varthabharthi

ಕ್ರೀಡೆ

ಇಂದಿನಿಂದ ಭಾರತ ಎ - ಆಫ್ರಿಕ ಎ ಅನಧಿಕೃತ ಟೆಸ್ಟ್

ವಾರ್ತಾ ಭಾರತಿ : 9 Sep, 2019

ತಿರುವನಂತಪುರ, ಸೆ.8: ಭಾರತ ಎ ಮತ್ತು ದಕ್ಷಿಣ ಆಫ್ರಿಕ ಎ ತಂಡಗಳ ನಡುವೆ ಮೊದಲ ಅನಧಿಕೃತ ಟೆಸ್ಟ್ ಪಂದ್ಯ ಸೋಮವಾರ ಇಲ್ಲಿ ಆರಂಭಗೊಳ್ಳಲಿದೆ.

 ನಾಲ್ಕು ದಿನಗಳ ಪಂದ್ಯದಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಶುಬ್‌ಮನ್ ಗಿಲ್ ಭಾರತ ಎ ತಂಡವನ್ನು ಮುನ್ನಡೆಸಲಿರುವರು. ಎರಡನೇ ಪಂದ್ಯಕ್ಕೆ ಖ್ಯಾತ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ನಾಯಕರಾಗಿರುತ್ತಾರೆ.

 ಎರಡೂ ಪಂದ್ಯಗಳನ್ನು ಆಡಲಿರುವ ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರು ಇದ್ದಾರೆ. ಮೊದಲ ಪಂದ್ಯದಲ್ಲಿ ಕರ್ನಾಟಕದ ಆಲ್‌ರೌಂಡರ್ ಕೆ.ಗೌತಮ್ ಮತ್ತು ಆಂಧ್ರದ ವಿಕೆಟ್ ಕೀಪರ್ ಕೆ.ಎಸ್.ಭರತ್ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಡಲಿದ್ದಾರೆ. ಅವರು ವೆಸ್ಟ್‌ಇಂಡೀಸ್‌ಗೆ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡದಲ್ಲಿದ್ದರು. ಅಷ್ಟು ಮಾತ್ರವಲ್ಲದೆ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ(ಕೆಪಿಎಲ್) ಆಡಿದ್ದರು. ಭರತ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಗಮನ ಸೆಳೆದಿದ್ದಾರೆ. ಇದೀಗ ಟೀಮ್ ಇಂಡಿಯಾ ಸೇರ್ಪಡೆಗೆ ಬಾಗಿಲು ತಟ್ಟುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಪ್ರಥಮ ಆಯ್ಕೆಯ ವಿಕೆಟ್ ಕೀಪರ್ ಆಗಿರುವ ರಿಷಭ್ ಪಂತ್ ಅವರಿಗೆ ಇರುವ ಹೊರೆಯನ್ನು ಕಡಿಮೆ ಮಾಡಲು ಆಯ್ಕೆ ಸಮಿತಿಯು ಎರಡನೇ ವಿಕೆಟ್ ಕೀಪರ್‌ಗಾಗಿ ಶೋಧ ನಡೆಸುತ್ತಿದೆ. ಈ ಸ್ಥಾನಕ್ಕೆ ಭರತ್ ಮತ್ತು ಸಹಾ ನಡುವೆ ಪೈಪೋಟಿ ಕಂಡು ಬಂದಿದೆ,

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಪ್ರಿಯಾಂಕ್ ಪಾಂಚಾಲ್ ಮತ್ತು ಅಭಿಮನ್ಯು ಈಶ್ವರನ್ ಅವರು ಹಿರಿಯರ ತಂಡದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಅವರು ಮೈಸೂರಿನಲ್ಲಿ ಸೆ.17ರಂದು ಆರಂಭಗೊಳ್ಳರುವ ಎರಡನೇ ಅನಧಿಕೃತ ಟೆಸ್ಟ್‌ಗೆ ಭಾರತ ಎ ತಂಡದಲ್ಲಿರುತ್ತಾರೆ.

      ಪ್ರಿಯಾಂಕ್ ಪಾಂಚಾಲ್ ಮತ್ತು ಅಭಿಮನ್ಯು ಈಶ್ವರನ್ ಅವರು ಕ್ರಮವಾಗಿ ಗುಜರಾತ್ ಮತ್ತು ಬಂಗಾಳ ರಣಜಿ ತಂಡದಲ್ಲಿ ಆಡಿ ಉತ್ತಮ ಕೊಡುಗೆ ನೀಡಿದ್ದಾರೆ. ಶನಿವಾರ ಮುಕ್ತಾಯಗೊಂಡ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಅಭಿಮನ್ಯು ಈಶ್ವರನ್ ಶತಕ ಸಿಡಿಸಿದ್ದರು. ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಫಾರ್ಮ್ ಕಳೆದುಕೊಂಡಿದ್ದಾರೆ. ಈ ಕಾರಣದಿಂದಾಗಿ ಒಂದು ವೇಳೆ ಪಾಂಚಾಲ್ ಮತ್ತು ಈಶ್ವರನ್ ಅವರು ದಕ್ಷಿಣ ಆಫ್ರಿಕ ವಿರುದ್ಧ ಭಾರತ ಎ ತಂಡದಲ್ಲಿ ಚೆನ್ನಾಗಿ ಆಡಿದರೆ ರಾಹುಲ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕದ ವೇಗಿ ಲುಂಗಿ ಗಿಡಿ ಗಾಯದಿಂದ ಚೇತರಿಸಿಕೊಂಡು ಆಫ್ರಿಕ ತಂಡಕ್ಕೆ ಮರಳಿದ್ದಾರೆ. ಅವರು ಭಾರತ ಎ ವಿರುದ್ಧದ ಪಂದ್ಯದಲ್ಲಿ ಫಿಟ್‌ನೆಸ್ ಪರೀಕ್ಷೆ ನಡೆಸಲಿದ್ದಾರೆ.

ಆಲ್‌ರೌಂಡರ್‌ಗಳಾದ ವಿಜಯ್ ಶಂಕರ್ ಮತು ಶಿವಮ್ ದುಬೆ ಎರಡೂ ಪಂದ್ಯಗಳಲ್ಲಿ ಆಡಲಿದ್ದಾರೆ. ಕಳೆದ ವಿಶ್ವಕಪ್ ಟೂರ್ನಿಯ ಮಧ್ಯದಲ್ಲಿ ವಿಜಯ್ ಶಂಕರ್ ಗಾಯದಿಂದಾಗಿ ತಂಡದಿಂದ ದೂರ ಉಳಿದಿದ್ದರು. ಬಳಿಕ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅವರು ಆಡಿದ್ದರು. ಮತ್ತೆ ಗಾಯಗೊಂಡಿದ್ದ ಅವರು ಭಾರತ ಎ ತಂಡದ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿದ್ದರು.

ಮುಂಬೈನ ಆಟಗಾರ ದುಬೆ ದಕ್ಷಿಣ ಆಫ್ರಿಕ ಎ ವಿರುದ್ಧ ಅನಧಿಕೃತ ಏಕದಿನ ಸರಣಿಯ 5 ಪಂದ್ಯಗಳಲ್ಲಿ ಭಾರತ ಎ ತಂಡದ ಪರ ಉತ್ತಮವಾಗಿ ಆಡಿ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಜಾರ್ಖಂಡ್‌ನ ಎಡಗೈ ಸ್ಪಿನ್ನರ್ ಶಹಬಾಝ್ ನದೀಮ್ ಕಳೆದ ಒಂದು ವರ್ಷದಿಂದ ಗಮನಾರ್ಹ ಪ್ರದರ್ಶನ ನೀಡಿದ್ದರು. ಭಾರತ ಎ ತಂಡದಲ್ಲಿ ಇತ್ತೀಚೆಗೆ ವೆಸ್ಟ್‌ಇಂಡೀಸ್ ಪ್ರವಾಸದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕ ಎ ತಂಡವನ್ನು ನಾಯಕರಾಗಿ ಏಡೆನ್ ಮಕ್ರಮ್ ಮುನ್ನಡೆಸುತ್ತಿದ್ದಾರೆ. ಅವರು ಆಫ್ರಿಕ ಹಿರಿಯರ ತಂಡದ ಭವಿಷ್ಯದ ನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ. ತಂಡದಲ್ಲಿ ಅನುಭವಿ ಆಟಗಾರರಿದ್ದಾರೆ. ಈ ಸರಣಿಯು ಲುಂಗಿ ಗಿಡಿಗೆ ಟೆಸ್ಟ್ ತಂಡಕ್ಕೆ ತಯಾರಿಗೆ ಉತ್ತಮ ಅವಕಾಶ ಒದಗಿಸಿಕೊಡಲಿದೆ. ಇಂಗ್ಲೆಂಡ್‌ನಲ್ಲಿ ಕಳೆದ ವಿಶ್ವಕಪ್ ಪಂದ್ಯದ ವೇಳೆ ಗಾಯಗೊಂಡು ಕೇವಲ 4 ಪಂದ್ಯಗಳಲ್ಲಿ ಆಡಿದ್ದರು.

ತಂಡಗಳು

 ►  ಭಾರತ ಎ: ಶುಬ್‌ಮನ್ ಗಿಲ್(ನಾಯಕ), ಋತುರಾಜ್ ಗಾಯಕ್‌ವಾಡ್, ಅನ್ಮೋಲ್‌ಪ್ರೀತ್ ಸಿಂಗ್, ರಿಕಿ ಭುಯ್, ಅಂಕಿತ್ ಭಾವ್ನೆ, ಕೆ.ಎಸ್.ಭರತ್(ವಿಕೆಟ್ ಕೀಪರ್), ಕೆ.ಗೌತಮ್, ಶಾಹ್‌ದಾಬ್ ನದೀಮ್, ಶಾರ್ದುಲ್ ಠಾಕೂರ್, ಮುಹಮ್ಮದ್ ಸಿರಾಜ್, ತುಷಾರ್ ದೇಶ್‌ಪಾಂಡೆ, ಶಿವಮ್ ದುಬೆ, ವಿಜಯ್ ಶಂಕರ್.

►  ದಕ್ಷಿಣ ಆಫ್ರಿಕ ಎ: ಏಡೆನ್ ಮಕ್ರಮ್(ನಾಯಕ), ಥೆಯುನಿಸ್ ಡೆನ ಬ್ರುಯಾನ್, ಝುಬೈರ್ ಹಂಝಾ, ಲುಂಗಿ ಗಿಡಿ, ಜಾರ್ಜ್ ಲಿಂಡೆ, ಪೀಟರ್ ಮಲಾನ್, ಎಡ್ಡಿ ಮೊರೆ, ಸೆನುರಾನ್ ಮುತ್ತುಸ್ವಾಮಿ, ಮಾರ್ಕೊ ಜಾನ್ಸನ್, ದಾನೆ ಪೀಡ್ತ್, ವಿಯಾನ್ ಮುಲ್ಡೆರ್, ಹೆನ್ರಿಕ್ ಕ್ಲಾಸೆನ್, ಲುಟೊ ಸಿಪಾಮ್ಲ, ಖಾಯ ರೊಂಡೊ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)