varthabharthi

ಬೆಂಗಳೂರು

ಕಡಿಮೆ ದರದಲ್ಲಿ ಶುದ್ಧೀಕರಿಸಿದ ನೀರು ಮಾರಾಟ ಮಾಡಲು ಮುಂದಾದ ಜಲಮಂಡಳಿ

ವಾರ್ತಾ ಭಾರತಿ : 10 Sep, 2019

ಬೆಂಗಳೂರು, ಸೆ.10: ಕೊಳವೆಬಾವಿ ನೀರಿಗಿಂತ ಅತಿ ಕಡಿಮೆ ದರದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಲ್ಲಿ (ಎಸ್‌ಟಿಪಿ) ಶುದ್ಧೀಕರಿಸಿದ ನೀರನ್ನು ಮಾರಾಟ ಮಾಡಲು ಜಲಮಂಡಳಿ ಮುಂದಾಗಿದೆ.

ಕೊಳವೆಬಾವಿಗಳ ಮೂಲಕ ಸಾವಿರ, ಒಂದೂವರೆ ಸಾವಿರ ಅಡಿಗಿಂತಲೂ ಆಳದಿಂದ ನೀರನ್ನು ಮೇಲೆತ್ತಬೇಕಾಗುತ್ತದೆ. ಇದಕ್ಕೆ ಹೆಚ್ಚು ವಿದ್ಯುತ್ ವ್ಯಯವಾಗುತ್ತದೆ. ಇದಕ್ಕೆ ಹೋಲಿಸಿದರೆ, ಶುದ್ಧೀಕರಿಸಿದ ನೀರಿನ ಬೆಲೆ ತುಂಬಾ ಕಡಿಮೆಯಾಗುತ್ತದೆ. ತೃತೀಯ ಹಂತದ ಎಸ್‌ಟಿಪಿಗಳಿಂದ ಸಾರ್ವಜನಿಕರು ಅವರ ಸ್ವಂತ ಟ್ಯಾಂಕರ್ ಗಳಿಂದಲೂ ನೀರು ತರಿಸಿಕೊಳ್ಳಬಹುದು. ಇದಕ್ಕೆ ಪ್ರತಿ ಸಾವಿರ ಲೀಟರ್‌ಗೆ 15 ರೂ. ದರ ನಿಗದಿಪಡಿಸಲಾಗಿದೆ.

ಲಾಲ್‌ಬಾಗ್, ಕಬ್ಬನ್ ಪಾರ್ಕ್, ಯಲಹಂಕ ಹಾಗೂ ವಿ.ವ್ಯಾಲಿ ಘಟಕಗಳಿಂದ ತೃತೀಯ ಹಂತದ ತ್ಯಾಜ್ಯ ನೀರು ಪೂರೈಸಲಾಗುತ್ತಿದೆ. ಘಟಕಗಳಿಂದ ನೀರು ಪೂರೈಸಲು ಮಂಡಳಿಯು ಟ್ಯಾಂಕರ್ ವ್ಯವಸ್ಥೆಯನ್ನು ಕಲ್ಪಿಸಲಿದೆ. ದ್ವಿತೀಯ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಉದ್ಯಾನಗಳ ನಿರ್ವಹಣೆಗೆ ಮಾತ್ರ ಬಳಸಬಹುದಾಗಿದೆ. ಆದರೆ, ತೃತೀಯ ಹಂತದಲ್ಲಿ ಈ ನೀರನ್ನು ಪ್ರಮುಖವಾಗಿ ಕಟ್ಟಡ ನಿರ್ಮಾಣ ಕಾರ್ಯಕ್ಕೂ ಬಳಸಬಹುದಾಗಿದೆ.

ಇನ್ನು, ಜಲ ಮಂಡಳಿಯು ವಿವಿಧೆಡೆ 25 ಎಸ್‌ಟಿಪಿಗಳನ್ನು ನಿರ್ಮಾಣ ಮಾಡಿದ್ದು, ಈ ಘಟಕಗಳಲ್ಲಿ ದಿನಕ್ಕೆ 106 ಕೋಟಿ ಲೀಟರ್ ನೀರನ್ನು ಸಂಸ್ಕರಿಸಲಾಗುತ್ತಿದೆ. ಈ ಪೈಕಿ, ಸರಕಾರಿ ಸಂಸ್ಥೆಗಳು ಹಾಗೂ ಬೃಹತ್ ಕಂಪನಿಗಳಿಗೆ 31 ಕೋಟಿ ಲೀಟರ್ ನೀರನ್ನು ಪೂರೈಸಲಾಗುತ್ತಿದೆ. ಇದಕ್ಕೆ, ಪ್ರತಿ 6 ಸಾವಿರ ಲೀಟರ್‌ಗಳಿಗೆ 360 ರೂ. ದರ ನಿಗದಿ ಮಾಡಲಾಗಿದೆ. ನೀರಿಗಾಗಿ ಮೊ.ಸಂ: 9845197012 ಅನ್ನು ಸಂಪರ್ಕಿಸಬಹುದು.

ಶುದ್ಧೀಕರಿಸಿದ ನೀರು ಕುಡಿಯುವ ನೀರಿಗೆ ಸಮಾನವಾದ ಮಟ್ಟದಲ್ಲಿರುತ್ತದೆ. ಉದ್ಯಾನಗಳಿಗೆ, ಶೌಚಕ್ಕೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಬಳಸಬಹುದು.

 -ನಿತ್ಯಾನಂದ, ತ್ಯಾಜ್ಯ ನೀರು ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)