varthabharthi

ವೈವಿಧ್ಯ

ಹವಾಮಾನ ಬಿಕ್ಕಟ್ಟಿನ ವಿದ್ಯಮಾನವನ್ನೇ ನಿರಾಕರಿಸುವ ಮತ್ತು ಮೂಲನಿವಾಸಿ ಸಮುದಾಯಗಳ ಮೇಲೆ ಆಕ್ರಮಣ ನಡೆಸುತ್ತಿರುವ ಬ್ರೆಝಿಲ್ ನ ಅಧ್ಯಕ್ಷ ಬೊಲ್ಸನಾರೊ ಅವರ ನಡೆಗಳು ಅನಾಹುತಗಳನ್ನು ತೀವ್ರಗೊಳಿಸಲಿದೆ.

ಅಮೆಝಾನ್ ಕಾಡ್ಗಿಚ್ಚಿನಲ್ಲಿ ಉರಿಯುತ್ತಿರುವ ಪ್ರಶ್ನೆಗಳು

ವಾರ್ತಾ ಭಾರತಿ : 8 Sep, 2019

ಬ್ರೆಝಿಲ್‌ನ ಜನಸಂಖ್ಯೆಯ ಶೇ.0.6ರಷ್ಟಾಗುವ ಮೂಲನಿವಾಸಿ ಸಮುದಾಯಗಳಿಗಾಗಿ ಬ್ರೆಝಿಲ್‌ನ 1988ರ ಸಂವಿಧಾನವು ವಿಶಾಲವಾದ ಮೀಸಲು ಅರಣ್ಯವನ್ನು ಅಮೆಝಾನ್ ಅರಣ್ಯ ಪ್ರದೇಶದಲ್ಲಿ ಕಾದಿರಿಸಿದೆ. ಈ ಅಮೆರಿಂಡಿಯನ್ ಮೂಲನಿವಾಸಿಗಳ ಬಗ್ಗೆ ಬೊಲ್ಸನಾರೊ ಮತ್ತವರ ಬಲಪಂಥೀಯ ಆಳುವ ಕೂಟದಲ್ಲಿ ಹಂತಕ ಧೋರಣೆಯೇ ಮನೆಮಾಡಿದೆ. ಯವನಾವ ಮೂಲನಿವಾಸಿ ಸಮುದಾಯದ ನಾಯಕರಾದ ತಾಷ್ಕಾ ಯವನಾವ ಅವರ ಪ್ರಕಾರ ಅಲ್ಲಿನ ಮೂಲನಿವಾಸಿಗಳು ಸಾಮೂಹಿ ನರಹತ್ಯೆಗೆ ಗುರಿಯಾಗುತ್ತಿದ್ದಾರೆ.

ಜಗತ್ತಿನ ಅತಿ ದೊಡ್ಡ ಇಂಗಾಲ ಹೀರಿಕೆಯ ತೊಟ್ಟಿಯಾಗಿ ಕೆಲಸ ಮಾಡುವ 55 ಲಕ್ಷ ಚದರ ಕಿಮೀ.ನಷ್ಟು ವಿಸ್ತಾರದ ಅಮೆಝಾನ್ ಅರಣ್ಯದ ಒಂದು ಭಾಗದಿಂದ ದಟ್ಟವಾದ ಹೊಗೆ ಮೋಡಗಳು ಆಕಾಶವನ್ನು ಆವರಿಸಿಕೊಳ್ಳುತ್ತಿದೆ. ಈ ಕಾಡ್ಗಿಚ್ಚು ಅತ್ಯಂತ ಹೆಚ್ಚು ಹೊಗೆಯನ್ನು ಉಗುಳಿದಾಗ ಅದು ಬ್ರೆಝಿಲ್ ದೇಶದ ಅತಿ ಹೆಚ್ಚು ಜನದಟ್ಟಣೆ ಪ್ರದೇಶವಾದ ಪೂರ್ವ ಕರಾವಳಿಯ ಆಗಸವನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಬ್ರೆಝಿಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ರಿಸರ್ಚ್‌ನ ವರದಿಯ ಪ್ರಕಾರ 2018ಕ್ಕೆ ಹೋಲಿಸಿದಲ್ಲಿ ಕಾಡ್ಗಿಚ್ಚು ಪ್ರಕರಣಗಳು ಶೇ.84ರಷ್ಟು ಹೆಚ್ಚಿದೆ. ಹೀಗಾಗಿ ಈ ಸಾಲಿನಲ್ಲಿ ವರದಿಯಾದ 74,000 ಕಾಡ್ಗಿಚ್ಚು ಪ್ರಕರಣಗಳು ಜಗತ್ತಿನ ಅತ್ಯಂತ ದೊಡ್ಡ ಜೀವವೈವಿಧ್ಯವನ್ನು ಹೊಂದಿರುವ ಈ ಅರಣ್ಯವನ್ನು ಸುಟ್ಟು ಬೂದಿ ಮಾಡುತ್ತಿದೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಅಪರೂಪವೇನಲ್ಲ. ಏಕೆಂದರೆ ಒಣಹವೆಯ ಸಂದರ್ಭದಲ್ಲಿ ಕಾಡು ಬೆಂಕಿಗಳು ಪದೇಪದೇ ಸಂಭವಿಸುತ್ತವೆ. ಆದರೆ ಈ ಬಾರಿ ಅದರ ತೀವ್ರತೆ ಅತ್ಯಂತ ಹೆಚ್ಚಾಗಿದ್ದು ಜಾಗತಿಕವಾಗಿ ಕಳವಳವನ್ನು ಹುಟ್ಟುಹಾಕಿದೆ. ಅಮೆಝಾನ್ ಪರಿಸರ ಸಂಶೋಧನಾ ಕೇಂದ್ರದ (ಐಎನ್‌ಪಿಇ) ವಿಜ್ಞಾನಿಗಳ ಪ್ರಕಾರ ಅತಿ ಹೆಚ್ಚು ಕಾಡುಕಡಿತಕ್ಕೆ ಬಲಿಯಾಗಿದ್ದ ಅಮೆಝಾನ್‌ನ 10 ಮುನಿಸಿಪಲ್ ಪ್ರದೇಶಗಳಲ್ಲೇ ಈ ವರ್ಷ ಅತ್ಯಂತ ತೀವ್ರತರವಾದ ಕಾಡ್ಗಿಚ್ಚುಗಳೂ ಸಂಭವಿಸಿವೆ. ಈ ಕಾಡ್ಗಿಚ್ಚು ಸಂಭವಿಸಿರುವುದರಲ್ಲಿ 2016ರಲ್ಲಿ ಕಾಣಿಸಿಕೊಂಡ ಬರಗಾಲಕ್ಕೆ ಒಂದು ಪಾತ್ರವಿದ್ದರೂ ಪರಿಸರ ವಿಜ್ಞಾನಿಗಳ ಪ್ರಕಾರ ಈ ಬೃಹತ್ ಕಾಡ್ಗಿಚ್ಚು ಬರಗಾಲದಿಂದಲೋ ಅಥವಾ ಇನ್ಯಾವುದೇ ನೈಸರ್ಗಿಕ ಕಾರಣಗಳಿಂದಲೋ ಸಂಭವಿಸಿರಬಹುದೆಂಬ ಊಹಾಪೋಹಗಳನ್ನು ತಿರಸ್ಕರಿಸಬೇಕು. ಆ ವಿಜ್ಞಾನಿಗಳ ಪ್ರಕಾರ ಹಾಲಿ ಒಣಹವೆ ಇರುವ ಋತುವಾಗಿದ್ದರೂ ಅಮೆಝಾನಿನಲ್ಲಿರುವ ತೇವಾಂಶದ ಮಟ್ಟವು ಕಳೆದ ಮೂರು ವರ್ಷದ ಸರಾಸರಿಗಿಂತಲೂ ಹೆಚ್ಚೇ ಇದೆ. ಅಮೆಝಾನ್ ಪರಿಸರ ಸಂಶೋಧನಾ ಕೇಂದ್ರ ಮತ್ತು ಡಿಫಾರೆಸ್ಟೇಷನ್ ಅಲರ್ಟ್ ಸಿಸ್ಟಮ್ (ಕಾಡುಕಡಿತ ಜಾಗೃತಿ ವ್ಯವಸ್ಥೆ)ಗಳ ಪ್ರಕಾರ ಈ ಕಾಡ್ಗಿಚ್ಚಿಗೆ ಏಕಮಾತ್ರ ಕಾರಣ ಕಾಡುಕಡಿತ-ಅಪ ಅರಣ್ಯೀಕರಣ.

ಬ್ರೆಝಿಲ್‌ನ ಅಧ್ಯಕ್ಷರಾದ ಬೊಲ್ಸನಾರೊ ಅವರಿಗೆ ಹವಾಮಾನ ವಿಜ್ಞಾನದಲ್ಲೂ ನಂಬಿಕೆ ಇಲ್ಲ ಅಥವಾ ವೈಜ್ಞಾನಿಕ ಅರಣ್ಯೀಕರಣ ಮತ್ತು ಅರಣ್ಯ ಸಂರಕ್ಷಣೆಯಲ್ಲೂ ನಂಬಿಕೆ ಇಲ್ಲ. ಇದೇ ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಐಎನ್‌ಪಿಇನ ಮುಖ್ಯಸ್ಥರಾದ ರಿಕಾರ್ಡೋ ಗಾಲ್ವಾವೋ ಅವರು ಬ್ರೆಝಿಲ್ ದೇಶದಲ್ಲಿ ಅತ್ಯಂತ ತೀವ್ರಗತಿಯ ಅಪ-ಅರಣ್ಯೀಕರಣವಾಗುತ್ತಿದೆಯೆಂದು (ಕಾಡು ಕಡಿತ) ಎಚ್ಚರಿಸಿದ್ದರು. 2019ರ ಜೂನ್ ತಿಂಗಳೊಂದರಲ್ಲೇ ಮಾಲಿಯಂಥ ದೇಶದ ಒಟ್ಟು ವಿಸ್ತೀರ್ಣಕ್ಕೆ ಸಮನಾದಷ್ಟು ಎಂದರೆ 2072 ಚದರ ಕಿ.ಮೀ.ನಷ್ಟು ಕಾಡನ್ನು ಬ್ರೆಝಿಲ್ ಕಳೆದುಕೊಂಡಿದೆಯೆಂದು ಅವರು ಹೇಳಿದ್ದರು. ಆದರೆ ಬ್ರೆಝಿಲ್ ಅಧ್ಯಕ್ಷ ಬೊಲ್ಸನಾರೊ ಅದನ್ನು ಸುಳ್ಳೆಂದು ನಿರಾಕರಿಸಿದ್ದಲ್ಲದೆ ಗಾಲ್ವಾವೋ ಅವರನ್ನು ಆ ಹುದ್ದೆಯಿಂದ ಕಿತ್ತುಹಾಕಿದ್ದರು. 2019ರ ಮೊದಲ ಆರು ತಿಂಗಳಲ್ಲಿ ನಾಟಾ ವ್ಯವಹಾರ, ಗಣಿಗಾರಿಕೆ ಮತ್ತು ಕೃಷಿ ಉದ್ದಿಮೆ ಸಂಸ್ಥೆಗಳ ಹಿತಾಸಕ್ತಿಯನ್ನು ಕಾಯಲು ಅವರು ಬ್ರೆಝಿಲ್‌ನ ಪರಿಸರ ಮತ್ತು ಪುನರ್‌ನವೀಕರಣ ಮಾಡಬಹುದಾದ ನೈಸರ್ಗಿಕ ಸಂಪನ್ಮೂಲಗಳ ಸಂಸ್ಥೆಗೆ (ಐಆರ್‌ಎಎಂಎ) ಕೊಡುತ್ತಿದ್ದ ಸಹಾಯ ಧನವನ್ನು ಶೇ.20ರಷ್ಟು ಕಡಿತಗೊಳಿಸಿದರು. ಐಆರ್‌ಎಎಂಎ ಅಧಿಕಾರಿಗಳು ತುಂಬಾ ಕಠಿಣವಾದ ನಿಯಂತ್ರಣಗಳನ್ನು ಹೇರುತ್ತಾರಲ್ಲದೆ ಎರಡು ಕೈಗಳಲ್ಲೂ ಪೆನ್ನನ್ನು ಹಿಡಿದುಕೊಂಡು ದಂಡಗಳನ್ನು ವಿಧಿಸುತ್ತಾರೆ ಎಂದು ಅವರು ಹೇಳಿದ್ದರು. ಅಲ್ಲದೆ ಈಗ ಅಮೆಝಾನ್ ಉದ್ದಿಮೆ-ವ್ಯವಹಾರಗಳನ್ನು ಮಾಡಲು ಸಿದ್ಧವಾಗಿದೆಯೆಂದು ಅವರು ಘೋಷಿಸಿದರು. ನಾಟಾ ಉದ್ದಿಮೆ, ಗಣಿಗಾರಿಕೆ ಹಾಗೂ ಕೃಷಿ ಉದ್ದಿಮೆಗಳಲ್ಲಿ ತೊಡಗಿಕೊಂಡಿರುವ ಉದ್ಯಮಿಗಳು ಅಮೆಝಾನ್ ಅರಣ್ಯದೊಳಗೆ ಮೂಲನಿವಾಸಿಗಳು ವಾಸಿಸುವುದನ್ನು ತಮ್ಮ ವ್ಯವಹಾರಗಳಿಗೆ ದೊಡ್ಡ ಅಡ್ಡಿಯೆಂದು ಪರಿಗಣಿಸುತ್ತಾರೆ. ಏಕೆಂದರೆ ಆ ಮೂಲನಿವಾಸಿಗಳು ತಾವು ವಾಸಿಸುತ್ತಿರುವ ಅರಣ್ಯವನ್ನು ಮಾರುಕಟ್ಟೆಯ ಸರಕಾಗಿ ಪರಿವರ್ತಿಸುವುದನ್ನು ವಿರೋಧಿಸುತ್ತಿದ್ದಾರೆ. ಬ್ರೆಝಿಲ್‌ನ ಜನಸಂಖ್ಯೆಯ ಶೇ.0.6ರಷ್ಟಾಗುವ ಈ ಮೂಲನಿವಾಸಿ ಸಮುದಾಯಗಳಿಗಾಗಿ ಬ್ರೆಝಿಲ್‌ನ 1988ರ ಸಂವಿಧಾನವು ವಿಶಾಲವಾದ ಮೀಸಲು ಅರಣ್ಯವನ್ನು, ಅಮೆಝಾನ್ ಅರಣ್ಯ ಪ್ರದೇಶದಲ್ಲಿ ಕಾದಿರಿಸಿದೆ.

ಈ ಅಮೆರಿಂಡಿಯನ್ ಮೂಲನಿವಾಸಿಗಳ ಬಗ್ಗೆ ಬೊಲ್ಸನಾರೊ ಮತ್ತವರ ಬಲಪಂಥೀಯ ಆಳುವ ಕೂಟದಲ್ಲಿ ಹಂತಕ ಧೋರಣೆಯೇ ಮನೆಮಾಡಿದೆ. ಯವನಾವ ಮೂಲನಿವಾಸಿ ಸಮುದಾಯದ ನಾಯಕರಾದ ತಾಷ್ಕಾ ಯವನಾವ ಅವರ ಪ್ರಕಾರ ಅಲ್ಲಿನ ಮೂಲನಿವಾಸಿಗಳು ಸಾಮೂಹಿಕ ನರಹತ್ಯೆಗೆ ಗುರಿಯಾಗುತ್ತಿದ್ದಾರೆ. ಹಾಲಿ ಅಮೆಝಾನನ್ನು ಆವರಿಸಿರುವ ಕಾಡ್ಗಿಚ್ಚಿಗೆ ಪರಿಸರವಾದಿ ಸರಕಾರೇತರ ಸಂಸ್ಥೆಗಳೇ ಕಾರಣವೆಂದು ಬೊಲ್ಸನಾರೊ ದೂಷಿಸಿದ್ದಾರೆ. ಬ್ರೆಝಿಲ್ ಸರಕಾರಕ್ಕೆ ಮುಜುಗರವನ್ನುಂಟು ಮಾಡಿ ಅವರ ಉದ್ದಿಮೆಪರ ನೀತಿಗಳಿಗೆ ಅಡ್ಡಿಯುಂಟು ಮಾಡಲೆಂದೇ ಸರಕಾರೇತರ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರ ಈ ಆರೋಪಕ್ಕೆ ಪೂರಕವಾದ ಯಾವ ಸಾಕ್ಷಿಗಳೂ ಇಲ್ಲ. ಬ್ರೆಝಿಲಿನ ಅಧ್ಯಕ್ಷರ ಕಡೆಯಿಂದ ಇದು ಮತ್ತೊಂದು ಪ್ರಚೋದನಾತ್ಮಕ ಹೇಳಿಕೆಯಾಗಿದೆ. ಕಳೆದೆರಡು ವಾರಗಳಲ್ಲಿ ಬೊಲ್ಸನಾರೊ ವಿರುದ್ಧದ ಆಕ್ರೋಶವು ಮುಗಿಲುಮುಟ್ಟಿದೆ. ರಾಜಧಾನಿ ರಿಯೋ ಡಿ ಜನೈರೋ ಹಾಗೂ ಸಾವೋ ಪಾವ್ಲೋಗಳನ್ನು ಕೇಂದ್ರವಾಗಿಟ್ಟುಕೊಂಡು ಬ್ರೆಝಿಲ್‌ನಾದ್ಯಂತ ಸಾಮೂಹಿಕ ಪ್ರದರ್ಶನಗಳು ನಡೆಯುತ್ತಿವೆ ಹಾಗೂ ಆ ಸಾಮೂಹಿಕ ಪ್ರದರ್ಶನಗಳಲ್ಲಿ ‘‘ಅಮೆಝಾನ್ ಜನತೆಗೆ ಸೇರಿದ್ದು’’ ಎಂಬ ಹಾಗೂ ‘‘ಅಮೆಝಾನ್ ಉಳಿಯುತ್ತದೆ, ಬೊಲ್ಸನಾರೊ ಹೋಗುತ್ತಾರೆ’’ ಎಂದು ಹಾಕುತ್ತಿರುವ ಘೋಷಣೆಗಳು ಜನತೆಯ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಮತ್ತು ಬೊಲ್ಸನಾರೊ ಅವರ ಜನಪ್ರಿಯತೆಯೂ ಕುಸಿಯುತ್ತಿದೆ.

ಸಿಎನ್‌ಟಿ/ಎಂಡಿಎ ಎಂಬ ಸಂಸ್ಥೆಯೊಂದು ಮಾಡಿದ ಜನಾಭಿಪ್ರಾಯ ಸಂಗ್ರಹದ ಪ್ರಕಾರ ಅವರು ಅಭಿಪ್ರಾಯ ಕೇಳಿದ ಜನರಲ್ಲಿ ಶೇ.39.5ಕ್ಕೂ ಹೆಚ್ಚಿನವರು ಬೊಲ್ಸನಾರೊ ಸರಕಾರ ಕೆಟ್ಟದಾಗಿದೆ ಅಥವಾ ಭಯಾನಕವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬೊಲ್ಸನಾರೊ ಅವರ ವೈಯಕ್ತಿಕ ಜನಪ್ರಿಯತೆಯು ಇದೇ ಜನವರಿಯಲ್ಲಿ ಶೇ.38.9ರಷ್ಟಿದ್ದದ್ದು ಈಗ ಶೇ.29.4ಕ್ಕೆ ಕುಸಿದಿದೆ. ಅಮೆಝಾನಿನ ಕಾಡ್ಗಿಚ್ಚು, ಅದಕ್ಕೆ ಬೊಲ್ಸನಾರೊ ನೀಡಿದ ಅವೈಜ್ಞಾನಿಕ ಪ್ರತಿಕ್ರಿಯೆ ಮತ್ತು ಜನಪ್ರತಿರೋಧಗಳು ಸರಕಾರದ ಮೇಲೆ ಒತ್ತಡ ಹೇರಿವೆ. ಯೂರೋಪ್ ಸಹ ಬೊಲ್ಸನಾರೊ ಅವರನ್ನು ಟೀಕಿಸುತ್ತಾ ಆತನ ಎರಡೂ ಪ್ರಮುಖ ವಾಣಿಜ್ಯ ಹಾಗೂ ವ್ಯಾವಹಾರಿಕ ಉದ್ದೇಶಗಳನ್ನೇ ಪ್ರಶ್ನಿಸತೊಡಗಿದೆ. ಯೂರೋಪಿನ ರೈತರು ಬ್ರೆಝಿಲ್‌ನಿಂದ ದನದ ಮಾಂಸವನ್ನು ಆಮದು ಮಾಡಿಕೊಳ್ಳದಂತೆ ಐರೋಪ್ಯ ಒಕ್ಕೂಟದ ಮನವೊಲಿಸಿದ್ದಾರೆ. ಈ ನೀತಿಯೇ ಸಾಕಷ್ಟು ಹಾನಿಕರವಾಗಿತ್ತು. ಆದರೆ ಅದು ಅಲ್ಲಿಗೇ ನಿಲ್ಲದೆ ಅರ್ಜೆಂಟೀನಾ, ಬ್ರೆಝಿಲ್, ಪೆರುಗ್ವೆ, ಉರುಗ್ವೆ ಮತ್ತು ವೆನೆಝುವೆಲಾ ದೇಶಗಳನ್ನೊಳಗೊಂಡ ವಾಣಿಜ್ಯ ವಲಯವಾದ ಮರ್ಕೋಸರ್‌ನೊಂದಿಗಿನ ವಾಣಿಜ್ಯ ಒಪ್ಪಂದದಿಂದಲೇ ಐರೋಪ್ಯ ಒಕ್ಕೂಟವು ಹಿಂತೆಗೆಯುವ ರೂಪ ಪಡೆಯತೊಡಗಿತು. ಅಷ್ಟು ಮಾತ್ರವಲ್ಲ ಬೊಲ್ಸನಾರೊ ಅವರು ಬ್ರೆಝಿಲ್ ದೇಶವನ್ನು ‘‘ಅಭಿವೃದ್ಧಿಗೊಂಡ ದೇಶಗಳು’’ ಎಂದು ಹೇಳಲಾಗುವ 36 ದೇಶಗಳ ಒಕ್ಕೂಟವಾದ ಒಇಸಿಡಿ (ಆರ್ಗನೈಸೇಷನ್ ಫಾರ್ ಎಕಾನಮಿಕ್ ಕೋಆಪರೇಷನ್ ಆ್ಯಂಡ್ ಡೆವಲಪ್‌ಮೆಂಟ್)ಯ ಭಾಗ ಮಾಡುವ ಆಶಯವನ್ನು ಹೊಂದಿದ್ದರು. ಈಗ ಬ್ರೆಝಿಲ್‌ಗೆ ಒಇಸಿಡಿಗೆ ಪ್ರವೇಶ ಸಿಗುವುದು ಅನುಮಾನ.

ಫ್ರಾನ್ಸ್‌ನಲ್ಲಿ ಇತ್ತೀಚೆಗೆ ನಡೆದ ಜಿ-7ರ ಶೃಂಗ ಸಭೆಯಲ್ಲಿ ಅಮೆಝಾನ್ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಸೇರಿತ್ತು. ಬೊಲ್ಸನಾರೊಗೆ ಆಪ್ತನಾಗಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ಸಭೆಯಲ್ಲಿ ಭಾಗವಹಿಸಲಿಲ್ಲ. ಅಮೆಝಾನ್ ಕಾಡ್ಗಿಚ್ಚಿನ ವಿರುದ್ಧ ಸೆಣೆಸಲು 2 ಕೋಟಿ ಡಾಲರ್‌ಗಳನ್ನು ನೀಡಲು ಆ ಸಭೆಯು ನಿರ್ಧರಿಸಿತು. ಆದರೆ ಸಮಸ್ಯೆಯ ಗಾತ್ರಕ್ಕೆ ಹೋಲಿಸಿದಲ್ಲಿ ಅದೊಂದು ಸಣ್ಣ ಮೊತ್ತವಷ್ಟೆ. ಈ ಅನುದಾನವು ಅತಾರ್ಕಿಕವಾಗಿರುವುದು ಮಾತ್ರವಲ್ಲದೆ ಅಮೆಝಾನಿನ ಮೇಲಿನ ಅನಗತ್ಯ ದಾಳಿಯಾಗಿದೆಯೆಂದು ಬಣ್ಣಿಸಿ ಬೊಲ್ಸನಾರೊ ಅದನ್ನು ನಿರಾಕರಿಸಿದರು. ಆದರೆ ಹೆಚ್ಚುತ್ತಲೇ ಇರುವ ಒತ್ತಡಕ್ಕೆ ಮಣಿದು ಕಾಡ್ಗಿಚ್ಚನ್ನು ನಂದಿಸಲು ಅವರು ಸೈನ್ಯವನ್ನು ಕಳಿಸಿದ್ದಾರೆ. ಆದರೆ ಅವರ ಈ ಅತ್ಯಂತ ಸಣ್ಣ ಕ್ರಮದ ಹಿಂದೆಯೂ ಇರುವುದು ವ್ಯಾವಹಾರಿಕ ಉದ್ದೇಶಗಳೇ ವಿನಾ ಅಮೆಝಾನ್ ಅರಣ್ಯ ಸಂಪತ್ತಿನ ಮೌಲಿಕ ಮಹತ್ವದ ಬಗ್ಗೆಯಾಗಲೀ, ಅಲ್ಲಿರುವ ಮೂಲನಿವಾಸಿಗಳ ಬಗೆಗಿನ ಕಾಳಜಿಯಿಂದಲ್ಲ. ಈ ಮಧ್ಯೆ ಬ್ರೆಝಿಲಿಯನ್ ಕಾಡ್ಗಿಚ್ಚು ಪಕ್ಕದ ಬೊಲಿವಿಯಾಗೂ ಹರಡಿಕೊಂಡಿದೆ. ಬೊಲಿವಿಯಾದ ಅಧ್ಯಕ್ಷ ಇವೋ ಮೊರಲೆಸ್ ಅವರು ತ್ವರಿತಗತಿಯಲ್ಲಿ ಪ್ರತಿಕ್ರಿಯಿಸಿ ಈ ಕಾಡ್ಗಿಚ್ಚಿನ ಕೆನ್ನಾಲಗೆಗಳನ್ನು ತಣ್ಣಗಾಗಿಸಲು ಬಾಡಿಗೆ ಸೂಪರ್ ಟ್ಯಾಂಕರ್‌ಗಳನ್ನು ಬಳಸಿದರು. ಬೊಲಿವಿಯಾದ ಸಂವಿಧಾನದಲ್ಲಿ ಭೂಮಿತಾಯಿಯ ಕಾನೂನು ಎಂಬುದೊಂದಿದೆ. ಅದು ಪ್ರಕೃತಿಗೆ ಮನುಷ್ಯರಿಗೆ ಸರಿ ಸಮಾನವಾದ ಹಕ್ಕನ್ನು ನೀಡುತ್ತದೆ. ಅಮೆಝಾನ್ ಕಾಡ್ಗಿಚ್ಚಿಗೆ ಈ ಎರಡೂ ದೇಶಗಳು ನೀಡಿದ ವಿಭಿನ್ನ ಪ್ರಕ್ರಿಯೆಗಳನ್ನು ಗಮನಿಸಿದರೆ ಆಯಾ ಸರಕಾರಗಳ ರಾಜಕೀಯ-ತಾತ್ವಿಕ ಧೋರಣೆಗಳೇ ಪರಿಸರಾತ್ಮಕ ಮತ್ತು ಮಾನವೀಯ ಬಿಕ್ಕಟ್ಟುಗಳ ಕುರಿತಾಗಿ ಅವುಗಳ ಧೋರಣೆಯನ್ನೂ ತೀರ್ಮಾನಿಸುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಅಮೆಝಾನ್‌ನ್ನು ಉಳಿಸುವ ಹೋರಾಟವನ್ನು ಒಂದು ನ್ಯಾಯಯುತ ಮತ್ತು ಘನತೆಯುಳ್ಳ ರಾಜಕೀಯ ವ್ಯವಸ್ಥೆಯನ್ನು ಸ್ಥಾಪಿಸಲು ನಡೆಸುವ ಹೋರಾಟದಿಂದ ಹೊರತುಪಡಿಸಲು ಸಾಧ್ಯವೇ ಇಲ್ಲ.

ಕೃಪೆ: Economic and Political Weekly

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)