varthabharthi

ನಿಮ್ಮ ಅಂಕಣ

ಇಂದು ಶಿಕ್ಷಕರ ದಿನಾಚರಣೆ ಶಿಕ್ಷಕರಾಗುವುದೆಂದರೆ...

ವಾರ್ತಾ ಭಾರತಿ : 5 Sep, 2019
ಡಾ. ಜಗನ್ನಾಥ ಕೆ. ಡಾಂಗೆ, ಸಿದ್ದರಾಜು

ಪ್ರಪಂಚದಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಗುರಿಗಳನ್ನು ಸಾಧಿಸುವುದರ ಮೂಲಕ ಸಂತೋಷ ಪಡುತ್ತಾರೆ, ಆದರೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದರ ಮೂಲಕ ಬೇರೆಯವರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಾಣುವ ಸಮಾಜದ ಹಿತವನ್ನು ಬಯಸುವ, ಮನುಕುಲದ ಉದ್ಧಾರಕ್ಕಾಗಿ ತನ್ನ ಇಡೀ ಜೀವನದ ಸಂಪೂರ್ಣ ಸಮಯವನ್ನು ಮೀಸಲಿಡುವ ಏಕೈಕ ವ್ಯಕ್ತಿಯೆಂದರೆ ಶಿಕ್ಷಕ. ಶಿಕ್ಷಕನಿಗೆ ಶಿಕ್ಷಕನೇ ಸರಿಸಾಟಿ ಏಕೆಂದರೆ ಎಲ್ಲರನ್ನು ಅಂದರೆ ಡಾಕ್ಟರ್, ಇಂಜಿನಿಯರ್, ಲಾಯರ್, ವಿಜ್ಞಾನಿ ಮತ್ತು ಉತ್ತಮ ನಾಗರಿಕರನ್ನು ರೂಪಿಸುವವನೇ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಯಶಸ್ಸಿನಲ್ಲಿ ತನ್ನ ಯಶಸ್ಸನ್ನು ಮನಗಂಡು ತೃಪ್ತಿಯನ್ನು ಹೊಂದುವವನೇ ಶಿಕ್ಷಕ.

ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಶಿಕ್ಷಕರು ಜಾತಿ, ಧರ್ವ, ಲಿಂಗ, ಭಾಷೆ, ಪ್ರಾಂತದ ಆಧಾರದ ಮೇಲೆ ಜನರನ್ನು ಬೇರ್ಪಡಿಸುವ ವಿಚಾರಗಳನ್ನು ತರಗತಿಯಲ್ಲಿ, ಶಾಲಾ ಕಾಲೇಜುಗಳಲ್ಲಿ ಪಸರಿಸುತ್ತಿರುವುದು ಬೇಸರದ ಸಂಗತಿ.ಹಾಗಾದರೆ, ಆದರ್ಶ ಶಿಕ್ಷಕ ಎಂದರೆ ಯಾರು? ಎನ್ನುವ ಪ್ರಶ್ನೆ ಉದ್ಭವಿಸುವುದುಂಟು, ಎಲ್ಲಾ ಜಾತಿ ಧರ್ಮಗಳನ್ನು ಮೀರಿದ, ಕಲಿಸುವಿಕೆ ಮತ್ತು ಕಲಿಯುವಿಕೆಯಲ್ಲಿ ಆಸಕ್ತಿ ಮತ್ತು ಸಾಮರ್ಥ್ಯಗಳನ್ನು ಹೊಂದಿರುವ, ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೆ, ತಾಳ್ಮೆಯ ಮನೋಭಾವವಿರುವ, ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಅನುಸರಿಸಿಕೊಂಡು, ಉತ್ತಮ ಜ್ಞಾನಧಾರೆಯ ಜೊತೆಗೆ, ವಿದ್ಯಾರ್ಥಿಗಳ ಬಗ್ಗೆ ಪ್ರೀತಿಯನ್ನು ಹೊಂದಿರುವ, ನಾವೆಲ್ಲರೂ ಒಂದೇ, ಎಲ್ಲರೂ ಸಮಾನರು ಎನ್ನುವ ನೆಲೆಗಟ್ಟಿನಲ್ಲಿ, ವೃತ್ತಿಯಲ್ಲಿ ಬೆಳೆಯುವುದರೊಂದಿಗೆ, ಇತರರ ಆಮಿಷಗಳಿಗೆ ಒಳಪಡದೆ, ತನ್ನ ಕೆಲಸವನ್ನು ಸಮರ್ಪಕವಾಗಿ, ಅವಧಿಗನುಗುಣವಾಗಿ, ಪರಿಣಾಮಕಾರಿಯಾಗಿ ನಿರ್ವಹಿಸುವ, ವಿದ್ಯಾರ್ಥಿಗಳಲ್ಲಿ ಮಾನವೀಯ, ನೈತಿಕ, ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಿ, ಉತ್ತಮ ನಾಗರಿಕನನ್ನಾಗಿ ಮಾಡುವವನೇ ನಿಜವಾದ ಆದರ್ಶ ಶಿಕ್ಷಕ.

ಶಿಕ್ಷಕರಾಗುವುದೆಂದರೆ ಬರೀ ತರಬೇತಿ ಪಡೆಯುವುದಲ್ಲ, ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಕೆಯೂ ಅಲ್ಲ. ಶಿಕ್ಷಕ ವೃತ್ತಿಯ ಪದವಿ ಪಡೆದೊಡನೆ ಅಥವಾ ಶಿಕ್ಷಕ ತರಬೇತಿ ಪಡೆದ ಎಲ್ಲರೂ ಶಿಕ್ಷಕರಾಗಲು ಸಾಧ್ಯವಿಲ್ಲ, ವಿದ್ಯಾರ್ಥಿಗಳಿಗೆ, ಸಮುದಾಯಕ್ಕೆ ಮತ್ತು ಸಮಾಜಕ್ಕೆ ಉತ್ತಮ ಮಾರ್ಗವನ್ನು ತೋರಿಸುವ, ಸರಿ ತಪ್ಪುಗಳನ್ನು ತಿದ್ದಿ, ಮನುಕುಲದ ಅಭಿವೃದ್ಧಿಗೆ ಸ್ಪಷ್ಟ ಮುಂದಾಲೋಚನೆಯುಳ್ಳವನೇ ಶಿಕ್ಷಕ.

ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯವನ್ನು ನೀಡಿ, ಅವರ ಹಿನ್ನೆಲೆಯನ್ನು ಅರಿತು, ಅವರ ಕಲಿಕೆಗೆ ಸಹಾಯ ಮಾಡುವ, ಅವರ ಆಲೋಚನೆಗಳಿಗೆ ಮತ್ತು ಕನಸುಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವ, ಮಾನವೀಯ ನೆಲೆಗಟ್ಟಿನಲ್ಲಿ ಪೋಷಿಸುವ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸಮಗ್ರವಾಗಿ ಅರ್ಥಮಾಡಿಕೊಂಡು, ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸುವ ಕೆಲಸವೇ ಶಿಕ್ಷಕನ ಕೆಲಸವಾಗಿದೆ

ಸತ್ಯದ ಜೊತೆಗೆ ಶೋಧಿಸುವ ಮನೋಭಾವವಿರುವ, ನೀತಿ ನಿಯಮಗಳನ್ನು ಅನುಸರಿಸುವ, ಸಹೋದ್ಯೋಗಿಗಳೊಂದಿಗೆ ಭ್ರಾತೃತ್ವ ಭಾವನೆಯನ್ನು ಹೊಂದಿರುವ, ಸು-ಮನಸ್ಸುಳ್ಳ, ಎಲ್ಲರೂ ಇಷ್ಟಪಡುವಂತಹ ಉತ್ತಮ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಿರುವವನೇ ಮಾದರಿ ಶಿಕ್ಷಕನಾಗುವನು.

ಪ್ರತಿಯೊಬ್ಬ ವಿದ್ಯಾರ್ಥಿೂ ಒಂದಲ್ಲ ಒಂದು ರೀತಿಯ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾನೆ, ಆ ಸಾಮರ್ಥ್ಯವನ್ನು ಅರಿತು, ಹೊರತೆಗೆಯುವಂತಹ ಶಕ್ತಿ ಸಾಮರ್ಥ್ಯ ಶಿಕ್ಷಕನಿಗಿರಬೇಕು. ಜೊತೆಗೆ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಿ, ವಿದ್ಯಾರ್ಥಿಗಳ ಬೆಳವಣಿಗೆಗೆ ಕಾರಣನಾಗುವವನೇ ಶಿಕ್ಷಕ.

ಶಿಕ್ಷಕ ವೃತ್ತಿ ಎಂದರೆ ಬರೀ ವೃತ್ತಿಯಲ್ಲ, ಎಲ್ಲಾ ಜವಾಬ್ದಾರಿಗಳನ್ನು ಹೊತ್ತ ಆದರ್ಶ ಅಂಬಿಗನಂತೆ. ಸಮುದ್ರದಲ್ಲಿ ನಾವಿಕ ಹೇಗೆ ತನ್ನ ಪ್ರಯಾಣಿಕರನ್ನು ದಡ ಸೇರಿಸುವನೊ ಅದೇ ತರಹ ವಿದ್ಯಾರ್ಥಿಗಳ ಯಶಸ್ಸಿಗೆ ಶ್ರಮಿಸುವವನು.ವಿದ್ಯಾರ್ಥಿಗಳ ದೌರ್ಬಲ್ಯಗಳನ್ನು ಸೂಕ್ಷ್ಮ್ಮವಾಗಿ ಕಂಡು ಹಿಡಿದು, ಸೂಕ್ತ ಮಾರ್ಗದರ್ಶನ ನೀಡಿ, ಕಲಿಕೆಗೆ ಅಣಿಯಾಗುವಂತೆ ಮಾಡಬೇಕು.

ಶಿಕ್ಷಕನಿಗಿರಬೇಕಾದ ಉತ್ತಮ ಗುಣಲಕ್ಷಣಗಳೆಂದರೆ, ತಾಳ್ಮೆ, ಶಿಸ್ತು, ಸ್ನೇಹಪರತೆ, ವಾತ್ಸಲ್ಯ, ಸಮಯ ಪರಿಪಾಲನೆ, ಸಂಯಮ, ಗುಣಮಟ್ಟದ ಆಲೋಚನೆ, ಕಲಿಯುವ, ಕಲಿಸುವ ಮತ್ತು ಪರಿಹರಿಸುವ ಸಾಮರ್ಥ್ಯ, ವಿದ್ಯಾರ್ಥಿಗಳ ಬಗ್ಗೆ ಸಕಾರಾತ್ಮಕ ಮನೋಭಾವ, ಸಹೋದ್ಯೋಗಿಗಳೊಂದಿಗೆ ಬೆರೆಯುವ, ಅನುಸರಿಸಿಕೊಂಡು ಹೋಗುವ ಸ್ವಭಾವ, ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಸೃಜನಶೀಲತೆ, ವೈಜ್ಞಾನಿಕ ಮತ್ತು ವಿಶಾಲ ಮನೋಭಾವ, ಉತ್ತಮ ನಡತೆ, ಪ್ರಯೋಗಶೀಲತೆ, ಸಂಶೋಧನಾ ಮನೋಭಾವ, ವಿಚಾರವಂತಿಕೆ, ಸಮನ್ವಯತೆ, ಜಾಗತಿಕ ಸಮಸ್ಯೆ ಮತ್ತು ಸವಾಲುಗಳ ಅರಿವು, ಉತ್ತಮ ವಾತಾವರಣದ ಸೃಷ್ಟಿ ಮತ್ತು ವೃತ್ತಿಯಲ್ಲಿ ಬೆಳವಣಿಗೆ.

ತರಗತಿಯಲ್ಲಿ ವಿವಿಧ ನವೀನ ರೀತಿಯ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು, ವಿಚಾರವನ್ನು ತಿಳಿಸುವ, ಪಠ್ಯವನ್ನು ಅರ್ಥಪೂರ್ಣವಾಗಿ ಕಲಿಸುವುದರ ಜೊತೆಗೆ, ಪಠ್ಯೇತರ ಚಟುವಟಿಕೆಗಳಲ್ಲೂ ಸಾಧನೆ ಮಾಡುವಂತೆ ಪ್ರೇರೇಪಿಸುವ, ಆಸಕ್ತಿಯನ್ನು ಹೆಚ್ಚಿಸಿ, ಕಲಿಯುವಂತೆ ಮಾಡುವ, ಬೋಧನೆ ಮಾಡುವುದರ ಜೊತೆಗೆ ಜೀವನ ಕೌಶಲಗಳನ್ನು ಕಲಿಸುವ, ನಾಯಕತ್ವ ಗುಣಗಳನ್ನು ಬೆಳೆಸುವ, ಸಂವಿಧಾನಕ್ಕೆ ಗೌರವ ನೀಡುವುದರ ಜೊತೆಗೆ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ, ವಿದ್ಯಾರ್ಥಿಗಳ ಪ್ರಗತಿಯ ಜೊತೆಗೆ ತನ್ನ ಪ್ರಗತಿಯನ್ನು ಉನ್ನತೀಕರಿಸುವುದರ ಮೂಲಕ ಶಿಸ್ತನ್ನು ಕಲಿಸುವ, ಉತ್ತಮವಾದುದನ್ನು ಹೆಚ್ಚಿಸಿಕೊಳ್ಳುವ ಮೂಲಕ, ಸೂಕ್ತ ಮಾರ್ಗದರ್ಶನ ನೀಡಿ, ಸಲಹೆಗಳನ್ನು ಕೊಟ್ಟು ಜವಾಬ್ದಾರಿಯುತ ನಾಗರಿಕನನ್ನಾಗಿ ಮಾಡುವ ಕೆಲಸವೇ ಶಿಕ್ಷಕನ ಕೆಲಸ. ಇದನ್ನೆಲ್ಲಾ ಅರಿತು ದೇಶದ ಪ್ರಗತಿಯಾಗುವಂತೆ ನೋಡಿಕೊಳ್ಳುವವನೇ ಈ ದೇಶಕ್ಕೆ ಮತ್ತು ಇಡೀ ಮನುಕುಲಕ್ಕೆ ಬೇಕಾಗಿರುವ ಆದರ್ಶ ಶಿಕ್ಷಕ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)