗೆ ಬಹಳ ಆತಂಕದಿಂದ ನೋಡತೊಡಗಿವೆ. ಜಾಗತೀಕರಣದ ನಂತರ ಕೊಳ್ಳುಬಾಕ ಇಲ್ಲವೇ ಉಪಭೋಗಿ ಸಂಸ್ಕೃತಿ, ಶಾಪಿಂಗ್ ಸಂಸ್ಕೃತಿಯ ಗೀಳಿಗೆ ಈ ಜನರನ್ನು ಕೆಡವಿ ಹಾಕಲಾಗಿತ್ತು. ಈ ಜನರೇ ಅನವಶ್ಯಕ ವಸ್ತುಗಳ ಗ್ರಾಹಕರು ಹಾಗೂ ಜಾಗತೀಕರಣದ ಪ್ರಧಾನ ಬೆಂಬಲಿಗರೂ ಆಗಿದ್ದರು. ಜಾಗತಿಕ ಬಂಡವಾಳಶಾಹಿ ಈ ಜನರನ್ನು ಮಾನಸಿಕವಾಗಿ ಹತ್ತು ಹಲವು ವಿಧಾನಗಳ ಮೂಲಕ ತಮ್ಮ ತೆಕ್ಕೆಯೊಳಗೆ ಇಟ್ಟುಕೊಂಡು ಬಂದಿತ್ತು.

ಇವರ ಬೆಂಬಲದೊಂದಿಗೆ ಭಾರತದ ಎಲ್ಲಾ ರಂಗಗಳನ್ನು ಜಾಗತಿಕ ಬಂಡವಾಳ ತನ್ನ ವ್ಯಾಪ್ತಿಗೆ ಒಳಪಡಿಸುತ್ತಾ ಸಾಗಿತ್ತು. ವಿದೇಶಿ ನೇರ ಹೂಡಿಕೆಗಳೇ ಅಭಿವೃದ್ಧಿಯ ಮಾನದಂಡವನ್ನಾಗಿ ಬಿಂಬಿಸುತ್ತಾ ಆಡಳಿತಕ್ಕೆ ಬಂದ ಸರಕಾರಗಳೆಲ್ಲಾ ಅದಕ್ಕಾಗಿ ಪೈಪೋಟಿಗಿಳಿದವು. ವಿದೇಶಿ ಹೂಡಿಕೆ ಆಕರ್ಷಿಸಲು ‘ವೈಬ್ರಂಟ್ ಗುಜರಾತ್’ನಂತಹ ಹೂಡಿಕಾ ಜಾತ್ರೆಗಳನ್ನು ಹಲವು ರಾಜ್ಯ ಸರಕಾರಗಳು ಸಂಘಟಿಸುತ್ತಾ ಭಾರೀ ಕಾರ್ಪೊರೇಟುಗಳಿಗೆ ತೆರಿಗೆ ವಿನಾಯಿತಿ, ನೀರು ವಿದ್ಯುತ್ ಸೌಲಭ್ಯ, ಸಾಲಸೌಲಭ್ಯ, ಭೂಮಿ ಒದಗಿಸುವಿಕೆಗಳನ್ನು ಮಾಡುತ್ತಾ ಬಂದವು. ನಮ್ಮ ದೇಶದ ಕೃಷಿ, ಕೈಗಾರಿಕೆ, ಶಿಕ್ಷಣ, ವಿಮೆ, ಬ್ಯಾಂಕಿಂಗ್, ಚಿಲ್ಲರೆ, ಹೊಟೇಲ್ ಮೊದಲಾದ ಎಲ್ಲಾ ರಂಗಗಳಲ್ಲಿಯೂ ವಿದೇಶಿ ನೇರ ಹೂಡಿಕೆಗಳಿಗೆ ಅವಕಾಶಗಳನ್ನು ಹೆಚ್ಚಿಸುತ್ತಾ ಬರಲಾಯಿತು. ಅದಕ್ಕನುಗುಣವಾಗಿ ಒಂದು ಮಟ್ಟದಲ್ಲಿದ್ದ ರಕ್ಷಣಾತ್ಮಕ ಕಾನೂನು ಕಾಯ್ದೆಗಳನ್ನೆಲ್ಲಾ ಮಾರ್ಪಡಿಸುವುದು, ಸಡಿಲಗೊಳಿಸುವುದನ್ನು ನಡೆಸುತ್ತಾ ಬರಲಾಯಿತು. ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಅದಕ್ಕನುಗುಣವಾದ ನೀತಿ ಸೂತ್ರಗಳನ್ನು ರೂಪಿಸಿ ಇದನ್ನು ಅತ್ಯಂತ ವ್ಯವಸ್ಥಿತವಾಗಿ ಜಾರಿ ಮಾಡಲಾಯಿತು. ಸಮ್ಮಿಶ್ರ ಸರಕಾರವಾಗಿದ್ದರಿಂದ ಇವುಗಳನ್ನೆಲ್ಲಾ ಸಂಪೂರ್ಣವಾಗಿ ಜಾರಿಗೊಳಿಸಲು ಕೆಲವು ತಾಂತ್ರಿಕ ತೊಡಕುಗಳು ತಲೆದೋರಿದ್ದವು. ಆ ತೊಡಕುಗಳನ್ನು ನಿವಾರಿಸಿಕೊಳ್ಳಲು ಬಹುಮತದ ಸರಕಾರವೊಂದರ ಅವಶ್ಯಕತೆಯಿತ್ತು. ಆ ಅವಶ್ಯಕತೆಯನ್ನು ಕಾರ್ಪೊರೇಟು ಮಾದರಿಯಲ್ಲಿ ಭಾರೀ ಜಾಹೀರಾತು ಹಾಗೂ ವಿವಿಧ ರೀತಿಯ ಪ್ರಚಾರಗಳೊಂದಿಗೆ ಅನುಭೋಗಿ ಸಂಸ್ಕೃತಿಯ ಗೀಳಿಗೆ ಬಿದ್ದ ಅದೇ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಜನರನ್ನು ಅಣಿನೆರೆಸಿ ಮೋದಿ ಸರಕಾರವನ್ನು ಆಳುವ ಶಕ್ತಿಗಳು ಕೇಂದ್ರದಲ್ಲಿ ಕುಳ್ಳಿರಿಸಿಕೊಂಡವು.

ಬಹುಮತ ಗಳಿಸಿದ ಮೋದಿಯ ಬಿಜೆಪಿ ಸರಕಾರದ ಮೂಲಕ ಯುಪಿಎ ಸರಕಾರ ಮಾಡಲಾಗದೇ ಉಳಿಸಿದ್ದ ಕಾರ್ಯಗಳನ್ನು ಮಾಡಿಸಿಕೊಳ್ಳತೊಡಗಿದರು. ಅದರ ಭಾಗವಾಗಿಯೇ ಮೋದಿ ಸರಕಾರ ಮಾಡಿರುವ ಎಲ್ಲಾ ನಡೆಗಳನ್ನು ನಾವು ಗ್ರಹಿಸಬಹುದು. ಆಧಾರ್ ಕಡ್ಡಾಯ, ಪಾನ್ ಕಡ್ಡಾಯ, ಜನರು ತಾವು ದುಡಿದ ಹಣ ಬಳಸಲೂ ನಿರ್ಬಂಧ, ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ಮುಕ್ತ ಅವಕಾಶ, ಕಾರ್ಮಿಕ ಕಾನೂನುಗಳ ಸಡಿಲಿಕೆ, ಇಲ್ಲವೇ ತಿದ್ದುಪಡಿ, ಭಾರೀ ಕಾರ್ಪೊರೇಟು ಪರ ಎಲ್ಲಾ ಕಾನೂನು ಕಟ್ಟಳೆಗಳ ತಿದ್ದುಪಡಿಗಳು, ಭಾರೀ ಕಾರ್ಪೊರೇಟುಗಳ ಸಾಲಬಾಕಿಗಳ ಮೇಲೆ ಕ್ರಮ ತೆಗೆದುಕೊಳ್ಳದೆ ಅವರ ಅಕ್ರಮಗಳನ್ನು ಮುಚ್ಚಿಕೊಳ್ಳಲು ಅನುಕೂಲವಾಗುವಂತಹ ಇನ್ ಸಾಲ್ ವೆನ್ಸಿ ಕಾಯ್ದೆಗೆ ತಿದ್ದುಪಡಿ ಇತ್ಯಾದಿಗಳಿಂದ ಹಿಡಿದು ನೋಟು ರದ್ದತಿ, ಜಿಎಸ್‌ಟಿ ಹೇರಿಕೆ, ಸಂವಿಧಾನಾತ್ಮಕ ವಿಧಿಗಳ ಬದಲಾವಣೆ, ಯುಎಪಿಎಯಂತಹ ಕರಾಳ ಕಾನೂನುಗಳನ್ನು ಮತ್ತಷ್ಟು ಕರಾಳಗೊಳಿಸಿ ತಿದ್ದುಪಡಿಗಳು, ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಸಂಪೂರ್ಣ ಕಡೆಗಣಿಸಿ ವ್ಯಾಪಕ ಕೇಂದ್ರೀಕರಣಗೊಳಿಸುವುದು, ರಾಜ್ಯ ಸರಕಾರಗಳ ಅಧಿಕಾರಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮೊಟಕುಗೊಳಿಸುತ್ತಾ ಹೋಗುವುದು, ಶಾಸಕಾಂಗ, ಕಾರ್ಯಾಂಗಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಾ ನ್ಯಾಯಾಂಗವನ್ನೂ ತಮ್ಮ ಹಿಡಿತಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೆಗೆದುಕೊಳ್ಳುತ್ತಾ ಹೋಗುವುದು ಹೀಗೆ ಹತ್ತು ಹಲವು ಪ್ರಕ್ರಿಯೆಗಳ ವೇಗ ಹೆಚ್ಚಿದವು.

ನೋಟು ಅಮಾನ್ಯೀಕರಣದ ಮೂಲಕ ದೇಶದ ಎಲ್ಲಾ ಜನಸಾಮಾನ್ಯರ ಕೈಯಲ್ಲಿದ್ದ ಹಣವೆಲ್ಲಾ ಸುಮಾರು ಆರೇಳು ತಿಂಗಳುಗಳವರೆಗೆ ಸರಕಾರ ವಶಪಡಿಸಿ ಇಟ್ಟುಕೊಂಡು ಕೆಲವೇ ಭಾರೀ ಕಾರ್ಪೊರೇಟುಗಳ ಹಿತಾಸಕ್ತಿಗಳನ್ನು ಕಾಪಾಡಿತು. ನೋಟು ಅಮಾನ್ಯೀಕರಣದ ಬೆನ್ನಲ್ಲೇ ಜಿಎಸ್‌ಟಿ ಹೇರಿಕೆಯಾದ ನಂತರ ಶೇ. 40ರಿಂದ 75ರಷ್ಟು ಕುಸಿತಕ್ಕೊಳಗಾದ ವ್ಯಾಪಾರ ವಹಿವಾಟುಗಳು ನಂತರ ಮೇಲೇಳಲಾಗದೇ ಕುಸಿಯುತ್ತಲೇ ಸಾಗುತ್ತಿವೆ. ಕೃಷಿ, ಕೈಗಾರಿಕೆ, ರಿಯಲ್ ಎಸ್ಟೇಟ್, ಸಣ್ಣ ಮತ್ತು ಮಧ್ಯಮ ವ್ಯಾಪಾರ ವಹಿವಾಟುಗಳು ಸೇರಿದಂತೆ ದೇಶದ ಎಲ್ಲಾ ರಂಗಗಳಿಗೂ ಇದು ವ್ಯಾಪಿಸಿದೆ. ಜನಸಾಮಾನ್ಯರ ಕೊಳ್ಳುವ ಶಕ್ತಿ ವಿಪರೀತವಾಗಿ ಇಳಿಕೆಗೊಳಗಾಗಿವೆ. ದೇಶದ ಒಟ್ಟು ಉತ್ಪನ್ನದ ಪ್ರಮಾಣದಲ್ಲಿ ದಿನೇ ದಿನೇ ಇಳಿಕೆಯಾಗುತ್ತಿದೆ. ಪ್ರಸ್ತುತ ಭಾರತದ ಒಟ್ಟು ಆಂತರಿಕ ಉತ್ಪನ್ನ ದರ ಶೇ. 5ರ ಆಜೂಬಾಜೂ ತೇಲಾಡುತ್ತಿದೆ. ಆದರೆ ಭಾರತದ ಒಟ್ಟು ಉತ್ಪನ್ನ ವಾಸ್ತವದಲ್ಲಿ ಶೇ. 2.5ರ ಆಜೂಬಾಜು ಇರಬಹುದೆಂಬ ಲೆಕ್ಕಾಚಾರ ಹೊರಬಿದ್ದಿದೆ. ಭಾರತದಲ್ಲಿ ತಮ್ಮ ಹೂಡಿಕೆಗಳನ್ನು ಹೂಡಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭರವಸೆ ಕಳೆದುಕೊಂಡು ತಮ್ಮ ಹೂಡಿಕೆಗಳನ್ನು ವಾಪಾಸು ತೆಗೆದುಕೊಳ್ಳಲು ತೊಡಗಿದ್ದಾರೆ. ಇದು ಆರ್ಥಿಕ ಹಿಂಜರಿತವನ್ನ್ನು ಮತ್ತೂ ವೇಗಗೊಳಿಸುತ್ತಿದೆ. ಇದರಿಂದಾಗಿ ಕೈಗಾರಿಕಾ ವಲಯದಲ್ಲಿ ಮರುಹೂಡಿಕೆಗಳಾಗುತ್ತಿಲ್ಲ. ದೇಶದ ಬ್ಯಾಂಕುಗಳೂ ಕೂಡ ಬಂಡವಾಳ ಪೂರೈಸುವ ಸ್ಥಿತಿಯಲ್ಲಿ ಇಲ್ಲ. ಬದಲಿಗೆ ತಮ್ಮ ನಷ್ಟಗಳನ್ನು ಮರೆಮಾಚಿ ಅಸ್ತಿತ್ವ ಉಳಿಸಿಕೊಳ್ಳುವ, ನಷ್ಟದಲ್ಲಿರುವ ಬ್ಯಾಂಕುಗಳೊಂದಿಗೆ ಲಾಭದಲ್ಲಿರುವ ಬ್ಯಾಂಕುಗಳ ವಿಲೀನಗಳಂತಹ ಹಲವು ಸರ್ಕಸ್‌ಗಳಲ್ಲಿ ತೊಡಗಿವೆ.

ಟಾಟಾ ಮೋಟಾರ್ಸ್, ಮಹೀಂದ್ರ, ಬಜಾಜ್, ಅಶೋಕ್ ಲೈಲ್ಯಾಂಡ್, ಮಾರುತಿಯಂತಹ ಮೋಟಾರು ವಾಹನ ಕಂಪೆನಿಗಳು, ಲಾರ್ಸೆನ್ ಆ್ಯಂಡ್ ಟೂಬ್ರೋದಂತಹ ಬೃಹತ್ ನಿರ್ಮಾಣ ಮತ್ತು ಸಲಕರಣೆಗಳ ಕಂಪೆನಿಗಳು, ಪಾರ್ಲೆ ಜಿ, ಬ್ರಿಟಾನಿಯಾದಂತಹ ಬಿಸ್ಕಿಟ್ ಕಂಪೆನಿಗಳು, ಜವುಳಿ ಕೈಗಾರಿಕೆಗಳು, ಬಿಡಿಭಾಗಗಳ ಕೈಗಾರಿಕೆಗಳು ತೀವ್ರ ನಷ್ಟಗಳನ್ನು ದಾಖಲಿಸತೊಡಗಿವೆ. ಸಾವಿರಾರು ಕಾರ್ಮಿಕರು ಹಾಗೂ ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕೆಲವು ದಿನಗಳವರೆಗೆ ತಮ್ಮ ತಮ್ಮ ಘಟಕಗಳನ್ನು ಮುಚ್ಚಿ, ಲೇ ಆಫ್ ಎಂದು ಹೆಸರಿಸಿ ಉತ್ಪಾದನೆಯನ್ನೇ ಕಡಿತಗೊಳಿಸುತ್ತಿವೆ. ದೇಶಾದ್ಯಂತ ನೂರಾರು ಸಾವಿರಾರು ಕೈಗಾರಿಕೆಗಳು ಮುಚ್ಚಿಹೋಗುತ್ತಿರುವ, ಲಕ್ಷಾಂತರ ಕಾರ್ಮಿಕರು ಬೀದಿಗೆ ಬೀಳುತ್ತಿರುವ ಕಹಿ ವಾಸ್ತವದ ಸುದ್ದಿಗಳನ್ನು ಬಹಳಷ್ಟು ಸುದ್ದಿ ಮಾಧ್ಯಮಗಳಿಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಪ್ರಕಟಿಸಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಸರಕಾರಿ ಹಿಡಿತದ ಭಾರತೀಯ ರೈಲ್ವೆ, ಬಿಎಸ್ಸೆನ್ನೆಲ್, ತೈಲ ಮತ್ತು ನೈಸರ್ಗಿಕ ಅನಿಲ ನಿಗಮಗಳೂ ಸರಕಾರಿ ಕೃಪಾಪೋಷಿತ ಈ ಬಿಕ್ಕಟ್ಟಿನ ಸುಳಿಗೆ ಈಡಾಗಿವೆ. ಹೊಸ ಉದ್ಯೋಗ ಸೃಷ್ಟಿಯಾಗುವುದು ಹೋಗಲಿ, ಇದ್ದ ಉದ್ಯೋಗಗಳೇ ಇಲ್ಲವಾಗುತ್ತಿರುವುದು ಯುವ ಜನಸಮೂಹದಲ್ಲಿ ದಿಗಿಲಿಗೆ ಕಾರಣವಾಗಿದೆ.

ಮೋದಿ ಭಜನೆಯನ್ನೇ ಮಾಡುತ್ತಾ ಬಂದ ಹಲವರಿಗೆ ಪರಿಸ್ಥಿತಿಯ ಬಿಸಿ ತಟ್ಟತೊಡಗಿದೆ. ಈಗ ಮೊದಲಿನಂತೆ ಮೋದಿ ಭಜನೆಗೆ ದುಡ್ಡು ಹುಟ್ಟುತ್ತಿಲ್ಲ. ಇದೇ ಸಂದರ್ಭದಲ್ಲಿಯೇ ಕಾರ್ಪೊರೇಟು ವಲಯದಲ್ಲಿಯೂ ಭಾರೀ ತಲ್ಲಣಗಳೆದ್ದಿವೆ. ವ್ಯಾಪಾರೋದ್ಯಮಿ ಸಿದ್ಧಾರ್ಥ ಹೆಗ್ಡೆಯ ಆತ್ಮಹತ್ಯೆ ಇದಕ್ಕೊಂದು ಉದಾಹರಣೆಯಾಗಿದೆ. ಜೊತೆಗೆ ಬಜಾಜ್, ಇನ್ಫೋಸಿಸ್ ನಾರಾಯಣ ಮೂರ್ತಿ ಸೇರಿದಂತೆ ಹಲವು ಕಾರ್ಪೊರೇಟುಗಳು ಸರಕಾರ ಅಂಬಾನಿ, ಅದಾನಿಯಂತಹ ಕೆಲವೇ ಉದ್ಯಮಿಗಳಿಗೆ ಮಾತ್ರ ಮಣೆ ಹಾಕುತ್ತಾ ಉಳಿದವರನ್ನು ಕಡೆಗಣಿಸುವ ಕ್ರಮಗಳ ಬಗ್ಗೆ ಬಹಿರಂಗವಾಗಿಯೇ ಮಾತನಾಡತೊಡಗಿದ್ದಾರೆ. ಅಂದರೆ ಸರಕಾರವನ್ನು ಕೆಲವೇ ಉದ್ದಿಮೆಪತಿಗಳು ತಮ್ಮ ತೆಕ್ಕೆಗೆ ತೆಗೆದು ಕೊಂಡು ಇತರ ಉದ್ದಿಮೆ ಪತಿಗಳನ್ನು ಹೊಸಕಿಹಾಕುತ್ತಿರುವುದರ ವಿರುದ್ಧ ತಮ್ಮ ಅಸಮಾಧಾನಗಳನ್ನು ವ್ಯಕ್ತ ಪಡಿಸುತ್ತಾ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಹೆಣಗುತ್ತಿದ್ದಾರೆ. ಮೊದಲಿನಿಂದಲೂ ಭಾರೀ ಜಾಗತಿಕ ಕಾರ್ಪೊರೇಟುಗಳಿಗೆ ನಮ್ಮ ದೇಶದ ಎಲ್ಲಾ ರಂಗಗಳನ್ನೂ ತೆರೆದಿಡುತ್ತಾ ಬಂದಿದ್ದರಿಂದಾಗಿ ನಮ್ಮ ದೇಶ ಇಂದು ಭಾರೀ ಆರ್ಥಿಕ ಕುಸಿತದತ್ತ ಸಾಗುತ್ತಿದೆ. ಅದರ ಪರಿಣಾಮಗಳನ್ನೇ ನಾವೀಗ ಅನುಭವಿಸುತ್ತಿರುವುದು. ಇದೇ ಸಂದರ್ಭದಲ್ಲಿಯೇ ಕಾಶ್ಮೀರದ ಸಮಸ್ಯೆ ಬಗ್ಗೆ ಹುಸಿ ಭಾವಾವೇಶಗಳನ್ನು ಬಡಿದೆಬ್ಬಿಸಲಾಗಿದೆ. ಜೊತೆಗೆ ಪಾಕಿಸ್ತಾನದೊಂದಿಗೆ ಯುದ್ಧ ಭೀತಿಯನ್ನು ಹರಡಲಾಗುತ್ತಿದೆ. ಅದರ ಮೂಲಕ ಜನಸಾಮಾನ್ಯರು, ಯುವಜನರು ಸರಕಾರದ ವಿಫಲತೆಗಳು ಮತ್ತು ಆರ್ಥಿಕ ಹಿಂಜರಿತ ಮತ್ತದರ ಪರಿಣಾಮಗಳ ಬಗ್ಗೆ ಚಿಂತನೆಗೆ ಹೊರಳದಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಜೊತೆಗೆ ಈಗ ಮುಚ್ಚುತ್ತಿರುವ ವ್ಯಾಪಾರೋದ್ಯಮಗಳ ಜಾಗದಲ್ಲಿ ಉಂಟಾಗುವ ಅವಕಾಶಗಳನ್ನು ಕೂಡ ವಿದೇಶಿ ಹೂಡಿಕೆದಾರರು ಆಕ್ರಮಿಸಿಕೊಳ್ಳಲು ಅನುವಾಗುವಂತೆ ವಿದೇಶಿ ನೇರಹೂಡಿಕೆಯ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ.

ಈಗ ಹರಡುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರವಾಗಿ ವಿದೇಶಿ ನೇರಹೂಡಿಕೆಗಳ ಮಿತಿಯನ್ನು ಸಡಿಲಿಸಿ ಚಿಲ್ಲರೆ, ರಕ್ಷಣೆ ಹಾಗೂ ಇನ್ನಿತರ ರಂಗಗಳಲ್ಲಿ ವಿದೇಶಿ ನೇರ ಹೂಡಿಕೆಯ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ವಾಣಿಜ್ಯ ಮಂತ್ರಿ ಪಿಯೂಶ್ ಗೋಯಲ್ ಇತ್ತೀಚೆಗೆ ಹೇಳಿದ್ದಾರೆ. ಅಂದರೆ ಭಾರತದ ಈಗಿನ ಆರ್ಥಿಕ ಹಿಂಜರಿಕೆಯ ಕಾರಣಕರ್ತರಲ್ಲಿ ಪ್ರಮುಖವಾಗಿರುವ ವಿದೇಶಿ ನೇರ ಹೂಡಿಕೆದಾರರಿಗೆ ಅದೇ ನೆಪದಲ್ಲಿ ದೇಶದ ಮತ್ತಷ್ಟು ಅವಕಾಶಗಳನ್ನು ತೆರೆದಿಡಲಾಗುತ್ತಿದೆ. ಇದು ಭಾರತ ದೇಶವನ್ನು ಯಾವ ಮಟ್ಟದ ಪ್ರಪಾತಕ್ಕೆ ಇಳಿಸಬಹುದೆನ್ನುವುದನ್ನು ಸಹಜವಾಗಿ ಊಹಿಸಿಕೊಂಡರೂ ಯಾರಿಗಾದರೂ ಅರ್ಥವಾದೀತು. ಯುದ್ಧ ಸನ್ನಿ ಇಲ್ಲವೇ ಸಮೂಹಸನ್ನಿಗೆ ಜನಸಾಮಾನ್ಯರು ಈಡಾಗದೆ ಈ ವಾಸ್ತವಗಳನ್ನು ಅರಿತು ತಮ್ಮ ಹೆಜ್ಜೆಗಳನ್ನಿಡದಿದ್ದರೆ ಅಪಾಯ ಭೀಕರವಾಗಬಹುದು.

ಮಿಂಚಂಚೆ: nandakumarnandana67gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)