varthabharthi

ಅಂತಾರಾಷ್ಟ್ರೀಯ

ಝಿಂಬಾಬ್ವೆಯ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ನಿಧನ

ವಾರ್ತಾ ಭಾರತಿ : 6 Sep, 2019

ಹರಾರೆ (ಝಿಂಬಾಬ್ವೆ), ಸೆ. 6: ಝಿಂಬಾಬ್ವೆಯ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ನಿಧನರಾಗಿದ್ದಾರೆ ಎಂದು ದೇಶದ ಅಧ್ಯಕ್ಷ ಎಮರ್ಸನ್ ಮನಂಗಾಗ್ವ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘೋಷಿಸಿದ್ದಾರೆ. ಅವರಿಗೆ 95 ವರ್ಷ ಪ್ರಾಯವಾಗಿತ್ತು.

ಅವರು ಸಿಂಗಾಪುರದಲ್ಲಿ ನಿಧನರಾದರು. ಇತ್ತೀಚಿನ ವರ್ಷಗಳಲ್ಲಿ ಅವರು ಸಿಂಗಾಪುರದಲ್ಲಿ ಆಗಾಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲವೊಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದೆ.

‘‘ಝಿಂಬಾಬ್ವೆಯ ಸ್ಥಾಪಕ ಹಾಗೂ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ನಿಧನರಾಗಿದ್ದಾರೆ ಎಂದು ತಿಳಿಸಲು ನನಗೆ ಅತ್ಯಂತ ದುಃಖವಾಗುತ್ತಿದೆ’’ ಎಂದು ಮನಂಗಾಗ್ವ ತನ್ನ ಅಧಿಕೃತ ಅಧ್ಯಕ್ಷೀಯ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ.

ನವೆಂಬರ್‌ನಲ್ಲಿ ಮುಗಾಬೆಯನ್ನು ಸಿಂಗಾಪುರದಲ್ಲಿ ಆಸ್ಪತ್ರೆಗೆ ಸೇರಿಸಿದ್ದಾಗ, ಅವರಿಗೆ ಇನ್ನು ನಡೆಯಲು ಸಾಧ್ಯವಾಗುವುದಿಲ್ಲ ಎಂದು ಮನಂಗಾಗ್ವ ಹೇಳಿದ್ದರು. ಅವರು ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಆಗಾಗ ಹೇಳುತ್ತಿದ್ದರು. ಆದರೆ, ಅವರು ವೃಷಣದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

 1980ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ ಪಡೆದ ಬಳಿಕ, ಮುಗಾಬೆ ಝಿಂಬಾಬ್ವೆಯನ್ನು ಸುಮಾರು ನಾಲ್ಕು ದಶಕಗಳ ಕಾಲ ಆಳಿದರು. ಕೊನೆಗೂ, 2017 ನವೆಂಬರ್‌ನಲ್ಲಿ ಸೇನಾ ದಂಗೆಯ ಬಳಿಕ ಅವರು ರಾಜೀನಾಮೆ ನೀಡಬೇಕಾಯಿತು.

ಅವರು ಜನರ ಮೇಲೆ ದಬ್ಬಾಳಿಕೆ ನಡೆಸಿ ಹಾಗೂ ಭಯ ಹುಟ್ಟಿಸಿ, 37 ವರ್ಷಗಳ ಕಾಲ ದೇಶದ ಚುಕ್ಕಾಣಿಯನ್ನು ತನ್ನ ಕಪಿಮುಷ್ಟಿಯಲ್ಲಿರಿಸಿದರು. ಅವರಿಗೆ ನಿಷ್ಠರಾಗಿದ್ದ ಸೇನಾ ಜನರಲ್‌ಗಳು ತಿರುಗಿಬಿದ್ದ ಬಳಿಕ ಅವರು ಅಧಿಕಾರದಿಂದ ಹೊರದಬ್ಬಲ್ಪಟ್ಟರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)