varthabharthi

ಕರ್ನಾಟಕ

ಖಾಸಗಿ ಸಾಲದ ಸಂಸ್ಥೆಗಳಿಂದ ಸಾಲ ಪಡೆದ ಬಡಜನರಿಗೆ ಕಿರುಕುಳ: ಆರೋಪ

ಅತಿವೃಷ್ಟಿಗೆ ನಲುಗಿದ ಮಲೆನಾಡಿನಲ್ಲಿ ಕಾರ್ಮಿಕರಿಗಿಲ್ಲ ಉದ್ಯೋಗ

ವಾರ್ತಾ ಭಾರತಿ : 10 Sep, 2019

ಚಿಕ್ಕಮಗಳೂರು, ಸೆ.10: ಈ ಬಾರಿ ಮಲೆನಾಡಿನಲ್ಲಿ ಸುರಿದ ಮಳೆ ಹಾಗೂ ಅದರಿಂದಾದ ಸಾವು ನೋವು, ಆಸ್ತಿಪಾಸ್ತಿ ಹಾನಿಯನ್ನು ಇಲ್ಲಿನ ಜನರು ಕನಸಿನಲ್ಲೂ ಕನವರಿಸುವಂತಾಗಿದೆ. ಭಾರೀ ಮಳೆಗೆ ಹೆಸರಾಗಿರುವ ಮಲೆನಾಡಿನಲ್ಲಿ ಸತತ ಎರಡು ವರ್ಷ ಅತಿವೃಷ್ಟಿಯಾಗಿದೆ. ಕಳೆದ ವರ್ಷ ಅತಿವೃಷ್ಟಿಯಾಗಿದ್ದರೂ ಭೂ ಕುಸಿತ, ಪ್ರವಾಹ, ನೆರೆಯಂತಹ ಘಟನೆಗಳು ಸಂಭವಿಸಿರಲಿಲ್ಲ. ಆದರೆ ಈ ಬಾರಿ ಇಂತಹ ಪ್ರಾಕೃತಿಕ ವಿಕೋಪಗಳಿಗೆ ಮಲೆನಾಡು ಸಾಕ್ಷಿಯಾಗಿದೆ. 

ಅತಿವೃಷ್ಟಿ, ಭೂಕುಸಿತದಂತಹ ಪ್ರಾಕೃತಿಕ ವಿದ್ಯಮಾನಗಳಿಂದಾಗಿ ಮಲೆನಾಡಿನ ಕೆಲ ಭಾಗಗಳಲ್ಲಿ ಜನರು ಸಂತ್ರಸ್ತರಾಗಿರುವುದು ಒಂದೆಡೆಯಾದರೆ, ಉಳಿದೆಡೆ ಭಾರೀ ಮಳೆಯಿಂದಾಗಿ ಕೃಷಿ, ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಅನ್ನಭಾಗ್ಯದ ಅಕ್ಕಿಯಿಂದಾಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಉದ್ಯೋಗವಿಲ್ಲದೆ ಪರದಾಡುತ್ತಿರುವ ಇಂತಹ ಬಡ ಕಾರ್ಮಿಕರನ್ನು ಇದೀಗ ಸಾಲದ ಶೂಲ ನೆತ್ತಿಯ ತೂಗುಕತ್ತಿಯಾಗಿ ಪರಿಣಮಿಸಿದೆ.

ಜಿಲ್ಲೆಯ ಗ್ರಾಮೀಣ ಭಾಗದ ಭೂ ರಹಿತ ಜನರು ತಮ್ಮ ಬದುಕಿಗಾಗಿ ಮೈಕ್ರೋ ಫೈನಾನ್ಸ್ ನಂತಹ ಖಾಸಗಿ ಸಾಲದ ಸಂಸ್ಥೆಗಳ ಮೊರೆ ಹೋಗುವುದು ಸಾಮಾನ್ಯ ಸಂಗತಿ. ಇಂತಹ ಬಡವರ್ಗದ ಜನರನ್ನೇ ದೃಷ್ಟಿಯಲ್ಲಿಟ್ಟುಕೊಂಡು ನೂರಾರು ಸಾಲದ ಸಂಸ್ಥೆಗಳು ಮಲೆನಾಡಿನಲ್ಲಿ ಹುಟ್ಟಿಕೊಂಡಿವೆ. ಗ್ರಾಮೀಣ ಭಾಗದ ಸಣ್ಣ ರೈತರು, ಕೃಷಿ ಕಾರ್ಮಿಕರ ಗುಂಪು ರಚಿಸಿ ಬಡ್ಡಿಗೆ ಸಾಲ ನೀಡುವ ಈ ಸಂಸ್ಥೆಗಳು ಪ್ರತೀ ವಾರ ಸಾಲ ಮರುಪಾವತಿ ಮಾಡಿಸಿಕೊಳ್ಳುತ್ತವೆ. ಭಾರತ್ ಫೈನಾನ್ಸ್, ಗ್ರಾಮೀಣ ಕೂಟ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳಂತನ ನೂರಾರು ಸಾಲ ನೀಡುವ ಸಂಸ್ಥೆಗಳು ಮಲೆನಾಡಿನ ತಾಲೂಕುಗಳಾದ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ವ್ಯಾಪ್ತಿಯ ಹಳ್ಳಿಹಳ್ಳಿಗಳಲ್ಲೂ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂಸ್ಥೆಗಳಿಂದ ತಮ್ಮ ಬದುಕಿಗಾಗಿ ಸಾಲ ಪಡೆದ ಬಡವರ್ಗದ ಜನರು ಅತಿವೃಷ್ಟಿಯಿಂದ ನಲುಗಿರುವ ಈ ಸಂದರ್ಭದಲ್ಲಿ ಕೂಲಿ ಕೆಲಸವಿಲ್ಲದೇ ಸಾಲ ಮರುಪಾವತಿ ಮಾಡಲಾಗದೇ ಪರದಾಡುತ್ತಿದ್ದಾರೆ. ಸಾಲ ಮರುಪಾವತಿ ಮಾಡುವುದು ಒಂದು ತಿಂಗಳು ತಡವಾದರೂ ಈ ಸಂಸ್ಥೆಗಳು ಸಾಲ ಪಡೆದವರ ಬಗ್ಗೆ ಕನಿಷ್ಠ ಮಾನವೀಯತೆ ತೋರದೇ ಕಾಟ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೊಸಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೂಟ ಎಂಬ ಮೈಕ್ರೋ ಫೈನಾನ್ಸ್ ಸಂಸ್ಥೆ ಕೆಲ ಗ್ರಾಮಸ್ಥರನ್ನು ಸೇರಿಸಿಕೊಂಡು ಗುಂಪು ರಚಿಸಿ ಸಾಲ ನೀಡಿದೆ. ಈ ಸಂಸ್ಥೆಯಲ್ಲಿ ಸಾಲ ಪಡೆದಿರುವ ಹೊಸಳ್ಳಿ ಗ್ರಾಮದ ನಿವಾಸಿಗಳು ಕೂಲಿಕಾರ್ಮಿಕರಾಗಿದ್ದು, ಕೂಲಿಯಿಂದಲೇ ಜೀವನ ನಿರ್ವಹಿಸುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ಮಲೆನಾಡಿನಲ್ಲಿ ಅತಿವೃಷ್ಟಿ ಸಂಭವಿಸಿರುವು ಪರಿಣಾಮ ಈ ಭಾಗದಲ್ಲಿ ಕೂಲಿ ಕೆಲಸ ಲಬ್ಯವಾಗದೇ ಇಲ್ಲಿನ ಜನರು ಹೈರಾಣಾಗಿದ್ದಾರೆ. ಅಕ್ಕಪಕ್ಕದ ಕಾಫಿ, ಅಡಿಕೆ ತೋಟಗಳಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಕೆಲಸವನ್ನೂ ನೀಡುತ್ತಿಲ್ಲ. ಕೆಲಸವಿಲ್ಲದೇ ಕೈಕಟ್ಟಿ ಕುಳಿತಿರುವ ಈ ಗ್ರಾಮದ ಜನರ ಪೈಕಿ ಕೆಲವರು ಗ್ರಾಮೀಣ ಕೂಟದಿಂದ ಪಡೆದ ಸಾಲದ ಕಂತು ಕಟ್ಟಲು ಪ್ರತಿದಿನ ಇವರಿವರ ಬಳಿ ಹಣಕ್ಕಾಗಿ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ಸಿಗದ ಕೆಲವರು ತಮ್ಮ ಬಳಿ ಇದ್ದ ಚಿನ್ನದ ಒಡವೆ, ಆಭರಣಗಳನ್ನು ಮಾರಿ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಇದ್ಯಾವುದೂ ಇಲ್ಲದೇ ಕಂತು ಬಾಕಿ ಉಳಿಸಿಕೊಂಡಿದ್ದ ಹೊಸಳ್ಳಿ ಗ್ರಾಮದ ಲಲಿತಾ ಎಂಬವರ ಮನೆ ಮುಂದೆ ಸೋಮವಾರ ಬೆಳಗ್ಗೆ ಹಾಜರಾದ ಸಂಸ್ಥೆಯ ಮೂವರು ಸಿಬ್ಬಂದಿ ಸಾಲ ಹಿಂದಿರುಗಿಸಲೇ ಬೇಕು, ತಪ್ಪಿದ್ದಲ್ಲಿ ಮನೆಯಲ್ಲಿದ್ದ ಟಿವಿಯನ್ನು ಹೊತ್ತೊಯ್ಯವುದಾಗಿ ಬೆದರಿಕೆ ಹಾಕಿದ್ದಾರೆಂದು ಲಲಿತಾ ಆರೋಪಿಸಿದ್ದಾರೆ. 

ಸುಮಾರು ಒಂದು ಗಂಟೆಗಳ ಕಾಲ ಕಡು ಬಡತನದಲ್ಲಿರುವ ಈ ಮಹಿಳೆ ಹಾಗೂ ಕಟುಂಬದವರನ್ನು ಕಾಡಿದ ಸಂಸ್ಥೆಯ ಸಿಬ್ಬಂದಿ ಟಿವಿಯನ್ನು ಹೊರಗಿಡುವಂತೆ ಬೆದರಿಸುತ್ತಿದ್ದಂತೆ ಮನೆಯ ಸದಸ್ಯರು ಕಣ್ಣೀರು ಹಾಕಲಾರಂಭಿಸಿದ್ದಾರೆ. 1 ವಾರದ ಕಾಲಾವಕಾಶ ನೀಡಿ, ತಪ್ಪದೇ ಸಾಲದ ಕಂತು ಪಾವತಿಸುತ್ತೇನೆ. ಗ್ರಾಮದಲ್ಲಿ ಎಲ್ಲೇ ಹೋದರೂ ಕೆಲಸ ಕೊಡುತ್ತಿಲ್ಲ. ಯಾರೂ ಸಾಲವನ್ನೂ ನೀಡುತ್ತಿಲ್ಲ. ಸೊಸೈಟಿ ಅಕ್ಕಿಯಿಂದಾಗಿ ಬದುಕಿದ್ದೇವೆ. ಕಷ್ಟವನ್ನು ಅರ್ಥ ಮಾಡಿಕೊಳ್ಳಿ ಎಂದು ಅಂಗಲಾಚಿದರೂ ಸಂಸ್ಥೆಯ ಸಿಬ್ಬಂದಿ ಟಿವಿಯನ್ನು ಕೊಡಿ, ಹಣ ಕಟ್ಟಿ ಬಿಡಿಸಿಕೊಳ್ಳಿ ಎಂದು ಬೆದರಿಸಿದ್ದಾರೆ ಎನ್ನಲಾಗಿದೆ. ಈ ಮನಕಲುಕುವ ದೃಶ್ಯಕಂಡು ಸಂಸ್ಥೆಯಿಂದ ಸಾಲ ಪಡೆದ ಗುಂಪಿನ ಇತರ ಸದಸ್ಯರೆಲ್ಲರೂ ಸೇರಿ ಮಹಿಳೆಯ ಸಾಲದ ಕಂತನ್ನು ಕಟ್ಟಿದ್ದರಿಂದ ಸಿಬ್ಬಂದಿ ಸ್ಥಳದಿಂದ ಹಿಂದಿರುಗಿದ್ದಾರೆಂದು ತಿಳಿದು ಬಂದಿದೆ.

ಅತಿವೃಷ್ಟಿಯಿಂದ ಮಲೆನಾಡಿನಲ್ಲಿ ಜನರಿಗೆ ಉದ್ಯೋಗವೂ ಸಿಗದಂತಾಗಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಹರೀಶ್ ಪಾಂಡೆ, ಈ ಹಿಂದೆ ಖಾಸಗಿ ಸಾಲದ ಸಂಸ್ಥೆಗಳು ಜನರಿಂದ ಬಲವಂತದಿಂದ ಸಾಲ ವಸೂಲಿ ಮಾಡಬಾರದು. ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು. ದೌರ್ಜನ್ಯದಿಂದ ಸಾಲ ವಸೂಲಿ ಮಾಡುವ ಬಗ್ಗೆ ನಾಗರಿಕರು ದೂರು ನೀಡಬಹುದೆಂದು ತಮ್ಮ ಮೊಬೈಲ್ ನಂಬರ್ ಅನ್ನು ಪತ್ರಿಕೆಗಳಲ್ಲೂ ಪ್ರಕಟಿಸಿದ್ದರು. ಆದರೆ ಎಸ್ಪಿ ಅವರ ಸೂಚನೆಗೆ ಇಂತಹ ಖಾಸಗಿ ಸಾಲದ ಸಂಸ್ಥೆಗಳು ಕವಡೆ ಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.

ಮಲೆನಾಡಿನಲ್ಲಿ ಭಾರೀ ಮಳೆ, ಪ್ರವಾಹ, ಭೂ ಕುಸಿತದಿಂದಾಗಿ ಕಾಫಿ, ಅಡಿಕೆ ತೋಟಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಬೆಳೆಗಳು ನೆಲಕಚ್ಚಿವೆ. ತೋಟಗಳ ಮಾಲಕರಿಗೆ ಕೂಲಿ ಕೆಲಸದವರಿಗೆ ಸಂಬಳ ನೀಡಲೂ ಹಣ ಇಲ್ಲದಂತಾಗಿದೆ. ಈ ಕಾರಣಕ್ಕೆ ಮಲೆನಾಡಿನಲ್ಲಿ ಕೂಲಿ, ಕೃಷಿ ಕಾರ್ಮಿಕರಿಗೆ ಕೆಲಸವನ್ನು ಯಾರೂ ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿ ಕೆಲಸವನ್ನು ನಂಬಿ ಖಾಸಗಿ ಸಂಸ್ಥೆಗಳಲ್ಲಿ ಚಿನ್ನ, ಭೂಮಿ ಮತ್ತಿತರ ದಾಖಲೆಗಳನ್ನು ನೀಡಿ ಸಾಲ ಪಡೆದವರ ಪಾಲಿಗೆ ಸರಕಾರದ ಋಣಮುಕ್ತ ಯೋಜನೆ ನೆರವಾಗುತ್ತಿದೆ. ಆದರೆ ಮೈಕ್ರೋ ಪೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದವರು ಕಂತು ಕಟ್ಟಲಾಗದೇ ಪರದಾಡುತ್ತಿದ್ದಾರೆ. ಇಂತಹ ಸಾಲಗಾರರನ್ನು ಸಾಲದ ಸಂಸ್ಥೆಗಳು ಪ್ರತಿದಿನ ಕಿರುಕುಳ ನೀಡುತ್ತಿರುವುದು ಸಾಮಾನ್ಯವಾಗಿದೆ. ಸರಕಾರ ಹಾಗೂ ಜಿಲ್ಲಾಡಳಿತ ಇಂತಹ ಬಡವರ್ಗದ ಸಾಲಗಾರರ ನೆರವಿಗೂ ಬರಬೇಕಿದೆ. ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು. ದೌರ್ಜನ್ಯ ಎಸಗಿ ಹಣ ಕಟ್ಟಿಸಿಕೊಳ್ಳುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು.
- ಕೌಳಿ ರಾಮು, ಮಲೆನಾಡು ಉಳಿಸಿ ಹೋರಾಟ ವೇದಿಕೆ ಮುಖಂಡ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)