varthabharthi

ವೈವಿಧ್ಯ

ಸಂಪ್ರದಾಯಗಳ ಸಮೃದ್ಧತೆಯ 'ಮೊಂತಿ ಹಬ್ಬ'

ವಾರ್ತಾ ಭಾರತಿ : 8 Sep, 2019
ಫಾದರ್ ಚೇತನ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಉಡುಪಿ ಧರ್ಮಕ್ಷೇತ್ರ

ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಬಂಟ್ವಾಳದ ಫರಂಗಿಪೇಟೆಯ ಮೊಂತೆ ಮರಿಯಾನೊ ಅಂದರೆ ಮೇರಿ ಮಾತೆಯ ದಿಬ್ಬ ಎಂಬಲ್ಲಿ ಗೋವಾದ ಜೋಕಿಮ್ ಡಿಸೋಜಾ ಎಂಬ ಧರ್ಮಗುರು ಆ ದೇವಾಲಯದ ವಾರ್ಷಿಕ ಹಬ್ಬವನ್ನು ಮೇರಿ ಮಾತೆಯ ಹುಟ್ಟು ಹಬ್ಬವಾದ ಸೆಪ್ಟ್ಟಂಬರ್ 8ರಂದು ನಿಗದಿಗೊಳಿಸಿದರು. ಈ ಕಾರಣದಿಂದ ಈ ಹಬ್ಬಕ್ಕೆ ‘ಮೊಂತಿ ಹಬ್ಬ’ ಎಂಬ ಹೆಸರು ಬಂತು.

ಸೆಪ್ಟಂಬರ್ 8ರಂದು ಕರಾವಳಿಯ ಕ್ರೈಸ್ತರು ಸಂಪ್ರದಾಯಗಳ ಸುಗ್ಗಿಯಾದ ‘ಮೊಂತಿ ಹಬ್ಬ’ವನ್ನು ಆಚರಿಸುತ್ತಾರೆ. ಸುರಿದ ಮಿತವಾದ ಮಳೆಯಿಂದ ಹಸಿರಿನಿಂದ ಸಮೃದ್ಧವಾಗಿ ಬೆಳೆದ ಗಿಡಮರಗಳು ತಮ್ಮ ರೆಂಬೆಕೊಂಬೆಗಳನ್ನು ಹರಡಿ ಮೈಕೊಡವಿ ಎದ್ದುನಿಂತು, ಹಸಿರನ್ನು ಹೊದ್ದ ಪ್ರಕೃತಿ ಸಮೃದ್ಧ ಫಸಲಿನ ತೃಪ್ತಿಯಿಂದ ನಸುನಕ್ಕು ಈ ಸುಂದರ ಹಬ್ಬಕ್ಕೆ ಹಿಮ್ಮೇಳವನ್ನು ಒದಗಿಸುತ್ತಿವೆ. ಪಶ್ಚಿಮ ಕರಾವಳಿಯ ಕೊಂಕಣಿ ಕ್ರೈಸ್ತರು ಆಚರಿಸುವ ಮೇರಿ ಮಾತೆಯ ಹುಟ್ಟಿದ ಹಬ್ಬ ಕೇರಳದ ಓಣಂ ಹಾಗೂ ತುಳುವರ ಕುರಲ್ ಪರ್ಬದೊಂದಿಗೆ ಸಾಮ್ಯತೆ ಹೊಂದಿದೆ.

ಮೊಂತಿ ಹಬ್ಬದ ಆರಂಭ

 ಸಂಪ್ರದಾಯಗಳಿಂದ ತುಂಬಿದ ಈ ಹಬ್ಬದ ಆರಂಭದ ಬಗ್ಗೆ ಅನೇಕ ಅಭಿಪ್ರಾಯಗಳಿವೆ. ಈ ಹಬ್ಬದ ಬೇರುಗಳು ಪೋರ್ಚುಗೀಸ್ ಸಂಪ್ರದಾಯದಿಂದ ಹಿಡಿದು ಸ್ಥಳೀಯ ತುಳುನಾಡವರೆಗೂ ಹಬ್ಬಿವೆ. 1519 ರಲ್ಲಿ ಪೋರ್ಚುಗೀಸ್ ಆಲ್ಫೊನ್ಸೊ ಆಲ್ಬುಕರ್ಕ್ ಎಂಬವ ಹಳೇ ಗೋವಾದ ಎತ್ತರದ ದಿಬ್ಬವೊಂದರ ಮೇಲೆ ಪುಟ್ಟ ಚರ್ಚೊಂದನ್ನು ನಿರ್ಮಿಸಿದ. ಅದಕ್ಕೆ ದಿಬ್ಬದ ಮಾತೆಯ ಮಂದಿರ ಎಂದು ಹೆಸರಿಟ್ಟ. ‘ಮೊಂತೆ’ ಎಂದರೆ ದಿಬ್ಬ ಎಂದು ಅರ್ಥ. ಆ ಪುಟ್ಟ ಚರ್ಚ್ ಇಂದಿಗೂ ಅಸ್ತಿತ್ವದಲ್ಲಿದೆ. ಆ ಚರ್ಚ್‌ನಲ್ಲಿ ದಿಬ್ಬದ ಮಾತೆಯ ಹಬ್ಬ ಸೆಪ್ಟ್ಟಂಬರ್ 8 ರಂದು ಇಂದಿಗೂ ನಡೆಯುತ್ತದೆ.

ಬಹುಸಂಸ್ಕೃತಿಗಳ ಮಧ್ಯೆ ಜೀವಿಸುತ್ತಿದ್ದ ಕ್ರೈಸ್ತರು ಇತರರ ಸಂಪ್ರದಾಯಗಳನ್ನು ಅನುಕರಿಸಿ ಮಾತೆ ಮರಿಯಮ್ಮನವರಿಗೆ ಹೂಗಳನ್ನು ಅರ್ಪಿಸಿ ಹಬ್ಬವನ್ನು ಆಚರಿಸಲಾರಂಭಿಸಿದರು. ಹೀಗೆ ವಿವಿಧ ಧರ್ಮಗಳ ಸಂಪ್ರದಾಯಗಳು ಮಿಳಿತು ಮೊಂತಿ ಹಬ್ಬದ ಸಂಪ್ರದಾಯ ಆರಂಭವಾಯಿತು. ಹೊಸ ಪೈರನ್ನು ಹಂಚಿಕೊಳ್ಳುವ ಸಂಪ್ರದಾಯವೂ ಮುಂದುವರಿಯಿತು.

ಅವಿಭಜಿತ ದಕ್ಷಿಣ ಕನ್ನಡದಲ್ಲಿ ಮೊಂತಿ ಹಬ್ಬ

ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಬಂಟ್ವಾಳದ ಫರಂಗಿಪೇಟೆಯ ಮೊಂತೆ ಮರಿಯಾನೊ ಅಂದರೆ ಮೇರಿ ಮಾತೆಯ ದಿಬ್ಬ ಎಂಬಲ್ಲಿ ಗೋವಾದ ಜೋಕಿಮ್ ಡಿಸೋಜಾ ಎಂಬ ಧರ್ಮಗುರು ಆ ದೇವಾಲಯದ ವಾರ್ಷಿಕ ಹಬ್ಬವನ್ನು ಮೇರಿ ಮಾತೆಯ ಹುಟ್ಟು ಹಬ್ಬವಾದ ಸೆಪ್ಟ್ಟಂಬರ್ 8ರಂದು ನಿಗದಿಗೊಳಿಸಿದರು. ಈ ಕಾರಣದಿಂದ ಈ ಹಬ್ಬಕ್ಕೆ ‘ಮೊಂತಿ ಹಬ್ಬ’ ಎಂಬ ಹೆಸರು ಬಂತು. ಇಂದು ಫರಂಗಿಪೇಟೆಯ ಮೊಂತೆ ಮರಿಯಾನೊದಲ್ಲಿ ಬಾಲಿಕಾ ಮರಿಯಳ ಪುಣ್ಯಕ್ಷೇತ್ರವಿದ್ದು ಸಾವಿರಾರು ಭಕ್ತರು ಹಬ್ಬದ ಪ್ರಯುಕ್ತ ಅಲ್ಲಿಗೆ ಭೇಟಿ ನೀಡಿ ಪ್ರಾರ್ಥಿಸುತ್ತಾರೆ. ಮೊಂತಿ ಹಬ್ಬದ ದಿನ ತರಕಾರಿಗಳಿಂದ ಸಮೃದ್ಧವಾದ ಭೋಜನವನ್ನು ಸೇವಿಸುವ ಸಂಪ್ರದಾಯವು ಖಂಡಿತವಾಗಿ ಪೋರ್ಚುಗೀಸ್ ಅಥವಾ ಗೋವಾ ಮೂಲದಿಂದ ಬಂದದ್ದಲ್ಲ, ಇದು ತುಳುನಾಡಿನ ಸಂಪ್ರದಾಯ. ಮೀನುಗಾರಿಕೆಗೆ ಮಳೆಗಾಲದಲ್ಲಿ ನಿಷೇಧವಿರುವುದರಿಂದ ಈ ಹಬ್ಬಕ್ಕೆ ತರಕಾರಿಗಳನ್ನು ಉಪಯೋಗಿಸುವುದು ಅನಿವಾರ್ಯ. ಉಡುಪಿ, ಕುಂದಾಪುರ ಪ್ರದೇಶಗಳಲ್ಲಿ ತರಕಾರಿಗೆ ಬದಲಾಗಿ ಉತ್ತಮ ಮೀನಿನ ಖಾದ್ಯಗಳನ್ನು ತಯಾರಿಸುತ್ತಾರೆ. ಸೆಪ್ಟಂಬರ್ ತಿಂಗಳಲ್ಲಿ ಮೀನುಗಾರಿಕೆಯ ನಿಷೇಧ ಕಳೆದು ಸಿಕ್ಕಿದ ಉತ್ತಮ ಮೀನುಗಳು ಹಬ್ಬಕ್ಕೆ ಉಪಯೋಗವಾಗುತ್ತವೆ.

ದೇವರಿತ್ತ ಪ್ರಕೃತಿಯ ಫಲಗಳಿಗಾಗಿ ಧನ್ಯತೆ

  ದೇವರೊಡಗೂಡಿ ದುಡಿದು ಈ ಭೂಮಿಯನ್ನು ಅಭಿವೃದ್ಧಿಪಡಿಸಬೇಕೆಂಬ ಉದ್ದೇಶದಿಂದ ದೇವರು ಮನುಜನನ್ನು ಸೃಷ್ಟಿಸಿದ್ದಾನೆ. ಆದರೆ ಮನುಷ್ಯ ಈ ಉದ್ದೇಶವನ್ನು ಮರೆತು ಸ್ವಾರ್ಥಕ್ಕಾಗಿ ಇಡೀ ಸೃಷ್ಟಿಯನ್ನು ಹಾಳುಗೆಡವಿ ವಿಕೃತಗೊಳಿಸುತ್ತಿದ್ದಾನೆ. ಗಣಿಗಾರಿಕೆಯಿಂದ ಸುಂದರ ಬೆಟ್ಟಗುಡ್ಡಗಳನ್ನು ಕಡಿದು ಹಾಳುಗೆಡವುತ್ತಿದ್ದಾನೆ, ನೀರುಣಿಸುವ ಕೆರೆ ತೊರೆಗಳನ್ನು ಮಟ್ಟಮಾಡಿ ಕಾಂಕ್ರಿಟ್‌ಮಯಗೊಳಿಸುತ್ತಿದ್ದಾನೆ, ಕಾರ್ಖಾನೆಗಳು, ವಾಹನಗಳ ವಿಷಭರಿತ ಹೊಗೆಯಿಂದ ಗಾಳಿಯನ್ನು ಕಲುಷಿತಗೊಳಿಸುತ್ತಿದ್ದಾನೆ, ಪರಿಸರವನ್ನು ಕೆಡಿಸುತ್ತಿದ್ದಾನೆ. ಮಾನವ ಜೀವದ ಸೆಲೆಯಾದ ಪ್ರಕೃತಿಗೆೆ ನಮಿಸಿ ಅವಳ ಗಾಯಗಳಿಗೆ ಸಾಂತ್ವನದ ಮುಲಾಮನ್ನು ಹಚ್ಚುವ ಸುಂದರ ಹಬ್ಬವೂ ಆಗಿದೆ ಮೊಂತಿಹಬ್ಬ. ಇದಕ್ಕೆ ಪೂರಕವಾಗಿ ಮಕ್ಕಳಿಲ್ಲದೆ ಬರಡಾಗಿದ್ದ ಜೋಕಿಮ್ ಮತ್ತು ಅನ್ನಮ್ಮರ ಜೀವನದಲ್ಲಿ ಮರಿಯಳ ಹುಟ್ಟು ಹೊಸ ಸುಗ್ಗಿಯನ್ನು ತಂದಿತು ಎಂಬ ಚಾರಿತ್ರಿಕ ಹಾಗೂ ಧಾರ್ಮಿಕ ವಿಚಾರವೂ ಮಿಳಿತಗೊಂಡಿದೆ

ಕುಟುಂಬ ಐಕ್ಯತೆಗೆ ಪ್ರಾಧಾನ್ಯತೆ

ಈ ಹಬ್ಬ ಕುಟುಂಬದ ಹಬ್ಬವೆಂದು ಹಿಂದಿನಿಂದಲೂ ಖ್ಯಾತಿ ಪಡೆದಿದೆ. ಹಿಂದೆ, ಈ ಹಬ್ಬಕ್ಕೆ ಚದುರಿ ಹೋಗಿರುವ ಕುಟುಂಬದ ಸದಸ್ಯರೆಲ್ಲರೂ ಮರಳಿ ಮನೆಗೆ ಬರುತ್ತಿದ್ದರು. ಈಗ ಕುಟುಂಬದ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಒಟ್ಟಾಗುತ್ತಾರೆ. ಚರ್ಚ್‌ನಲ್ಲಿ ಆಶೀರ್ವದಿಸಿದ ಹೊಸ ಪೈರನ್ನು ಮನೆಗೊಯ್ದು ಆ ಹೊಸ ಬತ್ತದ ಅಕ್ಕಿಯನ್ನು ಪುಡಿಮಾಡಿ ಹಾಲು ಅಥವಾ ತೆಂಗಿನ ರಸದಲ್ಲಿ ಸೇರಿಸಿ ಸೇವಿಸುತ್ತಾರೆ. ಕುಟುಂಬದ ಐಕ್ಯತೆಯ ದ್ಯೋತಕವಾಗಿ ಬತ್ತದ ಕಾಳುಗಳನ್ನು ವಿದೇಶದಲ್ಲಿರುವ ಕುಟುಂಬದ ಸದಸ್ಯರಿಗೂ ಕಳುಹಿಸಿಕೊಡುತ್ತಾರೆ. ಜೊತೆಯಾಗಿ ಭುಜಿಸುವ ಕುಟುಂಬ ಜೊತೆಯಾಗಿ ಬಾಳುವಂತೆ ಕುಟುಂಬದ ಸದಸ್ಯರ ಮಧ್ಯೆ ಐಕ್ಯತೆ, ಒಮ್ಮನಸ್ಸು ಬೆಳೆಯಲು ಮೊಂತಿ ಹಬ್ಬ ಕಾರಣವಾಗುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಹಬ್ಬದ ದಿನದಂದು ಜೊತೆ ಸೇರಲು ಸಾಧ್ಯವಿಲ್ಲದಿದ್ದರೆ, ಎಲ್ಲರೂ ಜೊತೆಸೇರುವ ಬೇರೊಂದು ಸಂದರ್ಭದಲ್ಲಿ ಹಬ್ಬವನ್ನು ಆಚರಿಸುವ ಪರಿಪಾಠವಿದೆ.

ಹೆಣ್ಣಿನ ಗೌರವದ ದ್ಯೋತಕ

ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿರುವ ಕಾಲದಲ್ಲೂ ನಮ್ಮ ತಾಯಿ, ಅಕ್ಕ-ತಂಗಿಯರಿಗೆ ಸಮಾಜದಲ್ಲಿ ಗೌರವ, ಸ್ಥಾನ-ಮಾನ ಸಿಗುತ್ತಿಲ್ಲ ಎಂಬುದು ಸತ್ಯ. ಪುರುಷನೊಡನೆ ಸರಿಸಮವಾಗಿ ನಿಲ್ಲಲು ಅವಳು ಹೋರಾಟ ನಡೆಸಬೇಕಾಗಿದೆ. ಮಾತೆ ಮರಿಯಳ ಹುಟ್ಟು ಹಬ್ಬವು ದೇವರು ಪುರುಷನಿಗೆ ಪೂರಕವಾಗಿ ಸೃಷ್ಟಿಸಿದ ಹೆಣ್ಣನ್ನು ನಾವು ಗೌರವದಿಂದ ಕಂಡು ಪುರಸ್ಕರಿಸಬೇಕೆಂದು ನಮಗೆ ಕರೆಕೊಡುತ್ತದೆ. ವಿವಿಧ ಸಂಪ್ರದಾಯಗಳ ಹೂರಣವಾದ ಮೊಂತಿ ಹಬ್ಬದ ಆಚರಣೆಯು ಸರ್ವರಿಗೂ ಮಂಗಳವನ್ನುಂಟು ಮಾಡುವ ಸುಸಂದರ್ಭವಾಗಲಿ ಎಂದು ಹಾರೈಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)