varthabharthi

ಬೆಂಗಳೂರು

ರಾಜಧಾನಿ, ಕರಾವಳಿಯಲ್ಲೇ ಅಧಿಕ

ರಾಜ್ಯಾದ್ಯಂತ 'ಡೆಂಗ್' ವ್ಯಾಪಕ ಹೆಚ್ಚಳ: 10 ಸಾವಿರಕ್ಕೂ ಅಧಿಕ ಪ್ರಕರಣ ದಾಖಲು

ವಾರ್ತಾ ಭಾರತಿ : 10 Sep, 2019

ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.10: ರಾಜ್ಯಾದ್ಯಂತ ಡೆಂಗ್ ಪ್ರಕರಣಗಳು ಅಧಿಕವಾಗುತ್ತಿದ್ದು, ಇತ್ತೀಚೆಗೆ ಕುಟುಂಬ ಕಲ್ಯಾಣ ಮತ್ತು ಮಕ್ಕಳ ಇಲಾಖೆಯ ಅಂಕಿ ಅಂಶಗಳ ಪ್ರಕಾರ 10,524 ಜನರು ಡೆಂಗ್ ಸೋಂಕು ಹೊಂದಿರುವುದು ಬಯಲು ಮಾಡಿದೆ. ಇಲಾಖೆಯು ಜನವರಿ 1 ರಿಂದ ಇದುವರೆಗೂ ಸುಮಾರು 10,524 ಮಂದಿ ಡೆಂಗ್ ಸೋಂಕು ಹೊಂದಿದ್ದಾರೆ ಎಂದು ತಿಳಿಸಿದೆ. 

ಅದರ ಪೈಕಿ ಬೆಂಗಳೂರು ನಗರ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಧಿಕ ಮಂದಿಯಲ್ಲಿ(6,515) ಸೋಂಕು ಪತ್ತೆಯಾಗಿದೆ. ಉಳಿದಂತೆ ಎರಡನೆ ಸ್ಥಾನದಲ್ಲಿ ದಕ್ಷಿಣ ಕನ್ನಡ(984), ಶಿವಮೊಗ್ಗ(384), ಹಾವೇರಿ(272), ಚಾಮರಾಜನಗರ(199), ಕಲಬುರಗಿ(183), ಹಾಸನ(157), ಉಡುಪಿ (167), ಚಿಕ್ಕಮಗಳೂರು (165), ದಾವಣಗೆರೆ (161) ಜಿಲ್ಲೆಗಳಲ್ಲೂ ಈ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿವೆ.

ಕಳೆದ ವರ್ಷ ಈ ಅವಧಿಯಲ್ಲಿ 2,199 ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಈ ಬಾರಿಗೆ ಹೋಲಿಸಿದರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೋಗ ಹರಡಿರುವುದು ಕಂಡು ಬಂದಿದೆ. ಅಲ್ಲದೆ, ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಇಬ್ಬರು, ರಾಮನಗರ ಹಾಗೂ ಚಿತ್ರದುರ್ಗದಲ್ಲಿ ತಲಾ ಒಬ್ಬರು ಡೆಂಗ್ ನಿಂದ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 322 ಡೆಂಗ್ ಪ್ರಕರಣಗಳು ವರದಿಯಾಗಿವೆ.

ಪ್ರವಾಹ ಪ್ರದೇಶಕ್ಕಿಲ್ಲ ಆತಂಕ: ಇತ್ತೀಚಿಗೆ ಅತಿಯಾದ ಮಳೆಯಿಂದಾಗಿ ಉತ್ತರ ಕರ್ನಾಟಕ ಹಾಗೂ ಕರಾವಳಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಡೆಂಗ್ ರೋಗ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ನೆರೆಪೀಡಿತ ಪ್ರದೇಶದಲ್ಲಿ ಸಾಮಾನ್ಯವಾಗಿ ಈಡೀಸ್ ಸೊಳ್ಳೆಯ ಲಾರ್ವಾ ಉತ್ಪತ್ತಿಯಾಗುವುದಿಲ್ಲ. ಹೀಗಾಗಿ, ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಇಲಾಖೆ ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)