varthabharthi

ನಿಮ್ಮ ಅಂಕಣ

ಪ್ರಬಲ ಪ್ರಜಾಪ್ರಭುತ್ವದ ದುರ್ಬಲ ವೈದ್ಯರು

ವಾರ್ತಾ ಭಾರತಿ : 7 Sep, 2019
ಡಾ. ಜಗನ್ನಾಥ ಕೆ. ಡಾಂಗೆ

ದೇವರ ಮೂರ್ತ ಸ್ವರೂಪರೆಂದು ಬಿಂಬಿಸಲ್ಪಡುವ, ಭವಿಷ್ಯದ ವೈದ್ಯರಾಗುವಂತಹವರೇ ತಮ್ಮವರ ತಲೆ ಬೋಳಿಸಿ, ಕ್ಯಾಂಪಸ್‌ನಲ್ಲಿ ಮೆರವಣಿಗೆ ಮಾಡಿಸಿರುವ ಕೆಲಸ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಇದು ನಮ್ಮ ಸಮಾಜದ ದುಸ್ಥಿತಿಯನ್ನು ಎತ್ತಿ ತೋರಿಸುವಂತಿದ್ದು, 21ನೇ ಶತಮಾನದಲ್ಲಿದ್ದರೂ ಕೂಡ, ನಾವು ಎತ್ತ ಸಾಗುತ್ತಿದ್ದೇವೆ ಎಂಬುದನ್ನು ತಿಳಿಸುತ್ತದೆ.


ಇತ್ತೀಚೆಗೆ ಉತ್ತರಪ್ರದೇಶದ ಇಟಾವಾ ಜಿಲ್ಲೆಯ ಸೈಫಾಯ್‌ನಲ್ಲಿರುವ ವೈದ್ಯಕೀಯ ವಿಶ್ವವಿಶ್ವವಿದ್ಯಾನಿಲಯದಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಹಿರಿಯ ವೈದ್ಯಕೀಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿರುವ ವಿಷಯ ಬೆಳಕಿಗೆ ಬಂದಿದ್ದು, ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೆಲಸವಾಗಿದ್ದು, ದೇವರ ಮೂರ್ತ ಸ್ವರೂಪರೆಂದು ಬಿಂಬಿಸಲ್ಪಡುವ, ಭವಿಷ್ಯದ ವೈದ್ಯರಾಗುವಂತಹವರೇ ತಮ್ಮವರ ತಲೆ ಬೋಳಿಸಿ, ಕ್ಯಾಂಪಸ್‌ನಲ್ಲಿ ಮೆರವಣಿಗೆ ಮಾಡಿಸಿರುವ ಕೆಲಸ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಇದು ನಮ್ಮ ಸಮಾಜದ ದುಸ್ಥಿತಿಯನ್ನು ಎತ್ತಿ ತೋರಿಸುವಂತಿದ್ದು, 21ನೇ ಶತಮಾನದಲ್ಲಿದ್ದರೂ ಕೂಡ, ನಾವು ಎತ್ತ ಸಾಗುತ್ತಿದ್ದೇವೆ ಎಂಬುದನ್ನು ತಿಳಿಸುತ್ತದೆ.

ಅದೆಷ್ಟೋ ವಿದ್ಯಾರ್ಥಿಗಳು, ಸಾಲ ಮಾಡಿಕೊಂಡು, ಬಡತನದ ಬೇಗೆಯಿಂದ ಕಷ್ಟಪಟ್ಟು ಓದಿ, ವೈದ್ಯಕೀಯ ಕೋರ್ಸಿಗೆ ಸೇರಿರುತ್ತಾರೆ, ಅವರ ಆಸೆ ಕನಸುಗಳಿಗೆ ತಣ್ಣೀರೆರಚಿದಂತಾಗಿದ್ದು, ಅವರೂ ಕೂಡ ಅಸಹಾ ಯಕತೆಯಿಂದ ಯಾರಿಗೂ ಹೇಳದೆ, ಹಿರಿಯ ವಿದ್ಯಾರ್ಥಿಗಳ ಕೀಟಲೆಗಳಿಗೆ ಒಳಗಾಗುತ್ತಾ, ದಾರಿ ತೋಚದಿರುವುದನ್ನು ಮನಗಂಡರೆ, ಪ್ರಸ್ತುತ ಸಮಾಜ ಎಂತಹ ಕ್ರೂರಸ್ಥಿತಿಗೆ ಬಂದುನಿಂತಿದೆ ಎಂಬುದು ತಿಳಿದುಬರುತ್ತದೆ.

ಆ ವಿಶ್ವವಿದ್ಯಾನಿಲಯದ ಕುಲಪತಿ ಕೂಡ ಸಂದರ್ಶನದಲ್ಲಿ, ‘‘ನಾವು ಓದುವಾಗಲೂ ಕೂಡ, ಇದಕ್ಕಿಂತಲೂ ಭೀಕರ ರ್ಯಾಗಿಂಗ್ ಇತ್ತು, ಇದು ಏನೇನೂ ಅಲ್ಲ’’ ಎಂದು ಹೇಳಿರುವುದು ಅವರ ಮನಸ್ಥಿತಿಯನ್ನು, ಇಂತಹ ಅಧಿಕಾರಿಗಳಿಂದ ಸಮಾಜವು ಏನನ್ನು ಅಪೇಕ್ಷಿಸುವುದು, ಇವರು ಸಮಾಜವನ್ನು ತಿದ್ದುವರೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ.

ರ್ಯಾಗಿಂಗ್ ಎನ್ನುವುದು ಸಮಾಜದ ಅನಿಷ್ಟ ಪದ್ಧತಿ. ಇದೊಂದು ಮಾನಸಿಕ ಸ್ಥಿತಿಯಾಗಿದ್ದು, ಇದು ಯಾವ ಅಸ್ಪಶ್ಯತೆಗಿಂತಲೂ ಕಡಿಮೆ ಇಲ್ಲ. ದೇಶವು ಎಷ್ಟೇ ಅಭಿವೃದ್ಧಿ ಹೊಂದುತ್ತಿದ್ದರೂ, ತಂತ್ರಜ್ಞಾನದಲ್ಲಿ ಏನೆಲ್ಲಾ ಆವಿಷ್ಕಾರ, ವೈದ್ಯಕೀಯ ಕ್ಷೇತ್ರದಲ್ಲಿ ಅದೆಷ್ಟೋ ಸಾಧನೆಗಳನ್ನು ಮಾಡುತ್ತಿದ್ದರೂ ರ್ಯಾಗಿಂಗ್ ಎನ್ನುವ ಪಿಡುಗು ಇನ್ನೂ ಕಳಚಿ ಬಿದ್ದಿಲ್ಲ.

ರ್ಯಾಗಿಂಗ್ ಎನ್ನುವುದು ಒಂದು ರೀತಿಯ ಸಾಂಪ್ರದಾಯಿಕ ವ್ಯವಸ್ಥೆಯಿದ್ದಂತೆ, ಹಿರಿಯರಿಂದ ಕಿರಿಯರಿಗೆ, ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿದ್ದು, ಇದಕ್ಕೆ ಮೂಲ ಕಾರಣವೇನೆಂದರೆ, ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಿನ್ನೆಲೆಯುಳ್ಳ ಅಂಶಗಳು.

ಸಮಾಜದಲ್ಲಿ ಜಾತಿ ವ್ಯವಸ್ಥೆಯಿಂದ ಇದು ವರ್ಗಾಂತರಗೊಂಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಸಾಮಾಜಿಕ ನೆಲೆಗಟ್ಟಿನಲ್ಲಿ ನೋಡಿದಾಗ ಮೇಲು-ಕೀಳು ಎನ್ನುವ ಭಾವನೆ, ಉಡುಗೆ-ತೊಡುಗೆ, ಭಾಷೆ, ಜೀವಿಸುವ ರೀತಿ, ಆರ್ಥಿಕ ಸ್ಥಿತಿಯನ್ನು ಹೋಲಿಕೆ ಮಾಡುವುದು ಇವುಗಳ ಮೂಲಕ ಉದ್ಭವಿಸಿದೆ ಎಂದು ಹೇಳಬಹುದು. ಮೇಲ್ಜಾತಿಯ ವ್ಯಕ್ತಿಗಳು ಕೆಳಜಾತಿಯ ವ್ಯಕ್ತಿಗಳಿಗೆ ನೋಡುವ ಮನೋಭಾವ, ನಡೆಸಿಕೊಳ್ಳುವ ರೀತಿ-ನೀತಿ, ವ್ಯವಹರಿಸುವ ರೀತಿ, ಸಂವಹನ ನಡೆಸುವ ವಿಧಾನ ಇವುಗಳೆಲ್ಲವನ್ನೂ ಗಮನಿಸಿದಾಗ ಜಾತಿಯೇ ರ್ಯಾಗಿಂಗ್‌ಗೆ ಮೂಲ ಕಾರಣವೆನ್ನಬಹುದು. ಶೈಕ್ಷಣಿಕ ಅಂಶಗಳನ್ನು ಕೂಡ ನಾವು ಕಾಣಬಹುದು. ಹಿಂದಿನ ಕಾಲದಲ್ಲಿ ಶಿಕ್ಷಣ ನೀಡುತ್ತಿದ್ದುದು ಬರೀ ಮೇಲ್ವರ್ಗದವರಿಗೆ ಮತ್ತು ಆರ್ಥಿಕವಾಗಿ ಸಬಲರಾಗಿದ್ದವರಿಗೆ ಮಾತ್ರ. ಇತ್ತೀಚಿನ ದಿನಗಳಲ್ಲಿಯೂ ಕೂಡ ಶ್ರೀಮಂತರು ಖಾಸಗಿ ಶಾಲೆಗಳಿಗೆ, ಬಡವರು ಸರಕಾರಿ ಶಾಲೆಗಳನ್ನು ನಂಬಿಕೊಂಡಿರುವುದನ್ನು ಕಾಣಬಹುದು. ಧರ್ಮ-ಧರ್ಮಗಳ ಜೊತೆ, ಜಾತಿ-ಜಾತಿಗಳ ನಡುವೆ, ಭಿನ್ನಲಿಂಗಗಳ ನಡುವೆ, ಪ್ರಾಂತಗಳ ನಡುವೆ, ವರ್ಣಗಳ, ಹಳ್ಳಿ-ನಗರ ಪ್ರದೇಶ ಎನ್ನುವ ಭೇದ-ಭಾವ, ಎಂಬಂತೆ ಹೋಲಿಕೆ ಮಾಡುತ್ತಾ ಬಂದಿರುವುದರಿಂದಲೇ ರ್ಯಾಗಿಂಗ್‌ಗೆ ಮುನ್ನುಡಿ ಬರೆದಂತಾಗಿದೆ.

ಶಾಲಾ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಗಳನ್ನು, ತಮ್ಮ ಮನೋಭಾವ-ಆಲೋಚನೆಗಳನ್ನು, ತಮ್ಮಲ್ಲಿರುವ ಬುದ್ಧಿವಂತಿಕೆಯನ್ನು ಕೆಟ್ಟದಾಗಿ ಪ್ರದರ್ಶಿಸುತಿದ್ದು, ರ್ಯಾಗಿಂಗ್ ಮುಖಾಂತರ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ, ಖುಷಿ ಪಡುತ್ತಾ, ರ್ಯಾಗಿಂಗ್ ಮಾಡುವುದೇ ಒಂದು ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಮೂರ್ಖತನದ ಪರಮಾವಧಿ ಎಂದೇ ಹೇಳಬಹುದು. ಸಮಾಜದಲ್ಲಿನ ಇಂತಹ ಅಮಾನವೀಯತೆಗೆ ಕಾರಣವಾಗುತ್ತಿರುವುದು ಬುದ್ಧಿವಂತ ಯುವಕ ಯುವತಿಯರೇ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಸಮಾನ ಮನಸ್ಕ ಗುಂಪುಗಳನ್ನು ಕಟ್ಟಿಕೊಂಡು, ಒಂದೇ ತರಗತಿಯ, ಒಂದೇ ವಯಸ್ಸಿನ ಯುವಕ ಯುವತಿಯರು ಕಿರಿಯ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವುದನ್ನು ಗಮನಿಸಿದರೆ, ಅವರ ಭವಿಷ್ಯದ ಬಗ್ಗೆ ಚಿಂತಿಸದೆ, ಸಮಾಜವು ನಮ್ಮನ್ನು ಗಮನಿಸುತ್ತದೆ ಎಂದನ್ನರಿಯದೆ, ತಮ್ಮ ಕೆಟ್ಟ ಮುಖವಾಡವನ್ನು ಸಮಾಜಕ್ಕೆ ತೋರಿಸುವಂತಹದ್ದು ಉತ್ತಮ ಬೆಳವಣಿಗೆಯಲ್ಲ.

 ರ್ಯಾಗಿಂಗ್ ಅನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಎಲ್ಲಾ ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ರ್ಯಾಗಿಂಗ್ ಮುಕ್ತ ವಾತಾವರಣವೆನ್ನುವ ಬರೀ ಬೋರ್ಡ್ ಮಾತ್ರ ನೇತು ಹಾಕಿದ್ದು, ಅದರಿಂದ ಅಷ್ಟಾಗಿ ಪ್ರಯೋಜನವಾಗುತ್ತಿಲ್ಲ. ಇದನ್ನು ತಡೆಗಟ್ಟಲು ಸಮಿತಿಗಳನ್ನು ರಚಿಸಿಲ್ಲ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರು, ಮ್ಯಾನೇಜ್‌ಮೆಂಟ್‌ನವರು, ಶಿಕ್ಷಕರು, ರ್ಯಾಗಿಂಗ್‌ನಿಂದಾಗುವ ಅನಾಹುತದ ಬಗ್ಗೆ ಗಮನಹರಿಸದೆ, ರ್ಯಾಗಿಂಗ್ ಬಗ್ಗೆ ಅರಿವು ಮೂಡಿಸದೆ, ರ್ಯಾಗಿಂಗ್‌ನಿಂದಾಗುವ ದುಷ್ಪರಿಣಾಮದ ಬಗ್ಗೆ ತಿಳಿಸದೆ, ರ್ಯಾಗಿಂಗ್ ಬಗ್ಗೆ ತರಗತಿಗಳಲ್ಲಿ ಬೋಧನೆ, ಮಾಹಿತಿಯನ್ನು ನೀಡದಿರುವುದರ ಜೊತೆಗೆ ರ್ಯಾಗಿಂಗ್ ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ಹಾಗೂ ಅನೇಕ ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ರ್ಯಾಗಿಂಗ್‌ಗೆ ಒಳಪಟ್ಟ ವಿದ್ಯಾರ್ಥಿಗಳು ಭಯಪಟ್ಟು, ತಮ್ಮ ಶೈಕ್ಷಣಿಕ ದೃಷ್ಟಿಯಿಂದ, ಸಂಬಂಧಪಟ್ಟವರಿಗೆ ದೂರನ್ನು ನೀಡದಿರುವುದು ಸಮಸ್ಯೆಯಾಗಿಯೇ ಉಳಿದಿದೆ.ಶಿಕ್ಷೆಯ ಪ್ರಮಾಣ ಹೆಚ್ಚಿಸಿ, ಕಠಿಣಕ್ರಮಗಳನ್ನು ಕೈಗೊಂಡಾಗ ಮಾತ್ರ ರ್ಯಾಗಿಂಗ್ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯ.

ಎಷ್ಟೋ ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಸಿಸಿಟಿವಿ ಯನ್ನು ಅಳವಡಿಸಿಕೊಂಡಿದ್ದರೂ, ರ್ಯಾಗಿಂಗ್ ಮಾಡಿದವರ ವಿರುದ್ಧ ಸಾಕ್ಷ್ಯವಿದ್ದರೂ ಕ್ರಮಕೈಗೊಳ್ಳುವುದಿಲ್ಲ. ಇದು ತಪ್ಪುಮಾಡಿದವರನ್ನು ಪ್ರೋತ್ಸಾಹಿಸಿದಂತಾಗಿದ್ದು ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಕಳಕಳಿಯು ಎಷ್ಟರಮಟ್ಟಿಗೆ ಇದೆ ಎಂಬುದನ್ನು ಅರಿಯಬಹುದು. ಇಂತಹ ಕೆಲಸವನ್ನು ಬುದ್ಧಿವಂತರೇ, ಉತ್ತಮ ವಿದ್ಯಾರ್ಹತೆಯಿರುವವರೇ ಮಾಡುತ್ತಿರುವುದನ್ನು ಗಮನಿಸಿದಾಗ ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ, ಎಂಬುದನ್ನು ಊಹಿಸಬಹುದು.

ಆದುದರಿಂದ ನಮ್ಮ ಶಿಕ್ಷಣದ, ಪ್ರಾಥಮಿಕ ಹಂತದಿಂದಲೇ ಮಿಶ್ರಿತ ಗುಂಪುಗಳ ಕಲಿಕೆಯನ್ನು ಏರ್ಪಡಿಸಿ, ಕಲಿಸುವು ದರಿಂದ, ಹಿರಿಯರು ಕಿರಿಯರು ಆಟೋಟಗಳಲ್ಲಿ ಒಗ್ಗೂಡು ವಂತೆ ಮಾಡಿ, ಹಿರಿಯರು ಕಿರಿಯರಿಗೆ ಕಲಿಸುವಂತಹ ಸಂದರ್ಭಗಳನ್ನು ಏರ್ಪಡಿಸಿದಾಗ, ಹಿರಿಯ-ಕಿರಿಯ ಎನ್ನುವ ಭೇದ ಭಾವವನ್ನು ತೊಡೆದುಹಾಕಬಹುದು. ಇದರ ಮೂಲಕ ರ್ಯಾಗಿಂಗ್‌ನ್ನು ತಡೆಗಟ್ಟಬಹುದು.

ತರಗತಿಗಳಲ್ಲಿ ಬರೀ ಜ್ಞಾನಕ್ಕೆ ಸಂಬಂಧಿಸಿದ ಅಂಶಗಳನ್ನು ಕಲಿಸದೇ, ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಶಿಕ್ಷಣವನ್ನು ನೀಡಿ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮಟ್ಟಿಗೆ, ವಿದ್ಯಾರ್ಥಿಗಳನ್ನು ತಯಾರಿ ಮಾಡಿದಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಿಸಬಹುದು. ಸಮಾಜದಲ್ಲಿ ದಿನನಿತ್ಯ ಆಗುತ್ತಿರುವ ಘಟನೆಗಳಿಗೆ ಪ್ರತಿಕ್ರಿಯೆ ನೀಡುವಂತಹ ವ್ಯವಸ್ಥೆಯನ್ನು ತರಗತಿಯಲ್ಲಿ ರೂಪಿಸಿದಾಗ, ಕುವೆಂಪುರವರು ಹಾಕಿಕೊಟ್ಟ ತಳಹದಿಯಾದ ವಿಶ್ವಮಾನವ ಎಂಬ ನೆಲೆಗಟ್ಟಿನಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿ, ಅದರಂತೆಯೇ ನಡೆದುಕೊಳ್ಳುವುದನ್ನು, ಜ್ಞಾನಕ್ಕೆ ಬೆಲೆ ಕೊಟ್ಟು, ಇನ್ನೊಬ್ಬರ ಜ್ಞಾನವನ್ನು ಗೌರವಿಸುವಂತೆ ಶಿಕ್ಷಣದಲ್ಲಿ ಕಲಿಸಿದಾಗ ಮಾತ್ರ, ಮುಂದಿನ ಪೀಳಿಗೆಗೆ, ಸುಸಮಾಜಕ್ಕೆ ಭದ್ರಬುನಾದಿ ಹಾಕಿದಂತಾಗುತ್ತದೆ. ಭಾರತವು ಪ್ರಬಲವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದರೂ, ದುರ್ಬಲ ವೈದ್ಯರನ್ನು ರೂಪಿಸುತ್ತದೆ ಎಂದು ಈ ಮೇಲಿನ ಅಂಶದಿಂದ ಸ್ಪಷ್ಟವಾಗುತ್ತದೆ. ಸ್ವಾತಂತ್ರ್ಯ ಪಡೆಯಲು, ಸುಭದ್ರ ಭಾರತದ ನಿರ್ಮಾಣಕ್ಕಾಗಿ ಅದೆಷ್ಟೋ ಯುವ ಮಹಾನ್ ನಾಯಕರು, ತಮ್ಮ ಪ್ರಾಣವನ್ನು ಮುಡುಪಾಗಿಟ್ಟಿದ್ದರು. ಆದರೆ ಇಂದಿನ ಯುವಕ-ಯುವತಿಯರು, ಬೇರೆಯವರ ಕಾಲೆಳೆಯುತ್ತಾ, ಇತರರನ್ನು ಹಂಗಿಸುತ್ತಾ, ಸಮಯವನ್ನು ವ್ಯರ್ಥ ಮಾಡುತ್ತಾ, ಯಾವುದು ಸರಿ ಯಾವುದು ತಪ್ಪುಎನ್ನುವುದನ್ನು ಅರಿಯದಿರುವುದು ವಿಷಾದಕರ ಸಂಗತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)