varthabharthi

ವೈವಿಧ್ಯ

ಮಾಯಾವತಿ: ಭಿನ್ನ ಹಾದಿ

ವಾರ್ತಾ ಭಾರತಿ : 4 Sep, 2019
ಝೈನಬ್ ಸಿಕಂದರ್

ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಪರಮೋಚ್ಚ ನಾಯಕಿ ಮಾಯಾವತಿ 2009ರಿಂದ ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಾ ಬಂದಿದ್ದಾರೆ ಮತ್ತು ಇದೇ ಅವಧಿಯಲ್ಲಿ ಅವರ ಪಕ್ಷವನ್ನು ಬಲಪಡಿಸಿದವರೇ, ಅವರನ್ನು ಅಧಿಕಾರಕ್ಕೆ ತಂದವರೇ, ಅವರನ್ನು ಹಾಗೂ ಅವರ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿದರು: ಅವರು ಅಧಿಕಾರಕ್ಕೆ ಬರುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದ ಬ್ರಾಹ್ಮಣರು. 1990ರ ದಶಕದಲ್ಲಿ ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಮುಲಾಯಂಸಿಂಗ್ ಯಾದವ್ ಮತ್ತು ಯುಪಿಯಲ್ಲಿ ಅವರ ಪ್ರಾಬಲ್ಯವನ್ನು ಸದೆ ಬಡಿಯಲು ಬಿಜೆಪಿ, ಮಾಯಾವತಿಯವರ ನೆರವಿಗೆ ಬಂದು, ಅಲ್ಲಿಯ ಬ್ರಾಹ್ಮಣರ ಮತಗಳು ಅವರಿಗೆ ದೊರಕುವಂತೆ ತಂತ್ರ ರೂಪಿಸಿತು.

2003ರಲ್ಲಿ ಬಿಜೆಪಿ ಅವರ ಒಂದು ವರ್ಷ ಅವಧಿಯ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದೆೆಗೆದುಕೊಂಡಾಗ, ಮಾಯಾವತಿ ತನ್ನದೇ ನೆಲೆಯಲ್ಲಿ ಓರ್ವ ಜನನಾಯಕಿಯಾಗಿ ಬೆಳೆದಿದ್ದರು; ಹಾಗೂ ತನ್ನ ಮತದಾರರನ್ನು ಕಳೆದುಕೊಳ್ಳುವ ಆತಂಕವಿಲ್ಲದೆ ತಾನೇ ತಾನಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಹಂತಕ್ಕೆ ಏರಿದ್ದರು. ಮುಂದಿನ ಕೆಲವು ವರ್ಷಗಳಲ್ಲಿ ಅವರು ಬ್ರಾಹ್ಮಣ ಸಮುದಾಯವನ್ನು ನೇರವಾಗಿ ತಲುಪಿ, 2007ರ ಚುನಾವಣೆಯಲ್ಲಿ ಭಾರೀ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದು ಐದು ವರ್ಷಳ ಅವಧಿಯನ್ನು ಪೂರ್ಣಗೊಳಿಸಿದರು.

ಆದರೆ ಮಾಯಾವತಿಯವರಿಗೆ ಮ್ಯಾಜಿಕ್‌ನಂತೆ ಕೆಲಸ ಮಾಡಿದ ಈ ದಲಿತ - ಬ್ರಾಹ್ಮಣ ಜಾತಿ ಮಿಶ್ರಣ ಮಂತ್ರ ದೀರ್ಘ ಕಾಲ ಫಲ ನೀಡಲಿಲ್ಲ. ಕ್ರಮೇಣ ದಲಿತರು ಹಾಗೂ ಬ್ರಾಹ್ಮಣರು ಇಬ್ಬರೂ ಬೆಹನ್‌ಜಿಯಿಂದ ಭ್ರಮನಿರಸನಗೊಂಡರು. ಸಮುದಾಯಗಳಾಗಿ, ದಲಿತರ ಹಾಗೂ ಅವರ ಕಾಳಜಿಗಳು, ಗುರಿಗಳು ಪರಸ್ಪರ ಒಂದಕ್ಕೊಂದು ವಿರುದ್ಧವಾಗಿದ್ದವು.

ಬಿಎಸ್ಪಿ ನಾಯಕಿಯ ವ್ಯಸನ

ಭಾರತದ ಬೃಹತ್ತಾದ ಜಾತಿ ಸಮಸ್ಯೆ, ಜಾತಿ ವಾದ, ರಾಜಕೀಯ ಅಧಿಕಾರ ದಂಡದಿಂದ ಪರಿಹಾರವಾಗಲಾರದು. ಇದನ್ನು ಪರಿಹರಿಸಲು, ಪರಂಪರೆಗಳ ಹೆಸರಿನಲ್ಲಿ ಹಲವಾರು ಭಾರತೀಯರು ಇಂದಿಗೂ ತಮಗೆ ಆಪ್ತವಾಗಿ ಇಟ್ಟು ಕೊಂಡಿರುವ ಓಬೀರಾಯನ ಕಾಲದ ಯೋಚನೆಗಳಲ್ಲೇ, ಯೋಚನಾ ವಿಧಾನದಲ್ಲೇ ಬದಲಾವಣೆಯಾಗಬೇಕಾಗುತ್ತದೆ. ಇದನ್ನು ಒಂದು ಸಾಮಾಜಿಕ ಚಳವಳಿಯ ಮೂಲಕ ಮಾತ್ರ ಸಾಧ್ಯವಾಗಿಸಬಹುದು.

ಒಮ್ಮೆ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ರವರು ಮಾಯಾವತಿಯವರನ್ನು ‘‘ಪ್ರಜಾಪ್ರಭುತ್ವದ ಒಂದು ಪವಾಡ’’ ಎಂದು ವರ್ಣಿಸಿದ್ದರು. ಆದರೆ ಪ್ರಧಾನಿಯಾಗಬೇಕೆನ್ನುವ ಅವರ ವ್ಯಸನವೇ ಅವರನ್ನು, ಅವರು ಬಿಎಸ್ಪಿ ಸ್ಥಾಪಕ ಕಾನ್ಶಿರಾಮ್‌ರವರಿಂದ ಪಡೆದಿದ್ದ ಮೂಲ ದರ್ಶನ (ವಿಜನ್)ದಿಂದಲೇ ದೂರವಾಗಿಸಿತು. ಬಹುಜನ ಸಮಾಜವನ್ನು ಮೇಲಕ್ಕೆ ತಂದು ಅದನ್ನು ಸಬಲೀಕರಿಸುವುದೇ ಆ ಮೂಲ ದರ್ಶನವಾಗಿತ್ತು.

ಇದನ್ನು ಸಾಕಾರಗೊಳಿಸಲು ರಾಜಕೀಯ ಅಧಿಕಾರದ ಸಹಾಯ ಬೇಕು. ಆದರೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟ ಪರಿಣಾಮವಾಗಿ ಮಾಯಾವತಿ ತನ್ನ ಆದ್ಯತೆಗಳನ್ನು ಬದಲಾಯಿಸಿಕೊಂಡರು. ಜಾತಿ ಕಾರ್ಡ್‌ನ್ನು ಬಳಸಿ ತನ್ನ ಕನಸನ್ನು ನನಸಾಗಿಸಲು ಪ್ರಯತ್ನಿಸಿದರು.

ತನ್ನ ಸಾರ್ವಜನಿಕ ಭಾಷಣಗಳನ್ನು ‘‘ಮೈ ಚಮಾರ್ ಕೀ ಬೇಟಿ ಹೂಂ’’( ನಾನು ಚಮಾರ್‌ನ ಮಗಳು) ಎಂದೇ ಯಾವಾಗಲೂ ಆರಂಭಿಸುತ್ತಿದ್ದ ಹೆಂಗಸನ್ನು ಈಗ ದಲಿತ ಸಮುದಾಯವು ಆಕೆಯ ಪಕ್ಷದೊಳಗೆ ಬ್ರಾಹ್ಮಣರು ನುಸುಳಿಕೊಳ್ಳಲು ಅವಕಾಶ ಮಾಡಿಕೊಟ್ಟವಳು ಎಂದು ಪರಿಗಣಿಸುತ್ತಿದೆ. ಆ ಮೂಲಕ ಆಕೆ ದಲಿತ ಚಳವಳಿಯ ತೀವ್ರತೆಯನ್ನು ಕಡಿಮೆ ವಾಡಿದಾಕೆ ಎಂದು ಅದಕ್ಕೆ ಅನ್ನಿಸುತ್ತಿದೆ.

ಮಾಯಾವತಿಯನ್ನು ಮೀರಿಸುವ ಆಝಾದ್

ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್ ಮಾಯಾವತಿಯವರನ್ನು ಹಿಂದಕ್ಕೆ ತಳ್ಳಿ ಮುಂದೆ ಬರಲು ದಲಿತರ ಈ ಅನಿಸಿಕೆಯೇ ಮುಖ್ಯ ಕಾರಣವಾಗುತ್ತಿದೆ.

ಸಹ್ರಾನ್‌ಪುರದ ಮೂಲೆಮೂಲೆಯಲ್ಲಿ ‘‘ಹಮೇ ಇಸ್ ದೇಶಕಾ ಶಾಸಕ್ ಬನ್ನಾ ಹೈ’’(ನಾವು ಈ ದೇಶವನ್ನು ಆಳುವವರಾಗಬೇಕು) ಎಂಬ ಭಿತ್ತಿ ಪತ್ರಗಳು ರಾರಾಜಿಸುವುದರೊಂದಿಗೆ ಆಝಾದ್ ದಲಿತರನ್ನು ಭಾರತದ ರಾಜಕಾರಣಲ್ಲಿ ಪ್ರಮುಖ ಶಕ್ತಿಯಾಗಿ ಮಾಡಿದ್ದಾರೆ.

ಆಝಾದ್‌ರವರು ಅಂಬೇಡ್ಕಕರ್‌ವರ ‘‘ಶಿಕ್ಷಣ ನೀಡಿ, ಸಂಘಟನೆ ಮಾಡಿ, ಚಳವಳಿ ಮಾಡಿ’’ ಎಂಬ ಮೂರು ಮುಖ್ಯ ವಿಚಾರಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಇದಕ್ಕಾಗಿ 1,000 ಭೀಮ್ ಆರ್ಮಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಈ ಶಾಲೆಗಳು ದಲಿತ ಮಕ್ಕಳಿಗೆ ಅವರ ಜಾತಿ ಅಸ್ಮಿತೆಯನ್ನು ಹೆಮ್ಮೆಯಿಂದ ಒಪ್ಪಿಕೊಳ್ಳಲು ಅವರ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಹಾಗೂ ತಮ್ಮ ಹಕ್ಕುಗಳ ಸ್ಥಾಪನೆಗಾಗಿ ತಮ್ಮನ್ನೇ ಸಂಘಟಿಸಿಕೊಳ್ಳಲು ನೆರವಾಗುತ್ತವೆ. ಆಝಾದ್ ದೀರ್ಘಕಾಲದಿಂದ ಬದುಕಿರುವ ಜಾತಿವಾದ (ಜಾತೀಯತೆ) ಎಂಬ ಎತ್ತಿನ ಕೊಂಬುಗಳನ್ನು ಹಿಡಿದು ಅದನ್ನು ವುಣಿಸುವ ಪ್ರಯತ್ನ ಮಾಡುತ್ತಿದ್ದಾರೆ.

ದಲಿತರ ನಡುವೆ ಒಂದು ಹೊಸ ಒಲವನ್ನು ಸೃಷ್ಟಿಸುವುದರಲ್ಲೂ ಆಝಾದ್ ಮುಖ್ಯಪಾತ್ರ ವಹಿಸುತ್ತಿದ್ದಾರೆ. ಕೆಲವರು ಇದನ್ನು ‘ತಾಶನ್’ (ಸ್ಟೈಲ್) ಎಂದು ಕರೆಯಬಹುದು ಅವರು ಅದನ್ನು ‘ಗವ್ರ್’ (ಹೆಮ್ಮೆ) ಎಂದು ಕರೆಯುತ್ತಾರೆ.

  ದೇಶದ ಯುವ ಜನತೆಯ ನಡುವೆ ಜನಪ್ರಿಯರಾಗಲು, ಯಂಗ್ ಇಂಡಿಯಾದ ಮತ ಬ್ಯಾಂಕ್ ತಲುಪಲು ಅವರು ಪ್ರಯತ್ನಿಸುತ್ತಿದ್ದಾರೆ. ಮುಸ್ಲಿಂ ಯುವಕರು ಕೂಡ ಅವರನ್ನು ಹೊಸ ‘ಧಬಾಂಗ್’ ಆಗಿ ನೋಡುತ್ತಿದ್ದಾರೆ.

ದಲಿತ ಹಾಗೂ ಸಂತ್ರಸ್ತರಾದ ಸಮುದಾಯಗಳು ತೊಂದರೆಗೊಳಗಾದಲ್ಲಿ ಭೀಮ್ ಆರ್ಮಿಯ ಸದಸ್ಯರು ಹೊಸ ಕಾಲದ ರಾಬಿನ್‌ಹುಡ್‌ಗಳ ಹಾಗೆ ಅವರ ನೆರವಿಗೆ ಬೈಕ್‌ಗಳಲ್ಲಿ ಧಾವಿಸುತ್ತಾರೆ. ಕೆಲವೆ ಗಂಟೆಗಳೊಳಗಾಗಿ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಅವರ ನಾಯಕ ಆಝಾದ್ರನ್ನು ಮುಸ್ಲಿಮರು ತಮ್ಮ ಸಂಕಷ್ಟ ಕಾಲದಲ್ಲಿ ತಮಗೆ ನೆರವಾಗಲು ಓಡಿಬರುವ ತಮ್ಮ ರಕ್ಷಕನೆಂದು ಪರಿಗಣಿಸುತ್ತಿದ್ದಾರೆ.

ಆಝಾದ್ರವರ ಸಾಮಾಜಿಕ ಕ್ರಿಯಾಶೀಲತೆ ತುಂಬ ಪರಿಣಾಮಕಾರಿಯಾಗಿದ್ದು, ಅದನ್ನು ಉಪೇಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದಲೇ 2019ರ ಚುನಾವಣೆಗೆ ಮೊದಲು ಪ್ರಿಯಾಂಕಾಗಾಂಧಿ ಆಸ್ಪತ್ರೆಯೊಂದರಲ್ಲಿ ಅವರನ್ನು ಭೇಟಿಯಾದರು. ದಲಿತ ಮತ್ತು ಯುವಜನತೆಯ ರಾಜಕಾರಣದಲ್ಲಿ ಭಾರತದ ಹೊಸ ನಾಯಕನಾಗಿ ಆಝಾದ್ ಮೂಡಿ ಬಂದರೆ ಆಶ್ಚರ್ಯವಿಲ್ಲ.

ಕೃಪೆ: theprint.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)