varthabharthi


ಸಿನಿಮಾ

ವಿಷ್ಣು ಸರ್ಕಲ್: ಹರಕಲು ಕತೆಯ ಮುರುಕಲು ಪ್ರೇಮಿಗೊಂದು ಸರ್ಕಲ್!

ವಾರ್ತಾ ಭಾರತಿ : 7 Sep, 2019

ವಿಷ್ಣುವರ್ಧನ್ ಅಭಿಮಾನಿಯೊಬ್ಬರು ಚಿತ್ರ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ. ತನ್ನಲ್ಲಿರುವ ಕತೆಯನ್ನೇ ವಿಷ್ಣುವರ್ಧನ್ ಅಭಿಮಾನಕ್ಕೆ ಮೀಸಲಾಗಿಸುವಂತೆ ತಿದ್ದಿ ತೀಡಿದ್ದಾರೆ ನಿರ್ದೇಶಕರು. ಆ ಎಲ್ಲ ತೀಡುವಿಕೆಯೊಂದಿಗೂ ಕುಂದು ಕೊರತೆಗಳೊಂದಿಗೆ ಎದ್ದು ಕಾಣುವ ಚಿತ್ರವೇ ವಿಷ್ಣು ಸರ್ಕಲ್!

ಆ ರಸ್ತೆಗಳು ಸೇರುವ ವೃತ್ತದಲ್ಲಿ ಡಾ. ವಿಷ್ಣುವರ್ಧನ್ ಅವರ ಒಂದು ಸುಂದರವಾದ ಪುತ್ಥಳಿ ಇದೆ. ಅಲ್ಲೇ ಪಕ್ಕದಲ್ಲಿ ಒಂದು ಟೀ ಅಂಗಡಿ ಮತ್ತು ವಿಷ್ಣು ಸರ್ಕಲ್ ಬಸ್ ನಿಲ್ದಾಣವೂ ಇರುತ್ತದೆ. ಅದುವೇ ಚಿತ್ರದ ನಾಯಕ ವಿಷ್ಣು ಹೆಚ್ಚಾಗಿ ಕಾಣಿಸಿಕೊಳ್ಳುವ ಜಾಗ. ಆತ ಒಬ್ಬ ವಿಷ್ಣುವರ್ಧನ್ ಅಭಿಮಾನಿ ಕೂಡ ಹೌದು. ಒಮ್ಮೆ ಗೆಳೆಯರೊಂದಿಗೆ ಅಲ್ಲಿ ಕಾಣಿಸಿಕೊಂಡವನು ಗೆಳತಿಯೊಬ್ಬಳ ಪರಿಚಯವಾದ ಬಳಿಕ ಆಕೆಯ ಹಿಂದೆಯೇ ತಿರುಗಾಡುತ್ತಾನೆ. ಆದರೆ ಆಕೆ ಈತನನ್ನು ನಿರಾಕರಿಸುತ್ತಾಳೆ. ಇದರ ನಡುವೆ ನಿರಾಕರಿಸಿದ ಹುಡುಗಿಯ ಗೆಳತಿಯೇ ನಾಯಕನನ್ನು ಇಷ್ಟಪಡುತ್ತಾಳೆ. ಅದನ್ನು ನಾಯಕನಿಗೆ ಹೇಳುತ್ತಾಳೆ ಕೂಡ. ಅದಕ್ಕೆ ಪ್ರತಿಕ್ರಿಯೆ ನೀಡುವ ನಾಯಕ ತನ್ನ ಫ್ಲ್ಯಾಶ್ ಬ್ಯಾಕ್ ಕಥೆಯೊಂದನ್ನು ಬಿಚ್ಚಿಡುತ್ತಾನೆ.

 ಆ ಗೆಳತಿಗೆ ತನ್ನ ಮೆಚ್ಚಿನ ವಿಷ್ಣುವರ್ಧನ್ ಸಿನೆಮಾ ತೋರಿಸಿ ಮನಸ್ಸು ಗೆದ್ದಿರುತ್ತಾನೆ. ಆದರೆ ವೃತ್ತಿಗೆಂದು ವಿದೇಶಕ್ಕೆ ಹೊರಟು ನಿಂತ ಆಕೆ ತನ್ನನ್ನು ಕೂಡ ಜತೆಯಲ್ಲಿ ಆಹ್ವಾನಿಸಿದಾಗ ಜತೆಯಾಗಲು ಹಿಂಜರಿದಿರುತ್ತಾನೆ. ಯಾಕೆಂದರೆ ತಂದೆ, ತಾಯಿ, ತಾಯ್ನಾಡು ಎಲ್ಲರೊಂದಿಗೆ ಆತನ ಸಂಬಂಧ ಅಷ್ಟು ಗಾಢವಾಗಿರುತ್ತದೆ. ಆದರೆ ಪ್ರೇಯಸಿ ವಿದೇಶಕ್ಕೆ ಹೋದ ಬಳಿಕ ಈತ ಅದೇ ಚಿಂತೆಯಲ್ಲಿ ಕುಡಿತಕ್ಕೆ ದಾಸನಾಗಿರುತ್ತಾನೆ. ಆದರೆ ಈಗ ಈ ಕತೆ ಕೇಳಿದ ಬಳಿಕ ಹೊಸ ಗೆಳತಿ ನಾಯಕನ ಪ್ರೀತಿಗೆ ಒಪ್ಪುತ್ತಾಳಾ? ಅಥವಾ ವಿದೇಶಕ್ಕೆ ಹೋದ ಗೆಳತಿ ಮರಳುತ್ತಾಳಾ? ಅಂತಿಮದಲ್ಲಿ ನಾಯಕನಿಗೆ ಜೋಡಿಯಾಗುವುದು ಯಾರು? ಎನ್ನುವುದನ್ನು ಚಿತ್ರಮಂದಿರದಲ್ಲೇ ನೋಡಿ ಅರ್ಥ ಮಾಡಿಕೊಳ್ಳುವುದು ಉತ್ತಮ.

ಚಿತ್ರದ ನಾಯಕನಾಗಿ ಗುರುರಾಜ್ ಜಗ್ಗೇಶ್ ಸಹಜ ಅಭಿನಯ ನೀಡಿದ್ದಾರೆ. ಆದರೆ ಗುರು ಸೇರಿದಂತೆ ಯಾರದೇ ಪಾತ್ರವನ್ನು ಗಮನಾರ್ಹಗೊಳಿಸುವ ಸನ್ನಿವೇಶಗಳಾಗಲೀ, ಸಂಭಾಷಣೆಗಳಾಗಲೀ ಚಿತ್ರದಲ್ಲಿ ಇಲ್ಲ ಎನ್ನುವುದು ಸತ್ಯ. ನಾಯಕ ಚಿತ್ರ ಪೂರ್ತಿ ಕುಡುಕನಾಗಿ ಕಾಣಿಸಿಕೊಂಡಿರುವುದು ಮತ್ತೊಂದು ಮೈನಸ್. ಎರಡನೇ ಬಾರಿ ನಾಯಕನಿಗೆ ಇಷ್ಟವಾಗುವ ಹುಡುಗಿಯ ಪಾತ್ರವನ್ನು ಸಂಹಿತಾ ವಿನ್ಯ ಅಭಿನಯಿಸಿದ್ದಾರೆ. ಅವರ ಪಾತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ಇಲ್ಲವಾದರೂ ಸಿಕ್ಕ ಅವಕಾಶದಲ್ಲಿ ಅವರು ನೀಡಿರುವ ನಟನೆ ಮತ್ತು ಹಾಡಿನಿಂದಾಗಿ ನೆನಪಲ್ಲಿ ಉಳಿಯುತ್ತಾರೆ. ಮೂರನೇ ಪ್ರೇಯಸಿಯ ಪಾತ್ರ ನಿರ್ವಹಿಸಿರುವ ದಿವ್ಯಾ ಗೌಡ ಕೂಡ ಪ್ರೇಕ್ಷಕರ ಮನಸ್ಸಲ್ಲಿ ಸ್ಥಾನ ಪಡೆಯುತ್ತಾರೆ. ಉಳಿದಂತೆ ನಾಯಕನ ತಾಯಿಯಾಗಿ ಅರುಣಾ ಬಾಲರಾಜ್ ಎಂದಿನಂತೆ ಗಮನ ಸೆಳೆಯುತ್ತಾರೆ. ಬಾರ್ ಮಾಲಕ ತಂದೆಯಾಗಿ ಹನುಮಂತೇಗೌಡ ನಟಿಸಿದ್ದಾರೆ.

ದತ್ತಣ್ಣನದ್ದು ಪ್ರೇಮದ ಬಗ್ಗೆ ಆಳವಾಗಿ ಮಾತನಾಡುವ ಪಾತ್ರ. ಎಲ್ಲಕ್ಕಿಂತ ಮುಖ್ಯವಾಗಿ ನಾಯಕನ ಅತ್ತೆ ಪಾತ್ರದಲ್ಲಿ ನಟಿಸಿರುವ ನಟಿ ಸುಚಿತ್ರಾ ಎರಡೇ ದೃಶ್ಯಗಳಲ್ಲಿ ಬಂದರೂ ತಮ್ಮ ಸಹಜ ಅಭಿನಯದಿಂದ ಅಚ್ಚಳಿಯದೆ ಉಳಿದು ಬಿಡುತ್ತಾರೆ. ಉತ್ತರ ಪತ್ರಿಕೆ ತಿದ್ದಿ ಆ ವಿದ್ಯಾರ್ಥಿ ಬಗ್ಗೆ ಕಾಳಜಿ ತೋರುವ ದೃಶ್ಯ, ನಾಯಕನ ಹೊದಿಕೆ ಎಳೆದು ಎಬ್ಬಿಸುವ ದೃಶ್ಯಗಳು ಅಮೋಘ.

ಆದರೆ ಸಿನೆಮಾ ಹೆಸರು ‘ವಿಷ್ಣು ಸರ್ಕಲ್’ ಎಂದು ಇರಿಸಿರುವುದಕ್ಕೆ ಪೂರಕವಾಗಿ ಚಿತ್ರದಲ್ಲಿ ಸರ್ಕಲ್ ಯಾವ ಪವಾಡವನ್ನೂ ಮಾಡುವುದಿಲ್ಲ. ಆದರೆ ಆರಂಭದಲ್ಲೇ ವಿಷ್ಣುವರ್ಧನ್ ಅವರ ಚಿತ್ರಗಳ ದೃಶ್ಯಗಳ ಜತೆಯಲ್ಲೇ ಶೀರ್ಷಿಕೆಗಳನ್ನು ಹಾಕಿ ಅಭಿಮಾನಿಗಳ ಮನ ಸೆಳೆಯಲಾಗಿದೆ. ಇದರೊಂದಿಗೆ ವಿಷ್ಣುವರ್ಧನ್ ಚಿತ್ರದ ಒಂದು ದೃಶ್ಯವನ್ನು ಕೂಡ ತುರುಕಲಾಗಿದೆ. ಮಾತ್ರವಲ್ಲ ನಾಯಕನ ಹೆಸರೂ ವಿಷ್ಣುವೇ. ಆದರೆ ವಿರಹದ ನೋವನ್ನು ವಿಷ್ಣು ಶೈಲಿಯಲ್ಲೇ ವ್ಯಕ್ತಪಡಿಸುವ ನಾಯಕನ ಪ್ರಯತ್ನವೂ ವಿಫಲವಾಗಿದೆ. ಒಟ್ಟು ಎರಡು ಗಂಟೆ ಕಾಲಾವಧಿಯೂ ಇಲ್ಲದ ಈ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದು ಕಷ್ಟ್ಲ.

ತಾರಾಗಣ: ಗುರುರಾಜ್ ಜಗ್ಗೇಶ್, ಜಾಹ್ನವಿ, ಸಂಹಿತಾ ವಿನ್ಯ, ದಿವ್ಯಾಗೌಡ, ಸುಚಿತ್ರಾ
ನಿರ್ದೇಶನ: ಲಕ್ಷ್ಮೀ ದಿನೇಶ್
ನಿರ್ಮಾಣ: ಆರ್ ಬಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)