varthabharthi


ಸಂಪಾದಕೀಯ

ಈ ‘ದೇಶದ್ರೋಹಿ’ಗಳ ಸಂಖ್ಯೆ ಹೆಚ್ಚಳವಾಗಲಿ

ವಾರ್ತಾ ಭಾರತಿ : 10 Sep, 2019

‘‘ದೇಶದ ನಾಗರಿಕರಿಗೆ ಸರಕಾರವನ್ನು ಟೀಕಿಸುವ ಹಕ್ಕು ಇದೆ ಮತ್ತು ಇಂತಹ ಟೀಕೆಗಳನ್ನು ರಾಷ್ಟ್ರದ್ರೋಹದ ಪ್ರಕರಣವೆಂದು ಪರಿಗಣಿಸಲು ಆಗದು’’ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶ ದೀಪಕ್ ಗುಪ್ತಾ ಹೇಳಿದ್ದಾರೆ. ಕಾರ್ಯಾಗಾರವೊಂದರಲ್ಲಿ ಮಾತನಾಡುತ್ತಿದ್ದ ಅವರು ‘‘ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ನಾಸ್ತಿಕರು, ಆಸ್ತಿಕರಿಗೆಲ್ಲಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಅಧಿಕಾರವಿದೆ. ಯಾವುದೇ ಸರಕಾರ ಅಧಿಕಾರದಲ್ಲಿರಲಿ, ಅದನ್ನು ಟೀಕಿಸುವ ಹಕ್ಕು ನಮಗಿದೆ. ರಾಷ್ಟ್ರದ್ರೋಹದ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವುದು ನಮ್ಮ ಸ್ವಾತಂತ್ರ ಹೋರಾಟಗಾರರು ಯಾವ ಸಿದ್ಧಾಂತವನ್ನು ಮುಂದಿರಿಸಿ ಹೋರಾಟ ನಡೆಸಿದ್ದರೋ ಅದಕ್ಕೆ ವಿರುದ್ಧವಾಗಿದೆ’’ ಎಂದೂ ಹೇಳಿದ್ದಾರೆ. ಸಾರ್ವಜನಿಕವಾಗಿ ಇಂತಹದೊಂದು ಹೇಳಿಕೆಯನ್ನು ನೀಡಲು ಎದೆಗಾರಿಕೆಯನ್ನು ಪ್ರದರ್ಶಿಸಿದ್ದಕ್ಕಾಗಿ ಅವರನ್ನು ನಾವು ಮೊದಲಾಗಿ ಅಭಿನಂದಿಸಬೇಕಾಗಿದೆ.

ಯಾಕೆಂದರೆ ಅತ್ಯುನ್ನತ ಸ್ಥಾನದಲ್ಲಿ ಕುಳಿತಿರುವ ಬಹುತೇಕ ಸಜ್ಜನರು ತಮ್ಮ ಬಾಯಿಯನ್ನು ಹೊಲಿದು ಕೂತಿದ್ದಾರೆ. ಸರಕಾರವನ್ನು ಟೀಕಿಸುವುದು, ವಿಮರ್ಶಿಸುವುದು ಇರಲಿ, ತಮ್ಮ ಸ್ಥಾನದ ಘನತೆಯನ್ನೇ ಸರಕಾರದ ಪಾದಬುಡದಲ್ಲಿಟ್ಟು ಜೀತ ಮಾಡುತ್ತಾ ಪ್ರಜಾಸತ್ತೆಗೆ ವಂಚಿಸುತ್ತಿದ್ದಾರೆ. ಜನಸಾಮಾನ್ಯರು ಸಿಬಿಐ, ಸುಪ್ರೀಂಕೋರ್ಟ್ ಸೇರಿದಂತೆ ಎಲ್ಲ ಸಂಸ್ಥೆಗಳ ಮೇಲೆ ನಿಧಾನಕ್ಕೆ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ದೇಶ ಇಂತಹದೊಂದು ಸನ್ನಿವೇಶದಲ್ಲಿ ನಿಂತಿರುವಾಗ, ‘ಸರಕಾರವನ್ನು ಟೀಕಿಸುವ ಹಕ್ಕು ಈ ದೇಶದ ಜನರಿಗಿದೆ’ ಎಂಬ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಹೇಳಿಕೆ ದೇಶದೊಳಗೆ ಸರಕಾರದ ಸಂವಿಧಾನ ವಿರೋಧಿ ನಡೆಗಳನ್ನು ಪ್ರಶ್ನಿಸುತ್ತಿರುವ ಸಣ್ಣ ಗುಂಪಿಗೆ ಬಹುದೊಡ್ಡ ನೈತಿಕಶಕ್ತಿಯಾಗಿದೆ. ಈ ಹೇಳಿಕೆಯನ್ನು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಬದಲು ಇನ್ನಾರೇ ನೀಡಿದ್ದರೂ, ಇಷ್ಟರಲ್ಲೇ ಅವರ ತಲೆಗೆ ದೇಶದ್ರೋಹದ ಪಟ್ಟವನ್ನು ಕಟ್ಟಿಬಿಡಲಾಗುತ್ತಿತ್ತೇನೋ?

  ಪ್ರಜಾಪ್ರಭುತ್ವ ದೇಶದಲ್ಲಿ ಸರಕಾರವನ್ನು ಟೀಕಿಸುವುದು, ವಿಮರ್ಶಿಸುವುದು ಪ್ರಜಾಸತ್ತೆಯ ಬೆಳವಣಿಗೆಗೆ ಪೂರಕವಾಗಿದೆ. ಒಂದು ದೇಶದ ಸರಕಾರ ಸರಿದಾರಿಯಲ್ಲಿ ಮುನ್ನಡೆಯಬೇಕಾದರೆ ಸಮರ್ಥ ವಿರೋಧ ಪಕ್ಷವೂ ಇರಬೇಕು ಎಂದು ಬಯಸುವುದು ಇದೇ ಕಾರಣಕ್ಕಾಗಿ. ಸರಕಾರವನ್ನು ಟೀಕಿಸಿದರೆ ಅದು ದೇಶದ್ರೋಹವಾಗುತ್ತದೆ ಎನ್ನುವ ಸ್ಥಿತಿ ಸ್ವಾತಂತ್ರ ಪೂರ್ವದಲ್ಲಷ್ಟೇ ಇತ್ತು. ಅಂದಿನ ಬ್ರಿಟಿಷ್ ಸರಕಾರ ಈ ದೇಶದ ಜನರು ಸ್ವಯಂ ಇಚ್ಛೆಯಿಂದ ಆರಿಸಿರುವ ಸರಕಾರ ಆಗಿರಲಿಲ್ಲ.ಬ್ರಿಟಿಷರು ಬಲವಂತವಾಗಿ ತಮ್ಮ ಸರ್ವಾಧಿಕಾರವನ್ನು ಈ ದೇಶದ ಮೇಲೆ ಹೇರಿದ್ದರು. ಅದರ ವಿರುದ್ಧ ಈ ದೇಶದ ಲಕ್ಷಾಂತರ ನಾಗರಿಕರು ಹೋರಾಟ ನಡೆಸಿದರು, ಸಹಸ್ರಾರು ಜನರು ಪ್ರಾಣ ತ್ಯಾಗ ಮಾಡಿದರು. ಲಕ್ಷಾಂತರ ಜನರು ಜೈಲು ಸೇರಿದರು. ಅವರ ಹೋರಾಟದ ಫಲವಾಗಿ ಬ್ರಿಟಿಷರು ಈ ದೇಶದಿಂದ ತೊಲಗಿದರು. ನಮ್ಮನ್ನು ನಾವೇ ಆಳಿಕೊಳ್ಳುವ ಸಂವಿಧಾನವೊಂದನ್ನು ನಮ್ಮದಾಗಿಸಿಕೊಂಡೆವು. ಇಂದು ನಮ್ಮ ದೇಶವನ್ನು ನಾವೇ ಆಳಿಕೊಳ್ಳುತ್ತಿದ್ದೇವೆ. ಈ ದೇಶದ ಪ್ರಧಾನಿಯಾಗಲಿ, ಸಚಿವರಾಗಲಿ ನಮ್ಮ ಪ್ರತಿನಿಧಿಗಳಷ್ಟೇ. ಅವರು ನಮ್ಮ ಸರ್ವಾಧಿಕಾರಿಗಳೋ, ಒಡೆಯರೋ ಅಲ್ಲ. ದೇಶವನ್ನು ಮುನ್ನಡೆಸಲು ಕೇವಲ ಐದು ವರ್ಷಗಳಿಗಾಗಿ ಅವರನ್ನು ಆಯ್ಕೆ ಮಾಡಿದ್ದೇವೆ. ಈ ಐದು ವರ್ಷಗಳ ನಡುವೆ ಅವರ ಆಡಳಿತ ಜನವಿರೋಧಿಯಾಗಿದ್ದರೆ ಅದನ್ನು ಪ್ರಶ್ನಿಸುವ ಅಧಿಕಾರ ಮತದಾರರಿಗೆ ಇದ್ದೇ ಇದೆ.

 ದುರದೃಷ್ಟವಶಾತ್ ಜನಸಾಮಾನ್ಯರಿರಲಿ, ಅತ್ಯುನ್ನತ ಹುದ್ದೆಗಳನ್ನು ನಿರ್ವಹಿಸಿದ ಮಾಜಿ ಅಧಿಕಾರಿಗಳೇ ಸರಕಾರವನ್ನು ಪ್ರಶ್ನಿಸಲು ಹೆದರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಸರಕಾರವನ್ನು ಪ್ರಶ್ನಿಸಿದವರ ತಲೆಗೆ ದೇಶದ್ರೋಹ ಪಟ್ಟವನ್ನು ಕಟ್ಟಿ ಅವರನ್ನು ಬಾಯಿ ಮುಚ್ಚಿಸುವ ಪ್ರಯತ್ನ ಸದ್ಯದ ಸಂದರ್ಭದಲ್ಲಿ ಅತಿರೇಕಕ್ಕೆ ತಲುಪಿದೆ. ಸರಕಾರವನ್ನೇ ದೇಶವೆಂದು ಬಿಂಬಿಸಲಾಗುತ್ತಿದೆ. ಇತ್ತೀಚೆಗೆ ವಿವಿಧ ಉನ್ನತ ಸಂಸ್ಥೆಗಳ ಮೇಲೆ ಸರಕಾರ ಮೂಗು ತೂರಿಸಿದಾಗ ಅದರ ವಿರುದ್ಧ ವಿವಿಧ ಅಧಿಕಾರಿಗಳು ತಮ್ಮ ಪ್ರತಿಭಟನೆಗಳನ್ನು ಸಲ್ಲಿಸಿದ್ದಾರೆ. ಸಿಬಿಐ ಸಂಸ್ಥೆಯ ಮೇಲೆ ಹಸ್ತಕ್ಷೇಪವಾದಾಗ ಅದರ ಮುಖ್ಯಸ್ಥರು ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದರು. ಅಂತಿಮವಾಗಿ ಅವರ ಬಾಯಿ ಮುಚ್ಚಿಸುವಲ್ಲಿ ಸರಕಾರ ಯಶಸ್ವಿಯಾಯಿತು. ಆರ್‌ಬಿಐಯಲ್ಲಿ ತೀವ್ರ ಹಸ್ತಕ್ಷೇಪ ನಡೆದಾಗ ಅದರ ಮುಖ್ಯಸ್ಥರೂ ರಾಜೀನಾಮೆ ನೀಡಬೇಕಾಯಿತು. ನ್ಯಾಯವ್ಯವಸ್ಥೆಯಲ್ಲೂ ಇದು ಮುಂದುವರಿದಿದೆ. ಇದೀಗ ಈ ದೇಶದ ಕಾರ್ಯಾಂಗದ ಮುಂಚೂಣಿಯಲ್ಲಿರುವ ಅಧಿಕಾರಿಗಳು ಸರಣಿ ರಾಜೀನಾಮೆಗಳನ್ನು ನೀಡುತ್ತಿದ್ದಾರೆ. ಕಾಶ್ಮೀರದ ಮೇಲೆ ಕೇಂದ್ರ ಸರಕಾರ ನಡೆಸುತ್ತಿರುವ ಸರ್ವಾಧಿಕಾರವನ್ನು ವಿರೋಧಿಸಿ ಇತ್ತೀಚೆಗೆ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ರಾಜೀನಾಮೆ ನೀಡಿದರು. ಗೋಪಿನಾಥ್ ತನ್ನ ರಾಜೀನಾಮೆಗೆ ಸ್ಪಷ್ಟ ಕಾರಣವನ್ನು ನೀಡಿದ್ದಾರೆ. ಅವುಗಳಿಗೆ ಸ್ಪಷ್ಟೀಕರಣ ನೀಡುವ ಬದಲು ಗೋಪಿನಾಥನ್ ಅವರನ್ನು ‘ದೇಶದ್ರೋಹಿ’ ಎಂದು ಕರೆದು ಬಾಯಿ ಮುಚ್ಚಿಸಲಾಯಿತು. ಇತ್ತೀಚೆಗೆ ನಮ್ಮದೇ ಕರ್ನಾಟಕದಲ್ಲಿ ಇನ್ನೋರ್ವ ದಕ್ಷ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದರು. ‘‘ಈ ದೇಶದಲ್ಲಿ ಪ್ರಜಾಸತ್ತೆ ಅಪಾಯದಲ್ಲಿದೆ’’ ಎಂಬ ಆತಂಕವನ್ನು ಮುಂದಿಟ್ಟುಕೊಂಡು, ಪ್ರತಿಭಟನಾರ್ಥವಾಗಿ ಅವರು ತಮ್ಮ ಹುದ್ದೆಯನ್ನು ತ್ಯಜಿಸಿದರು.

ಈ ಹಿಂದೆ, ದೇಶದಲ್ಲಿ ‘ಅಸಹಿಷ್ಣುತೆ’ಯನ್ನು ವಿರೋಧಿಸಿ ಸಾಹಿತಿಗಳು, ಚಿಂತಕರು ಪ್ರಶಸ್ತಿಗಳನ್ನು ಮರಳಿಸಿದಾಗ, ಅವರ ದೇಶಭಕ್ತಿಯನ್ನು ಪ್ರಶ್ನಿಸಲಾಯಿತು ಮಾತ್ರವಲ್ಲ, ದೇಶವಿರೋಧಿಗಳು ಎಂದು ಅವರನ್ನು ಕೇಂದ್ರ ಸರಕಾರದ ವಕ್ತಾರರು ಟೀಕಿಸಿದರು. ಇದೀಗ ಐಎಎಸ್ ಅಧಿಕಾರಿಗಳು ತಮ್ಮ ಹುದ್ದೆಗಳನ್ನೇ ಸರಕಾರಕ್ಕೆ ಮರಳಿಸುತ್ತಿದ್ದಾರೆ ಎನ್ನುವುದು ಸರಕಾರಕ್ಕೆ ತೀವ್ರ ಮುಖಭಂಗವುಂಟು ಮಾಡುವ ಸಂದರ್ಭವಾಗಿದೆ. ಇದಕ್ಕೆ ಸ್ಪಷ್ಟೀಕರಣವನ್ನು ನೀಡಬೇಕಾದುದು ಸರಕಾರದ ಹೊಣೆಗಾರಿಕೆ. ಆದರೆ ಈ ಹೊಣೆಗಾರಿಕೆಯನ್ನು ನಿಭಾಯಿಸುವ ಬದಲು, ರಾಜೀನಾಮೆ ನೀಡಿದ ಅಧಿಕಾರಿಗಳನ್ನೇ ದೇಶದ್ರೋಹಿಗಳೆಂದು ಕರೆಯುತ್ತಿದ್ದಾರೆ. ಈ ಮೂಲಕ ‘ಸರಕಾರವನ್ನು ಯಾರೂ ಟೀಕಿಸಬಾರದು’ ಎಂಬ ಎಚ್ಚರಿಕೆಯನ್ನು ಜನರಿಗೆ ನೀಡುತ್ತಿದ್ದಾರೆ. ಸರಕಾರ ತಪ್ಪು ದಾರಿಯಲ್ಲಿದ್ದ್ದರೆ ಅದನ್ನು ಟೀಕಿಸದೆ, ವಿರೋಧ ಪಕ್ಷಗಳನ್ನು ಟೀಕಿಸಿದರಾಗುತ್ತದೆಯೇ? ಸೆಂಥಿಲ್ ಅವರ ಹೇಳಿಕೆ ತಪ್ಪೇ ಆಗಿದ್ದರೆ ‘ಯಾಕೆ ತಪ್ಪು?’ ಎನ್ನುವುದನ್ನು ವಿವರಿಸಬೇಕು. ಅದರ ಬದಲಿಗೆ, ಟೀಕಿಸಿದ ಅಧಿಕಾರಿಯನ್ನೇ ದೇಶದ್ರೋಹಿ ಎಂದು ಕರೆಯುವುದು, ಸೆಂಥಿಲ್ ಅವರ ಆರೋಪವನ್ನು ಸಮರ್ಥಿಸಿದಂತಾಗುತ್ತದೆ.

ಸರಕಾರವನ್ನು ಟೀಕಿಸುವ ಅಧಿಕಾರ ಶ್ರೀಸಾಮಾನ್ಯನಿಗಿಲ್ಲ ಎನ್ನುವ ವಾತಾವರಣ, ಈ ದೇಶದ ಪ್ರಜಾಪ್ರಭುತ್ವ ದುರ್ಬಲವಾಗಿರುವುದಕ್ಕೆ ಮೊದಲ ಸಾಕ್ಷಿಯಾಗಿದೆ. ದೇಶದ್ರೋಹ ಆರೋಪವನ್ನು ಹೊತ್ತ ಪ್ರಜ್ಞಾಸಿಂಗ್‌ರಂತಹ ನಾಯಕಿ ಸಂಸತ್ತಿನೊಳಗೆ ಪ್ರವೇಶಿಸುತ್ತಿರುವ ದಿನಗಳಲ್ಲಿ ಸರಕಾರವನ್ನು ಟೀಕಿಸಿ ದೇಶದ ಕುರಿತಂತೆ ಕಾಳಜಿ ವ್ಯಕ್ತಪಡಿಸುವವರು ‘ದೇಶದ್ರೋಹಿ’ಗಳಾಗಿ ಕಾಣುವುದು ಸಹಜವೇ ಆಗಿದೆ. ಆದುದರಿಂದ, ದೇಶದ ಪ್ರಜಾಸತ್ತೆಯ ಮೇಲಿನ ಕಾಳಜಿಯಿಂದ ಆಳುವವರ ತಪ್ಪುಗಳನ್ನು ಎತ್ತಿ ತೋರಿಸುವ ಇಂತಹ ‘ದೇಶದ್ರೋಹಿ’ಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕಾಗಿದೆ. ತಮ್ಮ ವಿಕಾರ ಮುಖವನ್ನು ತೋರಿಸಿದ ಒಂದು ಕನ್ನಡಿಯನ್ನು ಒಡೆದರೆ ಅದು ಸಾವಿರ ಕನ್ನಡಿಗಳಾಗಿ ಪರಿವರ್ತನೆಯಾಗುತ್ತದೆ ಎನ್ನುವ ಎಚ್ಚರಿಕೆ ಆಳುವವರಿಗೆ ಇರಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)