varthabharthi

ಬೆಂಗಳೂರು

ಬೆಂಗಳೂರು: ಡಿಕೆಶಿ ಬಂಧನ ಖಂಡಿಸಿ ನಾಳೆ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ‍್ಯಾಲಿ

ವಾರ್ತಾ ಭಾರತಿ : 10 Sep, 2019

ಬೆಂಗಳೂರು, ಸೆ.10: ದೇಶದಲ್ಲಿ ಬಿಜೆಪಿಯವರು ಕೆಟ್ಟ ಸಂಪ್ರದಾಯವನ್ನು ಬೆಳೆಸುತ್ತಿದ್ದು, ಇದು ಮುಂದೊಂದು ದಿನ ಅವರಿಗೆ ತಿರುಗುಬಾಣವಾಗಲಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. 

ಮಂಗಳವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೊಸದಿಲ್ಲಿಯ ನಿವಾಸದಲ್ಲಿ ಸಿಕ್ಕ ಹಣ ತಮ್ಮದೆ ಎಂದು ಸುನೀಲ್ ಶರ್ಮಾ ಅವರೇ ಈಗಾಗಲೇ ಒಪ್ಪಿಕೊಂಡಿದ್ದಾರೆ. ಆದರೂ ಈಡಿ ಅವರು ಡಿಕೆಶಿ ಅವರನ್ನು ವಶಕ್ಕೆ ತೆಗೆದುಕೊಂಡು ದೇಶದಲ್ಲಿ ಕೆಟ್ಟ ಸಂಪ್ರದಾಯದ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಡಿಕೆಶಿ ಬಂಧನವನ್ನು ವಿರೋಧಿಸಿ, ಸೆ.11ರ ಬೆಳಗ್ಗೆ 10ಗಂಟೆಗೆ ನ್ಯಾಷನಲ್ ಕಾಲೇಜಿನಿಂದ ಫ್ರೀಂಡಂ ಪಾರ್ಕ್ವರೆಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಮುಖಂಡರು, ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ. ಈ ರ‍್ಯಾಲಿಯಲ್ಲಿ ವಿವಿಧ ಸಂಘಟನೆಗಳು ಭಾಗವಹಿಸಲಿವೆ. ಅಲ್ಲದೆ, ಕೇಂದ್ರದ ಬಿಜೆಪಿ ಸರಕಾರ ಪ್ರತಿಪಕ್ಷಗಳನ್ನು ಮುಗಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಐಟಿ, ಈಡಿ, ಸಿಬಿಐ ಎಲ್ಲ ತನಿಖಾ ಸಂಸ್ಥೆಗಳೂ ಕೇಂದ್ರದ ಸುಪರ್ದಿಯಲ್ಲಿದ್ದು, ಈ ತನಿಖಾ ಸಂಸ್ಥೆಗಳು ಬಿಜೆಪಿ ಆದೇಶದ ಅನುಸಾರ ಕೆಲಸ ಮಾಡುವುದನ್ನು ಬಿಡಬೇಕು. ಡಿಕೆಶಿ ಅವರನ್ನು ಈಡಿ ಅವರು ತಪ್ಪು ಮಾಡಿದ್ದಾರೆ ಎಂದು ಬಂಧಿಸದೆ, ವಿಚಾರಣೆಗಾಗಿ ಬಂಧಿಸಿದ್ದಾರೆ. ಇದರ ಮಧ್ಯೆಯೇ ಕೇಂದ್ರ ಸರಕಾರ ಕೂಡ ಕಿರುಕುಳ ನೀಡುತ್ತಿದೆ. ಸೆ.11ರಂದು ನಡೆಸಲು ನಿರ್ಧರಿಸಿರುವ ಪ್ರತಿಭಟನಾ ರ‍್ಯಾಲಿಯೂ ಶಾಂತಿಯುತವಾಗಿ ನಡೆಯಲಿದೆ ಎಂದು ತಿಳಿಸಿದರು.

ಗುಜರಾತ್ ನ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿ ರಕ್ಷಣೆ ನೀಡಿದ ಬಳಿಕ ಡಿಕೆಶಿ ಅವರ ಮೇಲೆ ದ್ವೇಷ ಸಾಧನೆ ಮಾಡುತ್ತಿರುವ ಕೇಂದ್ರದ ಬಿಜೆಪಿ ನಾಯಕರು, ದೇಶದ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು.

ಈ ವೇಳೆಯಲ್ಲಿ ಕಾಂಗ್ರೆಸ್ ಮುಖಂಡ ಮನೋಹರ್, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಜಿ.ಶೇಖರ್, ರಾಜ್ಕುಮಾರ್ ಸೇರಿ ಮತ್ತಿತರರು ಭಾಗವಹಿಸಿದ್ದರು.

ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ರೈತರ ಬೆಳೆದ ಬೆಳೆ ನಾಶವಾಗಿದೆ. ಮನೆಗಳು ನೀರು ಪಾಲಾಗಿ ಜನರು ಗಂಜಿ ಕೇಂದ್ರಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ಯಾವುದೇ ಪರಿಹಾರವನ್ನು ನೀಡದೆ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದೆ.

-ರಾಮಲಿಂಗಾರೆಡ್ಡಿ, ಮಾಜಿ ಸಚಿವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)