varthabharthi

ವೈವಿಧ್ಯ

ಕುಸಿಯುತ್ತಿರುವ ಮೌಲ್ಯಗಳ ನಡುವೆ ಶಿಕ್ಷಕರ ಪಾತ್ರ

ವಾರ್ತಾ ಭಾರತಿ : 5 Sep, 2019
ನಾ ದಿವಾಕರ

 ಏಳು ದಶಕಗಳ ಆಧುನಿಕ ಪ್ರಪಂಚ ಪರ್ಯಟನೆಯ ನಂತರ ಚಂದ್ರಯಾನವನ್ನೂ ಕೈಗೊಂಡಿರುವ ಭಾರತ ಆರ್ಥಿಕವಾಗಿ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಲು ದಾಪುಗಾಲು ಹಾಕುತ್ತಿರುವಂತೆಯೇ ಸಾಮಾಜಿಕ ನೆಲೆಯಲ್ಲಿ ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಿರುವುದು ದುರಂತ ಎನಿಸಿದರೂ ಸತ್ಯ. ಚರಿತ್ರೆ ಮುನ್ನಡೆಗೆ ದಿಕ್ಸೂಚಿಯಾಗಬೇಕು, ಪರಂಪರೆ ಮುನ್ನಡೆಯ ಹಾದಿಯಲ್ಲಿ ಎದುರಾಗಬಹುದಾದ ಪಲ್ಲಟಗಳಿಗೆ ದಿಕ್ಸೂಚಿಯಾಗಬೇಕು, ಸಂಪ್ರದಾಯ ಭವಿಷ್ಯದ ನಿರ್ಮಾಣಕ್ಕೆ ತೊಡಕಾಗದಂತೆ ಅಂತರ ಕಾಪಾಡಿಕೊಳ್ಳುವ ವಿದ್ಯಮಾನವಾಗಬೇಕು. ಹಾಗಾದಲ್ಲಿ ಮಾತ್ರ ಸಮಕಾಲೀನ ಸಂದರ್ಭದ ಆಧುನಿಕತೆಗೂ ಒಂದು ಅರ್ಥ ಬರುತ್ತದೆ. ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆದ ನಂತರದಲ್ಲಿ ಸ್ವತಂತ್ರ ಭಾರತದ ಹೆಜ್ಜೆ ಗುರುತುಗಳಲ್ಲಿ ಇದರ ಸೂಕ್ಷ್ಮ ತಂತುಗಳನ್ನು ಗುರುತಿಸಬಹುದಾಗಿತ್ತು. ಇಂದು 21ನೆಯ ಶತಮಾನದ ಮೂರನೆಯ ದಶಕವನ್ನು ಪ್ರವೇಶಿಸುತ್ತಿರುವ ಭಾರತ ತನ್ನ ಗತವೈಭವದ ಭ್ರಮೆಯನ್ನೇ ನೈಜ ಇತಿಹಾಸವೆಂದು ಬಗೆದು ಪರಂಪರೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಹಿಂದಕ್ಕೆ ಚಲಿಸುತ್ತಿದೆ. ಚಂದ್ರಯಾನಕ್ಕೆ ಸಜ್ಜಾಗಲು ರಾಹುಕಾಲವನ್ನು ಗಮನಿಸುವ ಪ್ರವೃತ್ತಿಯನ್ನು ಇನ್ನು ಹೇಗೆ ವಿವರಿಸಲು ಸಾಧ್ಯ?
ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಮಾಜ ತನ್ನದೇ ಆದ ಪ್ರಭಾವಿ ವಲಯವನ್ನು ನಿರ್ಮಿಸಿಕೊಳ್ಳುತ್ತದೆ. ಆದರೆ ಮತಧರ್ಮಗಳ ಛಾಯೆಯಲ್ಲಿ, ಸಂಪ್ರದಾಯದ ಜಾಡಿನಲ್ಲಿ, ಕಲ್ಪಿತ ಪರಂಪರೆಯ ಗುಪ್ತವಾಹಿನಿಯಲ್ಲಿ ನಮ್ಮ ಸಾಮಾಜಿಕ ಅಭ್ಯುದಯ ಮತ್ತು ಭಾರತದ ಬಹು ಸಂಸ್ಕೃತಿಯ ಔನ್ನತ್ಯವನ್ನು ಅಲ್ಲಗಳೆಯುತ್ತಲೇ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಒಂದು ಇಡೀ ಪೀಳಿಗೆ ವೈಚಾರಿಕತೆಗೆ ವಿಮುಖವಾಗುತ್ತಿದೆ. ದೇವರು, ದೈವತ್ವ ಮತ್ತು ದೇವೋಪಾಸನೆಗಳ ನಡುವೆಯೇ ಒಂದು ವೈಚಾರಿಕ ತಳಹದಿಯನ್ನು ನಿರ್ಮಿಸುವ ಅದ್ಭುತ ಪರಂಪರೆಯನ್ನು ಭಾರತದ ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ ಕಾಣಬಹುದು. ಈ ಪರಂಪರೆಗಳೇ ಈ ದೇಶದ ಜಾತಿ ವ್ಯವಸ್ಥೆಯನ್ನು, ಶೋಷಕ ವೈದಿಕ ಸಂಸ್ಕೃತಿಯನ್ನು, ಊಳಿಗಮಾನ್ಯ ಧೋರಣೆಗಳನ್ನು ಖಂಡಿಸುತ್ತಾ ಬಂದಿದ್ದು ಸಮಾಜದಲ್ಲಿ ತುಳಿತಕ್ಕೊಳಗಾದವರ, ಬಹಿಷ್ಕೃತರಾದವರ, ದಮನಕ್ಕೊಳಗಾದವರ ದನಿಗೆ ದನಿಯಾಗಿ ನಡೆದು ಬಂದಿದೆ. ದುರಂತ ಎಂದರೆ ಈ ಪರಂಪರೆಗಳನ್ನು ಎತ್ತಿಹಿಡಿದು ಒಂದು ಪ್ರಬುದ್ಧ ಸಮಾಜವನ್ನು ರೂಪಿಸಬೇಕಾದ ನಿರ್ಣಾಯಕ ಘಟ್ಟದಲ್ಲೇ ಭಾರತೀಯ ಸಮಾಜವನ್ನು ಮತ್ತೊಮ್ಮೆ ಪ್ರಾಚೀನ ಅನಿಷ್ಟ ಧೋರಣೆಗಳತ್ತ ಕರೆದೊಯ್ಯಲಾಗುತ್ತಿದೆ. ವ್ಯವಸ್ಥಿತವಾಗಿ ಎಂದು ಹೇಳಬೇಕಿಲ್ಲ.
 ನವ ಉದಾರವಾದ ಮತ್ತು ಜಾಗತಿಕ ಮಾರುಕಟ್ಟೆ ಭಾರತದ ಯುವ ಪೀಳಿಗೆಯ ಮುಂದೆ ಹೊಸ ಜಗತ್ತೊಂದನ್ನು ತೆರೆದಿಟ್ಟಿದೆ. ಕುಳಿತಲ್ಲೇ ವಿಶ್ವದ ಎಲ್ಲ ವಿದ್ಯಮಾನಗಳನ್ನೂ ಒಮ್ಮೆಲೆ ಗ್ರಹಿಸುವ ಮಟ್ಟಿಗೆ ತಂತ್ರಜ್ಞಾನ ಪರಿಕರಗಳನ್ನು ಒದಗಿಸುತ್ತಿದೆ. ಡಿಜಿಟಲ್ ಯುಗದಲ್ಲಿ ಮಾನವನ ಪ್ರತಿಯೊಂದು ಕ್ರಿಯೆ ಪ್ರಕ್ರಿಯೆಯೂ ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಊಹಿಸಲೂ ಅಸಾಧ್ಯವಾದದ್ದನ್ನು ಕ್ಷಣಮಾತ್ರದಲ್ಲಿ ಪಡೆದುಕೊಳ್ಳುವಂತಹ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಅಂಬೆಗಾಲಿಡುತ್ತಾ ನಡೆಯುವುದನ್ನು ಕಲಿಯುವ ಮಗು ನಡೆವ ಮುನ್ನವೇ ತನ್ನ ಮುಂದಿರುವ ಪುಟ್ಟ ಮೊಬೈಲ್ ಪರದೆಯ ಮೇಲೆ ಬೆರಳಾಡಿಸುತ್ತಾ ತನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಅಪ್ಪ, ಅಮ್ಮನ ಕಿರುಬೆರಳು ಹಿಡಿದು ಅತ್ತಿತ್ತ ನೋಡುತ್ತಾ, ಎಡವುತ್ತಾ ಬೀಳುತ್ತಾ ನಡೆಯುವ ವಯಸ್ಸಿನಲ್ಲಿ ಮಕ್ಕಳು ಚಕ್ರಗಳ ಮೇಲೆ ಹೆತ್ತವರನ್ನೂ ಹೊತ್ತೊಯ್ಯುತ್ತಿರುವುದನ್ನು ನೋಡುತ್ತಿದ್ದೇವೆ. ಅಮ್ಮನ ಕೈರುಚಿಯ ಸವಿಯನ್ನು ಟಿವಿ ಪರದೆಯ ಮೇಲೆ ವಿಜೃಂಭಿಸುವ ಸಿದ್ಧ ಆಹಾರದ ಪೊಟ್ಟಣಗಳಲ್ಲಿಯೇ ಕಂಡುಕೊಳ್ಳುವ ಮಕ್ಕಳ ಯುಗದಲ್ಲಿ ಬದುಕು ಸಾಗಿಸುತ್ತಿದ್ದೇವೆ. ‘‘ಅಪ್ಪಾ ಅಪ್ಪಾ ನಂಗೆ ಅದು ಬೇಕಪ್ಪಾ’’ ಎನ್ನುವ ಕಂದಮ್ಮಗಳು ಇಂದು ಆನ್‌ಲೈನ್ ಬದುಕಿಗೆ ಅಂಟಿಕೊಂಡು ಮನೆಯ ಬಾಗಿಲಿಗೇ ಎಲ್ಲವನ್ನೂ ಬರುವಂತೆ ಮಾಡುತ್ತಿವೆ. ಹಣ ನೀಡುವುದೊಂದೇ ಅಪ್ಪನ/ಅಮ್ಮನ ಆಯ್ಕೆಯಾಗಿಬಿಡುತ್ತಿದೆ. ಬದಲಾವಣೆ ಅನಿವಾರ್ಯ ನಿಜ ಆದರೆ ಎಂತಹ ಬದಲಾವಣೆ?

ಇಲ್ಲಿ ಸಾಮಾಜಿಕ ಮೌಲ್ಯಗಳು ಪ್ರಧಾನವಾಗಿ ಕಾಣುತ್ತವೆ. ಒಂದು ಇಡೀ ಯುವ ಪೀಳಿಗೆ ದಿಕ್ಕರಿಯದ ಹಾದಿಯಲ್ಲಿ ನಡೆಯುತ್ತಿದೆ. ಇತ್ತ ಇತಿಹಾಸವನ್ನೂ ಗ್ರಹಿಸದೆ, ಅತ್ತ ಭಾರತದ ಬಹುಸಂಸ್ಕೃತಿಯ ಪರಂಪರೆಯನ್ನೂ ಅರಿಯದೆ, ಹಣಕಾಸು ಬಂಡವಾಳ ಸೃಷ್ಟಿಸಿರುವ ಭ್ರಮಾಲೋಕದ ದಟ್ಟ ಮೋಡಗಳಲ್ಲಿ ವಿಹರಿಸುವ ಮತಧರ್ಮಗಳ ಸುಂದರ ಚಿತ್ರಣಗಳ ನಡುವೆ ವಿಹರಿಸುತ್ತಿದೆ. ಧರ್ಮ ಮತ್ತು ಸಂಸ್ಕೃತಿಯ ನಡುವೆ ಇರುವ ಅಂತರವನ್ನು ಕಡಿಮೆ ಮಾಡುತ್ತಲೇ ಒಂದು ಹೊಸ ಜಗತ್ತನ್ನು ಸೃಷ್ಟಿಸುತ್ತಿರುವ ಮತೀಯ ಶಕ್ತಿಗಳು ಈ ಯುವ ಪೀಳಿಗೆಯನ್ನು ಭವ್ಯ ಭಾರತದ ಕಲ್ಪಿತ ಇತಿಹಾಸದ ಕಡಲಲ್ಲಿ ಸಂಚರಿಸುವಂತೆ ಮಾಡುತ್ತಿವೆ. ಇದಕ್ಕೆ ಪೂರಕವಾಗಿ ತಂತ್ರಜ್ಞಾನದ ನವ ಜಗತ್ತು ಈ ಯುವ ಪೀಳಿಗೆಯನ್ನು ಕೀಲಿಮಣೆಯಿಂದಾಚೆಗಿನ ಮತ್ತೊಂದು ಪ್ರಪಂಚದಿಂದ ಹೊರಗಿರಿಸಲು ಸತತ ಪ್ರಯತ್ನ ಮಾಡುತ್ತಿದೆ. ‘‘ಈ ರಸ್ತೆ ಎಲ್ಲಿಗೆ ಹೋಗುತ್ತದೆ’’ ‘‘ಮುಂದಿನ ರೈಲು ನಿಲ್ದಾಣ ಯಾವುದು’’ ‘‘ಇಲ್ಲಿಗೆ ಹೋಗಲು ಯಾವ ಸ್ಟಾಪ್‌ನಲ್ಲಿ ಇಳಿಯಬೇಕು’’ ಇಂತಹ ಪ್ರಶ್ನೆಗಳಿಗೆಲ್ಲಾ ಗೂಗಲ್ಲಿನ ಪರದೆಯೇ ಉತ್ತರಿಸುತ್ತಿರುವುದರಿಂದ ಜನಸಂದಣಿಯ ನಡುವೆಯೂ ಮೌನಿ ಬಾಬಾಗಳು ಹೆಚ್ಚಾಗುತ್ತಿದ್ದಾರೆ. ಚಿಕ್ಕ ಪರದೆಯ ಮೇಲೆ ನೆಟ್ಟ ದೃಷ್ಟಿ ನೆಲದ ಮೇಲಿನ ಕಂದಕವನ್ನೂ ಗುರುತಿಸದಷ್ಟು ಮಟ್ಟಿಗೆ ವಿಮುಖವಾಗಿಬಿಟ್ಟಿದೆ.
ಈ ಬದಲಾವಣೆ ಅನಿವಾರ್ಯವೇ ಎಂದಾದಲ್ಲಿ ಇರಲಿ. ಆದರೆ ಇದು ಸೃಷ್ಟಿಸುತ್ತಿರುವ ಸಮಾಜವಾದರೂ ಎಂತಹುದು? ಈ ಪೀಳಿಗೆಯನ್ನು ನೋಡುತ್ತಲೇ ಹೆಜ್ಜೆ ಊರುವುದನ್ನು ಕಲಿಯುವ ನವ ಸಂತತಿ ಯಾವ ಮಾರ್ಗದಲ್ಲಿ ಚಲಿಸಬಹುದು? ಈ ಪ್ರಶ್ನೆ ನಮ್ಮನ್ನು ಕಾಡಿದಾಗ ನಮ್ಮೆದುರು ಬೃಹದಾಕಾರದ ಪರ್ವತವೇ ನಿಂತಂತಾಗುತ್ತದೆ. ತಕ್ಷಣವೇ ಶಿಕ್ಷಣ, ಶೈಕ್ಷಣಿಕ ಮೌಲ್ಯ, ಶಿಕ್ಷಣದ ಧ್ಯೇಯ ಮುಂತಾದ ವಿಚಾರಗಳು ಹರಿದಾಡುತ್ತವೆ. ನಾವು, ಅಂದರೆ ನಮ್ಮ ಸುತ್ತಲಿನ ಸಮಾಜ, ವಿಶೇಷವಾಗಿ ಯುವ ಸಮಾಜ, ಯಾವ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಪ್ರಶ್ನೆ ಎದುರಾದಾಗ ನಿರುತ್ತರರಾಗುತ್ತೇವೆ. ಏಕೆಂದರೆ ಒಂದು ಸುಸ್ಥಿರ ಸಮಾಜಕ್ಕೆ ಅಗತ್ಯವಾದ ಯಾವುದೇ ಮೌಲ್ಯಗಳನ್ನೂ ಕಾಣಲಾಗುತ್ತಿಲ್ಲ. ಪ್ರೀತಿ, ವಾತ್ಸಲ್ಯ, ಮಮತೆ, ಒಲವು, ಸ್ನೇಹ, ಒಡನಾಟ, ಸೌಹಾರ್ದ, ಭ್ರಾತೃತ್ವ, ನಿಸ್ವಾರ್ಥತೆ, ಸಹಿಷ್ಣುತೆ, ಸಹಬಾಳ್ವೆ, ಸಹಯೋಗ ಹೀಗೆ ಒಂದು ಮಾನವೀಯ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಪರಿಕರಗಳೂ, ಸಲಕರಣೆಗಳೂ ಕಲುಷಿತವಾಗಿರುವುದನ್ನು ಕಾಣುತ್ತಿದ್ದೇವೆ. ದುರಂತ ಎಂದರೆ ಯುವ ಪೀಳಿಗೆ ಈ ಮಾಲಿನ್ಯದ ಸೋಂಕಿಗೆ ಬಲಿಯಾಗುತ್ತಿದೆ. ಈ ಪೀಳಿಗೆಯ ಹೆಜ್ಜೆ ಗುರುತುಗಳನ್ನೇ ಅನುಸರಿಸಲು ಸಿದ್ಧವಾಗುತ್ತಿರುವ ನವ ಸಂತತಿಯ ಭವಿಷ್ಯವನ್ನು ನೆನೆದರೆ ಆತಂಕ ಉಂಟಾಗುವಂತಾಗುತ್ತದೆ.
ಶಿಕ್ಷಣದ ಮಹತ್ವ ಇಲ್ಲಿ ಮುಖ್ಯವಾಗುತ್ತದೆ. ಉತ್ತಮ ಶಿಕ್ಷಣ ಎಂದರೆ ಶ್ರೀಮಂತಿಕೆಯ ಸಂಕೇತ ಎನ್ನುವಂತಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಜ್ಞಾನಾರ್ಜನೆ ಮತ್ತು ವಿದ್ಯಾರ್ಜನೆಯ ಆದ್ಯತೆಗಳೇ ಬದಲಾಗಿವೆ. ವಿದ್ಯೆ ಮಾರುಕಟ್ಟೆಯ ಸರಕು ಜ್ಞಾನ ಉಳ್ಳವರ ಸ್ವತ್ತು ಎನ್ನುವ ವಿಕೃತ ಮನೋಭಾವ ಶಿಕ್ಷಣ ವ್ಯವಸ್ಥೆಯಲ್ಲೇ ಹಾಸುಹೊಕ್ಕಾಗಿದೆ. ಸಮಾಜದ ಬದುಕಿನ ಹೆಜ್ಜೆಗಳನ್ನು ಸರಿದಾರಿಯಲ್ಲಿ ಕರೆದೊಯ್ಯಲು ನೆರವಾಗಬೇಕಾದ ಪ್ರಾಥಮಿಕ ಶಿಕ್ಷಣವೇ ಮಾರುಕಟ್ಟೆಯ ಸರಕಿನಂತಾಗಿದ್ದು ಕೀಲಿಮಣೆಯ ಮೇಲೆ ಬೆರಳಾಡಿಸುವುದನ್ನೇ ಅದ್ಭುತ ಜ್ಞಾನ ಸಂಪಾದನೆ ಎನ್ನುವ ಮಟ್ಟಿಗೆ ವಿದ್ಯೆ ಸಂಕುಚಿತವಾಗುತ್ತಿದೆ. ಎಳೆಯ ಮಕ್ಕಳಲ್ಲಿ ಜೀವನದ ಅಮೂಲ್ಯ ಮೌಲ್ಯಗಳನ್ನು ಅಳವಡಿಸುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ವಿಫಲವಾಗಿದ್ದರೆ ಅದಕ್ಕೆ ಆಳುವ ವರ್ಗಗಳಷ್ಟೇ ಹೊಣೆಯನ್ನು ಶಿಕ್ಷಕ ವರ್ಗವೂ ಹೊರಬೇಕಾಗುತ್ತದೆ. ಇದು ಸಾರ್ವತ್ರೀಕರಿಸುವ ಅಭಿಪ್ರಾಯವಲ್ಲವಾದರೂ, ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಕಂಡುಬರುವ ಶಿಕ್ಷಕರ ವರ್ತನೆ ಮತ್ತು ಧನ ದಾಹವನ್ನು ನೋಡಿದಾಗ ಕಣ್ಣೆದುರಿನ ವಾಸ್ತವ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಸ್ವಾಸ್ಥ್ಯ ಸಮಾಜಕ್ಕಾಗಿ ದುಡಿಯುವ ತುಡಿತ ಹೊಂದಿರುವ ಅನೇಕಾನೇಕ ಶಿಕ್ಷಕರು ಮಾರುಕಟ್ಟೆಯ ಜನದಟ್ಟಣೆಯಲ್ಲಿ ಕಾಣದಾಗುತ್ತಿದ್ದಾರೆ ಅಥವಾ ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದಾರೆ. ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದ ಬೋಧನೆ ಕ್ರಮೇಣ ನಶಿಸಿಹೋಗುತ್ತಿದೆ. ಶಿಕ್ಷಣ ಎನ್ನುವುದು ಸ್ಥಾಪಿತ ಸಾಮಾಜಿಕ ವ್ಯವಸ್ಥೆಯನ್ನೂ ಮೀರಿದ ಒಂದು ಅಮೂಲ್ಯ ವ್ಯವಸ್ಥೆ ಎನ್ನುವ ಪರಿಕಲ್ಪನೆಯನ್ನೇ ಮರೆತುಹೋಗುತ್ತಿರುವ ಒಂದು ವರ್ಗ ಶೈಕ್ಷಣಿಕ ಜಗತ್ತನ್ನು ಶ್ರೀಮಂತಿಕೆಯ ರಹದಾರಿಯನ್ನಾಗಿ ಮಾಡುತ್ತಿರುವುದನ್ನು ಕಂಡೂ ಕಾಣದಂತೆ ನಾವು ಮುನ್ನಡೆಯುತ್ತಿದ್ದೇವೆ. ಹಾಗಾಗಿಯೇ ಜೆಎನ್‌ಯುನಂತಹ ವಿಶ್ವವಿದ್ಯಾನಿಲಯಗಳೂ ಸಹ ವಿಕೃತ ಶಕ್ತಿಗಳ ಕಾಕದೃಷ್ಟಿಗೆ ಬಲಿಯಾಗುತ್ತಿದೆ. ಉನ್ನತ ಶಿಕ್ಷಣ ಕೇಂದ್ರಗಳು ತಮ್ಮ ಔನ್ನತ್ಯವನ್ನು ಕಳೆದುಕೊಂಡು ಬೆತ್ತಲಾಗಿ ನಿಂತಿವೆ. ಶಾಲಾ ಶಿಕ್ಷಣದಿಂದ ವೈದ್ಯಕೀಯ ಶಿಕ್ಷಣದವರೆಗೆ ಹರಡಿರುವ ಬಂಡವಾಳದ ಕಬಂಧ ಬಾಹುಗಳು ಶಿಕ್ಷಣದ ಹೆಸರಿನಲ್ಲಿ ಹುಟ್ಟುಹಾಕುತ್ತಿರುವ ಚಿನ್ನದ ಗಣಿಗಳಲ್ಲಿ ಜ್ಞಾನಾರ್ಜನೆ ಪಳೆಯುಳಿಕೆಯಂತಾಗಿದ್ದು ಧನಾರ್ಜನೆ ಹಿಮಾಲಯದಂತೆ ಬೆಳೆಯುತ್ತಲೇ ಇದೆ.
ಈ ವಿಷಮ ಚಕ್ರವ್ಯೆಹದಲ್ಲಿ ಸಿಲುಕಿರುವ ಶೈಕ್ಷಣಿಕ ವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆಯೊಂದಿಗೇ ಭಾರತದ ಬಹುಸಂಸ್ಕೃತಿ ಮತ್ತು ಜನಸಂಸ್ಕೃತಿಯ ಬೇರುಗಳನ್ನು ರಕ್ಷಿಸುವ ಮೂಲಕ ಸುಸ್ಥಿರ, ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆಯೂ ಶಿಕ್ಷಕರ ಮೇಲಿದೆ ಎನ್ನುವುದನ್ನು ಶಿಕ್ಷಕರ ದಿನದಂದಾದರೂ ಗ್ರಹಿಸಬೇಕಿದೆ. ಆದರೆ ಶಿಕ್ಷಣ ವಿದ್ಯಾರ್ಥಿಗಳ ಪಾಲಿಗೂ ಧನಾರ್ಜನೆಯ ಮಾರ್ಗವಾಗುತ್ತಿದ್ದು ಶಿಕ್ಷಕರ ಪಾಲಿಗೂ ಭಿನ್ನ ಮಾಗವಾಗೇನೂ ಕಾಣುತ್ತಿಲ್ಲ. ನೈತಿಕತೆಯೂ ಸಾಪೇಕ್ಷವಾಗುತ್ತಿದೆ, ಮಾನವೀಯತೆಯೂ ಸಾಪೇಕ್ಷವಾಗುತ್ತಿದೆ. ಹಾಗೆಯೇ ಮೌಲ್ಯಗಳೂ ಸಾಪೇಕ್ಷವಾಗುತ್ತಿವೆ. ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು, ಬೆಳವಣಿಗೆಗಳು ಕವಲುಹಾದಿಯಲ್ಲಿ ನಿಂತಿರುವ ಈ ಹೊತ್ತಿನಲ್ಲಿ ಒಂದು ಉಜ್ವಲ ಭವಿಷ್ಯದತ್ತ ದೃಷ್ಟಿ ನೆಟ್ಟಿರು ವುದೇ ಆದರೆ ಅದು ಶಿಕ್ಷಣ ಕ್ಷೇತ್ರದತ್ತ ಮಾತ್ರ ನೆಟ್ಟಿರಲು ಸಾಧ್ಯ. ಈ ನೆಟ್ಟ ದೃಷ್ಟಿಯನ್ನು ನೆಟ್ಟಗೆ, ಕಣ್ಣಲ್ಲಿ ಕಣ್ಣಿಟ್ಟು ನೋಡುವ ಸಹನೆ, ತಾಳ್ಮೆ ಮತ್ತು ಕ್ಷಮತೆ ಶಿಕ್ಷಕ ವರ್ಗದಲ್ಲಿ ಇದ್ದರೆ ಸಾರ್ಥಕವಾದೀತು. ಶಿಕ್ಷಕರ ದಿನದ ಸಂದರ್ಭದಲ್ಲಿ ಇಷ್ಟು ಮಾತ್ರ ಹೇಳಲು ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)