varthabharthi

ನಿಮ್ಮ ಅಂಕಣ

ಆಡಿನ ಆರ್ತನಾದ ಐತಪ್ಪ ಮಾಸ್ಟ್ರ ಹೃದಯ ತಟ್ಟಿದಾಗ...!

ವಾರ್ತಾ ಭಾರತಿ : 4 Sep, 2019
ರಶೀದ್ ವಿಟ್ಲ.

ಕಾನತ್ತಡ್ಕ ಶ್ರೀಕೃಷ್ಣ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಳವಾದ ಬಾವಿಗೆ ಸೆ.3ರಂದು ಸಂಜೆ ನೆರೆಮನೆಯ ಡಿ.ಕೆ.ಹಾಜಿಯವರ ಆಡೊಂದು ಬಿತ್ತು.

ಆಡು ಜೀವನ್ಮರಣದ ಭೀತಿಯಿಂದ ಅರಚುತ್ತಿತ್ತು. ಆಡಿನ ಕೂಗು ಕೇಳಿದ ಶಾಲೆಯ ಶಿಕ್ಷಕ ಐತಪ್ಪ ನಾಯ್ಕ್ ಹಿಂದೆ ಮುಂದೆ ನೋಡದೆ ಬಾವಿಗಿಳಿದರು. ನೆರೆಮನೆಯವರ ಸಹಕಾರದಿಂದ ಆಡನ್ನು ಸಂಕಷ್ಟದಿಂದ ಪಾರು ಮಾಡಿದರು. ಬಾವಿಗಿಳಿದು ಗೊತ್ತಿಲ್ಲದ ಐತಪ್ಪ ಮಾಸ್ಟ್ರಿಗೆ ಈ ಸಂದರ್ಭ ತರಚಿದ ಗಾಯವಾಯಿತು.

ಈ ಕುರಿತು ಶಾಲೆಯ ಮುಖ್ಯ ಶಿಕ್ಷಕರಾದ ವಿಶ್ವನಾಥ ಮಾಸ್ಟ್ರು "ಅಯ್ಯೋ ಗಾಯವಾಯ್ತಲ್ಲಾ?" ಎಂದು ಹೇಳಿದಾಗ ಐತಪ್ಪ ಮಾಸ್ಟ್ರು "ಪರವಾಗಿಲ್ಲ ಸರ್, ಪಾಪ ಆಡು ಬದುಕಿತಲ್ಲಾ..." ಅಂತ ಉತ್ತರಿಸಿದರು. "ಆಡು ಜೀವನ್ಮರಣ ಹೋರಾಟದಲ್ಲಿ ಶಾಲಾ ಬಾವಿಯೊಳಗೆ ತನ್ನನ್ನು ರಕ್ಷಿಸಲು ಮೊರೆಯಿಟ್ಟು ಕೂಗಿದಾಗ ಅದರ ಧ್ವನಿ ನನ್ನ ಹೃದಯಕ್ಕೆ ತಟ್ಟಿತು. ಬಾವಿಗೆ ಇಳಿದು ಅಭ್ಯಾಸ ಇರುವವರು ಯಾರೂ ಹತ್ತಿರ ಇಲ್ಲದೇ ಇದ್ದುದರಿಂದ, ಈಜಾಡಲು ತಿಳಿದಿದ್ದರಿಂದ ಬಾವಿಗಿಳಿದು ಆಡಿನ ಜೀವ ಉಳಿಸುವ  ಕಾರ್ಯವನ್ನು ನಾನು ಮಾಡಿದ್ದೇನಷ್ಟೆ. ಆಡಿನ ಜೀವದೆದುರು ನನಗಾದ ತರಚಿದ ಗಾಯಗಳು ಗೌಣ" ಎನ್ನುತ್ತಾರೆ ಐತಪ್ಪ ಮಾಸ್ಟ್ರು.

ಶಿಕ್ಷಕ ಪುಸ್ತಕಕ್ಕೆ ಸೀಮಿತವಲ್ಲ, ಮಾನವೀಯತೆಯಲ್ಲೂ ಶಿಕ್ಷಣವಿದೆ ಎಂದು ತೋರಿಸಿಕೊಟ್ಟಿದ್ದಾರೆ ಕಾನತ್ತಡ್ಕ ಶಾಲೆಯ ಐತಪ್ಪ ಸರ್. ಇಂತಹ ವ್ಯಕ್ತಿತ್ವ ಮತ್ತು ಅನುಕಂಪದ ಘಟನೆಗಳು ಅಪರೂಪಕ್ಕೆ ಅಲ್ಲೊಮ್ಮೆ ಇಲ್ಲೊಮ್ಮೆ ನಡೆಯುವುದರಿಂದಲೇ ಸಮಯಕ್ಕೆ ಸರಿಯಾಗಿ ಮಳೆ-ಬೆಳೆ ಆಗುತ್ತದೆ ಎಂದು ಹಿರಿಯರು ಹೇಳಿದ್ದು ನೆನಪಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)