varthabharthi

ಅಂತಾರಾಷ್ಟ್ರೀಯ

ರಶ್ಯಕ್ಕೆ 7,180 ಕೋ.ರೂ ಸಾಲ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ವಾರ್ತಾ ಭಾರತಿ : 5 Sep, 2019

ವ್ಲಾಡಿವೊಸ್ಟೊಕ್ (ರಶ್ಯ), ಸೆ. 5: ರಶ್ಯದ ಫಾರ್-ಈಸ್ಟ್ ವಲಯದ ಅಭಿವೃದ್ಧಿಗಾಗಿ ಭಾರತವು ಆ ದೇಶದೊಂದಿಗೆ ಜೊತೆ-ಜೊತೆಯಾಗಿ ಹೆಜ್ಜೆ ಹಾಕುವುದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ ಹಾಗೂ ಸಂಪನ್ಮೂಲ ಸಂಪದ್ಭರಿತ ಫಾರ್-ಈಸ್ಟ್ ವಲಯದ ಅಭಿವೃದ್ಧಿಗಾಗಿ ರಶ್ಯಕ್ಕೆ ಒಂದು ಬಿಲಿಯ ಡಾಲರ್ (ಸುಮಾರು 7,180 ಕೋಟಿ ರೂಪಾಯಿ) ಸಾಲ ನೀಡುವುದಾಗಿ ಘೋಷಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ 5ನೇ ಈಸ್ಟರ್ನ್ ಎಕನಾಮಿಕ್ ಫೋರಂನ ಪೂರ್ಣಾಧಿವೇಶನದಲ್ಲಿ ಮಾತನಾಡಿದ ಮೋದಿ, ಭಾರತ ಮತ್ತು ರಶ್ಯಗಳ ನಡುವಿನ ಸ್ನೇಹವು ರಾಜಧಾನಿ ನಗರಗಳಲ್ಲಿ ಸರಕಾರಗಳ ನಡುವೆ ನಡೆಯುವ ಸಂವಹನಗಳಿಗೆ ಮಾತ್ರ ಸೀಮಿತವಾಗಿರದೆ, ಜನರ ನಡುವಿನ ಮತ್ತು ನಿಕಟ ವ್ಯಾಪಾರ ಸಂಬಂಧಕ್ಕೂ ಇದು ಅನ್ವಯಿಸುತ್ತದೆ ಎಂದರು.

‘‘ರಶ್ಯದ ಫಾರ್-ಈಸ್ಟ್‌ಗೂ ಭಾರತಕ್ಕೂ ತುಂಬಾ ಹಿಂದಿನಿಂದಲೂ ಸಂಪರ್ಕವಿದೆ. ವ್ಲಾಡಿವೊಸ್ಟೊಕ್‌ನಲ್ಲಿ ಕೌನ್ಸುಲೇಟ್ ತೆರೆದ ಮೊದಲ ದೇಶ ಭಾರತವಾಗಿತ್ತು’’ ಎಂದು ಮೋದಿ ನುಡಿದರು.

‘‘ಫಾರ್-ಈಸ್ಟ್ ವಲಯದ ಬೆಳವಣಿಗೆಗಾಗಿ ಭಾರತವು ರಶ್ಯಕ್ಕೆ 1 ಬಿಲಿಯ ಡಾಲರ್ ಸಾಲ ನೀಡುತ್ತದೆ. ನನ್ನ ಸರಕಾರವು ‘ಪೂರ್ವದೊಂದಿಗೆ ವ್ಯವಹರಿಸುವ’ ನೀತಿಯ ಭಾಗವಾಗಿ ಪೂರ್ವ ಏಶ್ಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇಂದಿನ ಈ ಸಾಲ ಘೋಷಣೆಯು ಉಭಯ ದೇಶಗಳ ನಡುವಿನ ಆರ್ಥಿಕ ರಾಜತಾಂತ್ರಿಕತೆಗೆ ನೂತನ ಆಯಾಮವನ್ನು ನೀಡುತ್ತದೆ’’ ಎಂದು ಮೋದಿ ಅಭಿಪ್ರಾಯಪಟ್ಟರು.

ರಶ್ಯದ ಫಾರ್-ಈಸ್ಟ್ ವಲಯದೊಂದಿಗಿನ ಭಾರತದ ಸಂವಹನಕ್ಕೆ ಚೇತರಿಕೆ ನೀಡುವುದಕ್ಕಾಗಿ ‘ಆ್ಯಕ್ಟ್ ಫಾರ್-ಈಸ್ಟ್’ ನೀತಿಯನ್ನು ಮೋದಿ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)