varthabharthi

ನಿಮ್ಮ ಅಂಕಣ

ಮನೆಬಾಗಿಲಿಗೇ ಮದ್ಯ ಯೋಜನೆ!

ವಾರ್ತಾ ಭಾರತಿ : 5 Sep, 2019
-ವಿ.ಎನ್.ಲಕ್ಷ್ಮ್ಮೀನಾರಾಯಣ, ಮೈಸೂರು

ಮಾನ್ಯರೇ,

ಆರ್ಥಿಕ ಮುಗ್ಗಟ್ಟು, ನೆರೆಹಾವಳಿ, ನಿರುದ್ಯೋಗ, ಬಡತನಗಳಿಂದ ಜನರು ಕಂಗೆಟ್ಟುಹೋಗಿರುವ ಈ ಸಂಕಷ್ಟದ ದಿನಗಳಲ್ಲಿ, ಮದ್ಯವನ್ನು ಜನರ ಮನೆಬಾಗಿಲಿಗೇ ತಲುಪಿಸುವ ಸರಕಾರದ ಇತ್ತೀಚಿನ ಯೋಜನೆಯನ್ನು ಪತ್ರಿಕೆಗಳಲ್ಲಿ ಓದಿ ತುಂಬಾ ದುಃಖ ವಾಯಿತು. ಮದ್ಯಪಾನ ಸಂಬಂಧಿತ ನಿತ್ಯನರಕದ ಸಂತ್ರಸ್ತರಾದ ಬಡಮಹಿಳೆಯರು ಚಿತ್ರದುರ್ಗದ ಹಳ್ಳಿಗಳಿಂದ ಬೆಂಗಳೂರಿಗೆ ಕಾಲ್ನಡಿಗೆಯಲ್ಲಿ ಜಾಥಾ ಬಂದು ಅಂದಿನ ಸಂವೇದನಾರಹಿತ ಸರಕಾರದಿಂದ ಯಾವ ಮಾನವೀಯ ಪ್ರತಿಕ್ರಿಯೆಯೂ ಸಿಗದೆ ಬರಿಗೈಲಿ ವಾಪಸಾದದ್ದು ಇನ್ನೂ ಹಸಿರಾಗಿದೆ. ಈಗ ಅಧಿಕಾರದಲ್ಲಿರುವ, ‘ಭಾರತೀಯ ಸಂಸ್ಕೃತಿ’, ‘ಸೋದರಿ-ಮಾತೆಯರ’ ಬಗ್ಗೆ ಪೂಜ್ಯಭಾವನೆಯನ್ನು ಪ್ರದರ್ಶಿಸುವ ಸಂಘಪರಿವಾರದ ಸರಕಾರವು ಇನ್ನೂ ನೂರು ಹೆಜ್ಜೆ ಹಿಂದಿಟ್ಟು ಮನೆಬಾಗಿಲಿಗೇ ಮದ್ಯ ಸರಬರಾಜು ಮಾಡುವ ಯೋಜನೆಯನ್ನು ಹಾಕಿಕೊಳ್ಳುವ ಮೂಲಕ ತನಗೆ ಬಡಜನರ ಬಗ್ಗೆ ಸಂವೇದನಾಶೀಲತೆ, ಹೃದಯವಂತಿಕೆ, ವಿವೇಕ, ನೈತಿಕತೆ, ಧರ್ಮಪ್ರಜ್ಞೆ ಯಾವುದೂ ಇಲ್ಲವೆಂಬುದನ್ನು ಜಾಹೀರುಮಾಡಿದೆ. ಆದಾಯ ಮತ್ತು ಕಳ್ಳಭಟ್ಟಿಯ ದುರಂತಗಳಿಂದ ಬಡಜನರನ್ನು ‘ಪಾರುಮಾಡುವ’ ಮತ್ತು ಸರಕಾರದ ‘ಆದಾಯ’ವನ್ನು ಹೆಚ್ಚುಮಾಡಿಕೊಳ್ಳುವುದು ಈ ಯೋಜನೆಯ ಉದ್ದೇಶವಂತೆ! ಇದರ ಜೊತೆಗೆ, ಮದ್ಯಪಾನದ ವ್ಯಾಪಾರ ಶೇಕಡಾ 10ರಷ್ಟು ಹೆಚ್ಚಿದೆಯೆಂಬ ಹೆಗ್ಗಳಿಕೆ ಬೇರೆ!

ಕಳ್ಳಭಟ್ಟಿಯ ಮೂಲದ್ದಿರಲಿ, ಅಧಿಕೃತ ಭಟ್ಟಿಯ ಮೂಲದ್ದಿರಲಿ ಮದ್ಯವು ವಿಷ ಎಂಬುದನ್ನು ವೈದ್ಯರು, ವಿಜ್ಞಾನಿಗಳು ಖಡಾಖಂಡಿತವಾಗಿ ಹೇಳುತ್ತಲೇ ಬಂದಿದ್ದಾರೆ. ‘ಮದ್ಯವು ಆತ್ಮವನ್ನು ನಾಶಮಾಡುತ್ತದೆ’ ಎಂದು ಹೇಳುತ್ತಿದ್ದ ಗಾಂಧೀಜಿ ಈಗ ಬದುಕಿಲ್ಲ. ಈ ವಿಷದಿಂದ ಹೆಚ್ಚುಹೆಚ್ಚು ಬಡಜನರನ್ನು ಕೊಂದಷ್ಟೂ ಸರಕಾರದ ಆದಾಯ ಹೆಚ್ಚುತ್ತದೆಯೆಂದು ನಂಬುವ ತಮ್ಮ ಭಕ್ತರಿಗೆ ಸದ್ಬುದ್ಧಿ ಕೊಡಬಲ್ಲ ಗುರು, ಸದ್ಗುರು, ಜಗದ್ಗುರು, ಮಠಾಧೀಶ, ಧರ್ಮಾಧಿಕಾರಿ ಯಾರೊಬ್ಬರೂ ಧರ್ಮೋದ್ಯಮದ ಇಂದಿನ ಧರ್ಮರಾಜಕಾರಣದಲ್ಲಿ ಇಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)