varthabharthi

ಬೆಂಗಳೂರು

ಡಿಕೆಶಿ ಬಂಧನ ವಿರೋಧಿಸಿ ಸೆ.11ರಂದು ಒಕ್ಕಲಿಗರ ಪ್ರತಿಭಟನಾ ರ‍್ಯಾಲಿ

ವಾರ್ತಾ ಭಾರತಿ : 10 Sep, 2019

ಬೆಂಗಳೂರು, ಸೆ.10: ಒಕ್ಕಲಿಗರ ಸಂಘ ಸಂಸ್ಥೆಗಳ ಒಕ್ಕೂಟ ಹಾಗೂ ಡಿ.ಕೆ. ಶಿವಕುಮಾರ್ ಅಭಿಮಾನಿ ಸಂಘದ ವತಿಯಿಂದ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ನಾಳೆ(ಸೆ.11) ಬೆಳಗ್ಗೆ 10ಗಂಟೆಗೆ ನ್ಯಾಷನಲ್ ಕಾಲೇಜ್ ಮೈದಾನದಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೇಶವ ರಾಜಣ್ಣ ಮಾತನಾಡಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಚಿತಾವಣಿಯಿಂದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿ ಕಿರುಕುಳ ನೀಡುತ್ತಿದೆ ಮತ್ತು ಕೇಂದ್ರ ಸರಕಾರ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ನೀತಿಯನ್ನು ಖಂಡಿಸಿ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಮತ್ತು ಒಕ್ಕಲಿಗ ಸಮಾಜದ ಹಿರಿಯ ನಾಯಕರಾದ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ, ಜೆಡಿಎಸ್ ಪಕ್ಷದ ಶಾಸಕರುಗಳು ಮತ್ತು ಪಕ್ಷದ ಎಲ್ಲಾ ಮುಖಂಡರು, ಒಕ್ಕಲಿಗ ಸಮುದಾಯದ ಕಾಂಗ್ರೆಸ್, ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದು, ಈ ಪ್ರತಿಭಟನೆ ಇತಿಹಾಸದಲ್ಲಿ ದಾಖಲಾಗಲಿದೆ ಎಂದರು.

ಹಿಂದಿನ ಯಾವುದೇ ಸರಕಾರಗಳು ಇಂತಹ ದ್ವೇಷದ ರಾಜಕಾರಣ ಮಾಡಿರಲಿಲ್ಲ. ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿ ರಕ್ಷಣೆ ನೀಡಿದ ಕಾರಣಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆ ಮೇರೆಗೆ ಈಡಿ ಅಧಿಕಾರಿಗಳು ಡಿಕೆಸಿಗೆ ಕಿರುಕುಳ ನೀಡುತ್ತಿದ್ದಾರೆ.

-ಒಕ್ಕಲಿಗರ ಸಂಘ ಸಂಸ್ಥೆಗಳ ಒಕ್ಕೂಟ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)