varthabharthi

ವೈವಿಧ್ಯ

ಈ ಹೊತ್ತಿನ ಹೊತ್ತಿಗೆ

ಶೋಷಣೆಯ ಮೂಲಗಳನ್ನು ಹುಡುಕುತ್ತಾ....

ವಾರ್ತಾ ಭಾರತಿ : 9 Sep, 2019
-ಕಾರುಣ್ಯಾ

‘ಶೋಷಣೆ’ಯ ತಳಹದಿಯಲ್ಲಿ ನಿಂತಿರುವ ದೇಶ ನಮ್ಮದು. ಶತಶತಮಾನಗಳಿಂದ ವಿವಿಧ ರೀತಿಯ, ಸ್ವರೂಪದ ಶೋಷಣೆಯ ವಿರುದ್ಧ ನಡೆಸಿಕೊಂಡು ಬಂದ ಹೋರಾಟವೇ ಭಾರತದ ನಿಜವಾದ ಇತಿಹಾಸ. ಜಾತೀಯತೆ, ಅಸ್ಪಶ್ಯತೆಯ ರೂಪದ ಶೋಷಣೆ, ಪುರುಷ ಪ್ರಧಾನ ವ್ಯವಸ್ಥೆಯ ಶೋಷಣೆ, ವರ್ಗ ಶೋಷಣೆ, ವಿದೇಶಿ ದಾಳಿಯಿಂದಾದ ಶೋಷಣೆ, ವ್ಯವಸ್ಥೆಯ ಶೋಷಣೆ ಹೀಗೆ ಶೋಷಣೆಗಳಿಗೆ ಹಲವು ಮುಖ. ಶೋಷಿತನಷ್ಟೇ ಶೋಷಣೆಯ ವಿಕಾರದ ಕುರಿತಂತೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಬಲ್ಲ. ಗಾಂಧೀಜಿಯ ಬ್ರಿಟಿಷರ ವಿರುದ್ಧ ಹೋರಾಟ ಮತ್ತು ಅಂಬೇಡ್ಕರ್ ಅವರ ಗುಲಾಮತನದ ವಿರುದ್ಧದ ಹೋರಾಟ ವಿಭಿನ್ನವಾಗುವುದು ಈ ಕಾರಣಕ್ಕಾಗಿ. ಬ್ರಿಟಿಷರನ್ನು ಓಡಿಸಿದಾಕ್ಷಣ ಈ ದೇಶ ಸ್ವತಂತ್ರವಾಗುವುದಿಲ್ಲ ಎನ್ನುವುದು ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರಿಗೂ ಗೊತ್ತಿತ್ತು. ಗಾಂಧೀಜಿ ಈ ದೇಶದ ಶೋಷಕ ಸಮುದಾಯದ ಜೊತೆಗೆ ಸಂವಹನದ ಮೂಲಕ ದೇಶವನ್ನು ಮರು ನಿರ್ಮಾಣ ಮಾಡಲು ಪ್ರಯತ್ನಿಸಿದರು. ಈ ಸಂವಹನ ಅನೇಕ ಬಾರಿ ಗಾಂಧೀಜಿಯನ್ನೂ ಶೋಷಕರ ಜೊತೆಗೆ ಗುರುತಿಸುವಂತೆ ಮಾಡಿತು. ಅಂಬೇಡ್ಕರ್ ಸ್ವತಃ ಶೋಷಣೆಯನ್ನು ಅನುಭವಿಸಿದರು. ಆದುದರಿಂದ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗುವುದರಿಂದ ಈ ದೇಶದ ಶೂದ್ರ, ದಲಿತರ ಗುಲಾಮತನ ಕೊನೆಗೊಳ್ಳುವುದಿಲ್ಲ ಎನ್ನುವುದು ಗೊತ್ತಿತ್ತು. ಶೋಷಕರ ವಿರುದ್ಧ ಪ್ರತಿಭಟನೆಯನ್ನು ಸಂಘಟಿಸಿ ಸ್ವಾತಂತ್ರವನ್ನು ಪಡೆಯಬಹುದೇ ಹೊರತು, ಅವರೊಂದಿಗೆ ರಾಜಿ ಮಾಡಿಕೊಳ್ಳುವ ಮೂಲಕ ಅಲ್ಲ ಎನ್ನುವುದನ್ನು ಸ್ಪಷ್ಟವಾಗಿ ಅರಿತಿದ್ದರು. ಅಂಬೇಡ್ಕರ್ ಮಾತ್ರವಲ್ಲ, ವಿವಿಧ ಚಿಂತಕರು ಈ ದೇಶದ ಶೋಷಣೆಗಳನ್ನು ಬೇರೆ ಬೇರೆ ಕಣ್ಣುಗಳಿಂದ ನೋಡಿದ್ದಾರೆ, ವಿಶ್ಲೇಷಿಸಿದ್ದಾರೆ. ಎಸ್. ಆರ್. ಗುರುನಾಥ್ ಅವರು ತಮ್ಮ ‘ಶೋಷಿತ ಜಗತ್ತು’ ಕೃತಿಯ ಮೂಲಕ ನಮ್ಮ ಸಮಾಜ, ಸಂಸ್ಕೃತಿ ವಿಚಾರಗಳನ್ನು ಚರ್ಚಿಸಿದ್ದಾರೆ. ‘‘ತನ್ನಲ್ಲಿಯ ಕೆಲವು ಅರ್ಥಹೀನ ನಡವಳಿಕೆಗಳನ್ನೂ ಸವರ್ಣೀಯರು ತಮ್ಮ ಸ್ವಾರ್ಥಕ್ಕಾಗಿ ಹೇರಿದ ಆಚಾರ ವಿಚಾರಗಳನ್ನು ದೂರೀಕರಿಸಿ, ತನ್ನದೇ ಆದ ಸಂಸ್ಕೃತಿಯನ್ನು ಗೌರವಿಸಿಕೊಳ್ಳುವ ಗುರಿ ಹೊಂದಿದ ದಲಿತನ ಹೋರಾಟದಲ್ಲಿ ನೈತಿಕ ಗಟ್ಟಿತನ ಉಳಿದುಕೊಂಡಿದೆ’’ ಎಂದು ಅಭಿಪ್ರಾಯ ಪಡುವ ಲೇಖಕರು ‘‘ದಲಿತನ ಹೋರಾಟವು ತುಳಿದವನನ್ನು ತಿರುಗಿ ತುಳಿಯುವುದು ಅಲ್ಲ, ತಿಳಿಯ ಹೇಳುವುದು. ಅವಕಾಶಗಳನ್ನೆಲ್ಲಾ ಬಾಚಿಕೊಳ್ಳುವುದು ಅಲ್ಲ, ಹಂಚಿಕೊಳ್ಳುವುದು. ಹೋರಾಟ ಎಂಬುದು ಯಾರನ್ನೂ ಸೋಲಿಸುವುದಕ್ಕೆ ಅಲ್ಲ, ಸಮಾನತೆಯನ್ನು ಸಾಧಿಸುವುದಕ್ಕೆ, ಜಾತೀಯತೆಯನ್ನು ಅಳಿಸುವುದಕ್ಕೆ...’’ ಎಂದು ಈ ಕೃತಿಯಲ್ಲಿ ಸ್ಪಷ್ಟಪಡಿಸುತ್ತಾರೆ. ಒಬ್ಬ ಕೆಳ ಜಾತಿಯವನಾಗಿ ಸಮಾಜದಲ್ಲಿ ಎದುರಿಸುವ ಇಕ್ಕಟ್ಟಿನ ಸಂದರ್ಭಗಳನ್ನು ಈ ಕೃತಿಯಲ್ಲಿ ಲೇಖಕರು ಹೃದಯ ದ್ರವವಾಗುವಂತೆ ತೆರೆದಿಟ್ಟಿದ್ದಾರೆ. ‘ದಲಿತ ಕಲೆ-ಪಾರ್ಶ್ವ ನೋಟ’ ಕೃತಿಯಲ್ಲಿ ದಲಿತರಿಗೆ ಕಲೆ ಎನ್ನುವುದು ಮನರಂಜನೆಯ ಭಾಗವಲ್ಲ, ಅವು ಬದುಕುವ ಮಾರ್ಗ ಕೂಡ ಹೌದು ಎನ್ನುವುದನ್ನು ವಿವರಿಸುತ್ತಾರೆ. ಉಳಿದೆಲ್ಲ ಕಲೆಗಿರುವ ಜನಪ್ರಿಯತೆ, ಅನುಕರಣೆ ದಲಿತ ಕಲೆಗೆ ಯಾಕಿಲ್ಲ? ಎನ್ನುವ ಮಹತ್ವದ ಪ್ರಶ್ನೆಯನ್ನು ಅವರು ಕೇಳುತ್ತಾರೆ. ದಲಿತರ ಪಾಲಿಗೆ ಕಲೆಯೂ ಕುಲ ಕಸುಬು ಆಗಿರುವುದರಿಂದ ಅದೂ ಕೂಡ ಇತರ ಜಾತಿಯ ಕಲಾವಿದರಿಂದ ದೂರ ಉಳಿದಿದೆ ಎಂದು ಅಭಿಪ್ರಾಯಪಡುತ್ತಾರೆ. ಮಾದಿಗ ಎನ್ನುವ ಪದದ ಅರ್ಥ ಮೂಲವನ್ನು ಹುಡುಕುತ್ತಾ ಈ ಸಮುದಾಯದ ಆಚಾರ ವಿಚಾರ, ಇತಿಹಾಸಗಳಿಗೆ ಸಂಬಂಧಿಸಿ ಕುತೂಹಲಕರ ಮಾಹಿತಿಗಳನ್ನು ಲೇಖಕರು ತೆರೆದಿಡುತ್ತಾರೆ. ಅಂತಿಮವಾಗಿ, ಈ ಮಾದಿಗ ಸಮುದಾಯ ಅಭಿವೃದ್ಧಿಯಾಗದೇ ಇರುವುದಕ್ಕೆ ಇರುವ ಸಾಮಾಜಿಕ ಕಾರಣಗಳನ್ನೂ ಅವರು ವಿಶ್ಲೇಷಿಸುತ್ತಾರೆ. ಗ್ರಾಮೀಣ ಮತ್ತು ನಾಗರಿಕ ದಲಿತರು, ಸಮಾಜ ಸುಧಾರಣೆ ಎಂಬುದು, ಜೀವ ಭಂಜಕ ಜೀತ, ಕೃತಘ್ನ ಸಂಸ್ಕೃತಿ, ಸಾಮಾಜಿಕ-ಕೌಟುಂಬಿಕ ಜಲ ಸಮಸ್ಯೆ ಇಲ್ಲಿರುವ ಇನ್ನಿತರ ಮಹತ್ವದ ಲೇಖನಗಳು. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗು 128. ಮುಖಬೆಲೆ 90 ರೂಪಾಯಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)