varthabharthi


ಸಂಪಾದಕೀಯ

ತನ್ನನ್ನು ತಾನೇ ವ್ಯಂಗ್ಯ ಮಾಡಿಕೊಂಡ ಪಾಕ್

ವಾರ್ತಾ ಭಾರತಿ : 9 Sep, 2019

ನಡೆಯುವವರಷ್ಟೇ ಎಡವಲು ಸಾಧ್ಯ. ಓಡುತ್ತಿದ್ದ ವ್ಯಕ್ತಿಯೊಬ್ಬ ಎಡವಿದಾಗ ಅದನ್ನು ನೋಡಿ ನೆಲದಲ್ಲಿ ತೆವಲುವವನೊಬ್ಬ ವ್ಯಂಗ್ಯ ಮಾಡಿದನಂತೆ. ಚಂದ್ರಯಾನ-2 ಇದರ ವೈಫಲ್ಯಕ್ಕಾಗಿ ಭಾರತವನ್ನು ವ್ಯಂಗ್ಯ ಮಾಡಿದ ಪಾಕಿಸ್ತಾನದ ಸ್ಥಿತಿ ಇದು. ಇಂದು ಇಸ್ರೋ ತನ್ನ ಹಲವು ಸಾಧನೆಗಳ ಮೂಲಕ ಇಡೀ ವಿಶ್ವದ ಗಮನವನ್ನು ಸೆಳೆದಿದೆ. ವಿಜ್ಞಾನ, ತಂತ್ರಜ್ಞಾನಗಳ ಆರಂಭ ಹತ್ತು ಹಲವು ವೈಫಲ್ಯಗಳ ಮೂಲಕವೇ ಸಾಗುತ್ತದೆ. ಅದೆಷ್ಟೇ ಹಗೆತನಗಳಿರಲಿ, ಒಂದು ದೇಶದ ವೈಜ್ಞಾನಿಕ ಸಂಶೋಧನೆಗಳ ವೈಫಲ್ಯವನ್ನು ಇನ್ನೊಂದು ದೇಶ ಸಂಭ್ರಮಿಸಿದ ಇತಿಹಾಸವಿಲ್ಲ. ಆದರೆ ಪಾಕಿಸ್ತಾನದ ಸಚಿವರೊಬ್ಬರು ಅಂತಹ ಸಾಹಸಕ್ಕಿಳಿದು, ಈಗಾಗಲೇ ಪಾತಾಳಕ್ಕೆ ತಲುಪಿರುವ ಪಾಕಿಸ್ತಾನದ ವರ್ಚಸ್ಸನ್ನು ಇನ್ನಷ್ಟು ಕೆಳಗೆ ತಳ್ಳಿದ್ದಾರೆ. ಖಗೋಳಶಾಸ್ತ್ರದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ನಾಸಾ ಕೂಡ, ಇಸ್ರೋ ಪ್ರಯತ್ನವನ್ನು ಅಭಿನಂದಿಸಿದೆ. ಆದರೆ ಖಗೋಳದಲ್ಲಿ ಯಾವೊಂದು ಸಾಧನೆಯನ್ನೂ ಮಾಡದ ಪಾಕಿಸ್ತಾನವು ಭಾರತವನ್ನು ವ್ಯಂಗ್ಯ ಮಾಡಲು ಹೋಗಿ ತನ್ನನ್ನು ತಾನೇ ವ್ಯಂಗ್ಯ ಮಾಡಿಕೊಂಡಿದೆ. ಒಂದು ದೇಶದ ಸಂಶೋಧನೆಯ ವೈಫಲ್ಯವನ್ನು ವ್ಯಂಗ್ಯ ಮಾಡುವಾಗ ಕನಿಷ್ಠ ಪಾಕಿಸ್ತಾನ ಆ ಕ್ಷೇತ್ರದಲ್ಲಿ ಯಾವುದಾದರೂ ಸಾಧನೆಯನ್ನು ಮಾಡಿರಬೇಕು.

ಅಂತಹ ಯಾವ ಸಾಧನೆಯನ್ನೂ ಮಾಡದ ಪಾಕಿಸ್ತಾನವು ಭಾರತದ ಮಹಾ ಪ್ರಯತ್ನವೊಂದರ ವೈಫಲ್ಯವನ್ನು ವ್ಯಂಗ್ಯ ಮಾಡುವುದು ಆ ದೇಶದ ನಾಯಕರು ತಲುಪಿದ ಬೌದ್ಧಿಕ ಮಟ್ಟವನ್ನು ಹೇಳುತ್ತದೆ. ಚಂದ್ರನ ಮೇಲೆ ಇಳಿಯುವ ಚಂದ್ರಯಾನ 2ನ ಅಂತಿಮ ಹದಿನೈದು ನಿಮಿಷಗಳು ಅತ್ಯಂತ ಕ್ಲಿಷ್ಟಕರ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ.ಶಿವನ್ ಅದಾಗಲೇ ತಿಳಿಸಿದ್ದರು. ಮಧ್ಯರಾತ್ರಿ ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವುದನ್ನು ಶನಿವಾರ ಇಡೀ ದೇಶ ರೆಪ್ಪೆ ಮಿಟುಕಿಸದೆ ಕಾತರದಿಂದ ವೀಕ್ಷಿಸುತ್ತಿದ್ದಂತೆಯೇ ಇಸ್ರೋದ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡು ಇಡೀ ಯೋಜನೆ ಅನಿರೀಕ್ಷಿತ ಕೊನೆಯನ್ನು ತಲುಪಿತು. ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವುದು ಇಡೀ ಯೋಜನೆಯ ಅತ್ಯಂತ ಕಠಿಣ ಭಾಗವಾಗಿದೆ ಮತ್ತು ಇಸ್ರೋ ಈತನಕ ಇಂತಹ ಸಾಹಸಕ್ಕೆ ಕೈಹಾಕಿರಲಿಲ್ಲ. ಆಕಾಶಕಾಯಗಳು ಮತ್ತು ಗ್ರಹಗಳನ್ನು ತಲುಪುವ ಯೋಜನೆಗಳಲ್ಲಿ ನಾಲ್ಕು ವಿಧಗಳಿವೆ-ಫ್ಲೈಬೈ, ಆರ್ಬಿಟಲ್, ಕ್ರಾಶ್ ಲ್ಯಾಂಡಿಂಗ್ ಮತ್ತು ಸಾಫ್ಟ್ ಲ್ಯಾಂಡಿಂಗ್. ಫ್ಲೈಬೈ ಯೋಜನೆಯಲ್ಲಿ ಬಾಹ್ಯಾಕಾಶ ನೌಕೆ ಆಕಾಶಕಾಯದ ಜೊತೆಗೆ ಸುತ್ತುತ್ತಾ ಅದರ ಚಿತ್ರಗಳನ್ನು ಸಮೀಪದಿಂದ ತೆಗೆಯುತ್ತದೆ ಮತ್ತು ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹಿಸುತ್ತದೆ. ಆರಂಭದ ಯೋಜನೆಗಳು ಈ ವಿಭಾಗಕ್ಕೆ ಸೇರುತ್ತವೆ. ಸಾಫ್ಟ್ ಲ್ಯಾಂಡಿಂಗ್ ಅಥವಾ ಸುರಕ್ಷಿತ ಲ್ಯಾಂಡಿಂಗ್‌ನಲ್ಲಿ ಬಾಹ್ಯಾಕಾಶ ನೌಕೆಯ ವೇಗವನ್ನು ತಗ್ಗಿಸಲಾಗುತ್ತದೆ ಮತ್ತು ಆಕಾಶಕಾಯದ ಮೇಲೆ ಸುರಕ್ಷಿತವಾಗಿ ಇಳಿಯುವಂತೆ ಮಾಡಲಾಗುತ್ತದೆ.

ಇದನ್ನು ಅತ್ಯಂತ ಕ್ಲಿಷ್ಟಕರ ಮತ್ತು ತಾಂತ್ರಿಕವಾಗಿ ಸವಾಲಿನ ಕಾರ್ಯ ಎಂದು ಪರಿಗಣಿಸಲಾಗುತ್ತದೆ. ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ಪ್ರಕ್ರಿಯೆಯ ಯಶಸ್ವಿ ದರ ಕೇವಲ 37ಶೇ. ಆಗಿದೆ. ಜೊತೆಗೆ ಇಸ್ರೋ ಈ ಹಿಂದೆ ಇತರ ಯಾವುದೇ ದೇಶಗಳು ಪ್ರಯತ್ನಿಸದಂತಹ ಸಾಹಸವೊಂದಕ್ಕೆ ಕೈಹಾಕಿತ್ತು. ಅದೆಂದರೆ, ಇಲ್ಲಿತನಕ ಯಾರಿಂದಲೂ ಅನ್ವೇಷಿಸಲ್ಪಡದ ಚಂದ್ರನ ದಕ್ಷಿಣ ಧ್ರುವದ ಸಮೀಪ ವಿಕ್ರಮ್ ಲ್ಯಾಂಡರನ್ನು ಇಳಿಸುವುದು. ಚಂದ್ರನ ಮೇಲೆ ಮಾನವ ಇಳಿದ ನಂತರ ಹಲವು ದಶಕಗಳ ಕಾಲ ಅಂತಹ ಮಹತ್ವದ ಸಾಧನೆಗಳು ನಡೆದೇ ಇಲ್ಲ. ಚಂದ್ರ ಮತ್ತು ಭೂಮಿಯ ನಡುವೆ ಒಂದು ರೀತಿಯ ವೌನ ಆವರಿಸಿತ್ತು. ಇಸ್ರೋ ಸಾಧನೆಯಿಂದಾಗಿ ಆ ವೌನ ಮುರಿದಿದೆ. ಅಪೋಲೊ ಹಾಗೂ ಇತರ ಯೋಜನೆಗಳಲ್ಲಿ ನೌಕೆಗಳನ್ನು ಚಂದ್ರನ ಸಮಭಾಜಕ ವೃತ್ತ ಮತ್ತು ಇತರ ಪ್ರದೇಶಗಳಲ್ಲಿ ಇಳಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಬಗ್ಗೆ ವಿವಿಧ ಕಕ್ಷೆಗಾಮಿ ಯೋಜನೆಗಳ ಮೂಲಕ ಸಾಕಷ್ಟು ಮಾಹಿತಿ ಲಭ್ಯವಾಗಿದೆ. 2024ರ ವೇಳೆಗೆ ಚಂದ್ರನ ದಕ್ಷಿಣ ಧ್ರುವಕ್ಕೆ ತನ್ನ ಗಗನಯಾನಿಗಳನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿರುವುದರಿಂದ ನಾಸಾ ಕೂಡ ಇಸ್ರೋದ ಚಂದ್ರಯಾನ 2ನ ಫಲಿತಾಂಶವನ್ನು ಕುತೂಹಲದಿಂದ ವೀಕ್ಷಿಸುತ್ತಿತ್ತು. ವಿಕ್ರಮ್ ಜೊತೆ ಸಂಪರ್ಕ ಕಡಿದು ಹೋಗಿದ್ದರೂ ಆರ್ಬಿಟರ್ ಇನ್ನೂ ಚಂದ್ರನ ಸುತ್ತ ಸುತ್ತುತ್ತಿರುವುದರಿಂದ ಶೀಘ್ರದಲ್ಲೇ ಅದು ದತ್ತಾಂಶಗಳನ್ನು ಕಳುಹಿಸಲು ಆರಂಭಿಸುತ್ತದೆ. ಈಗಾಗಲೇ ಲ್ಯಾಂಡರ್‌ನ್ನು ಅದು ಚಂದ್ರನಲ್ಲಿ ಪತ್ತೆ ಹಚ್ಚಿದೆ. ಹಾಗಾಗಿ ವಿಕ್ರಮ್ ಜೊತೆ ಸಂವಹನ ಸಾಧ್ಯವಾಗಬಾರದು ಎಂದೇನೂ ಇಲ್ಲ.

 ಇಸ್ರೋಗೆ ಸೋಲು ಹೊಸತೇನೂ ಅಲ್ಲ. ತನ್ನ ತಪ್ಪಿನಿಂದಲೇ ಅದು ಬಹಳಷ್ಟನ್ನು ಕಲಿತು ಬೆಳೆಯುತ್ತಾ ಬಂದಿದೆ. ಈ ಹಿಂದೆ ಎಎಸ್‌ಎಲ್‌ವಿಯಂತಹ ವೈಫಲ್ಯಗಳು ನಡೆದಾಗಲೂ ಇಸ್ರೋವನ್ನು ಟೀಕಿಸಲಾಗಿತ್ತು. ಆದರೆ ಬಳಿಕ ಇಸ್ರೋ ಹಲವು ಮಹತ್ವದ ಸಾಧನೆಗಳನ್ನು ಮಾಡಿತು. ವಿಕ್ರಮ್ ಲ್ಯಾಂಡರ್ ವಿಷಯದಲ್ಲೂ ಇದು ಮುಂದುವರಿಯಲಿದೆ. ಭವಿಷ್ಯದ ಬಾಹ್ಯಾಕಾಶ ಯೋಜನೆಗಳಲ್ಲಿ ಸ್ವಲ್ಪ ವಿಳಂಬವಾಗಬಹುದು ಎನ್ನುವುದರ ಹೊರತು ಇನ್ನಾವ ವ್ಯತ್ಯಾಸವೂ ಆಗದು. ಆದರೆ ಇಸ್ರೋ ಕೆಲವು ವಿಷಯಗಳಲ್ಲಿ ಎಡವಿದೆ. ಇಸ್ರೋದಂತಹ ಸಂಸ್ಥೆಯೊಳಗಿರುವ ವಿಜ್ಞಾನಿಗಳೇ ಪೂಜೆ, ಹವನದಂತಹ ಕಾರ್ಯಗಳಿಗೆ ಮೊರೆ ಹೋಗಿರುವುದು. ವೈಯಕ್ತಿಕವಾಗಿ ವಿಜ್ಞಾನಿಗಳು ಧಾರ್ಮಿಕ ನಂಬಿಕೆಗಳನ್ನು ಹೊಂದುವುದು ತಪ್ಪಲ್ಲ. ಆದರೆ ಅದನ್ನು ಇಸ್ರೋ ಸಂಸ್ಥೆಯೊಳಗೆ ತರುವುದು ತಪ್ಪು ಮಾತ್ರವಲ್ಲ, ಅಪರಾಧ. ವಿಜ್ಞಾನಕ್ಕೆ ಅದರದೇ ಆದ ಘನತೆಯಿದೆ. ಯಾವುದೇ ಧರ್ಮ, ಆಚರಣೆಗಳಿಂದ ನಮ್ಮ ವಿಜ್ಞಾನ, ತಂತ್ರಜ್ಞಾನವನ್ನು ಮುಕ್ತವಾಗಿಡಬೇಕು. ಉಪಗ್ರಹಗಳನ್ನು ಹಾರಿಸುವ ಸಂದರ್ಭದಲ್ಲಿ ಅದರ ಪ್ರತಿಕೃತಿಗಳನ್ನು ದೇವಸ್ಥಾನಗಳಿಗೆ ಕೊಂಡೊಯ್ಯುವುದು, ಸ್ವಾಮೀಜಿಗಳ ಆಶೀರ್ವಾದಗಳನ್ನು ಪಡೆಯುವುದು ಇತ್ಯಾದಿ ಕ್ರಮಗಳು ಇಸ್ರೋದೊಳಗೆ ಪ್ರಾಬಲ್ಯ ಹೊಂದಿರುವ ವೈದಿಕ ಮನಸ್ಸುಗಳನ್ನು ಬಹಿರಂಗಪಡಿಸುತ್ತವೆ ಮತ್ತು ಇಂತಹ ಮನಸ್ಸುಗಳೇ ಇಸ್ರೋ ಸಂಸ್ಥೆಯ ಸಾಧನೆಗಳನ್ನು ಕೆಲವು ರಾಜಕೀಯ ನಾಯಕರ ತಲೆಗೆ ಕಟ್ಟಲು ಆತುರಪಡುತ್ತವೆ. ಅದು ಅಂತಿಮವಾಗಿ ಮುಖಭಂಗಕ್ಕೂ ಕಾರಣವಾಗಬಹುದು.

ಇಂತಹ ಸಾಧನೆಯ ಸಂದರ್ಭದಲ್ಲಿ ಮಾಧ್ಯಮಗಳನ್ನು ದೂರ ವಿಟ್ಟಷ್ಟೂ ಕಾರ್ಯಸಾಧನೆಗೆ ಅನುಕೂಲವಾಗುತ್ತದೆ. ಹಿಂದಿನ ಪ್ರಧಾನಿಗಳು ಇಸ್ರೋದಂತಹ ಸಂಸ್ಥೆಗಳನ್ನು ಹುಟ್ಟು ಹಾಕಿ ಬೆಳೆಸಿದ ಕಾರಣದಿಂದ ಇಂದು ಪ್ರಧಾನಿ ಮೋದಿಯವರು ಚಂದ್ರಯಾನದಂತಹ ಸಾಧನೆಗಳನ್ನು ಕಣ್ಣಿನಿಂದ ನೋಡಲು ಸಾಧ್ಯವಾಗಿದೆ. ಮೋದಿಯವರಂತೆ ಗೋಶಾಲೆಗಳಿಗೆ, ಪತಂಜಲಿ ಬಾಬಾಗಳಿಗೆ, ಪಟೇಲರ ಪ್ರತಿಮೆಗೆ, ಶಿವಾಜಿ ಪಾರ್ಕ್‌ಗೆ, ಗೋಮೂತ್ರ ಸಂಶೋಧನೆಗೆ ಹಿಂದಿನ ಪ್ರಧಾನಿಗಳು ದುಡ್ಡನ್ನು ಸುರಿದಿದ್ದರೆ ಭಾರತ ಇಂದು ಬರೇ ದನಕಾಯುವವರ ದೇಶವಾಗಿ ಉಳಿಯುತ್ತಿತ್ತು. ಪ್ರಧಾನಿಯವರು ಇಸ್ರೋಗೆ ಭೇಟಿ ನೀಡದಿದ್ದರೂ ಅಲ್ಲಿನ ಕೆಲಸಗಳು ನಡೆದೇ ನಡೆಯುತ್ತವೆೆ. ಈ ದೇಶದಲ್ಲಿ ಅವರು ಭೇಟಿ ನೀಡಿ, ಕಣ್ಣೀರು ಸುರಿಸಬೇಕಾದ ಅತ್ಯಗತ್ಯ ಸ್ಥಳಗಳು ಹಲವು ಇವೆ. ತಕ್ಷಣ ಆ ಕಡೆಗೆ ಅವರು ತಮ್ಮ ಪ್ರವಾಸದ ದಿಕ್ಕನ್ನು ಬದಲಿಸಬೇಕಾಗಿದೆ. ಇಸ್ರೋದಲ್ಲಿ ತಮ್ಮ ವೇತನ ಕಡಿತದ ಕಾರಣದಿಂದ ಕಣ್ಣೀರು ಸುರಿಸುತ್ತಿರುವ ಅಲ್ಲಿನ ವಿಜ್ಞಾನಿಗಳ ಸಂಕಟಗಳಿಗೆ ಮೋದಿ ಸ್ಪಂದಿಸಿದರೆ, ಅದುವೇ ಅವರು ಇಸ್ರೋ ಸಾಧನೆಗೆ ಪ್ರತಿಯಾಗಿ ನೀಡಬಹುದಾದ ಅತಿ ದೊಡ್ಡ ಕೊಡುಗೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)