varthabharthi

ನಿಮ್ಮ ಅಂಕಣ

ಹಸಿದ ಹೊಟ್ಟೆಗೆ ಅನ್ನ ನೀಡಲು ನಿಮ್ಮ ಚಾಣಾಕ್ಷತೆ ತೋರಿಸಿ

ವಾರ್ತಾ ಭಾರತಿ : 4 Sep, 2019
-ಕೆ.ಎಸ್.ನಾಗರಾಜ್, ಹನುಮಂತನಗರ, ಬೆಂಗಳೂರು

ಮಾನ್ಯರೇ,
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾರನ್ನು ‘‘ಆಧುನಿಕ ಚಾಣಾಕ್ಷರು’’ ಎಂದು ನಮ್ಮ ಮಾಧ್ಯಮದ ಮಿತ್ರರು ಹಾಡಿ ಹೊಗಳುತ್ತಿದ್ದಾರೆ. ಇಲ್ಲಿಯ ತನಕ ಅವರ ಚಾಣಾಕ್ಷತನ ವಿರೋಧ ಪಕ್ಷದ ಸರಕಾರಗಳನ್ನು ಉರುಳಿಸುವುದಕ್ಕೆ, ವಿರೋಧ ಪಕ್ಷದ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ, ವಿರೋಧ ಪಕ್ಷದ ನಾಯಕರ ವಿಶ್ವಾಸವನ್ನು ಕುಗ್ಗಿಸುವ ಸಲುವಾಗಿ ಸಂವಿಧಾನಾತ್ಮಕ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ, ಸರಕಾರದ ತಪ್ಪುಗಳ ವಿರುದ್ಧ ಮಾತುಗಳನ್ನಾಡುವವರನ್ನು ‘ದೇಶ ದ್ರೋಹಿಗಳು’ ಎಂಬ ಹಣೆಪಟ್ಟಿಯನ್ನು ಕಟ್ಟಿ ಅಪಮಾನಗೊಳಿಸಲು ಮಾತ್ರವೇ ಬಳಕೆಯಾಗಿದೆ. ಭಾವನಾತ್ಮಕವಾದ ವಿಚಾರಗಳನ್ನು ಮಾತ್ರ ಬಳಸಿಕೊಂಡು ಜನರ ಭಾವನೆಗಳೊಂದಿಗೆ ಆಟವಾಡುತ್ತಾ, ತಮ್ಮ ಪಕ್ಷವನ್ನು ಳೆಸಿಕೊಳ್ಳುವಲ್ಲಿ ತಮ್ಮ ಚಾಣಾಕ್ಷತನವನ್ನು ಉಪಯೋಗಿಸುತ್ತಿರುವ ಮೋದಿ-ಶಾ, ಈಗ ತಮ್ಮ ಚಾಣಾಕ್ಷತನವನ್ನು ದೇಶದ ಅಭಿವೃದ್ಧಿಗೆ ಬಳಸಬೇಕಾಗಿದೆ. 70 ವರ್ಷದ ಇತಿಹಾಸದಲ್ಲಿ ಹಿಂದೆಂದೂ ಇರದ ರೀತಿಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದನ್ನು ಸುಧಾರಿಸುವಲ್ಲಿ ನಿಮ್ಮ ಚಾಣಾಕ್ಷತನ ಬೇಕಾಗಿದೆ. ಪ್ರತಿ ದಿನ ಲಕ್ಷಾಂತರ ಉದ್ಯೋಗಗಳು ಮಾಯವಾಗುತ್ತ ನಿರುದ್ಯೋಗಿಗಳ ಸಂಖ್ಯೆ ಹಲವಾರು ಕೋಟಿಗಳನ್ನು ದಾಟಿ ನಿಂತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಶತಕ ಭಾರಿಸುವತ್ತ ಸಾಗುತ್ತಿದೆ. ಪ್ರತಿ ದಿನ ಸಾವಿರಾರು ಕೈಗಾರಿಕೆಗಳು ಬಾಗಿಲು ಹಾಕಿಕೊಳ್ಳುತ್ತಿದೆ. ರಫ್ತು ಉದ್ಯಮ ಪಾತಾಳ ಸೇರಿ, ಹಲವಾರು ಆಯಾಮಗಳಲ್ಲಿ ದೇಶ ಸಂಕಷ್ಟಕ್ಕೆ ಸಿಲುಕಿದೆ. ಕೆಟ್ಟ ಆರ್ಥಿಕ ನೀತಿ ಮತ್ತು ಕೆಟ್ಟ ತೆರಿಗೆ ನೀತಿಗಳಿಂದಾಗಿ ವಿದೇಶಿ ಬಂಡವಾಳ ಹರಿದು ಬರುವಲ್ಲಿ ವಿಫಲವಾಗಿದೆ. ಈ ಎಲ್ಲವುಗಳನ್ನೂ ಮತ್ತೆ ಹಳಿಗೆ ತರಲು ನಿಮ್ಮ ಚಾಣಾಕ್ಷತನವನ್ನು ತೋರಿಸಬೇಕಾಗಿದೆ. ಸಿಬಿಐ, ಈಡಿ, ಆದಾಯ ತೆರಿಗೆ ಮುಂತಾದ ತನಿಖಾ ಸಂಸ್ಥೆಗಳ ದುರುಪಯೋಗ ಮಾಡಿಕೊಂಡು ತಮ್ಮ ವಿರುದ್ಧದ ಧ್ವನಿಗಳನ್ನು ನಿಗ್ರಹಿಸುವುದನ್ನು ಬಿಟ್ಟು, ದೇಶವನ್ನು ಮತ್ತಷ್ಟು ದಿವಾಳಿ ಮಾಡದೆ ನಿಮ್ಮ ಎಲ್ಲಾ ಗಮನವನ್ನು ಕೆಲವು ತಿಂಗಳ ಕಾಲವಾ ದರೂ ಜನರ ಕೈಗೆ ಉದ್ಯೋಗ ನೀಡುವ, ಹಸಿದ ಹೊಟ್ಟೆಗೆ ಊಟ ನೀಡುವ, ಸಾಲದ ಸುಳಿಯಲ್ಲಿ ಸಿಲುಕಿ ಸಾಯುತ್ತಿರುವ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ನಿಜವಾದ ಚಾಣಾಕ್ಷರು ಎನಿಸಿಕೊಳ್ಳಿ. ದಮನಕಾರಿ ರಾಜಕಾರಣದ ಚಾಣಾಕ್ಷತನ ಈ ಜಗತ್ತಿನಲ್ಲಿ ಹೆಚ್ಚು ದಿನಗಳ ಕಾಲ ಉಳಿದುಕೊಂಡಿಲ್ಲ. ಹಲವಾರು ಮಂದಿ ಇಂತಹ ಮನೋಭಾವದ ಜನ ನಮ್ಮ ಚರಿತ್ರೆಯಲ್ಲಿ ಬಂದು ಹೋಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)