varthabharthi

ನಿಮ್ಮ ಅಂಕಣ

ಭಯದ ವಾತಾವರಣದಲ್ಲಿ ಬದುಕು

ವಾರ್ತಾ ಭಾರತಿ : 10 Sep, 2019
ಅಮೂಲ್ಯ ಗೋಪಾಲಕೃಷ್ಣನ್

9/11ರಂದು ವಿಶ್ವವಾಣಿಜ್ಯ ಕೇಂದ್ರದ ಮೇಲೆ ದಾಳಿಗಳು ನಡೆದು ಒಂದು ವರ್ಷದ ಬಳಿಕ ಅಮೆರಿಕನ್ ಲೇಖಕ ಹಾಗೂ ಸಂಪಾದಕ ಮೈಬೇಲ್ ಕಿನ್‌ಸ್ಲೆ ಪ್ರಾಮಾಣಿಕವಾಗಿ ಒಪ್ಪಿಕೊಂಡರು: ‘‘ಕೆಲವು ವಿಷಯಗಳು ಎಷ್ಟೇ ಒಳ್ಳೆಯದಿರಲಿ ಅಥವಾ ಅಲ್ಲದಿರಲಿ, ತಾನು ಅವುಗಳ ಬಗ್ಗೆ ಬರೆಯುವುದನ್ನು ಅಥವಾ ಪ್ರಕಟಿಸುವುದನ್ನು ನಿಲ್ಲಿಸಿದ್ದೇನೆ. ಸಾಮಾನ್ಯವಾದ ಅನುಮಾನ, ಪ್ರಶ್ನೆ, ಸ್ವಲ್ಪ ಭಿನ್ನವಾದ ಅಭಿಪ್ರಾಯವನ್ನು ‘ದೇಶಭಕ್ತಿಯ ಭರಾಟೆಯಲ್ಲಿ’ ಹತ್ತಿಕ್ಕಲಾಗಿದೆ.’’

 ‘‘....ಒಮ್ಮಮ್ಮೆ ನಾನು ಬರೆಯುವುದು ಓದುಗರಿಗೆ ಸರಿಯಲ್ಲ ಅನ್ನಿಸಬಹುದು. ಅವರ ಬಗ್ಗೆ ನನಗಿರುವ ನಿಜವಾದ ಗೌರವಕ್ಕಾಗಿ, ಆದರೆ ಒಮ್ಮಾಮ್ಮೆ ಹೆದರಿಕೆಗಾಗಿ.’’
ನಮ್ಮಲ್ಲಿ ಹಲವರು ಇದೇ ರೀತಿಯ ಹೆದರಿಕೆ ಹೇಡಿತನದಿಂದ ಬರೆಯುವುದನ್ನು ನಿಲ್ಲಿಸಿರಬಹುದು.

ಒಟ್ಟಿನಲ್ಲಿ, ನೇರವಾಗಿ ಹೇಳಬೇಕೆಂದರೆ, ಧ್ರುವೀಕರಣಗೊಂಡ ಒಂದು ದೇಶದಲ್ಲಿ ನಾವು ಬದುಕುತ್ತಿದ್ದೇವೆ. ಭಿನ್ನವಾದ ಸಾಮಾಜಿಕ ಹಾಗೂ ರಾಜಕೀಯ ವೌಲ್ಯಗಳನ್ನು ಗೌರವಿಸುವ, ಎತ್ತಿಹಿಡಿಯುವ ಗಣನೀಯ ಸಂಖ್ಯೆಯ ನಾಗರಿಕರು ನಮ್ಮ ದೇಶದಲ್ಲಿದ್ದಾರೆ. ಅವರನ್ನೆಲ್ಲ ಈಗ ಪರಾವಲಂಬಿಗಳು, ಕೀಟಗಳು ಹಾಗೂ ಶತ್ರುಗಳು, ಭಯೋತ್ಪಾದಕರು ಹಾಗೂ ಗೆದ್ದಲು ಹುಳಗಳೆಂದು ಬಣ್ಣಿಸಲಾಗುತ್ತಿದೆ.

ಹಲವು ಮಟ್ಟಗಳಲ್ಲಿ ಭಯದ ಒಂದು ವಾತಾವರಣವನ್ನು ಸೃಷ್ಟಿಸಲಾಗಿದೆ. ಕಾಶ್ಮೀರವನ್ನು ಮುಚ್ಚಲಾಗಿದೆ. ಅಲ್ಲಿಯ ನಾಯಕರನ್ನು ಜೈಲಿನಲ್ಲಿಡಲಾಗಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತಾದ ಆವೇಶದ ಮಾತುಗಳು ಮತ್ತು ಅದನ್ನು ಇತರ ರಾಜ್ಯಗಳಿಗೂ ವಿಸ್ತರಿಸಲಾಗುತ್ತದೆ ಎಂಬ ಬೆದರಿಕೆಯ ಉದ್ದೇಶ ಜನರನ್ನು ಆತಂಕಕ್ಕೆ ತಳ್ಳುವುದೇ ಆಗಿದೆ ಮತ್ತು ಈ ಉದ್ದೇಶ ಈಡೇರಿದೆ ಕೂಡ. ಕೆಲವರು ಈಗಾಗಲೇ ಆತ್ಮಹತ್ಯೆಗೂ ಶರಣಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸರಕಾರದ ಅಭಿಪ್ರಾಯವನ್ನು ಒಪ್ಪದವರಿಗೆ ಕೂಡ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳುವ ಮತ್ತು ತಮ್ಮ ಅಭಿಪ್ರಾಯಗಳಿಂದ ಬೇಸರವಾದವರ ಜೊತೆ ಶಾಂತಿಯಿಂದ ಬದುಕುವ ಸ್ವಾತಂತ್ರವಿರಬೇಕು. ಈಗ ಆ ಸ್ವಾತಂತ್ರಕ್ಕೆ ಧಕ್ಕೆ ಬಂದಿದೆ.

ಬಹುತೇಕ ಭಾರತೀಯರು ತುರ್ತು ಪರಿಸ್ಥಿತಿಯ ನಂತರ ಜನಿಸಿದವರು. ಸರಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ, ಕ್ರಮಗಳಿಗೆ ಆಗ ಇರದಿದ್ದಂತಹ ವ್ಯಾಪಕ ಜನಬೆಂಬಲ ಈಗ ಇದೆ. ಹೀಗಾಗಿ, ಯಾರು ಹಿಂದುತ್ವದ ನಿಲುವುಗಳ ಪರವಾಗಿ ನಿಲ್ಲುವುದಿಲ್ಲವೋ, ಅವರು ಸರಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಈಗ ಉತ್ತರ ಪ್ರದೇಶದಲ್ಲಿ ಯಾರು ಹಿಂದುತ್ವವಾದಿಗಳ ಹಾದಿಗೆ ಅಡ್ಡ ಬಂದರೋ ಅಂತಹ ಪೊಲೀಸ್ ಅಧಿಕಾರಿಗಳನ್ನು ಕೂಡ ಗುಂಪುಗಳು ಹೊಡೆದು ಸಾಯಿಸಿವೆ. ಗೋರಕ್ಷಕರಿಂದ ಹಿಡಿದು ಆನ್‌ಲೈನ್ ಟ್ರಾಲ್‌ಗಳವರೆಗೆ, ಪೊಲೀಸ್ ವಿಚಾರಣೆಯಿಂದ ಹಿಡಿದು ಕಾನೂನಿನ ಮೂಲಕ ಬಗ್ಗು ಬಡಿಯುವವರೆಗೆ, ಸರಕಾರದ ಅಭಿಪ್ರಾಯಗಳನ್ನು ಒಪ್ಪದವರನ್ನು ಕೊಳ್ಳೆ ಹಕ್ಕಿಗಳನ್ನು ಬಡಿದು ಸಾಯಿಸುವ ಹಾಗೆ ಖಂಡಿಸುವ ಟಿವಿ ಚಾನೆಲ್‌ಗಳವರೆಗೆ ಎಲ್ಲವನ್ನೂ ಭಿನ್ನಮತೀಯರನ್ನು ದಮನಿಸಲು ಬಳಸಲಾಗ್ತುತಿದೆ. ಇಂತಹ ಯೋಜಿತ, ಸಂಘಟಿತ ದಮನ ಈ ಹಿಂದೆ ಇರಲಿಲ್ಲ.

ವಿರೋಧ ಪಕ್ಷಗಳ ನಾಯಕರ ವಿರುದ್ಧ ವಿಚಾರಣಾ ಏಜೆನ್ಸಿಗಳನ್ನು ಛೂ ಬಿಡಲಾಗಿದೆ. ಎಲ್ಲ ಭ್ರಷ್ಟಾಚಾರ ಹಾಗೂ ಅಪರಾಧ ಒಂದೇ ಕಡೆ, ವಿರೋಧ ಪಕ್ಷದಲ್ಲಿ ಮಾತ್ರ ಶೇಖರವಾಗಿದೆ ಎಂಬಂತೆ ಸರಕಾರ ನಡೆದುಕೊಳ್ಳುತ್ತಿದೆ. ಪರಿಣಾಮವಾಗಿ ವಿರೋಧ ಪಕ್ಷಗಳ ಹಲವರು ಬಳಿಕ ಬಿಜೆಪಿ ಸೇರಿದರು.

ನಮ್ಮ ಕಡೆ ಅಥವಾ ನಿಮ್ಮ ಕಡೆ, ಅಥವಾ ಈ ಪಕ್ಷ, ಆ ಪಕ್ಷ ಎಂಬುದು ಇಲ್ಲಿ ಪ್ರಶ್ನೆಯಲ್ಲ, ಸರಕಾರಕ್ಕೆ ಹೆದರಿ ಎಷ್ಟರ ಮಟ್ಟಿಗೆ, ಎಲ್ಲಿಯವರೆಗೆ ಪೊಲೀಸ್ ಹಾಗೂ ಆಡಳಿತಗಾರರು, ನ್ಯಾಯಾಲಯ ಹಾಗೂ ಮಾಧ್ಯಮದಲ್ಲಿ ಕೆಲಸ ಮಾಡುವವರು ತಮ್ಮ ಕೆಲಸದ ಕ್ಷೇತ್ರವನ್ನು ದುರ್ಬಲಗೊಳಿಸಲು ಸರಕಾರಕ್ಕೆ ಅವಕಾಶ ಮಾಡಿಕೊಡುತ್ತಾರೆ ಎಂಬುದೇ ಇಲ್ಲಿ ಎದುರಾಗುವ ಪ್ರಶ್ನೆ. ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರು ಕಾಶ್ಮೀರದಲ್ಲಿ ನಡೆದಿರುವ ಸಂಪರ್ಕ ಕಡಿತವನ್ನು ಈಗಾಗಲೇ ಅನುಮೋದಿಸಿದ್ದಾರೆ. ಬಾರ್ ಕೌನ್ಸಿಲ್ 370ನೇ ವಿಧಿಯನ್ನು ರದ್ದು ಮಾಡಿದ ‘‘ಧೈರ್ಯಶಾಲಿ ಮ್ಯಾಗ್ನಟಿಕ್, ಶೂರ ಹಾಗೂ ಹೋಲಿಕೆಯೇ ಇಲ್ಲದ (ಅಸಾಮಾನ್ಯ) ನಾಯಕ’’ನನ್ನು ಹೊಗಳಿ ಬರೆದಿದೆ. ‘‘ಕಾಶ್ಮೀರದಲ್ಲಿ ಉಂಟಾಗಿರುವ ಮಾನಸಿಕ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಬರೆದಿರುವ ಪತ್ರಿಕೆ ‘ಲಾನ್ಸೆಟ್’ ಬಗ್ಗೆ ಭಾರತೀಯ ವೈದ್ಯಕೀಯ ಸಂಘ ಕೂಡ ಕಟುವಾಗಿ ಟೀಕಿಸಿದೆ.

ಹಲವರು ಬಿಜೆಪಿ-ಆರೆಸ್ಸೆಸ್ ಕಾರ್ಯಕ್ರಮಕ್ಕೆ ಬದ್ಧರಾಗಿದ್ದಾರೆ. ಇತರರು ತಮ್ಮ ವೃತ್ತಿ ಜೀವನದ ಕಾರಣಗಳಿಗಾಗಿ, ಹೊಟ್ಟೆಪಾಡಿಗಾಗಿ ಆ ಕಾರ್ಯಕ್ರಮವನ್ನು ಒಪ್ಪಿಕೊಂಡು ಮುಂದೆ ಸಾಗುತ್ತಾರೆ; ಅವರು ಸುಮ್ಮನೆ ಅಧಿಕಾರವನ್ನು ಅನುಸರಿಸುತ್ತಾರೆ. ಕೆಲವರು ಕೈಮುಗಿದು ಶರಣಾಗುತ್ತಾರೆ; ಯಾಕೆಂದರೆ ಇದು ಸುಲಭದ, ರಗಳೆ ಇಲ್ಲದ ಹಾದಿ. ಇವರು ತಮ್ಮ ಕುಟುಂಬಗಳ ಬಗ್ಗೆ ಚಿಂತಿಸುತ್ತಾರೆ, ಕುಟುಂಬದ ಸದಸ್ಯರಿಗೆ ತೊಂದರೆಯಾದೀತೆಂಬ ಭಯ ಇವರನ್ನು ಕಾಡುತ್ತದೆ.
ನೀವು ನಿಜವಾಗಿ ಆಳವಾಗಿ ಯೋಚಿಸಿದರೆ ತಿಳಿಯುತ್ತದೆ; ಈ ಭಯ ಹರಡುತ್ತಿದೆ, ವ್ಯಾಪಕವಾಗಿದೆ.

ಬಲಪಂಥೀಯ ಶಕ್ತಿಗಳು ಜನರಿಗೆ ಭಯೋತ್ಪಾದನೆಯ ಬಗ್ಗೆ, ವಲಸೆ ಹೋಗಬೇಕಾಗಬಹುದೆಂಬ ಬಗ್ಗೆ, ತಮ್ಮ ಪಾರಂಪರಿಕ ಸ್ಥಾನಮಾನವನ್ನು ಕಳೆದುಕೊಳ್ಳುವ ಬಗ್ಗೆ ಇರುವ ಭಯವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತವೆ. ‘‘ಭಯದ ಒಂದು ವಾತಾವರಣವನ್ನು ಸೃಷ್ಟಿಸಲು ಹಲವು ಗುಂಪುಗಳು ಬೇಕಾಗುತ್ತವೆ; ಮೇಲ್‌ಸ್ತರದವರು ಮತ್ತು ಸಹಯೋಗ ನೀಡುವವರು, ವೀಕ್ಷಕರು ಮತ್ತು ಬಲಿಪಶುಗಳು’’ ಎನ್ನುತ್ತಾರೆ ಓರ್ವ ರಾಜಕೀಯ ವಿಜ್ಞಾನಿ ಕೋರಿ ರಾಬಿನ್ಸ್.

ಹೆದರಿಕೆಯ ಎದುರಿನಲ್ಲೂ ಭಯದ ವಾತಾವರಣದಲ್ಲೂ ಮುನ್ನುಗ್ಗುವುದು ಅಂದರೆ ಧೈರ್ಯ ಎಂಬುದು ಕೇವಲ ಕೆಲವು ವ್ಯಕ್ತಿಗಳಿಂದ ಸಾಧ್ಯವಾಗುವಂಥದ್ದಲ್ಲ; ಅದಕ್ಕೆ ಒಂದು ಸಮುದಾಯವೇ ಬೇಕಾಗುತ್ತದೆ. ಸಾಮಾನ್ಯವಾಗಿ, ನಾಗರಿಕ ಸಮಾಜವು ನಮಗೆ ಸರಕಾರದ ವಿರುದ್ಧ ಇರುವ ಒಂದು ರಕ್ಷಣೆ. ಆದರೆ ಹಲವಾರು ಎನ್‌ಜಿಒಗಳು, ಟೀಸ್ತಾ ಸೆಟಲ್ವಾಡ್, ಇಂದಿರಾ ಜೈಸಿಂಗ್, ಸುಧಾ ಭಾರದ್ವಾಜ್‌ರಂತಹ ನಾಗರಿಕ ಸಮಾಜದ ವ್ಯಕ್ತಿಗಳು ಸರಕಾರದ ಕೆಂಗಣ್ಣಿಗೆ ಗುರಿಯಾಗಿ ಬಂಧನಕ್ಕೊಳಗಾಗಿದ್ದಾರೆ. ಇದು ನಮ್ಮ ರಕ್ಷಣಾ ಬಲೆಯನ್ನು ದುರ್ಬಲವಾಗಿಸುತ್ತದೆ. ‘ನಗರ ನಕ್ಸಲ್’ ಮತ್ತು ‘ಟುಕ್‌ಡೆ ಟುಕ್‌ಡೆ ಗ್ಯಾಂಗ್’ ಎಂಬ ಹಣೆಪಟ್ಟಿ ಅಂಟಿಸಿ ತಮ್ಮ ರಾಜಕಾರಣದ ಹೊರಗಿರುವವರ ಹೆಸರಿಗೆ ಅವರು (ಬಲಪಂಥೀಯರು) ಮಸಿ ಬಳಿಯುತ್ತಾರೆ.

ದೇಶದ ಅತ್ಯಂತ ಬಲಾಢ್ಯರಾದ, ಪ್ರಭಾವಿಗಳಾದ ಇಬ್ಬರು ವ್ಯಕ್ತಿಗಳನ್ನು ವಿರೋಧಿಸಿದವರ, ಅವರಿಗಾಗುವ ಗತಿಯ ಮಾತು ಹಾಗಿರಲಿ; ಒಂದು ಸಾಧಾರಣ ಭಿನ್ನಾಭಿಪ್ರಾಯವನ್ನು ಕೂಡ ಹತ್ತಿಕ್ಕಲಾಗುತ್ತಿದೆ. ‘‘ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗಿದೆ’’ ಎಂಬ ಕಾರಣಕ್ಕಾಗಿ ಓರ್ವ ಐಪಿಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ತನ್ನ ಹುದ್ದೆಗೆ ರಾಜೀನಾಮೆ ನೀಡಿದರು. ಅವರ ಹೆಸರಿಗೆ ಮಸಿ ಬಳಿದು, ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಈ ಬೆದರಿಕೆಯ ವಾತಾವರಣದಲ್ಲೂ ಹೆದರದೆ ಮುಂದೆ ಹೋಗುವ ಕಾರ್ಯಕರ್ತರು, ಪತ್ರಕರ್ತರು ಮತ್ತು ಭಿನ್ನಮತೀಯರಿದ್ದಾರೆ. ಇವರು ಅಪವಾದಗಳು. ಪ್ರತಿಯೊಂದು ಶರಣಾಗತಿಯೂ ಅಧಿಕಾರವನ್ನು ಇನ್ನಷ್ಟು ಬಲಪಡಿಸುತ್ತದೆ. ನಾವು ನಮ್ಮ ನಾಲಿಗೆಗಳನ್ನು ನಾವೇ ಅಳಲು ತುಂಬ ಆಸಕ್ತಿ ತೋರುವುದು, ಆತುರಪಡುವುದು ಬೇಡ.


ಕೃಪೆ: ದಿ ಟೈಮ್ಸ್ ಆಫ್ ಇಂಡಿಯಾ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)