varthabharthi

ಸುಗ್ಗಿ

ತೇಜಸ್ವಿ ಹಂಚಿಕೊಂಡ ನಾಯಿಮರಿ ಪ್ರಸಂಗ

ವಾರ್ತಾ ಭಾರತಿ : 7 Sep, 2019
ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಸೆಪ್ಟಂಬರ್ 8 ಹಿರಿಯ ಲೇಖಕ ದಿ. ಪೂರ್ಣಚಂದ್ರ ತೇಜಸ್ವಿ ಅವರು ಹುಟ್ಟಿದ ದಿನ. ತಮ್ಮ ಬಾಲ್ಯದ ಘಟನೆಯೊಂದನ್ನು ತೇಜಸ್ವಿ ಅವರು ಇಲ್ಲಿ ಆತ್ಮೀಯವಾಗಿ ಹಂಚಿಕೊಂಡಿದ್ದಾರೆ. ತನ್ನ ತಂದೆ ಕುವೆಂಪು ಅವರ ವ್ಯಕ್ತಿತ್ವವನ್ನೂ ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ತೇಜಸ್ವಿ ಅವರ ‘ಅಣ್ಣನ ನೆನಪು’ ಕೃತಿಯಿಂದ ಈ ಭಾಗವನ್ನು ಆಯ್ದುಕೊಳ್ಳಲಾಗಿದೆ.

     ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಶಿವಮೊಗ್ಗ್ಗದಿಂದ ಎರಡು ನಾಯಿಮರಿಗಳು ನಮ್ಮ ಮನೆಗೆ ಬಂದಾಗ ನಮ್ಮ ಬಹುದಿನಗಳ ಕನಸು ನನಸಾದುದಕ್ಕೆ ಆದ ಹಿಗ್ಗು ಅಷ್ಟಿಷ್ಟಲ್ಲ. ಮನೆಗಳಲ್ಲಿ ಸಾಕಲು ನಾಯಿಮರಿಗಳಿಲ್ಲದ ನತದೃಷ್ಟ ಸ್ಕೂಲು ಮಿತ್ರರನೇಕರು ನಮ್ಮಿಡನೆ ದಿನಾ ಸಂಜೆ ಬಂದು ನಾಯಿಮರಿಗಳನ್ನು ನೋಡಿಕೊಂಡು ಅವುಗಳನ್ನು ಪ್ರಶಂಸಿಸಿ ಹೋಗುತ್ತಿದ್ದರು. ಮನೆಯೆದುರು ಬೀದಿಗಳಲ್ಲಿ ಆಡುತ್ತಿದ್ದ ನಮ್ಮ ಆಟಗಳೆಲ್ಲಾ ತಾತ್ಕಾಲಿಕವಾಗಿ ಖೈದಾಗಿ ಸ್ಕೂಲಿನಿಂದ ಬಂದ ಕೂಡಲೆ ನಾಯಿ ಮರಿಗಳ ಜೊತೆ ಆಟವಾಡಲು ಶುರುಮಾಡುತ್ತಿದ್ದೆವು. ಅವುಗಳಿಗೆ ಸತತವಾಗಿ ತಿಂಡಿ ತಿನ್ನಿಸುವುದೊಂದೇ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನವೆಂದು ನಾವು ತಿಳಿದಿದ್ದುದ್ದರಿಂದ ನಮಗೆ ಕೊಟ್ಟ ತಿಂಡಿ ತೀರ್ಥಗಳಲ್ಲಿ ಸಾಕಷ್ಟು ಅವಕ್ಕೇ ವ್ಯಯವಾಗುತ್ತಿದ್ದು, ಅವುಗಳ ಹೊಟ್ಟೆ ಯಾವಾಗಲೂ ಗುಡಾಣದಂತೆ ಊದಿಕೊಂಡಿರುತ್ತಿತ್ತು. ಯಾರಾದರೂ ಹಿಡಿದೆತ್ತಿದರೆ ಅವು ಉಸಿರಾಡಲೂ ಕಷ್ಟಪಡುತ್ತಾ ತಿಣುಕುತ್ತಿದ್ದವು. ‘‘ಆ ಮರಿಗಳ ಬಾಲಗಳ ತಂಟೆಗೆ ಮಾತ್ರಾ ಹೋದೀರಿ’’ ಎಂದು ನಮ್ಮ ತಂದೆಯವರು ನನಗೂ ಚೈತ್ರನಿಗೂ ಕಟುವಾಗಿ ಎಚ್ಚರಿಸಿದ್ದರು. ನಮಗೆ ಆ ನಾಯಿಮರಿಗಳು ಬೆಳ್ಳಗಿದ್ದು ನೋಡಲು ತುಂಬಾ ಮುದ್ದಾಗಿದ್ದುದ್ದರಿಂದ ಅವುಗಳನ್ನು ಜಾತಿನಾಯಿಗಳನ್ನಾಗಿ ಪರಿವರ್ತಿಸುವ ಅಗತ್ಯ ಕಾಣಲಿಲ್ಲ. ಇದರೊಡನೆ ನಮ್ಮ ತಂದೆಯವರ ಎಚ್ಚರಿಕೆಯೂ ಸೇರಿ ನಾವು ಆ ಮರಿಗಳ ಬಾಲ ಕತ್ತರಿಸುವ ಯೋಚನೆ ಮಾಡಲಿಲ್ಲ. ಅವು ಚಿಕ್ಕ ಮರಿಗಳಾಗಿದ್ದಾಗ ಮುದ್ದಾಗಿದ್ದುದರಿಂದ ಕಂಡಕಂಡವರೆಲ್ಲಾ ಅವುಗಳ ತಲೆ ಸವರಿ ಅವಕ್ಕೆ ಮನೆಯವರು ಯಾರು? ಪರಕೀಯರು ಯಾರು? ಕಳ್ಳರು ಯಾರು? ಒಳ್ಳೆಯವರು ಯಾರು ಎನ್ನುವ ಪರಿಜ್ಞಾನವೇ ಇರಲಿಲ್ಲ. ಯಾರು ಮನೆ ಹತ್ತಿರ ಸುಳಿದಾಡಿದರೂ ಬಾಲ ಅಲ್ಲಾಡಿಸಿಕೊಂಡು ಅವರ ಕಾಲು ನೆಕ್ಕಲು ಓಡಿಹೋಗುತ್ತಿದ್ದುವು. ಮನೆಗೆ ಬರುವ ಭಿಕ್ಷುಕರು ದಾರಿಹೋಕರು ಎಲ್ಲರೂ ನಾಯಿಮರಿಗಳ ಗಣನೆಯೇ ಇಲ್ಲದೆ ಒಳನುಗ್ಗುವುದನ್ನು ನೋಡಿ ನಮಗೆ ತುಂಬಾ ಸಿಟ್ಟು ಬರುತ್ತಿತ್ತು. ನಾವು ನಾಯಿಮರಿಗಳನ್ನು ಮುದ್ದಿಸುವುದನ್ನು ನಿಲ್ಲಿಸಿ ಅವಕ್ಕೆ ಸರಿಯಾದ ಶಿಕ್ಷಣ ಕೊಡಬೇಕೆಂದು ನಿರ್ಧರಿಸಿದೆವು. ನಾಯಿ ಮರಿಗಳನ್ನು ಗೇಟಿನ ಮೇಲೆ ನಿಲ್ಲಿಸಿಕೊಂಡು ಹೋಗಿಬರುವ ದನ, ಕಂತ್ರಿನಾಯಿ, ದಾರಿಹೋಕರು ಎಲ್ಲರ ಮೇಲೂ ಛೂ ಛೂ ಎಂದು ಛೂ ಬಿಡುತ್ತಿದ್ದೆವು. ಆದರೆ ನಾಯಿಮರಿಗಳಿಗೆ ಛೂ ಛೂ ಎಂದರೆ ಬೊಗಳಬೇಕೆಂದು ಗೊತ್ತಾಗುವುದಾದರು ಹೇಗೆ? ನಮ್ಮ ಭಾಷೆ ಅವಕ್ಕೂ, ಅವುಗಳ ಭಾಷೆ ನಮಗೂ ಗೊತ್ತಿಲ್ಲವಲ್ಲ! ನಮ್ಮ ಮನೆಗೆ ಒಬ್ಬ ಚಪ್ಪಲಿ ಹೊಲಿಯುವವ ಆಗ್ಗಾಗ್ಗೆ ಬರುತ್ತಿದ್ದ. ಅವನ ಹೆಸರು ಜಾನ್ ಎಂದು. ಎಲ್ಲರೂ ಅವನನ್ನು ಜಾನಪ್ಪ ಎಂದು ಕರೆಯುತ್ತಿದ್ದರು. ಅವನು ಮಿಲಿಟರಿಯಲ್ಲಿದ್ದು ಮಹಾಯುದ್ಧದಲ್ಲಿ ಭಾಗವಹಿಸಿದ್ದೆ ಎಂದು ನಮ್ಮ ಹತ್ತಿರ ಬಡಾಯಿ ಕೊಚ್ಚುತ್ತಿದ್ದ. ಕೈ ಕಾಲುಗಳ ಮೇಲಿದ್ದ ಅನೇಕ ಕಲೆಗಳನ್ನು ಗುಂಡೇಟಿನ ಗಾಯಗಳೆಂದು ನಮ್ಮೆದುರು ಪ್ರದರ್ಶಿಸುತ್ತಿದ್ದ. ಅವನೊಮ್ಮೆ ನಮ್ಮ ಮನೆಗೆ ಚಪ್ಪಲಿ ರಿಪೇರಿಗೆ ಬಂದಾಗ ನಮ್ಮೆಡನಿದ್ದ ನಾಯಿ ಮರಿಗಳನ್ನು ನೋಡಿ ಕಮಾನ್ ಡಾಗ್, ಕಮಾನ್ ಡಾಗ್, ಸಿಡೌನ್, ಸಿಡೌನ್ ಅವುಗಳನ್ನು ಕರೆದ. ನಮಗೆ ಆಗ ಇಂಗ್ಲಿಷ್ ಎಂದರೇನು? ಹಿಂದಿಯೆಂದರೇನು? ಎನ್ನುವುದೂ ಸರಿಯಾಗಿ ಗೊತ್ತಿರಲಿಲ್ಲ. ಸಾಬರ ಭಾಷೆ ಎಂದು ಹಿಂದಿಯನ್ನು ಕರೆಯುತ್ತಿದ್ದೆವು. ಜಾನಪ್ಪ ಕಮಾನ್ ಡಾಗ್ ಕಮಾನ್ ಡಾಗ್ ಎಂದು ಕರೆದ ಕೂಡಲೆ ಓಹೋ ಇವನಿಗೆ ನಾಯಿಭಾಷೆ ಗೊತ್ತಿದೆ ಎಂದುಕೊಂಡು ನಮಗೊಂಚೂರು ನಾಯಿ ಭಾಷೆ ಹೇಳಿಕೊಡೋ ಎಂದು ಅವನ ಹತ್ತಿರ ಗೋಗರೆದೆವು. ಜಾನಪ್ಪ ಕಷ್ಟಪಟ್ಟು ಉರು ಹೊಡೆದಿದ್ದ ನಾಲ್ಕಕ್ಷರ ಇಂಗ್ಲಿಷನ್ನು ನಾವು ನಾಯಿಭಾಷೆ ಎಂದು ಕರೆದಿದ್ದು ಅವನಿಗೆ ಸರಿತೋರಲಿಲ್ಲ. ಅವನು ಅದು ನಾಯಿಭಾಷೆ ಅಲ್ಲವೆಂದೂ ಯೂರೋಪಿಯನ್ ದೊರೆಗಳು ಮಾತಾಡುವ ಭಾಷೆಯೆಂದೂ ಹೇಳಿದ. ನಾವು ಜಾತಿ ನಾಯಿ ಸಾಕಿರುವುದರಿಂದ ಅದಕ್ಕೆ ಕನ್ನಡ ಗೊತ್ತಾಗುವುದಿಲ್ಲವೆಂದೇ ತಾನು ಇಂಗ್ಲಿಷಿನಲ್ಲಿ ಅವನ್ನು ಮಾತಾಡಿಸುತ್ತಿರುವುದಾಗಿ ಹೇಳಿದ. ನಾಯಿಗಳನ್ನು ಕರೆಯಲು ಏನು ಹೇಳಬೇಕು, ಕುಳಿತುಕೊಳ್ಳಲು ಏನು ಹೇಳಬೇಕು, ಹೊರಟು ಹೋಗಲು ಏನೆನ್ನಬೇಕು ಎಂದು ಇಂಗ್ಲಿಷ್ ಹುಕುಂಗಳನ್ನು ಹೇಳಿಕೊಟ್ಟ. ನಾವು ಅವು ಪದಗಳೆಂದಾಗಲಿ ಅವಕ್ಕೆ ಅರ್ಥವಿದೆಯೆಂದಾಗಲಿ ಪರಿಗಣಿಸದೆ ಉರು ಹಚ್ಚಿಕೊಂಡು ಕಮಂಡಾ, ಕಮಂಡಾ ಎಂದು ಕೂಗುತ್ತಿದ್ದೆವು.

ನಾವು ನಾಯಿಗಳಿಗೆ ಕೊಡುತ್ತಿದ್ದ ಈ ವಿಚಿತ್ರ ಹುಕುಂಗಳನ್ನು ಕೇಳಿ ಅಣ್ಣ ಚಕಿತರಾಗಿ ‘‘ಏನ್ರೋ ಹಂಗಂದರೆ ?’’ ಎಂದು ಒಮ್ಮೆ ಕೇಳಿದಾಗ ನಾವು ಅದು ಜಾನಪ್ಪ ಹೇಳಿಕೊಟ್ಟ ಇಂಗ್ಲಿಷ್ ನಾಯಿ ಭಾಷೆ, ಜಾತಿ ನಾಯಿಗಳಿಗೆ ಕನ್ನಡ ಬರುವುದಿಲ್ಲಂತೆ ಎಂದು ಹೇಳಿದೆವು. ಕಮಂಡಾ ಎನ್ನುವ ಪದ ಇಂಗ್ಲಿಷಿನ ಯಾವ ಪದದ ಅಪಭ್ರಂಶ ಎನ್ನುವುದೂ ಸಹ ಅಣ್ಣನಿಗೆ ಹೊಳೆಯಲಿಲ್ಲ. ಆದರೆ ಕಂತ್ರಿ ನಾಯಿಗಳಿಗೆ ಕನ್ನಡ, ಜಾತಿನಾಯಿಗಳಿಗೆ ಇಂಗ್ಲಿಷ್ ಎನ್ನುವ ಆಲೋಚನೆಯ ಹಿಂದಿರುವ ತೀರಾ ಸೂಕ್ಷ್ಮವಾದ ಕನ್ನಡದ ಬಗ್ಗೆಯ ತಿರಸ್ಕಾರ ಅಣ್ಣನ ಮನ ನೋಯಿಸಿರಬೇಕು. ಏಕೆಂದರೆ ಕನ್ನಡದ ಹಿರಿಮೆ ಪ್ರಾಚೀನತೆಗಳನ್ನೆಲ್ಲಾ ಹೊಗಳಿ ಪಂಪನೆನ್ನುವ ಕವಿ ಕನ್ನಡದಲ್ಲಿ ಮಹಾಕಾವ್ಯ ಬರೆಯುತ್ತಿದ್ದಾಗ ನಿನ್ನ ಇಂಗ್ಲಿಷ್ ದೊರೆಗಳು ಕಾಡಿನಲ್ಲಿ ತೊಗಟೆ ಸುತ್ತಿಕೊಂಡು ಕಿರಾತರಂತೆ ಬದುಕುತ್ತಿದ್ದರು ಅಂತ ‘‘ಜಾನಪ್ಪ ಇನೊಮ್ಮೆ ಬಂದರೆ ಹೇಳಿ’’ ಎಂದು ನಮಗೆ ಹೇಳಿದರು. ಕನ್ನಡಿಗರ ಅಭಿಮಾನ ಶೂನ್ಯತೆಯ ಬಗ್ಗೆ ಅಣ್ಣನಿಗಿದ್ದ ಸಿಟ್ಟಿನ ಮೊದಲ ಪರಿಚಯ ನನಗಾದುದು ಆಗಲೇ ಎಂದೆನಿಸುತ್ತದೆ. ನಾವೇನು ಜಾನಪ್ಪನಿಗೆ ಅಣ್ಣ ಹೇಳಿದ್ದನ್ನು ಹೇಳಲಿಲ್ಲ. ನಮ್ಮ ನಾಯಿಮರಿಗಳಿಗೋ ಇಂಗ್ಲಿಷ್ ಬಗ್ಗೆಯಾಗಲೀ ಕನ್ನಡದ ಬಗ್ಗೆಯಾಗಲೀ ಯಾವುದೇ ರೀತಿಯ ವಿಶೇಷ ಅಭಿಮಾನವಿದ್ದಂತೆ ತೋರಲಿಲ್ಲ. ಅವು ನಾವು ಯಾವ ಭಾಷೆಯಲ್ಲಿ ಏನು ಹೇಳಿದರೂ ಅದನ್ನು ನಿರ್ಲಕ್ಷಿಸಿ ನಮ್ಮ ಕೈಯ್ಯಲ್ಲೇನಾದರೂ ತಿಂಡಿ ಇದೆಯಾ ಎನ್ನುವುದಕ್ಕಷ್ಟೆ ಗಮನ ಕೊಡುತ್ತಿದ್ದವು. ಮೈಸೂರಿಗೆ ಒಂದು ಸರ್ಕಸ್ ಕಂಪೆನಿ ಬಂದು ಗುಡಾರ ಹಾಕಿತು. ಕ್ಲಾಸಿನಲ್ಲೆಲ್ಲಾ ಅದು ಜಿ.ಎ. ಸರ್ಕಸ್ ಎಂಬ ಪ್ರಖ್ಯಾತ ಕಂಪೆನಿ ಎಂದು ಮಾತಾಡಿಕೊಳ್ಳುತ್ತಿದ್ದರು. ಸರ್ಕಸ್ ಕಂಪೆನಿಯ ಸಿಂಹಗಳು ಹೂಂಕರಿಸುವುದೂ, ಆನೆಗಳು ಘೀಳಿಡುವುದೂ ಬೆಳಗಿನ ಜಾವ ನಮ್ಮ ಮನೆಗೂ ಕೇಳಿಸುತ್ತಿತ್ತು. ಅಲ್ಲದೆ ಸರ್ಕಸ್ ಕಂಪೆನಿ ಬಂದಿರುವುದರಿಂದ ಜಾಹೀರಾತು ಎಂಬಂತೆ ಅವರು ತಮ್ಮ ಆನೆ ಕುದುರೆ ಒಂಟೆಗಳನ್ನು ಮೈಸೂರಿನ ಮೊಹಲ್ಲಾಗಳಲ್ಲಿ ಒಮ್ಮಿಮ್ಮೆ ಮೆರವಣಿಗೆ ತೆಗೆದುಕೊಂಡು ಹೋಗುತ್ತಿದ್ದರು. ನಮ್ಮ ಕಾಟ ತಾಳಲಾರದೆ ಅಣ್ಣ ನಮ್ಮನ್ನು ಸರ್ಕಸ್ಸಿಗೆ ಕರೆದುಕೊಂಡು ಹೋದರು. ನಾನು, ಚೈತ್ರ, ಕಲಾ ಮೂವರೂ ಸರ್ಕಸ್ ನೋಡಲು ಹೋದೆವು. ತಾರಿಣಿ ಪೂರಾ ಚಿಕ್ಕವಳಿದ್ದುದ್ದರಿಂದ ಅವಳನ್ನು ಕರೆದೊಯ್ಯಲಿಲ್ಲ. ಅಲ್ಲಿ ಪ್ರಧಾನವಾಗಿ ನಮ್ಮ ಗಮನ ಸೆಳೆದುದೆಂದರೆ ನಾಯಿಗಳ ಕೈಯಲ್ಲಿ ಸರ್ಕಸ್ ಮಾಡಿಸುತ್ತಿದ್ದುದು. ಹೈ ಜಂಪ್, ಲಾಂಗ್ ಜಂಪ್, ಎರಡು ಕಾಲಿನ ನಡಿಗೆ ಇತ್ಯಾದಿಗಳನ್ನೆಲ್ಲಾ ನಾಯಿಗಳು ಮಾಡುತ್ತಿದ್ದುದನ್ನು ನೋಡಿ ನಾವು ಕೊನೇ ಪಕ್ಷ ಸರ್ಕಸ್ಸನ್ನಾದರೂ ನಾಯಿಗಳಿಗೆ ಕಲಿಸೋಣವೆಂದು ಮಾರನೆಯ ದಿನದಿಂದಲೇ ನಮ್ಮ ಪ್ರಯತ್ನ ಶುರು ಮಾಡಿದೆವು. ನಾಯಿ ಮರಿಗಳಿಗೆ ಹೈ ಜಂಪ್ ಕಲಿಸಬೇಕೆಂದು ನಮ್ಮ ಕಾಂಪೌಂಡ್ ಗೋಡೆ ಹಾರುವುದನ್ನು ಕಲಿಸಲು ಪ್ರಯತ್ನಿಸಿದೆವು. ಅವುಗಳ ಕುತ್ತಿಗೆಗೆ ಹಗ್ಗ ಕಟ್ಟಿ ಒಬ್ಬರು ಕಾಂಪೌಂಡ್ ಆಚೆ ನಿಂತುಕೊಂಡು ಎಳೆಯುವುದು ಮಿಕ್ಕವರು ಈಚೆ ನಿಂತುಕೊಂಡು ಅವಕ್ಕೆ ಕಾಂಪೌಂಡ್ ಹಾರಲು ಪ್ರೋತ್ಸಾಹಿಸುವುದೂ ನಡೆಯಿತು. ನಮ್ಮ ಸರ್ಕಸ್ ಕಲಿಸುವ ಅವಿರತ ಪ್ರಯತ್ನದಿಂದಾಗಿ ಅವು ಗೋಡೆ ಹಾರುವುದನ್ನೇನೋ ಕಲಿತವು. ಆದರೆ ಅಣ್ಣನ ಕೈಲಿ ನಾವು ಅದಕ್ಕಾಗಿ ಚೆನ್ನಾಗಿ ಬೈಸಿಕೊಳ್ಳಬೇಕಾಯ್ತು. ಏಕೆಂದರೆ ಅವು ಬಿಟ್ಟ ಕೂಡಲೇ ಕಾಂಪೌಂಡ್ ನೆಗೆದು ಪೋಲಿ ತಿರುಗಲು ದೇಶಾಂತರ ಹೋಗಿಬಿಡುತ್ತಿದ್ದುವು. ಮನೆ ಕಾಯಲೆಂದು ಸಾಕಿದ ನಾಯಿಗಳು ಮನೆಯಲ್ಲೇ ಇಲ್ಲದಿದ್ದರೆ ಅವು ಕಾಯುವುದಾದರೂ ಹೇಗೆ? ಈ ಬಗ್ಗೆ ತುಂಬಾ ಚಿಂತಿಸಿ ಅಣ್ಣ ಕೊನೆಗೊಂದು ಉಪಾಯ ಮಾಡಿದರು. ದಿನಾ ರಾತ್ರಿ ಅವುಗಳನ್ನು ಬಿಡುವಾಗ ನಾಯಿಗಳ ಕುತ್ತಿಗೆಗೆ ಪೋಲಿ ದನಗಳಿಗೆ ಕಟ್ಟುವಂತೆ ಒಂದು ಕುಂಟೆ ಕಟ್ಟಿಬಿಡುತ್ತಿದ್ದರು. ಕುತ್ತಿಗೆಗೆ ಕಟ್ಟಿರುವ ಕುಂಟೆ ಸಮೇತ ಗೇಟು ಹಾರಲು ಅವುಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಕ್ರಮದಿಂದ ಅವು ಪೋಲಿ ತಿರುಗುವುದೇನೋ ತಪ್ಪಿತು. ಆದರೆ ರಾತ್ರಿಯೆಲ್ಲಾ ಅವು ಕುಂಟೆ ಎಳಕೊಂಡು ಮನೆ ಸುತ್ತ ತಿರುಗುವ ಸದ್ದಿಗೆ ನಮ್ಮ ಮನೆಗೆ ಬರುವ ಅತಿಥಿಗಳೆಲ್ಲಾ ಗಾಬರಿ ಬೀಳುತ್ತಿದ್ದರು. ನಾಯಿಗಳು ಮನೆ ಸುತ್ತ ತಿರುಗುವುದಲ್ಲದೆ ಮೆಟ್ಟಿಲು ಹತ್ತಿ ತಾರಸಿ ಮೇಲೆಲ್ಲಾ ಕುಂಟೆ ಎಳೆದಾಡುತ್ತಿದ್ದವು. ಅವು ಕುಂಟೆ ಎಳಕೊಂಡು ಮೆಟ್ಟಿಲಿಳಿಯುವಾಗಂತೂ ಕುಂಟೆ ಮೆಟ್ಟಿಲಿಂದ ಮೆಟ್ಟಿಲಿಗೆ ಡಬಾ ಡಬಾ ಡಬಾ ಎಂದು ಬೀಳುತ್ತಿದ್ದುದರಿಂದ ಕಿವಿ ಗಡಚಿಕ್ಕುವಂತೆ ಸದ್ದಾಗುತ್ತಿತ್ತು. ಅವುಗಳ ಕುಂಟೆ ಎಳೆದಾಟಕ್ಕೆ ನಮ್ಮ ತಾರಸಿ ಮೆಟ್ಟಿಲಿನ ಏಣುಗಳೆಲ್ಲಾ ಮುಕ್ಕಾಗಿ ಹೋದವು. ಆದರೆ ಮನೆ ಹಿಂದಿರುವ ಲೈಟು, ನಲ್ಲಿ ಇತ್ಯಾದಿಗಳನ್ನು ಬಿಚ್ಚಿಕೊಳ್ಳುತ್ತಿದ್ದ ಕಳ್ಳರ ಕಾಟ ಮಾತ್ರ ನಿಂತು ಹೊಯ್ತು.

ನಾವು ಕೊಂಚ ದೊಡ್ಡವರಾದ ಮೇಲೆ ಚಾಟರ ಬಿಲ್ಲು ಮಾಡಿಕೊಳ್ಳುವುದನ್ನು ಕಲಿತೆವು. ಅದಕ್ಕೆಲ್ಲಾ ನಮಗೆ ಗುರು ಶಿವಮೊಗ್ಗದಲ್ಲಿದ್ದ ಪ್ರಪುಲ್ಲಚಂದ್ರ. ಪ್ರಪುಲ್ಲ ನಮ್ಮ ತಾಯಿಯ ತಮ್ಮ. ಬೇಸಿಗೆ ರಜಕ್ಕೆ ನಮ್ಮಮ್ಮ ಶಿವಮೊಗ್ಗಕ್ಕೆ ತವರು ಮನೆಗೆ ಹೋಗುತ್ತಿದ್ದುದರಿಂದ ಅಲ್ಲಿ ಪ್ರಪುಲ್ಲ ನಮಗೆ ಶಿಕಾರಿ ವಿದ್ಯೆಗಳ ತರಬೇತಿ ನೀಡುತ್ತಿದ್ದ. ಅವನು ನಮಗಿಂತ ದೊಡ್ಡವನಾದ್ದರಿಂದ ಒಂದೊಂದು ಚಾಟರಬಿಲ್ಲು ಮಾಡಿಕೊಟ್ಟಿದ್ದ. ನಾವು ವಾಪಸ್ ಮೈಸೂರಿಗೆ ಬರುತ್ತ ಪ್ರಪುಲ್ಲನ ಹತ್ತಿರ ಕಾಡಿ ಬೇಡಿ ನಮ್ಮ ಮಾವನ ಲಾರಿಯ ಹಳೇ ಟ್ಯೂಬುಗಳನ್ನು ತಂದುಕೊಂಡು ಮೈಸೂರಿನಲ್ಲಿ ನಾವೇ ಚಾಟರ ಬಿಲ್ಲು ಮಾಡಿ ಮನೆ ಎದುರಿಗಿದ್ದ ಹೊಲಗಳ ನಡುವೆ ನಾಯಿ ಕರಕೊಂಡು ಓತಿಕ್ಯಾತ, ಇಲಿ ಇತ್ಯಾದಿಗಳನ್ನು ಅಟ್ಟಾಡುತ್ತಾ ಶಿಕಾರಿಯ ತೆವಲು ತೀರಿಸಿಕೊಳ್ಳುತ್ತಿದ್ದೆವು. ಹೀಗಿದ್ದಾಗೊಮ್ಮೆ ಆ ನಾಯಿಗಳ ದೆಸೆಯಿಂದ ಒಂದು ದೊಡ್ಡ ಅನಾಹುತಕ್ಕೆ ಸಿಕ್ಕಿಕೊಂಡೆವು. ಆ ದಿನ ಯಾವುದೋ ಹಬ್ಬದ ದಿನವಾದ್ದರಿಂದ ನಮಗೆ ಯಾವಾಗಲೂ ಊಟ ತುಂಬಾ ತಡವಾಗುತ್ತಿತ್ತು. ಆದ್ದರಿಂದ ಬೆಳಗ್ಗೆ ಎದ್ದವರೇ ಜೇಬಿಗೆ ಚಾಟರ ಬಿಲ್ಲು ಹಾಕಿಕೊಂಡು ಚೈತ್ರ, ನಾನು ಇಬ್ಬರೂ ಹೊಲದ ಕಡೆಗೆ ಹೊರಟೆವು. ಕಲಾ, ತಾರಿಣಿ ಇಬ್ಬರೂ ‘‘ನಾವೂ ಬರುತ್ತೇವೆ ಕಣ್ರೋ’’ ಎಂದು ಗೋಗರೆದಿದ್ದರಿಂದ ಅವರನ್ನೂ ಕರೆದೊಯ್ದೆವು. ಆ ಹೊಲಗಳಲ್ಲಿ ಸೀತಾಫಲ ಗಿಡಗಳಿದ್ದುದ್ದರಿಂದ ಕಲಾ, ತಾರಿಣಿ ಆ ಗಿಡಗಳಲ್ಲಿ ಕಾಯಿ ಹುಡುಕಲು ಬರುತ್ತಿದ್ದರು. ನಾವು ಹೊಲದಲ್ಲೆಲ್ಲಾ ತಿರುಗಿ ಗೋಕುಲದವರೆಗೂ ಹೋಗಿ ವಾಪಸ್ ರಸ್ತೆ ಮುಖಾಂತರ ಹಿಂದಕ್ಕೆ ಬರುತ್ತಾ ಇದ್ದೆವು. ಆಗ ನಾಲ್ಕಾರು ಮೇಕೆಗಳ ಗುಂಪು ನಮಗೆ ಎದುರಾಯ್ತು. ಎಷ್ಟೋ ಸಾರಿ ನಾವೇ ಛೂ ಕೊಟ್ಟು ಚಿತಾವಣಿ ಮಾಡಿದರೂ ಸುಮ್ಮನೆ ಬಾಲ ಮುದುರಿಕೊಂಡಿರುತ್ತಿದ್ದ ನಮ್ಮ ನಾಯಿಗಳ ಸಾಧು ಸ್ವಭಾವದ ಬಗ್ಗೆ ನಾವೆಷ್ಟು ನಿರ್ಯೋಚನೆಯಿಂದಿದ್ದುವೆಂದರೆ ನಾವು ನಾಯಿಗಳನ್ನಾಗಲೀ ಮೇಕೆಗಳನ್ನಾಗಲೀ ಗಮನಿಸಲೇ ಇಲ್ಲ. ಆದರೆ ನಮ್ಮ ನಾಯಿಗಳ ಚರ್ಯೆಯಲ್ಲಿ ಹಠಾತ್ ಬದಲಾವಣೆಯಾಯ್ತು. ಕೂದಲನ್ನು ನಿಮಿರಿಸಿಕೊಂಡು ಮೇಕೆಗಳನ್ನು ದುರುಗುಟ್ಟಿ ನೋಡುತ್ತಾ ತೋಳಗಳಂತೆ ಅವು ಮೇಕೆಗಳ ಗುಂಪಿನತ್ತ ನುಗ್ಗಿದವು. ನಮಗೆ ಅವನ್ನು ನಿಯಂತ್ರಿಸುವುದು ಹೇಗೆಂದು ತಿಳಿಯದೆ ಜೋರು ಮಾಡಿ ವಿಮುಖಗೊಳಿಸಲು ಯತ್ನಿಸಿದೆವು. ಮೇಕೆಗಳು ‘‘ಮ್ಯಾ’’ ಎಂದು ಕೂಗುತ್ತಾ ದಿಕ್ಕಾಪಾಲಾಗಿ ಚದುರಿ ಓಡತೊಡಗಿದುವು. ಮೇಕೆ ಗುಂಪನ್ನು ಅಟ್ಟಿಸಿಕೊಂಡು ನಾಯಿಗಳೂ, ಅವುಗಳಿಗೆ ಗದರಿಸುತ್ತಾ ನಾವು ನಾಲ್ಕೂಜನ ಹುಡುಗರೂ ಓಡಿದೆವು. ನನಗಂತೂ ನಮ್ಮ ನಾಯಿಗಳಲ್ಲಿ ಇಂಥ ಕೊಲೆ ಪಾತಕ ಬುದ್ದಿ ಇದೆಯೆಂಬುದರ ಸುಳಿವೇ ಇರಲಿಲ್ಲ. ಕೊಂಚ ದೂರ ಓಡುವುದರೊಳಗೇ ಕಾಲು ಸೋತು ಒಂದು ಮೇಕೆ ನಾಯಿ ಬಾಯಿಗೆ ಸಿಕ್ಕೇ ಬಿಟ್ಟಿತು. ಉದ್ದಕ್ಕೆ ಇಳಿ ಬಿದ್ದಿದ್ದ ಕಿವಿ ಕಚ್ಚಿ ಹಿಡಿದು ನಾಯಿ ಜೋತು ಬಿದ್ದಿದ್ದರಿಂದ ಮೇಕೆ ಓಟ ನಿಧಾನವಾಗಿ ಇನ್ನೊಂದು ನಾಯಿಯೂ ಅದರ ಕುತ್ತಿಗೆಗೆ ಬಾಯಿ ಹಾಕಿತು. ಎರಡು ನಾಯಿಗಳ ಭಾರ ತಾಳಲಾರದೆ ಆ ಮೇಕೆ ಧೊಪ್ಪನೆ ರಸ್ತೆ ಪಕ್ಕದ ಕೊರಕಲಿಗೆ ಉರುಳಿ ಬಿತ್ತು. ನಮಗೆ ನಡುಕ ಹುಟ್ಟುವಷ್ಟು ದಿಗಿಲಾಯ್ತು. ಪೊಲೀಸರು ಬಂದು ನಮ್ಮನ್ನು ಜೈಲಿಗೇ ಹಾಕಿಬಿಡುತ್ತಾರೆಂದು ತಿಳಿದು ನಮ್ಮ ಕಣ್ಣುಗಳಲ್ಲಿ ನೀರಿಳಿಯಿತು. ನಾನೂ ಚೈತ್ರನೂ ಕೊರಕಲಿನೊಳಗೆ ಇಳಿದು ನಾಯಿ ಬಾಯನ್ನು ಬಿಡಿಸಲೆತ್ನಿಸಿದೆವು. ಆದರೆ ಅವುಗಳ ಬಾಯಿ ಬೀಗ ಹಾಕಿದಷ್ಟು ಬಲವಾಗಿ ಕಚ್ಚಿಕೊಂಡಿತ್ತು. ನಮಗೆ ಏನು ಮಾಡಬೇಕೆಂದೇ ತೋರದೆ ಹೋ ಎಂದು ಅಳುತ್ತಾ ನಿಂತೆವು. ತಾರಿಣಿಗೂ ಕಲಾಗೂ ಮನೆಗೆ ಓಡಿಹೋಗಿ ಅಣ್ಣನಿಗೆ ನಾಯಿಗಳು ಕುರಿ ಕೊಂದುಹಾಕುತ್ತಿರುವುದನ್ನು ತಿಳಿಸಿ ಕರೆದುಕೊಂಡು ಬನ್ನಿ ಎಂದು ಹೇಳಿ ಮನೆಕಡೆ ಓಡಿಸಿದೆವು. ಅಷ್ಟರಲ್ಲಿ ಎದುರು ಮನೆಯಿಂದ ಇಬ್ಬರು ದೊಡ್ಡವರು ನಮ್ಮ ಅಳು ನೋಡಿ ಹೊರಬಂದರು. ಒಬ್ಬ ದೂರದಿಂದಲೇ ‘‘ಯಾಕ್ರೋ ಹುಡುಗ್ರಾ ಅಳುತ್ತೀರಿ ?’’ ಎಂದು ಕೇಳಿದ. ‘‘ನಾಯಿಗಳು ಕುರಿ ಹಿಡಿದು ಬಿಟ್ಟಿವೆ’’ ಎಂದು ಅಳುತ್ತಲೇ ನಾನು ಉತ್ತರಿಸಿದೆ. ನಾವು ಅಳುತ್ತಿರುವ ಪರಿ ನೋಡಿ ನಮ್ಮ ಕುರಿಗಳನ್ನೇ ನಾಯಿಗಳು ಹಿಡಿದಿರಬೇಕೆಂದು ತಿಳಿದ ಅವರು ಲಗುಬಗೆಯಿಂದ ಗೇಟು ತೆರೆದು ನಮ್ಮತ್ತ ಬಂದರು. ನಾಯಿಗಳ ಹಿಡಿತ ಬಿಡಿಸಲು ಅವರೂ ಪ್ರಯತ್ನಿಸಿದರು. ಆದರೆ ಅವರಿಗೂ ಬಾಯಿ ತೆರೆಸಲು ಸಾಧ್ಯವಾಗಲಿಲ್ಲ. ಕೊನೆಗೆ ಒಂದು ಇಟ್ಟಿಗೆ ತೆಗೆದುಕೊಂಡು ಮೂಗಿಗೆ ಚಚ್ಚಿದರು. ಆಗ ಮಾತ್ರ ನಾಯಿಗಳು ಹಿಡಿತ ಸಡಲಿಸಿದವು. ನಾಯಿ ಬಾಯಿಂದ ತಪ್ಪಿದ ಕೂಡಲೇ ಮೇಕೆ ಹೃದಯವಿದ್ರಾವಕವಾಗಿ ಅರಚಿಕೊಳ್ಳುತ್ತ ಓಡಿತು. ಮತ್ತೆ ಅವನ್ನು ಹಿಡಿದು ಕಚ್ಚಲೆತ್ನಿಸಿದ ನಾಯಿಗಳನ್ನು ಅವರಿಬ್ಬರೂ ಹೆದರಿಸಿ ಓಡಿಸಿದರು.

‘‘ನಿಮ್ಮದಾ ಕುರಿ?’’ ಎಂದು ಒಬ್ಬ ಕೇಳಿದ. ‘‘ಅಲ್ಲ’’ ಎಂದೆವು ನಾನು, ಚೈತ್ರ.

‘‘ಮತ್ಯಾಕೆ ಅಳ್ತಿದ್ದೀರ?’’ ಎಂದ ಅವನು ಅಚ್ಚರಿಯಿಂದ. ‘‘ನಾಯಿಗಳು ನಮ್ಮದು’’ ಎಂದೆವು.

ನಾಯಿ ಬಾಯಿಯಿಂದ ಕುರಿ ಪಾರಾದ ಕೂಡಲೇ ನಾವು ಎದ್ದೆವೋ ಬಿದ್ದೆವೋ ಎಂದು ಗಲ್ಲಿ ಬಿದ್ದು ಮನೆಕಡೆ ಓಡಿದೆವು. ಕಲಾ, ತಾರಿಣಿ ಮನೆ ಸೇರುವುದರೊಳಗೇ ನಾವು ಮನೆ ಸೇರಿದ್ದರಿಂದ ಅಣ್ಣನನ್ನು ಕರಕೊಂಡು ಬರಬೇಕಾದ ಪ್ರಮೇಯ ಅವರಿಗೆ ಬರಲಿಲ್ಲ. ಆದರೆ ಅವರಿಬ್ಬರ ಸಾಕ್ಷ ಅವತ್ತು ಇಲ್ಲದಿದ್ದರೆ ನಾವೇ ಮೇಕೆಗೆ ಛೂ ಬಿಟ್ಟು ನಾಯಿ ಕೈಲಿ ಕಚ್ಚಿಸಿದುವೆಂದು ಹೊಡೆತ ಬೀಳುತ್ತಿದ್ದುದು ಗ್ಯಾರೆಂಟಿ. ಅವತ್ತಿನ ಅನಾಹುತದ ನಂತರ ಅಣ್ಣ ನಮಗೆ ನಾಯಿ ಕರಕೊಂಡು ಹಾಗೆಲ್ಲಾ ಬೀದಿ ತಿರುಗಕೂಡದು ಎಂದು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)