varthabharthi

ವೈವಿಧ್ಯ

ಕಿರು ಪ್ರಾಥಮಿಕ ಶಾಲೆಯ ನಂಜಪ್ಪಮೇಷ್ಟ್ರು

ವಾರ್ತಾ ಭಾರತಿ : 5 Sep, 2019
ಫಾದರ್ ಚೇತನ್ ಸಾರ್ವಜನಿಕ ಸಂಪರ್ಕ ಅಧಿಕಾರಿ, ಉಡುಪಿ ಧರ್ಮಕ್ಷೇತ್ರ

ಪ್ರತಿವರ್ಷ ಸೆಪ್ಟಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಿ, ಜೀವನದಲ್ಲಿ ಬಂದುಹೋದ ಎಲ್ಲಾ ಶಿಕ್ಷಕರನ್ನು ಸ್ಮರಿಸಿ, ಗತಿಸಿದವರಿಗೆ ಮನದಲ್ಲೇ ನಮಿಸಿ, ಇಂದಿನ ಶಿಕ್ಷಕರಿಗೆ ಕೃತಜ್ಞತಾಭಾವ ದಿಂದ ತಲೆಬಾಗಿ ವಂದಿಸುವುದು ವಾಡಿಕೆ. ಗುರು ದೇವೋಭವ ಎಂದೊಪ್ಪಿಕೊಳ್ಳುವ ಭಾರತೀಯ ಸಂಸ್ಕೃತಿಯಲ್ಲಿ ತಂದೆ-ತಾಯಿಗಿಂತಲೂ ಗುರುವಿನ ಸ್ಥಾನ ಹಿರಿದು. ಅದನ್ನೇ ಸರ್ವಜ್ಞ ಕವಿ ‘‘ತಂದೆಗೂ-ಗುರುವಿಗೂ ಒಂದು ಅಂತರ ಉಂಟು, ತಂದೆ ತೋರುವನು ಸದ್ಗುರುವ, ಗುರುರಾಯ ಬಂಧನವ ಕಳೆವ’’ ಎಂದಿದ್ದು.
ಶಾಲಾ-ಕಾಲೇಜುಗಳಲ್ಲಿ ಅಧ್ಯಯನವನ್ನು ಮುಗಿಸಿ ಎರಡು ದಶಕಗಳು ಕಳೆದಿದ್ದರೂ, ಕೇವಲ ಶಿಕ್ಷಕರ ದಿನಾಚರಣೆಯ ಸ್ಮರಣೆಗೆ ಸೀಮಿತಗೊಳಿಸದೆ, ಸ್ಥಳ-ಸಂದರ್ಭಗಳನ್ನು ಲೆಕ್ಕಿಸದೆ ಒತ್ತರಿಸಿ ಬರುವ ನೆನಪು ನಂಜಪ್ಪ ಮೇಷ್ಟ್ರದ್ದು. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕುಗ್ರಾಮ ಕಡಬಗೆರೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದವರು. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿಗಳಿದ್ದರೂ ಪಾಠ ನಡೆಯುತ್ತಿದ್ದದ್ದು ಒಂದೇ ಕೊಠಡಿಯಲ್ಲಿ, ಏಕೋಪಾಧ್ಯಾಯ ನಂಜಪ್ಪಮೇಷ್ಟ್ರಿಂದ. ನಾಲ್ಕೂ ತರಗತಿಯ ನಲ್ವತ್ತರಷ್ಟು ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಒಬ್ಬರೇ ಮೇಷ್ಟ್ರಿಂದ ಪಾಠವನ್ನು ಹೇಳಿಸಿಕೊಳ್ಳುವುದು ಇಂದು ಊಹಿಸಲೂ ಅಸಾಧ್ಯ. ಆದರೆ ನಾಲ್ಕೂವರೆ ದಶಕಗಳ ಹಿಂದೆ ಯಾವುದೇ ತಾಪತ್ರಯಗಳಿಲ್ಲದೆ ನಡೆದುಕೊಂಡು ಹೋಗುತ್ತಿದ್ದ ಪ್ರಕ್ರಿಯೆ.
ನಂಜಪ್ಪಮೇಷ್ಟ್ರ ಮುಖಚಹರೆ ನನ್ನ ಕಣ್ಣಮುಂದೆ ಇಂದಿಗೂ ಜೀವಂತವಾಗಿದೆ. ನನ್ನಣ್ಣ ಆಗಲೇ ಶಾಲೆಗೆ ಹೋಗಲಾರಂಭಿಸಿದ್ದ. ನಾನೂ ಅಣ್ಣನಿಗೆ ದುಂಬಾಲು ಬಿದ್ದು ಶಾಲೆಗೆ ಹೋಗಲಾರಂಭಿಸಿದೆ. ನನ್ನ ದಾಖಲಾತಿಗಾಗಿ ಅಮ್ಮ ಶಾಲೆಗೆ ಬರಬೇಕಾದರೆ, ಅವಳ ಒಂದು ದಿನದ ಕಾಫಿ ತೋಟದ ಕೆಲಸ ತಪ್ಪುತ್ತಿತ್ತು. ಈ ಕಾರಣದಿಂದ ಕೆಲವು ತಿಂಗಳು ಶಾಲೆಗೆ ದಾಖಲಾಗದೆ ಅಣ್ಣನ ಬಾಲವಾಗಿ ಶಾಲೆಗೆ ಹೋಗುತ್ತಿದ್ದೆ. ಬೇಸಿಗೆ ರಜೆ ಕಳೆದು ಶಾಲೆ ಆರಂಭವಾದ ನಂತರದ ಒಂದು ದಿನ, ನನ್ನನ್ನು ಶಾಲೆಗೆ ಸೇರಿಸಲು ಅಮ್ಮ ಶಾಲೆಗೆ ಬಂದಳು. ನನ್ನ ನೆನಪಿನ ಪ್ರಕಾರ, ನಂಜಪ್ಪಮೇಷ್ಟ್ರನ್ನು ಅಷ್ಟು ಸನಿಹದಿಂದ ನೋಡಿದ್ದು ಅವತ್ತೇ. ಯಾವುದೋ ಆತ್ಮೀಯತೆಯಿಂದ ಅವರು ನನ್ನನ್ನು ತನ್ನತ್ತ ಸೆಳೆದಂತಹ ಅನುಭವವಾಯಿತು. ಎರಡು ವರ್ಷ ತುಂಬುವ ಮೊದಲೇ ನಾನು ಅಪ್ಪನನ್ನು ಕಳೆದುಕೊಂಡದ್ದು ಈ ಸೆಳೆತಕ್ಕೆ ಕಾರಣವಿರಬಹುದು ಎಂದು ಆ ನಂತರ ಎನ್ನಿಸಿತು.
‘‘ಹುಟ್ಟಿದ ತಾರೀಕು ಯಾವುದಮ್ಮಾ?’’ ಎಂದು ನಂಜಪ್ಪಮೇಷ್ಟ್ರು ಅಮ್ಮನನ್ನು ಪ್ರಶ್ನಿಸಲು, ಬಾಳೆಹೊನ್ನೂರು ಚರ್ಚಿನಲ್ಲಿ ಜ್ಞಾನಸ್ನಾನ ನೀಡಿದಾಗ ಬರೆದಿಟ್ಟ ದಾಖಲೆ ಚರ್ಚ್ ಕಚೇರಿಯಲ್ಲಿ ಇದೆ ಎಂದು ತಿಳಿದಿದ್ದರೂ, ಆರೇಳು ಮೈಲಿ ದೂರದಲ್ಲಿರುವ ಚರ್ಚಿಗೆ ಹೋಗುವುದೆಂದರೆ ಇನ್ನೊಂದು ದಿನದ ಕೆಲಸವನ್ನು ಕಳೆದುಕೊಂಡಂತೆ ಅಂದುಕೊಂಡ ಅಮ್ಮ ನಿರುತ್ತರಳಾದಳು. ‘‘ಸರಿಯಮ್ಮಾ, ಜೂನ್ 1ನೇ ತಾರೀಕಿಗೆ ಆರು ವರ್ಷ ತುಂಬಿತು ಎಂದಿಟ್ಟುಕೊಳ್ಳೋಣ’’ ಎಂದ ನಂಜಪ್ಪಮೇಷ್ಟ್ರು ದಾಖಲಾತಿ ಪುಸ್ತಕದಲ್ಲಿ ವಿವರವನ್ನು ದಾಖಲಿಸಿದರು. ಚರ್ಚಿನಲ್ಲಿರುವ ದಾಖಲೆಯಲ್ಲಿ ನನ್ನ ಹುಟ್ಟಿನ ತಾರೀಕು ಜೂನ್ 1 ಅಲ್ಲ ಎಂದು ಆನಂತರ ತಿಳಿದು ಬಂತು. ಆ ಕಾರಣದಿಂದ ಇಂದಿನವರೆಗೂ ಎರಡು ಹುಟ್ಟಿದ ದಿನಗಳು ನನ್ನವು. ಚರ್ಚಿನ ದಾಖಲೆಗಳಲ್ಲಿ ಒಂದು, ಅಧಿಕೃತ ದಾಖಲೆಗಳಲ್ಲಿ ಇನ್ನೊಂದು. ಆದರೆ ನನ್ನ ಜನನದ ಅಧಿಕೃತ ದಿನವನ್ನು ನಿರ್ಧರಿಸಿದವರು ನಂಜಪ್ಪ ಮೇಷ್ಟ್ರು ಎಂಬುದು ಸುಳ್ಳಲ್ಲ!
ನಂಜಪ್ಪಮೇಷ್ಟ್ರು ಅರೆನೆರೆತ ಕೂದಲಿನ ವಯಸ್ಕರು, ನೋಡಿದಾಕ್ಷಣ ಆತ್ಮೀಯತೆಯ ಜೊತೆ ಗೌರವವನ್ನೂ ಹುಟ್ಟಿಸುವ ವ್ಯಕ್ತಿತ್ವ. ಹಣೆಯ ಮೇಲೆ ಅಡ್ಡವಾಗಿ ಬಳಿದ ಬಿಳಿ ನಾಮಗಳು ಅವರ ಬಗ್ಗೆ ಗೌರವಭಾವವನ್ನು ಹೆಚ್ಚಿಸುತ್ತಿದ್ದವು. ಅವರು ಲಿಂಗಾಯತ ಸಮುದಾಯದವರು ಎಂದು ಹಲವು ವರ್ಷಗಳ ನಂತರವೇ ನನ್ನ ಅರಿವಿಗೆ ಬಂದಿದ್ದು. ಏಕ ಕೊಠಡಿಯ ಏಕೋಪಾಧ್ಯಾಯ ಶಾಲೆಯ ವಾತಾವರಣವೇ ಹಾಗಿತ್ತು. ಕೋಣೆಯಲ್ಲಿ ಯಾರೋ ದಾನ ಮಾಡಿದ ಎರಡಿಂಚು ಎತ್ತರದ ಮಣೆಗಳೇ ಬೆಂಚುಗಳು. ಅವುಗಳ ಮೇಲೆ ಚಕ್ಕಳ ಬಕ್ಕಳ ಹಾಕಿ ಒಬ್ಬರಿಗೊಬ್ಬರು ತಾಗಿ ಕುಳಿತುಕೊಳ್ಳುತ್ತಿದ್ದೆವು. ಎಡಬಲಗಳಲ್ಲಿ ಇದ್ದ ಕೆಲವರ ನೆನಪು ಇನ್ನೂ ಹಸಿರು. ಹಿಂದಿನ ಮನೆಯ ರಝಾಕ್, ಪಕ್ಕದ ಮನೆಯ ಫಾತಿಮಾ-ರುಕಿಯಾ ಸಹೋದರಿಯರು, ಸದಾ ನನಗಂಟಿಯೇ ಕೂರುತ್ತಿದ್ದ ರಮೇಶ, ಅವನಣ್ಣ ನಾಗೇಶ, ದೂರದಿಂದ ನಡೆದುಕೊಂಡು ಬರುತ್ತಿದ್ದ ಮಲಯಾಳಿ ಜೋನಿ-ಜೋಯಿ-ಬೇಬಿ ಸಹೋದರರು, ಅರಿಗೆಯ ಮಂಜಪ್ಪಗೌಡರ ಮಕ್ಕಳು ರಾಧಾ-ವಿಶಾಲ, ರೇಣುಕ, ಭಾಗೀರಥಿ, ಮನೆಯಿಂದ ನನ್ನೊಂದಿಗೆ ನಡೆದುಕೊಂಡು ಬರುತ್ತಿದ್ದ ಫ್ರೇಂಕಿ, ಜೋಪಡಿಯಲ್ಲಿ ವಾಸವಾಗಿದ್ದ ರಾಮ, ಜಟಿಗ... ಇವರ ಧರ್ಮ, ಜಾತಿ, ಭಾಷೆ ಯಾವುದೂ ತಿಳಿದ ನೆನಪಿಲ್ಲ. ಎಲ್ಲರೂ ನಂಜಪ್ಪಮೇಷ್ಟ್ರ ಕ್ಲಾಸಿನ ವಿದ್ಯಾರ್ಥಿಗಳು.
ನಂಜಪ್ಪಮೇಷ್ಟ್ರಿಗೆ ಬೆಳಗ್ಗೆ ಶಾಲೆಯನ್ನು ಆರಂಭಿಸಲು ನಿಗದಿತ ಸಮಯವಿರಲಿಲ್ಲ. ಹತ್ತೂಕಾಲು-ಹತ್ತೂವರೆಯ ಶಂಕರ್ ಬಸ್ಸಿನ ಆಗಮನವೇ ಶಾಲಾರಂಭದ ಸಮಯ. ಹಲವು ಸಲ, ಕಾರಣಾಂತರ ಗಳಿಂದ ಶಂಕರ್ ಬಸ್ ಹನ್ನೆರಡಕ್ಕೆ ಬಂದದ್ದೂ ಇದೆ. ಸಾಯಂಕಾಲ ನಾಲ್ಕೂವರೆಯ ಉದಯ ಬಸ್ ಬಂತೆಂದರೆ ಶಾಲೆ ಬಿಟ್ಟಂತೆ. ವಾಚ್ ಇಲ್ಲದ ನಂಜಪ್ಪಮೇಷ್ಟ್ರಿಗೆ ಯಾರೋ ಪುಣ್ಯಾತ್ಮರು ಒಂದು ಟೈಂಪೀಸ್ ದಾನವಾಗಿ ನೀಡಿದ ಮೇಲೆ ಪಾಠಗಳು ನಿಗದಿತ ಸಮಯಕ್ಕೆ ಆರಂಭವಾಗಿ ನಡೆಯಲಾರಂಭಿಸಿದವು. ಎರಡೇ ತಿಂಗಳು! ಭದ್ರವಾಗಿಲ್ಲದ ಕಿಟಕಿಯನ್ನು ಮುರಿದು ಕಿಡಿಗೇಡಿಗಳು ಆ ಟೈಂಪೀಸನ್ನು ಕದ್ದು ಒಯ್ದನಂತರ ಮತ್ತೆ ಬಸ್ಸುಗಳೇ ಗತಿ!
ಒಮ್ಮಮ್ಮೆ ನಂಜಪ್ಪ ಮೇಷ್ಟ್ರು ಶಾಲೆಗೆ ಬರಲು ಸಾಧ್ಯವಿಲ್ಲದಾಗ, ಅವರ ಮಗ ಬಂದು ಶಾಲೆಗೆ ರಜೆ ಸಾರುತ್ತಿದ್ದ. ಮೇಷ್ಟ್ರು ಶಾಲೆಗೆ ಏಕೆ ರಜೆ ಹಾಕುತ್ತಾರೆ ಎಂಬ ಪ್ರಶ್ನೆಗೆ ಒಂದು ದಿನ ಉತ್ತರ ಸಿಕ್ಕಿತು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮೇಷ್ಟ್ರ ಬಳಿ ಇದ್ದ ಆಸ್ತಿಯೆಂದರೆ ಆರೇಳು ಎಮ್ಮೆಗಳು ಮಾತ್ರ. ಮೇಯಲು ಬಿಟ್ಟ ಎಮ್ಮೆಗಳು ತಪ್ಪಿಸಿಕೊಂಡವೆಂದರೆ ಅಂದು ನಂಜಪ್ಪಮೇಷ್ಟ್ರು ಶಾಲೆಗೆ ಚಕ್ಕರ್. ಒಮ್ಮೆ ನಾಲ್ಕಾರು ಎಮ್ಮೆಗಳು ತಪ್ಪಿಸಿಕೊಂಡಾಗ, ಅವುಗಳನ್ನು ಹುಡುಕಲು ಶಾಲೆಯಿಂದ ಕರೆದುಕೊಂಡು ಹೋದ ಮಕ್ಕಳಲ್ಲಿ ನಾನೂ ಇದ್ದ ನೆನಪಿದೆ. ನಂಜಪ್ಪಮೇಷ್ಟ್ರು ಒಂದು ಬಾಡಿಗೆ ಮನೆಯಿಂದ ಇನ್ನೊಂದು ಮನೆಗೆ ವಾಸವನ್ನು ಬದಲಿಸುವಾಗ, ಸಾಮಾನುಗಳನ್ನು ಸಾಗಿಸಲು ಆರಿಸಿದ ವುಕ್ಕಳ ಗುಂಪಿನಲ್ಲಿ ನಾನೂ ಶಾಮೀಲು!
ನಂಜಪ್ಪಮೇಷ್ಟ್ರು ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗುತ್ತಿರಲಿಲ್ಲ, ಬುತ್ತಿಯನ್ನೂ ತರುತ್ತಿರಲಿಲ್ಲ. ಆ ದಿನಗಳಲ್ಲಿ ಬಿಸಿಯೂಟವೂ ಇರಲಿಲ್ಲ. ಶಾಲೆಯ ಆಸುಪಾಸಿನ ಮಕ್ಕಳು ಊಟಕ್ಕೆ ಮನೆಗೆ ಹೋಗುವಾಗ ಮೇಷ್ಟ್ರು ಒಂದೊಂದು ದಿನ ಒಬ್ಬೊಬ್ಬರ ಮನೆಗೆ ಹೋಗಿ ಊಟ ಮಾಡುತ್ತಿದ್ದರು. ಮೇಷ್ಟ್ರ ಮನೆಯ ಆರ್ಥಿಕ ಪರಿಸ್ಥಿತಿ ಇದಕ್ಕೆ ಕಾರಣವಾಗಿದ್ದರೂ, ವಿದ್ಯಾರ್ಥಿಗಳ ಮನೆಯಲ್ಲಿ ಊಟಕ್ಕೆ ಹೋಗುವುದರಿಂದ ಅವರು ಕುಟುಂಬದ ಸದಸ್ಯರಂತಾಗಿದ್ದರು. ಊಟಕ್ಕೆ ಹೋದಾಗ, ಮಕ್ಕಳ ಬಗ್ಗೆ ಪೋಷಕರಲ್ಲಿ ಚರ್ಚಿಸುತ್ತಿದ್ದರು.
ಆಲಿಬಾಬಾ ಮತ್ತು ನಾಲ್ವತ್ತು ಕಳ್ಳರು ಅರೇಬಿಯಾದ ಕತೆಯನ್ನು ಬಾಗಿಲು ತೆಗೆಯೇ ಸೇಸಮ್ಮಾ ಎಂದು ನಂಜಪ್ಪಮೇಷ್ಟ್ರು ಕನ್ನಡೀಕರಿಸಿ ಹೇಳಿದ್ದು ಇಂದೂ ಕಿವಿಯಲ್ಲಿ ಗುಂಯ್‌ಗುಡುತ್ತಿದೆ. ಮಧ್ಯಾಹ್ನ ಊಟದ ನಂತರ, ತೂಕಡಿಕೆ ಬರುವ ಸಮಯ ನಂಜಪ್ಪಮೇಷ್ಟ್ರ ಕತೆ ಹೇಳುವ ಕಾಲ. ಅದೆಷ್ಟು ಕತೆಗಳು, ಎಂತೆಂಥಹ ವಿವರ! ಕತೆಯನ್ನು ಕೇಳಿ ಅಲ್ಲೇ ಪವಡಿಸುವ ಹಲವರ ಜೊತೆ ನಂಜಪ್ಪಮೇಷ್ಟ್ರು ಡೆಸ್ಕಿನ ಮೇಲೆ ತಲೆಯಿಟ್ಟು ಸಹಭಾಗಿ! ಮಕ್ಕಳು ಗದ್ದಲವೆಬ್ಬಿಸಿದಾಗ ಅವರಲ್ಲಿದ್ದ ಒಂದೇ ಬೈಗುಳ, ‘‘ಬುಂಡೆ ಒಡ್ದಾಕಿಬಿಡ್ತೀನಿ ನೋಡು.’’ ಆದರೆ ಬರೀ ಶಬ್ದಗಳು. ಆ ಬೈಗುಳದ ತಾತ್ಪರ್ಯ ಹಾಗೂ ಭಾವ ಅವರ ಮುಖದಲ್ಲಿ ಇರಲೇ ಇಲ್ಲ. ಒಂದರಿಂದ ನಾಲ್ಕನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಏಕಕಾಲದಲ್ಲೇ ಪಾಠ ಮಾಡುತ್ತಿದ್ದರು. ಎರಡನೇ ಕ್ಲಾಸಿನ ವಿದ್ಯಾರ್ಥಿಗಳಿಗೆ ನಾಲ್ಕನೇ ತರಗತಿಯ ಲೆಕ್ಕ, ವಿಜ್ಞಾನ, ಸಮಾಜಶಾಸ್ತ್ರ ಜ್ಞಾನವಿತ್ತು ಎಂದರೆ ನಂಬಲಸಾಧ್ಯ.
ಅದೊಂದು ಘಟನೆ ಮರೆಯಲಾಗದು. ಭದ್ರಾ ನದಿಗೆ ಲಕ್ಕವಳ್ಳಿಯಲ್ಲಿ ಅಣೆಕಟ್ಟಿನ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ನಿರ್ಮಾಣ ಹಂತದಲ್ಲಿರುವ ಅಣೆಕಟ್ಟಿಗೆ ಬಲಿ ಕೊಡಲು ಮಕ್ಕಳನ್ನು ಹಿಡಿದುಕೊಂಡು ಹೋಗುತ್ತಾರೆ ಎಂದು ಯಾರೋ ಹಬ್ಬಿಸಿದ ವದಂತಿ ನಮ್ಮ ಶಾಲೆಗೂ ತಲುಪಿತು. ಅದೊಂದು ದಿನ ಈ ವದಂತಿ ದಟ್ಟವಾಗಿ ಶಾಲೆಯ ಪರಿಸರದಲ್ಲೇ ಮಕ್ಕಳನ್ನು ಅಪರಿಹರಿಸುವವರು ಬಂದು ಸೇರಿದ್ದಾರೆ ಎನ್ನುವಷ್ಟರ ಮಟ್ಟಿಗೆ ಭಯ ಹುಟ್ಟಿಸಿತು. ಮಾಧ್ಯಮಗಳಿಲ್ಲದ ಆ ಕಾಲದಲ್ಲಿ ನಂಜಪ್ಪಮೇಷ್ಟ್ರು ಕೂಡಾ ಈ ವದಂತಿಯನ್ನು ನಂಬಿ ಎಲ್ಲಾ ಮಕ್ಕಳನ್ನು ಶಾಲಾ ಕೊಠಡಿಯ ಮೂಲೆಯೊಂದರಲ್ಲಿ ಕುಳ್ಳಿರಿಸಿ, ಶಾಲೆಗೆ ಬೀಗವನ್ನು ಜಡಿದು ಹೊರಗೆ ಕಾವಲು ಕುಳಿತರು. ಮಕ್ಕಳ ಕಳ್ಳರು ಅತ್ತ ಸುಳಿಯಲೇ ಇಲ್ಲ.
ಕೇವಲ ಮೂರು ವರ್ಷಗಳ ಕಾಲ ಕಲಿತ ಪ್ರಾಥಮಿಕ ಶಾಲೆಯ ನಂಜಪ್ಪ ಮೇಷ್ಟ್ರ ಬಗ್ಗೆ ಎಲ್ಲವೂ ಹೇಳಬೇಕೆಂದರೆ ಆಗದ ವಿಷಯ. ಕಡಬಗೆರೆಯ ಕಿರಿಯ ಪ್ರಾಥಮಿಕ ಶಾಲೆಯ ನಂತರ ವಿದ್ಯಾಭ್ಯಾಸವನ್ನು ಮುಂದುವರಿಸಿ, ವಿಶ್ವವಿದ್ಯಾನಿಲಯದಲ್ಲಿ ಕಲಿತು, ದೈವಶಾಸ್ತ್ರವನ್ನು ಅಧ್ಯಯನ ಮಾಡಿ ಧರ್ಮಗುರುವಾಗಿ ಯೂರೋಪ್, ಅಮೆರಿಕಗಳಲ್ಲಿ ಉನ್ನತ ಅಧ್ಯಯನವನ್ನು ಮಾಡಿ, ಸ್ವತಃ ಪ್ರಾಧ್ಯಾಪಕನಾದರೂ, ಇಂದಿಗೂ ನನ್ನ ಜೀವನದ ಅತ್ಯಂತ ಶ್ರೇಷ್ಠ ಹಾಗೂ ನೆಚ್ಚಿನ ಶಿಕ್ಷಕರಾಗಿ ಉಳಿದಿದ್ದಾರೆ ನಂಜಪ್ಪಮೇಷ್ಟ್ರು!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)