varthabharthi

ಕರ್ನಾಟಕ

ರಾಜ್ಯದ 6,053 ಹಳ್ಳಿಗಳಲ್ಲಿ ಸ್ಮಶಾನ ಭೂಮಿಯೇ ಇಲ್ಲ !

ವಾರ್ತಾ ಭಾರತಿ : 10 Sep, 2019
-ಪ್ರಕಾಶ್ ಅವರಡ್ಡಿ

ಬೆಂಗಳೂರು, ಸೆ.10: ಸಂವಿಧಾನದ ಅನುಚ್ಛೇಧ 21ರ ಪ್ರಕಾರ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಜೀವಿಸುವ ಹಕ್ಕಿದೆ. ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಸತ್ತ ನಂತರ ಅವನನ್ನು ಗೌರವಾನ್ವಿತವಾಗಿ ಅಂತ್ಯಕ್ರಿಯೆ ಮಾಡುವುದಕ್ಕೆ ಸ್ಥಳಾವಕಾಶ ಮಾಡಿಕೊಡುವುದು ಸರಕಾರದ ಕರ್ತವ್ಯ. ಆದರೆ ರಾಜ್ಯದಲ್ಲಿ ಸಾಕಷ್ಟು ಹಳ್ಳಿಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಶವಸಂಸ್ಕಾರ ಮಾಡುವುದಕ್ಕೆ ರುದ್ರಭೂಮಿಯೇ ಇಲ್ಲದಂತಾಗಿದೆ. ಅನೇಕ ಹಳ್ಳಿಗಳಲ್ಲಿ ಶವವನ್ನು ದೂರದ ಊರಿಗೆ ಹೊತ್ತುಕೊಂಡು ಹೋಗಿ ಶವ ಸಂಸ್ಕಾರದ ಕಾರ್ಯ ನಡೆಸಲಾಗುತ್ತಿದೆ.

ಈ ಬಗ್ಗೆ ಕಂದಾಯ ಇಲಾಖೆ ನೀಡಿರುವ ಅಂಕಿ ಅಂಶ ವಿಷಾದಕರವಾಗಿದೆ. ಇಲಾಖೆಯ ಪ್ರಕಾರ ರಾಜ್ಯದಲ್ಲಿ 6,053 ಹಳ್ಳಿಗಳಲ್ಲಿ ಮತ್ತು 281 ಪಟ್ಟಣಗಳಲ್ಲಿ ಸ್ಮಶಾನ ಭೂಮಿ ಇಲ್ಲ. ಮತ್ತೊಂದೆಡೆ, ಒತ್ತುವರಿಯಾಗಿರುವ 11,77,930 ಎಕರೆ ಸರಕಾರಿ ಭೂಮಿಯ ಬಗ್ಗೆಯೂ ತೃಪ್ತಿದಾಯಕ ನಿರ್ಣಯಗಳು ಆಗಿಲ್ಲ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಮುಹಮ್ಮದ್ ಇಕ್ಬಾಲ್ ಅವರು, ಕಂದಾಯ ಇಲಾಖೆಯ ಮಾಹಿತಿಯನ್ನು ಗಮನಿಸಿ, ಅಧ್ಯಯನ ಮಾಡಿ ರಾಜ್ಯದಲ್ಲಿರುವ ಎಲ್ಲ ಧರ್ಮೀಯರು ಒಳಗೊಂಡಂತೆ ಒಟ್ಟು 6,053 ಹಳ್ಳಿಗಳಲ್ಲಿ ಹಾಗೂ 281 ಪಟ್ಟಣಗಳಲ್ಲಿ ಶವ ಸಂಸ್ಕಾರ ಮಾಡುವುದಕ್ಕೆ ಸ್ಥಳವಿಲ್ಲ, ಶೀಘ್ರವಾಗಿ ಸ್ಥಳವಕಾಶ ಕಲ್ಪಿಸಿಕೊಡಬೇಕು ಎಂದು ಸರಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಸರಕಾರ ರಾಜ್ಯದಲ್ಲಿ ಸಾಕಷ್ಟು ಸರಕಾರದ ಜಮೀನುಗಳಿಲ್ಲ, ಖರೀದಿ ಮಾಡಿದ ನಂತರ ಶವ ಸಂಸ್ಕಾರಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿಕೊಡುತ್ತೇವೆ ಎಂದು ಪ್ರತಿಕ್ರಿಯಿಸಿತು.     

ಈ ಕಾರಣದಿಂದಾಗಿ ಇಕ್ಬಾಲ್ ನ್ಯಾಯಾಲಯದಲ್ಲಿ ಮೇ 27, 2019ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಂದಾಯ ಇಲಾಖೆಯೇ ಹೇಳಿರುವ ಹಾಗೆ ಎ. 30, 2019ರವರೆಗೆ ರಾಜ್ಯದಲ್ಲಿ ಸರಕಾರದ 11,77,930 ಎಕರೆ ಒತ್ತುವರಿಯಾಗಿರುವ ಭೂಮಿ ಇದೆ. ಇದನ್ನು ತೆರವುಗೊಳಿಸಿದರೆ, ರಾಜ್ಯದೆಲ್ಲೆಡೆ ಇರುವ ಸ್ಮಶಾನ ಭೂಮಿ ಸಮಸ್ಯೆಯನ್ನು ಬಗೆಹರಿಸಬಹುದು. ಹಾಗೂ ಇದರಿಂದ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿ ಅಡಚಣೆ ಉಂಟಾಗುವುದಿಲ್ಲ ಎಂದು ಮುಹಮ್ಮದ್ ಇಕ್ಬಾಲ್ ಹೇಳುತ್ತಾರೆ.

ಹೈಕೋರ್ಟ್‌ಗೆ ಮಾಹಿತಿ: ಸ್ಮಶಾನ ಜಾಗ ಇಲ್ಲದ ಗ್ರಾಮಗಳಿಗೆ ಅಗತ್ಯ ಜಮೀನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. 2016ರ ಮಾ.31ರ ತನಕ ರಾಜ್ಯದ 7,700 ಕಂದಾಯ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇರಲಿಲ್ಲ. ಎರಡು ವರ್ಷಗಳ ಅವಧಿಯಲ್ಲಿ 1,123 ಗ್ರಾಮಗಳಿಗೆ ಸ್ಮಶಾನ ಜಮೀನು ಮಂಜೂರು ಮಾಡಲಾಗಿದೆ. ಅದರಂತೆ, 2018ರ ಅ.31ಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳ ಸಂಖ್ಯೆ 6,053 ಆಗಿದೆ. ಇದೇ ವೇಳೆ ರಾಜ್ಯದಲ್ಲಿರುವ ಒಟ್ಟು ಸರಕಾರಿ ಜಮೀನಿನ ಪೈಕಿ ಸುಮಾರು 11,77,930 ಎಕರೆ ಜಮೀನು ಒತ್ತುವರಿಯಾಗಿದೆ ಎಂದು ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು. ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಪೀಠ, ಸ್ಮಶಾನ ಜಾಗ ಇಲ್ಲದ ಗ್ರಾಮಗಳಿಗೆ ಆರು ತಿಂಗಳಲ್ಲಿ ಅಗತ್ಯ ಜಮೀನು ಮಂಜೂರು ಮಾಡಬೇಕು ಹಾಗೂ ಒತ್ತುವರಿಯಾಗಿರುವ ಸರಕಾರಿ ಜಮೀನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಆದೇಶಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತ್ತು.

ರಾಜ್ಯದ ಸಾಕಷ್ಟು ಹಳ್ಳಿಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಶವಸಂಸ್ಕಾರ ಮಾಡುವುದಕ್ಕೆ ಸ್ಮಶಾನಗಳೆ ಇಲ್ಲದಂತಾಗಿದೆ. ಅನೇಕ ಹಳ್ಳಿಗಳಲ್ಲಿ ಶವವನ್ನು ದೂರದ ಊರಿಗೆ ಹೊತ್ತುಕೊಂಡು ಹೋಗಿ ಶವ ಸಂಸ್ಕಾರದ ಕಾರ್ಯ ನಡೆಸಲಾಗುತ್ತಿದೆ.

-ಮುಹಮ್ಮದ್ ಇಕ್ಬಾಲ್, ಅರ್ಜಿದಾರ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)