varthabharthi

ಅಂತಾರಾಷ್ಟ್ರೀಯ

ಚೀನಾ ಹಿಡಿತದಿಂದ ಹಾಂಕಾಂಗ್ ಮುಕ್ತಗೊಳಿಸಿ: ಟ್ರಂಪ್‌ಗೆ ಪ್ರತಿಭಟನಕಾರರ ಮನವಿ

ವಾರ್ತಾ ಭಾರತಿ : 8 Sep, 2019

 ಹಾಂಕಾಂಗ್,ಸೆ.8: ಚೀನಾದ ಅರೆಸ್ವಾಯತ್ತ ಪ್ರಾಂತವಾದ ಹಾಂಕಾಂಗ್‌ಗೆ ಅಧಿಕ ಪ್ರಜಾತಾಂತ್ರಿಕ ಸ್ವಾತಂತ್ರ ನೀಡಬೇಕೆಂದು ಆಗ್ರಹಿಸಿ ಹಾಂಕಾಂಗ್‌ನ ಸಹಸ್ರಾರು ನಾಗರಿಕರು ರವಿವಾರವೂ ಬೃಹತ್ ರ್ಯಾಲಿ ನಡೆಸಿದರು. ಚೀನಾದ ಹಿಡಿತದಿಂದ ತಮ್ಮ ನೆಲವನ್ನು ಮುಕ್ತಗೊಳಸಬೇಕೆಂದು ಪ್ರತಿಭಟನಕಾರರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿ ಮಾಡಿದ್ದಾರೆ. ರ್ಯಾಲಿಯಲ್ಲಿ ಭಾಗವಹಿಸಿದ್ದ ಸಹಸ್ರಾರು ಪ್ರತಿಭಟನಕಾರರು‘‘ ಬೀಜಿಂಗ್ ಅನ್ನು ತಡೆಯಿರಿ, ಹಾಂಕಾಂಗನ್ನು ವಿಮೋಚನೆಗೊಳಿಸಿ’’ ಎಂಬ ಘೋಷಣೆಗಳನ್ನು ಕೂಗಿದರು. ಕಪ್ಪು ಟೀಶರ್ಟ್ ಹಾಗೂ ಮುಖವಾಡಗಳನ್ನು ಧರಿಸಿದ್ದ ನೂರಾರು ಮಂದಿ ಅಧ್ಯಕ್ಷ ಟ್ರಂಪ್ ಅವರೇ, ಹಾಂಕಾಂಗನ್ನು ವಿಮೋಚನೆಗೊಳಿಸಿ’’ ಎಂಬ ಘೋಷಣೆಗಳನ್ನು ಬರೆಯಲಾಗಿದ್ದ ಭಿತ್ತಿಪತ್ರಗಳನ್ನು ಹಿಡಿದಿದ್ದರು. ಅಮೆರಿಕ ರಾಯಭಾರಿ ಕಚೇರಿಯ ಸಮೀಪದಿಂದಲೇ ರ್ಯಾಲಿ ಆರಂಭಗೊಂಡಿದ್ದು, ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಚೀನಾದ ಸರ್ವಾಧಿಕಾರಿ ಆಡಳಿತದ ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಹಾಂಕಾಂಗ್ ಮುಂಚೂಣಿಯಲ್ಲಿದೆ’’ ಎಂದು ರವಿವಾರದ ರ್ಯಾಲಿಯ ಸಂಘಟಕರಲ್ಲೊಬ್ಬರಾದ ಪಾಂರೆರ್ ಚಾನ್ ತಿಳಿಸಿದ್ದಾರೆ.

 ಹಾಂಕಾಂಗ್‌ನಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ಬಂಧಿತರಾದ ಶಂಕಿತ ಆರೋಪಿಗಳನ್ನು ಚೀನಾ ಮುಖ್ಯಭೂಮಿಗೆ ಕರೆದೊಯ್ಯುವುದಕ್ಕೆ ಅವಕಾಶ ನೀಡುವ ಚೀನಿ ಸರಕಾರದ ಪ್ರಸ್ತಾವಿತ ಕಾನೂನಿನ ವಿರುದ್ಧ ಬೇಸಿಗೆಯಲ್ಲಿ ಪ್ರತಿಭಟನೆ ಆರಂಭಗೊಂಡಿತ್ತು ಹಾಗೂ ಕಳೆದ ಕೆಲವು ವಾರಗಳಲ್ಲಿ ತೀವ್ರ ಸ್ವರೂಪವನ್ನು ಪಡೆದಿತ್ತು.

  ಪ್ರತಿಭಟನಾಕಾರರ ಬೇಡಿಕೆಗೆ ಕೊನೆಗೂ ಮಣಿದ ಹಾಂಕಾಂಗ್ ಸರಕಾರವು ಕಳೆದ ವಾರ ವಿಧೇಯಕವನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಆದರೆ ಆನಂತರ ಪ್ರತಿಭಟನಕಾರರು ಇತರ ಬೇಡಿಕೆಗಳನ್ನು ಮಂದಿರಿಸಿದ್ದು, ಹಾಂಕಾಂಗ್‌ಗೆ ಅಧಿಕ ಪ್ರಜಾಪ್ರಭುತ್ವವನ್ನು ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

  

ಅಮೆರಿಕದ ಕೆಲವು ಸಂಸದರು ಹಾಂಕಾಂಗ್‌ನ ಪ್ರತಿಭಟನಕಾರರನ್ನು ಬಲವಾಗಿ ಬೆಂಬಲಿಸಿದ್ದಾರೆ ಹಾಗೂ ಚೀನಾವು ಹಿಂಸಾತ್ಮಕವಾಗಿ ಪ್ರತಿಭಟನಕಾರನ್ನು ಹತ್ತಿಕ್ಕುವ ಸಾಧ್ಯತೆಯಿದೆಯೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಹಾಂಕಾಂಗ್ ಬಿಕ್ಕಟ್ಟಿನ ವಿಷಯದಿಂದ ಅಮೆರಿಕವು ದೂರವಿರುವುದೆಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಹಾಂಕಾಂಗ್ ಹಾಗೂ ಚೀನಾ ತಮ್ಮ ನಡುವೆಯೇ ಬಿಕ್ಕಟ್ಟು ಬಗೆಹರಿಯಬೇಕಾಗಿದೆಯೆಂದು ಅವರು ಅಭಿಪ್ರಾಯಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)