varthabharthi


ಸುಗ್ಗಿ

ಅಧ್ಯಯನ ಮತ್ತು ಅರಿವು

ಸುಳ್ಳಿನ ರೋಗ

ವಾರ್ತಾ ಭಾರತಿ : 7 Sep, 2019
ಯೋಗೇಶ್ ಮಾಸ್ಟರ್, ಬೆಳೆಯುವ ಪೈರು

ಮಕ್ಕಳ ಸುಳ್ಳಿನ ಪ್ರಪಂಚ: ಭಾಗ 5

ಸುಳ್ಳಿನ ಗೀಳು

ಮಕ್ಕಳು ದೊಡ್ಡವರಿಂದ ಸ್ವಾತಂತ್ರವನ್ನು ಪಡೆದುಕೊಳ್ಳುವುದಕ್ಕೆ, ಭಯಕ್ಕೆ, ಒಲ್ಲದ ಕೆಲಸದಿಂದ ತಪ್ಪಿಸಿಕೊಳ್ಳುವುದಕ್ಕೆ, ಮೆಚ್ಚಿಸಲು, ಅಸೂಯೆ ಯಿಂದ ಒಬ್ಬರ ಬಗ್ಗೆ ಅಸಹನೆಯನ್ನು ವ್ಯಕ್ತಪಡಿಸಲು, ಶಿಕ್ಷೆಯಿಂದ ಅಥವಾ ಆರೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ಸುಳ್ಳುಗಳನ್ನು ಹೇಳುವು ದೇನೋ ತಿಳಿದುಕೊಂಡು ದೊಡ್ಡವರು ತಮ್ಮ ವರ್ತನೆಯನ್ನು ಮೃದು ವಾಗಿಸಿಕೊಂಡೋ, ತಮ್ಮ ಆಗ್ರಹ, ಆವೇಶಗಳನ್ನು ತಹಬಂದಿನಲ್ಲಿಟ್ಟು ಕೊಂಡೋ ಮಕ್ಕಳ ವಿಷಯದಲ್ಲಿ ನಡೆದುಕೊಂಡು ಸುಳ್ಳು ಹೇಳದೇ ಇರುವಂತೆ ವಿಶ್ವಾಸವನ್ನು ಸೃಷ್ಟಿಸಬಹುದು. ಆದರೆ, ಸುಳ್ಳಿನದು ಒಂದು ರೋಗವಿದೆ. ಅದಕ್ಕೆ ಇಂಗ್ಲಿಷಿನಲ್ಲಿ ಪ್ಯಾಥೋಲಾಜಿಕಲ್ ಲೈಯಿಂಗ್ ಅಥವಾ ಮಿಥೋಮೇನಿಯಾ ಮತ್ತು ಸೂಡೋಲಾಜಿಯ ಪೆಂಟಾಸ್ಟಿಕ ಎಂಬ ಸುಳ್ಳಿನ ಗೀಳಿನ ಅಥವಾ ಸುಳ್ಳು ಹೇಳುವ ರೂಢಿಯ ರೋಗಗ್ರಸ್ತ ವರ್ತನೆ ಇದೆ. ಇದು ಮಗುವಿನ ಅಥವಾ ವ್ಯಕ್ತಿಯ ಜೊತೆಗಿರುವ ವರಿಗೂ ಮತ್ತುಸುಳ್ಳು ಹೇಳುವವರಿಗೂ ಭಯಂಕರ ತಲೆ ನೋವಾಗಿರುತ್ತದೆ. ಸುಳ್ಳಿನ ಗೀಳಿನ ರೋಗವಿರುವವರಿಗೆ ಸುಳ್ಳು ಹೇಳುವುದಕ್ಕೆ ಏನೂ ಕಾರಣ ವಿರುವುದಿಲ್ಲ. ಸುಮ್ಮನೆ ಸುಳ್ಳು ಹೇಳುತ್ತಿರುತ್ತಾರೆ. ಅವರು ತಾವು ಸುಳ್ಳು ಹೇಳ ಬಾರದು ಎಂದು ಅಂದು ಕೊಂಡರೂ, ಬಾಯಿಬಿಟ್ಟು ಮಾತಾಡುವ ಸಮಯದಲ್ಲಿ ಅವರ ಅರಿವಿಲ್ಲದಂತೆ ತಂತಾನೇ ಸುಳ್ಳಿನ ಸರಮಾಲೆಯನ್ನು ಹೆಣೆಯುತ್ತಾ ಹೋಗಿಬಿಡುತ್ತಾರೆ. ಅವರ ಜೊತೆಯಲ್ಲಿರುವವರಿಗೂ ಇದು ತಿಳಿದಿದೆ ಎಂದು ತಿಳಿದರೂ ಇವರು ಸುಳ್ಳು ಹೇಳುವು ದನ್ನು ಬಿಡುವುದಿಲ್ಲ. ನೂರಾರು ವರ್ಷಗಳ ಹಿಂದೆಯೇ ಇಂತಹ ಸುಳ್ಳಿನ ಗೀಳಿನ ರೋಗವಿದೆ ಎಂದು ಗುರುತಿಸಿ ದರೂ ಒಂದು ಸಾಮಾನ್ಯವಾದ ಕಾರಣವನ್ನೋ ಅಥವಾ ನಿಖರವಾದ ಕಾರಣವನ್ನೋ ಗುರುತಿಸಲಾಗಿಲ್ಲ. ಹಾಗಾಗಿ ಈ ಸುಳ್ಳಿನ ಗೀಳಿನ ರೋಗ ಲಕ್ಷಣಗಳನ್ನು ಗುರುತಿಸಬಹುದೇ ಹೊರತು ರೋಗಕಾರಣವನ್ನು ಸದ್ಯಕ್ಕೆ ಕಂಡುಕೊಳ್ಳಲಾಗಿಲ್ಲ. ಆದರೆ ಇದು ತೀರಾ ಉಲ್ಬಣಿಸಿ ಸಮಾಜ ಕಂಟಕವೂ ಆಗಬಹುದು. ಆತ್ಮಘಾತಕ್ಕೂ ದಾರಿಯಾಗಬಹುದು.

ಸುಳ್ಳಿನ ಗೀಳಿನ ರೋಗಲಕ್ಷಣಗಳು

ಈ ರೋಗವಿರುವವರು ಸುಳ್ಳು ಹೇಳುವುದನ್ನು ತಡೆಯಲಾರದೇ ಹೇಳುತ್ತಾರೆ. ಸ್ಥೂಲವಾಗಿ ಗಮನಿಸಿದರೆ ತಾವು ಹೀರೋ ರೀತಿಯಲ್ಲಿ ಕಾಣಿಸಬೇಕು ಎಂದೋ, ಗಮನ ಸೆಳೆಯಲು ಎಂದೋ, ಅನುಕಂಪ ವನ್ನು ಗಿಟ್ಟಿಸಲೋ, ಸಾಮಾನ್ಯವಾಗಿ ಕೇಂದ್ರ ಬಿಂದುವಾಗಿರಲು ಎಂದೋ ಕಾಣುತ್ತದೆ. ಆದರೆ, ಅದ್ಯಾವುದೂ ಆಗದಿದ್ದರೂ ಸುಳ್ಳು ಹೇಳುವುದು ಮುಂದುವರಿಯುತ್ತದೆ. ಎಲ್ಲರಿಗೂ ಇದು ಸುಳ್ಳು ಎಂದು ಗೊತ್ತಾಗಿ ಅವರನ್ನು ಮತ್ತು ಅವರ ಮಾತುಗಳನ್ನು ತಿರಸ್ಕರಿಸುತ್ತಿದ್ದರೂ ಕೂಡಾ ಮಕ್ಕಳು ಅಥವಾ ದೊಡ್ಡವರು ಮಾತ್ರ ಸುಳ್ಳು ಹೇಳುವುದನ್ನು ಬಿಡದೇ ಮುಂದುವರಿಸುತ್ತಾರೆ. ಮೆದುಳಿನ ಕೆಲವು ನಿರ್ದಿಷ್ಟ ಭಾಗಗಳಿಗೆ ಏಟು ಬೀಳುವುದರಿಂದ, ಕೆಲವೊಮ್ಮೆ ಮೆದುಳಿನಲ್ಲಿ ಅಥವಾ ನರಮಂಡಲದಲ್ಲಿ ಕೆಲವು ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ ಉಂಟಾಗುವ ಏರಿಳಿತಗಳಿಂದ, ಅಥವಾ ನರವ್ಯೆಹದ ಕೇಂದ್ರದಲ್ಲಿನ ಸಮಸ್ಯೆಯೊಂದು ಈ ರೋಗಕ್ಕೆ ಕಾರಣವೆಂದೂ ಹೇಳುವುದುಂಟು. ಅದೇನೇ ಇರಲಿ, ವ್ಯಕ್ತಿತ್ವದ ಪ್ರಮುಖ ಸಮಸ್ಯೆ ಅಥವಾ ನ್ಯೂನತೆಗಳಲ್ಲಿ ಇದೂ ಕೂಡಾ ಒಂದು ಗಂಭೀರವಾದಂತಹ ಸಮಸ್ಯೆಯೇ ಆಗಿರುತ್ತದೆ. ಮಗುವಾಗಲಿ, ದೊಡ್ಡವರಾಗಲಿ ಇಂತಹ ಸುಳ್ಳಿನ ಗೀಳಿನ ರೋಗಕ್ಕೆ ಬಲಿಯಾಗಿದ್ದರೆ ಅವರು ಬಹಳಷ್ಟು ತೊಂದರೆಗಳನ್ನು ಅನು ಭವಿಸುತ್ತಾರೆ. ಅವರ ಕೌಟುಂಬಿಕ ಸಂಬಂಧಗಳಲ್ಲಿ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ವಿಶ್ವಾಸ ಕಳೆದುಕೊಳ್ಳುವುದರ ಜೊತೆಗೆ ಅವರ ಪ್ರಾಮಾಣಿಕತೆಯ ವೌಲ್ಯಕ್ಕೂ ಕುಂದುಂಟಾಗುತ್ತದೆ. ಬಹಳಷ್ಟು ಜನರು ಸಾಮಾನ್ಯವಾಗಿ ಇದನ್ನು ಒಂದು ರೋಗವೆಂದು ತಿಳಿಯದೇ, ಬೇಕೆಂದೇ ಸುಳ್ಳನ್ನು ಹೇಳುವಂತಹ ಕೆಟ್ಟವ್ಯಕ್ತಿಯನ್ನಾಗಿ ಅಥವಾ ಮೋಸಗಾರನಾಗಿ ತಿಳಿಯುತ್ತಾರೆ. ಅದರಿಂದಾಗಿ ಮಗುವನ್ನು ಅಥವಾವ್ಯಕ್ತಿಯನ್ನು ಗೌರವಿಸದೇ, ಅನುಕಂಪ ದಿಂದ ನೋಡದೇ, ಶಿಕ್ಷಿಸುವುದನ್ನು ನಿಂದಿಸುವುದನ್ನು ಮಾಡುತ್ತಾರೆ.

ಗುರುತಿಸುವುದು ಹೇಗೆ?

ಸುಳ್ಳಿನ ಗೀಳಿನ ರೋಗಿಗಳನ್ನು ಗುರುತಿಸಲು ಕೆಲವು ಮಾನದಂಡಗಳಿವೆ.

1. ಸುಳ್ಳು ಹೇಳುವವರಿಗೆ ಯಾವುದಾದರೂ ಲಾಭದ ದೃಷ್ಟಿ ಸ್ಪಷ್ಟವಾಗಿರುವುದಿಲ್ಲ. ಕೆಲವೊಮ್ಮೆ ನಾವು ಗಮನಿಸುತ್ತೇವೆ ಈ ಸುಳ್ಳನ್ನು ಇವರು ಯಾಕಾದರೂ ಹೇಳಿದರು ಇದರಿಂದ ಅವರಿಗಾಗಲಿ ಇತರಿಗಾಗಲಿ ಏನೂ ಲಾಭವಿಲ್ಲವಲ್ಲಾ ಎಂದು. ನಿಜ ಏನೂ ಲಾಭವಿರುವುದಿಲ್ಲ.

 2.ತಾವು ಹೇಳುವ ಸುಳ್ಳುಗಳಿಂದ ಆ ಹೊತ್ತಿಗೆ ಮುಜುಗರ ಅನುಭವಿಸಿದರೂ, ಅನುಮಾನಕ್ಕೆ ಮತ್ತು ಅಪಮಾನಕ್ಕೆ ಈಡಾದರೂ ಮತ್ತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಹಿಂದಾದ ಅವಮಾನ ಮತ್ತು ಮುಜುಗರದ ಭಯವೂ ಇಲ್ಲದೇ ಮತ್ತೆ ಹೇಳುತ್ತಾರೆ.

3.ತನ್ನ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಮಗುವಿನ ಅಥವಾ ವ್ಯಕ್ತಿಯ ಸುಳ್ಳನ್ನು ಗುರುತಿಸಿ ಹೇಳಿದರೂ, ಮತ್ತೆ ಆ ರೀತಿ ಹೇಳಬೇಡ ಎಂದು ಎಷ್ಟೇ ಬೇಸರಿಸಿಕೊಂಡರೂ ಸುಳ್ಳು ಹೇಳುತ್ತಾರೆ. ಆದರೆ ಅವರಿಗೆ ತಮ್ಮ ಸಂಬಂಧಗಳನ್ನು ಹಾಳು ಮಾಡಿಕೊಳ್ಳಲು ಇಷ್ಟವಿರುವುದಿಲ್ಲ. ಅವರು ಸಂಬಂಧಗಳಿಗೆ ಹಾತೊರೆಯುತ್ತಾರೆ. ಆದರೆ ಸುಳ್ಳು ಹೇಳದೇ ಇರಲಾರರು.

4.ಸಾಮಾನ್ಯವಾಗಿ ಅವರು ಹೇಳುವ ಸುಳ್ಳುಗಳು ಹೆಚ್ಚು ನಾಟಕೀಯವಾಗಿರುತ್ತದೆ, ಸಂಕೀರ್ಣವಾಗಿರುತ್ತದೆ ಮತ್ತು ಹೆಚ್ಚಿನ ವಿವರಣೆಗಳಿಂದ ಕೂಡಿರುತ್ತದೆ.

5.ಸುಳ್ಳಿನ ಗೀಳಿನ ಮಕ್ಕಳಾಗಲಿ, ವ್ಯಕ್ತಿಗಳಾಗಲಿ ಬಹಳ ವರ್ಣನೆ, ಬಣ್ಣನೆಗಳಿಂದ ಕೂಡಿದ್ದು ಬಹಳ ವರ್ಣರಂಜಿತ ಕತೆಯಾಗಿರುತ್ತದೆ.

6.ಕೆಲವೊಮ್ಮೆ ಅವರ ಕತೆಗಳು ಸುಳ್ಳು ಎಂದು ತಿಳಿಯದೇ ಇರು ವಷ್ಟು ಮನವೊಲಿಸುತ್ತವೆ.

7.ತಮ್ಮನ್ನು ತಾವು ನಾಯಕರೆಂದೋ, ಪಾಪದ ಬಲಿಪಶುಗಳೆಂದೋ ಬಿಂಬಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ತಮ್ಮ ಕತೆಯನ್ನು ಕೇಳುವ ವರು ಅದನ್ನು ಒಪ್ಪಲೆಂದು, ಮೆಚ್ಚಲೆಂದು, ಅನುಕಂಪ ತೋರಲೆಂದು ಬಯಸುತ್ತಾರೆ ಮತ್ತು ಅದಕ್ಕಾಗಿ ಹಾತೊರೆಯುತ್ತಾರೆ.

8.ಕೆಲವೊಮ್ಮೆ ಅವರೇ ತಮ್ಮ ಸುಳ್ಳುಗಳನ್ನು ನಂಬುತ್ತಾರೆ. ತಮ್ಮ ಸುಳ್ಳುಗಳನ್ನು ಪದೇ ಪದೇ ಹೇಳುತ್ತಾ ಅದು ನಿಜವೇನೋ ಎಂಬಂತಹ ಭ್ರಾಮಕ ಸ್ಥಿತಿಯನ್ನು ತಲುಪಿಬಿಟ್ಟಿರುತ್ತಾರೆ.

9.ಇನ್ನೂ ಕೆಲವು ಸಲ ವಾಸ್ತವ ಮತ್ತು ಕಲ್ಪನೆ ಈ ಎರಡರ ನಡುವೆ ವ್ಯತ್ಯಾಸವೇ ತಿಳಿಯದಂತೆ ಅವರು ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ಇದರಿಂದ ಕೇಳುಗರಿಗೆ ಸದಾ ಗೊಂದಲ ಉಂಟಾಗುತ್ತಿರುತ್ತದೆ ಜೊತೆಗೆ ಈ ಸುಳ್ಳಿನ ಗೀಳಿನ ವ್ಯಕ್ತಿಗಳನ್ನು ಹೇಗೆ ನಿಭಾಯಿಸುವುದು ಎಂದೇ ತಿಳಿಯದೇ ಒದ್ದಾಡುವಂತಾಗುತ್ತದೆ.

10.ಸುಳ್ಳಿನ ಗೀಳಿನವರು ಸಹಜವಾಗಿ ತಮ್ಮ ವರ್ತನೆಗಳನ್ನು ಪ್ರದರ್ಶಿಸುತ್ತಾರೆ. ತಾವು ಸುಳ್ಳನ್ನು ಹೇಳುವಾಗ ಇತರರನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಸಹಜವಾಗಿಯೇ ತಿಳಿದಿರುತ್ತಾರೆ. ಆ ಸುಳ್ಳುಗಳು ಸೃಜನಾತ್ಮಕವಾಗಿಯೂ, ತಾಜಾ ಆಗಿಯೂ ಇರುವುದು. ಸುಳ್ಳನ್ನು ಹೆಣೆದು ಹೇಳುವವರು ತಮ್ಮ ಮಾತಿನ ಮಧ್ಯೆ ಅಲ್ಲಲ್ಲಿ ತಡೆಯುತ್ತಿರುತ್ತಾರೆ, ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗದೇ ಬೇರೆಲ್ಲೋ ನೋಡುತ್ತಾರೆ. ಆದರೆ ಇವರು ಹಾಗೇನೂ ಮಾಡುವುದಿಲ್ಲ ತೀರಾ ಸಹಜವಾಗಿಯೇ ಇರುತ್ತಾರೆ.

11.ಯಾರಾದರೂ ಸ್ಪಷ್ಟತೆಗೆ ಪ್ರಶ್ನೆಯನ್ನು ಕೇಳಿದರೆ, ಅವರು ನಿರ್ದಿಷ್ಟವಾದ ಉತ್ತರವನ್ನೇನೂ ಹೇಳದೇ ಸುಮ್ಮನೆ ಮಾತಾ ಡುತ್ತಲೇ ಹೋಗುತ್ತಾರೆ. ಅದೊಂದು ದೊಡ್ಡ ವಿವರಣೆಯ ಉತ್ತರದಂತೆ ತೋರುತ್ತದೆ. ಆದರೆ ಅದರಲ್ಲಿ ಯಾವುದೇ ಸ್ಪಷ್ಟತೆಯೂ ಇರುವುದಿಲ್ಲ, ನಿರ್ದಿಷ್ಟ ಉತ್ತರವೂ ಇರುವುದಿಲ್ಲ.

12.ಆದರೂ ಇದು ಅಪ್ರಜ್ಞಾವಸ್ಥೆಯಲ್ಲಿ ಬಡಬಡಿಸುವುದೇನಲ್ಲ. ಪ್ರಜ್ಞಾಪೂರ್ವಕವಾಗಿಯೇ ಹೇಳುತ್ತಿರುತ್ತಾರೆ. ಆದರೆ ಅದರಲ್ಲಿ ನಿರ್ದಿಷ್ಟ ಉದ್ದೇಶವಾಗಲಿ, ಲಾಭವಾಗಲಿ ಇರುವುದಿಲ್ಲ ಅಷ್ಟೇ. ಸಿಹಿಸುಳ್ಳು ಅಥವಾ ಬಿಳಿಸುಳ್ಳುಗಳಿಗೂ ಈ ಗೀಳಿನ ಸುಳ್ಳಿಗೂ ವ್ಯತ್ಯಾಸ ಇರುತ್ತದೆ. ಬಿಳಿಸುಳ್ಳುಗಳು ಯಾವಾಗಲೋ ಒಮ್ಮೆ ಹೇಳಲ್ಪ ಡಲಾಗುತ್ತದೆ. ಅದು ಪುಟ್ಟದಾಗಿರುತ್ತದೆ. ಸಾಮಾನ್ಯವಾಗಿ ಹಾನಿಕಾರಕ ವೇನಲ್ಲ. ಕೇಡಿನ ಉದ್ದೇಶವೇನೂ ಇರುವುದಿಲ್ಲ. ತೊಂದರೆಯನ್ನು ಕಳೆದುಕೊಳ್ಳಲೋ ಅಥವಾ ಒಬ್ಬರ ಭಾವನೆಗಳಿಗೆ ಧಕ್ಕೆ ಉಂಟು ಮಾಡದಿರಲೋ ಆಗಿರುತ್ತದೆ. ಆದರೆ ಗೀಳಿನ ಸುಳ್ಳು ಇದಾವುದನ್ನೂ ಯೋಚಿಸುವುದಿಲ್ಲ. ಬಿಳಿ ಸುಳ್ಳು ಮತ್ತು ಗೀಳಿನ ಸುಳ್ಳಿನ ನಡುವಿನ ವ್ಯತ್ಯಾಸಗಳು

ಬಿಳಿಸುಳ್ಳು ಹೇಳುವವರು ಹೋಂ ವರ್ಕ್ ಮಾಡುವುದಕ್ಕೆ ಇಷ್ಟವಿಲ್ಲದಿದ್ದಾಗ ತಲೆನೋವು ಎಂದೋ, ಹೊಟ್ಟೆನೋವೆಂದೋ ಹೇಳಿ ತಪ್ಪಿಸಿಕೊಳ್ಳುವುದು. ದೊಡ್ಡವರು ಮೀಟಿಂಗ್ ತಪ್ಪಿಸಿಕೊಳ್ಳಲೂ ಇದನ್ನು ಹೇಳಬಹುದು. ಅದೇ ರೀತಿ ಹೋಂ ವರ್ಕ್ ಮಾಡಿಲ್ಲ ದಿದ್ದರೂ ಮಾಡಿದ್ದೇನೆ ಆದರೆ ಮನೆಯಲ್ಲಿ ಮರೆತು ಬಂದಿದ್ದೇನೆ ಎಂದು ಹೇಳುವುದು. ಅದೇ ರೀತಿ ದೊಡ್ಡವರೂ ಯಾವುದೋ ಬಿಲ್ ಕಟ್ಟಲು ಮರೆತುಹೋಗಿದ್ದರೂ ಕಟ್ಟಿದ್ದೇನೆ ಎಂದು ಹೇಳುವುದು ಇತ್ಯಾದಿಗಳೆಲ್ಲವೂ ಬಿಳಿಸುಳ್ಳಾದರೆ, ಸುಳ್ಳಿನ ಗೀಳಿನವರು ಸುಳ್ಳಿನ ಚರಿತ್ರೆಯನ್ನೇ ಕಟ್ಟಿಬಿಡುತ್ತಾರೆ. ತಮ್ಮ ತಂದೆ, ತಾಯಿ, ಮನೆ, ಶಾಲೆ ಇತ್ಯಾದಿಗಳ ಬಗೆಯೆಲ್ಲಾ ಸುಳ್ಳಿನ ಕತೆಗಳನ್ನು ಕಟ್ಟುತ್ತಾರೆ. ಕೆಲವೊಮ್ಮೆ ಅವರು ಅನುಭವಿಸದೇ ಇರುವುದನ್ನೆಲ್ಲಾ ತಾವು ಅನುಭವಿಸಿದ್ದೇವೆಂದೋ, ಅಥವಾ ಇನ್ನೇನೋ ಸಾಧಿಸಿದ್ದೇವೆಂದೋ ಹೇಳುವರು. ಕ್ಯಾನ್ಸರ್ ನಂತಹ ಸಾವನ್ನು ಎದುರಿಸುತ್ತಿರುವಂತಹ ರೋಗ ವೊಂದನ್ನು ಹೊಂದಿರುವುದಾಗಿ ಹೇಳುವುದು. ಯಾವುದಾದರೂ ಪ್ರಖ್ಯಾತ ವ್ಯಕ್ತಿಯೊಡನೆ ಸಂಬಂಧವಿದೆ ಎಂದು ತೋರ್ಪಡಿಸಿಕೊ ಳ್ಳುವುದು. ಅವರು ತಮ್ಮ ಹಿಂದಿನ ವಿವರಣೆಗಳಲ್ಲಿ ಹೇಳಿರುವ ಕೆಲವೊಂದು ವಿಷಯಗಳನ್ನು ಮರೆತು ಮತ್ತೊಂದು ಹೇಳುವುದರ ಮೂಲಕ ತಾವು ಹೇಳುವುದು ಸುಳ್ಳು ಎಂದು ಜಾಣ ಕೇಳುಗರಿಗೆ ಪ್ರದರ್ಶಿಸಿಬಿಡುತ್ತಾರೆ. ಆದರೆ ಏನೇ ಹೇಳಿ, ಸುಳ್ಳಿನ ಗೀಳು ಇರುವ ಮಕ್ಕಳಾಗಲಿ, ವ್ಯಕ್ತಿಗಳಾಗಲಿ ಅನುಕಂಪಕ್ಕೆ ಅರ್ಹ ವ್ಯಕ್ತಿಗಳೇ. ಆದರೆ ಅವರೊಂದಿಗೆ ಹೆಣಗಲು ನಮಗೆ ಸಾಕಷ್ಟು ಶಕ್ತಿ ಇರಬೇಕು ಅಷ್ಟೇ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)