varthabharthi

ನಿಮ್ಮ ಅಂಕಣ

ಜಿಎಸ್‌ಟಿ ವ್ಯವಸ್ಥೆಯ ಸಂಕಷ್ಟಗಳು

ವಾರ್ತಾ ಭಾರತಿ : 6 Sep, 2019
ಕೃಪೆ: Economic and Political Weekly

ಜಿಎಸ್‌ಟಿ ವ್ಯವಸ್ಥೆಯ ಜೊತೆಗಿನ ಹೊಂದಾಣಿಕೆಯ ಸಮಸ್ಯೆಗಳನ್ನು ಮುಂದುಮಾಡುತ್ತಾ ಜಿಎಸ್‌ಟಿ ವ್ಯವಸ್ಥೆಯಲ್ಲೇ ಇರುವ ಬಿಕ್ಕಟ್ಟುಗಳನ್ನು ಕೇಂದ್ರ ಸರಕಾರವು ಮರೆಮಾಚುತ್ತಿದೆಯೇ? 


ಕಳೆದ ಮೂರು ತಿಂಗಳಲ್ಲಿ ಕೇಂದ್ರ ಸರಕಾರವು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ (ಸಿಬಿಐಸಿ)ಪ್ರಾಧಿಕಾರದ ಕಮಿಷನರ್ ಮತ್ತು ಸೂಪರಿಂಟೆಂಡೆಂಟ್ ಸ್ಥಾಯಿಯ 37 ಅಧಿಕಾರಿಗಳನ್ನು ಭ್ರಷ್ಟಾಚಾರ ಸಂಬಂಧಿ ಆರೋಪಗಳ ಮೇಲೆ ಕಡ್ಡಾಯವಾಗಿ ನಿವೃತ್ತಿಗೊಳಿಸಿದೆ. ಇದರಲ್ಲಿ ಶೇ.60ರಷ್ಟು ಪ್ರಕರಣಗಳನ್ನು ಭಾರತದ ಮಹಾ ಲೇಖಪಾಲರು (ಸಿಎಜಿ) 2017-18ರಲ್ಲಿ ಪರೋಕ್ಷ ತೆರಿಗೆ ವಸೂಲಿ ಮಾಡಲು ಹೊಸದಾಗಿ ಜಾರಿ ಮಾಡಲಾಗಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ನಿರಾಶಾದಾಯಕ ಫಲಿತಾಂಶಗಳ ಬಗ್ಗೆ ನೀಡಿದ ವರದಿಯನ್ನು ಆಧರಿಸಿ ಮಾಡಲಾಗಿತ್ತು. ಆದರೆ ಆಡಳಿತವನ್ನು ಶುದ್ಧೀಕರಿಸುವ ಸರಕಾರದ ಈ ಕ್ರಮಗಳು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಉದ್ದೇಶದಿಂದ ಕೂಡಿವೆಯೇ? ಕೇಂದ್ರ ಸರಕಾರವು ಭ್ರಷ್ಟ ಮತ್ತು ಅಸಮರ್ಥ ಅಧಿಕಾರಿಗಳ ಮೇಲೆ 1972ರ ಕೇಂದ್ರೀಯ ನಾಗರಿಕ ಸೇವಾ ಮತ್ತು ಪೆನ್ಷನ್ ನಿಯಮಾವಳಿಗಳ ಮೂಲಭೂತ ನಿಯಮ 56 (ಜೆ) ಮತ್ತು 48ನೇ ಅಧಿನಿಯಮದ ಪ್ರಕಾರ ಅಥವಾ ತಿದ್ದುಪಡಿಯಾದ ಅಖಿಲ ಭಾರತ ನಿಧನ ಮತ್ತು ನಿವೃತ್ತಿ ವೇತನ ಸೌಲಭ್ಯಗಳ ನಿಯಮ 16 (3)ರ ಪ್ರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆಯನ್ನು ತರುವೆಡೆ ಒಂದು ಉತ್ತಮ ಹೆಜ್ಜೆಯಾಗಿದೆ.

ಇನ್ನು ತೆರಿಗೆ ವ್ಯವಸ್ಥೆ ಸಂಬಂಧಿ ವಿಷಯಗಳಿಗೆ ಸಂಬಂಧಪಟ್ಟಂತೆ ಈ ಕ್ರಮಗಳು ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಉಲ್ಲೇಖಿಸಿದಂತೆ ತೆರಿಗೆ ವ್ಯವಸ್ಥೆಯ ಆಡಳಿತದಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಪ್ರಾಮಾಣಿಕ ತೆರಿಗೆದಾರರನ್ನು ದುರುದ್ದೇಶಪೂರ್ವಕವಾಗಿ ಗುರಿಯಾಗಿರಿಸಿಕೊಂಡಿರುವ ಅಥವಾ ಸಣ್ಣಪುಟ್ಟ ತಪ್ಪುಗಳಿಗೆ ಅಥವಾ ವಿಧಿವಿಧಾನಗಳನ್ನು ಅನುಸರಿಸದಂಥ ತಪ್ಪುಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಕಳಂಕಿತ ಅಧಿಕಾರಿಗಳನ್ನು ಉದ್ದೇಶಿಸಿದೆ. ಆದರೆ ಇಂತಹ ಮನೆಮುರುಕರ ಮೇಲೆ ಕ್ರಮತೆಗೆದುಕೊಳ್ಳುವ ಅತ್ಯುತ್ಸಾಹದಲ್ಲಿ ಸರಕಾರವು ಮನೆಯ ಅಡಿಪಾಯದಲ್ಲೇ ಬಿರುಕಿರುವುದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲವೇ? ಮತ್ತು ಆ ಮೂಲಕ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾದ ಅವಕಾಶವನ್ನು ವ್ಯರ್ಥ ಮಾಡುತ್ತಿದೆಯೇ? ಸರಕಾರದ ತೆರಿಗೆ ವಸೂಲಿ ವ್ಯವಸ್ಥೆಯಲ್ಲಿ ಇಂತಹ ಭ್ರಷ್ಟ ಅಧಿಕಾರಿಗಳಿರುವುದು ಗಮನಕ್ಕೆ ಬಂದಮೇಲೆ ತೆರಿಗೆ ಅಧಿಕಾರಿ ಮತ್ತು ತೆರಿಗೆ ಕಟ್ಟುವವರು ಪರಸ್ಪರ ಎದುರಾಗುವ ಅವಕಾಶವನ್ನು ಕಲ್ಪಿಸುವ ಇನ್ವಾಯ್ಸಾ ಹೊಂದಾಣಿಕೆ ಪದ್ಧತಿಗಳನ್ನು ತೆಗೆದುಹಾಕುವುದು ಬದಿಗಿರಲಿ, ಏಕೆ ಕಡಿಮೆಗೊಳಿಸಿಲ್ಲ? ವಾಸ್ತವವಾಗಿ ಇನ್ವಾಯ್ಸಾ ಹೊಂದಾಣಿಕೆಯ ಪದ್ಧತಿಯು ತೆರಿಗೆ ತಪ್ಪಿಸುವುದನ್ನು ನಿವಾರಿಸುತ್ತದೆಂದು ನಿರೀಕ್ಷಿಸಲಾಗಿತ್ತು.

ಜಿಎಸ್‌ಟಿ ವ್ಯವಸ್ಥೆಯಲ್ಲಿ ಅದರಲ್ಲೂ ಅಂತರ್‌ರಾಜ್ಯ ಜಿಎಸ್‌ಟಿ ಪಾವತಿ ವ್ಯವಸ್ಥೆಯಾದ ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) ವ್ಯವಸ್ಥೆಯು ನೂರಕ್ಕೆ ನೂರು ಇನ್ವಾಯ್ಸಾ ಹೊಂದಾಣಿಕೆಯನ್ನು ಆಧರಿಸಿದೆ. ಆದರೆ ಇನ್ವಾಯ್ಸಾ ಹೊಂದಾಣಿಕೆ ವ್ಯವಸ್ಥೆಯು ಇನ್ನೂ ಸಾಕಾರಗೊಳ್ಳದಿರುವುದರಿಂದ ಈ ಉದ್ದೇಶಗಳು ಈಡೇರಿಲ್ಲ. ಅಷ್ಟು ಮಾತ್ರವಲ್ಲದೆ ಸಿಎಜಿಯೇ ಗುರುತಿಸಿರುವಂತೆ ಸೂಕ್ತವಾದ ಇನ್ವಾಯ್ಸಾ ಹೊಂದಾಣಿಕೆ ವ್ಯವಸ್ಥೆ ಇಲ್ಲದಿರದಿರುವುದರಿಂದ ಜಿಎಸ್‌ಟಿ ವ್ಯವಸ್ಥೆಯ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆಯಲ್ಲಿ ಸಾಕಷ್ಟು ಮೋಸಗಳಾಗುತ್ತಿವೆ. ಅದರಿಂದಾಗಿ ತೆರಿಗೆ ಸಂಗ್ರಹವು ಸೋರಿಹೋಗುತ್ತಿದೆ. ಹಾಗೂ ಇನ್ವಾಯ್ಸಾ ಹೊಂದಾಣಿಕೆಯಲ್ಲಿನ ಸಮಸ್ಯೆ ಮತ್ತು ಸ್ವಯಂಚಾಲಿತವಾಗಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಮರುಪಾವತಿಗಳು ಆಗದಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹವೂ ಆಗುತ್ತಿಲ್ಲ. ಇದು, ತೆರಿಗೆ ಕಟ್ಟುವವರು ಸಲ್ಲಿಸಬೇಕಾದ ಒಟ್ಟು ವಹಿವಾಟಿನ ಸಾರೀಕೃತ ಲೆಕ್ಕಪತ್ರ (ಜಿಎಸ್‌ಟಿಆರ್3ಇ) ಗಳ ಸಂಖ್ಯೆ 2018ರ ಎಪ್ರಿಲ್‌ನಲ್ಲಿ ಶೇ.87ರಷ್ಟಿದ್ದದ್ದು 2018ರ ಡಿಸೆಂಬರ್ ವೇಳೆಗೆ ಶೇ.79ರಷ್ಟಕ್ಕೆ ಇಳಿದಿರುವುದರಲ್ಲೂ ಸ್ಪಷ್ಟವಾಗಿ ಪ್ರತಿಫಲಿತವಾಗಿದೆ.

ಅಂತರ್‌ರಾಜ್ಯ ಸರಕು ಸಾಗಾಣೆ ಮತ್ತು ಆಮದುಗಳ ವ್ಯವಹಾರದಿಂದಾಗಿ ಕಟ್ಟುವ ಐಜಿಎಸ್‌ಟಿಯು 2017-18ರಲ್ಲಿ 1,76,688 ಕೋಟಿರೂ.ಗಳಷ್ಟಿದ್ದದ್ದು 2018-19ರಲ್ಲಿ 28,947 ಕೋಟಿ ರೂ.ಗಳಿಗಿಳಿದಿತ್ತು. ಅದೇ ರೀತಿ ಪೆಟ್ರೋಲಿಯಂ ಮತ್ತು ತಂಬಾಕುಗಳ ಮೇಲಿನ ಕೇಂದ್ರೀಯ ತೆರಿಗೆಗಳನ್ನು ಹೊರತುಪಡಿಸಿ ಜಿಎಸ್‌ಟಿ ಮೂಲದ ಕೇಂದ್ರದ ತೆರಿಗೆ ಆದಾಯ 2016-17ರ ಹೋಲಿಕೆಯಲ್ಲಿ 2017-18ರ ಸಾಲಿನಲ್ಲಿ ಶೇ.10ರಷ್ಟು ಇಳಿತವನ್ನು ಕಂಡಿತ್ತು. ಈಗ ಪ್ರಾರಂಭದಲ್ಲಿ ಎತ್ತಿರುವ ಆ ಎರಡು ಪ್ರಶ್ನೆಗಳಿಗೆ ವಾಪಸಾಗೋಣ. ಜಿಎಸ್‌ಟಿ ವ್ಯವಸ್ಥೆಯಲ್ಲೇ ಆಡಕವಾಗಿರುವ ಬಿಕ್ಕಟ್ಟನ್ನು ಸರಕಾರ ಮರೆಮಾಚಲು ಯತ್ನಿಸುತ್ತಿದೆಯೇ ಎಂಬ ಪ್ರಶ್ನೆಗೆ ಸಹಜ ಮತ್ತು ನಿರೀಕ್ಷಿತ ಉತ್ತರ ಇಲ್ಲ ಎಂದೇ ಆಗಿರುತ್ತದೆ. ಉದಾಹರಣೆಗೆ ಜಿಎಸ್‌ಟಿಯ ವಿನ್ಯಾಸದ ಅತಿ ಕೇಂದ್ರ ಸ್ಥಾನದಲ್ಲಿರುವ ಇನ್ವಾಯ್ಸಾ ಹೊಂದಾಣಿಕೆಯ ಬಾಬತ್ತನ್ನೇ ಗಮನಿಸೋಣ. ಈ ವ್ಯವಸ್ಥೆಯು ಹೊಸದಾಗಿದ್ದು ತೆರಿಗೆದಾತ ಮತ್ತು ತೆರಿಗೆ ವಸೂಲಿ ಅಧಿಕಾರಿಗಳಿಬ್ಬರೂ ಈ ವ್ಯವಸ್ಥೆಗೆ ಹೊಂದಿಕೊಳ್ಳಲು ಸಮಯ ಬೇಕಿರುವುದರಿಂದ ಪ್ರಾರಂಭದಲ್ಲಿ ಈ ಸಮಸ್ಯೆಗಳು ಉದ್ಭವವಾಗುವುದು ಸಹಜವೇ ಆಗಿದೆ.

ಆದ್ದರಿಂದ ನಿಧಾನಕ್ಕೆ ಇವೆಲ್ಲಕ್ಕೂ ಪರಿಹಾರ ಕಂಡುಕೊಳ್ಳಲಾಗುವುದೆಂದು ಜಿಎಸ್‌ಟಿ ಕೌನ್ಸಿಲ್‌ನ ಸದಸ್ಯರಿಂದ ಹಿಡಿದು ಇತರ ಎಲ್ಲಾ ಜಿಎಸ್‌ಟಿ ಪ್ರತಿಪಾದಕರೂ ಉಸಿರುಗಟ್ಟಿ ಸಮರ್ಥನೆಗೆ ಇಳಿಯುತ್ತಾರೆ ಹಾಗೂ ಅದಕ್ಕೆ ಪೂರಕವಾಗಿ 2017ರಿಂದ ನವೆಂಬರ್‌ನಿಂದಾಚೆಗೆ ಜಿಎಸ್‌ಟಿ ದರಗಳಲ್ಲಿ ಮಾಡಿರುವ ಇಳಿಕೆಗಳತ್ತ ಮತ್ತು ಅದರಿಂದ ತೆರಿಗೆ ಸಂಗ್ರಹದಲ್ಲಿ ಆಗಿರುವ ಪರಿಣಾಮಗಳತ್ತ ಗಮನವನ್ನು ಸೆಳೆಯಲಾಗುತ್ತದೆ. ಜೊತೆಗೆ 2017ರ ಜುಲೈ ನಂತರದ ಎಂಟು ತಿಂಗಳಲ್ಲಿ ಒಟ್ಟಾರೆ ನೋಂದಾಯಿತ ತೆರಿಗೆದಾರರ ಸಂಖ್ಯೆ 65 ಲಕ್ಷದಿಂದ 1.2 ಕೋಟಿಗೆ ಅಂದರೆ ಶೇ.84ರಷ್ಟು ಏರಿಕೆಯಾಗಿರುವುದರತ್ತಲೂ ಗಮನ ಸೆಳೆಯಲಾಗುತ್ತದೆ. ಆದರೆ ನೋಂದಾಯಿತ ತೆರಿಗೆದಾರರ ಸಂಖ್ಯೆ ಇಷ್ಟೆಲ್ಲಾ ಹೆಚ್ಚಳ ಕಂಡಿದ್ದರೂ ಈಗಲೂ ಶೇ.95ರಷ್ಟು ತೆರಿಗೆಯನ್ನು ಕಟ್ಟುತ್ತಿರುವವರು ಶೇ.5ರಷ್ಟು ತೆರಿಗೆದಾರರು ಮಾತ್ರ ಎಂಬ ಸತ್ಯವು ಈ ಎಲ್ಲಾ ಜೋರುಗಂಟಲಿನ ಪ್ರತಿಪಾದನೆಗಳ ನಡುವೆ ಮರೆಯಾಗಿ ಹೋಗುತ್ತಿದೆ. ಒಂದು ವೇಳೆ ತಾಂತ್ರಿಕ ತೊಡಕುಗಳು ನಿವಾರಣೆಯಾದರೂ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಾಗುವುದು ದುಸ್ತರ. ಏಕೆಂದರೆ ದೇಶದ ಒಟ್ಟಾರೆ ಉತ್ಪನ್ನದ ಶೇ.40ರಷ್ಟನ್ನು ಮತ್ತು ಶೇ.90ರಷ್ಟು ಉದ್ಯೋಗವನ್ನು ನೀಡುವ ಅಸಂಘಟಿತ ಕ್ಷೇತ್ರವನ್ನು ಇದು ಒಳಗೊಳ್ಳುವುದಿಲ್ಲ ಅಥವಾ ಜಿಎಸ್‌ಟಿಯಿಂದ ಆ ಕ್ಷೇತ್ರಕ್ಕೆ ಲಾಭವಿಲ್ಲ.

ಅಸಂಘಟಿತ ಕ್ಷೇತ್ರದ ಬಹಳಷ್ಟು ಭಾಗವು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದುಕೊಳ್ಳಲು ಅರ್ಹವಾಗುವುದಿಲ್ಲ. ಆ ತೆರಿಗೆಯನ್ನು ಕೊಳ್ಳುವವರೇ ಭರಿಸುವ ರಿವರ್ಸ್ ಚಾರ್ಜ್ ವ್ಯವಸ್ಥೆಯು ಸಂಘಟಿತ ವಲಯದ ಬೆಲೆ ಸ್ವರೂಪದ ಮೇಲೆ ಪರಿಣಾಮ ಬೀರುವುದರಿಂದ ಅದೂ ಕೂಡಾ ತೆರಿಗೆದಾರರನ್ನು ಆಕರ್ಷಿಸುತ್ತಿಲ್ಲ. ಹೀಗಾಗಿ ನಾವು ಪ್ರಾರಂಭದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರವೇನೆಂದರೆ ಈ ಇಲಾಖೆಯ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡ ಮಾತ್ರಕ್ಕೆ ಅದು ತನ್ನಿಂದ ತಾನೇ ಜಿಎಸ್‌ಟಿ ವ್ಯವಸ್ಥೆಯಲ್ಲಿ ಆಗುತ್ತಿರುವ ವ್ಯವಸ್ಥಾತ್ಮಕ ಸೋರಿಕೆಯನ್ನೇನೂ ನಿಲ್ಲಿಸುವುದಿಲ್ಲ. ಜಿಎಸ್‌ಟಿ ವ್ಯವಸ್ಥೆಯಲ್ಲೇ ಇರುವ ಈ ಬಿಕ್ಕಟ್ಟುಗಳನ್ನು ಪ್ರಶ್ನಿಸುವ ಯಾವುದೇ ರಾಜಕೀಯ ಪ್ರತಿರೋಧ ಇಲ್ಲದಿರುವುದರಿಂದ ಸರಕಾರವೇ ಆ ಪಾತ್ರವನ್ನು ನಿಭಾಯಿಸುತ್ತಿದೆ ಮತ್ತು ಅದು ಯಾವುದೇ ವ್ಯಾವಹಾರಿಕ ಪರಿಹಾರ ಕ್ರಮಗಳನ್ನು ಆಧರಿಸಿರದೆ ಕೇವಲ ನೈತಿಕ ಪ್ರತಿಕ್ರಿಯೆ/ಕ್ರಮಗಳಿಗೆ ಸೀಮಿತವಾಗುತ್ತಿದೆ ಹಾಗೂ ತಮ್ಮದು ಆತ್ಮಾವಲೋಕವನ್ನು ಆಧರಿಸಿದ ಮಧ್ಯಪ್ರವೇಶವೆಂಬ ಉತ್ಪ್ರೇಕ್ಷಿತ ಪ್ರಚಾರವನ್ನು ಮಾತ್ರ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)