varthabharthi

ಕ್ರೀಡೆ

ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್

ಮೆಹುಲಿ ಘೋಷ್‌ಗೆ ಪ್ರಶಸ್ತಿ

ವಾರ್ತಾ ಭಾರತಿ : 10 Sep, 2019

ಹೊಸದಿಲ್ಲಿ, ಸೆ.10: ಪಶ್ಚಿಮಬಂಗಾಳದ ಮೆಹುಲಿ ಘೋಷ್ ಮಂಗಳವಾರ ನಡೆದ ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್‌ನಲ್ಲಿ ಹಿರಿಯ ಹಾಗೂ ಕಿರಿಯ ಮಹಿಳಾ 10 ಮೀ. ರೈಫಲ್ ಪ್ರಶಸ್ತಿಯನ್ನು ಜಯಿಸಿದ್ದಾರೆ.

ಅನ್ಹದ್ ಜವಾಂಡ ಹಾಗೂ ಪಾರುಲ್ ಕುಮಾರ್ ಡಾ.ಕರ್ನಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಕ್ರಮವಾಗಿ ಪುರುಷರ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಹಾಗೂ ಪುರುಷರ 50 ಮೀ. ರೈಫಲ್ ತ್ರಿ ಪೊಸಿಶನ್ಸ್ ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

 ಅವಳಿ ಪ್ರಶಸ್ತಿ ಜಯಿಸಿದ ಮೆಹುಲಿ ಘೋಷ್ ದಿನದ ಹೀರೊಯಿನ್ ಆಗಿ ಹೊರಹೊಮ್ಮಿದರು. 252 ಅಂಕ ಗಳಿಸಿದ ಮೆಹುಲಿ ಹಿರಿಯ ಮಹಿಳಾ 10 ಮೀ. ಏರ್ ರೈಫಲ್ ಪ್ರಶಸ್ತಿಯನ್ನು ಜಯಿಸಿದರು. ಮಧ್ಯಪ್ರದೇಶದ ಶ್ರೇಯಾ ಅಗರ್ವಾಲ್ (251.2)ಎರಡನೇ ಸ್ಥಾನ ಪಡೆದರು. ವಿಶ್ವದ ನಂ.1 ಆಟಗಾರ್ತಿ ರಾಜಸ್ಥಾನದ ಅಪೂರ್ವಿ ಚಾಂಡೇಲಾ(229.3)ಮೂರನೇ ಸ್ಥಾನ ಪಡೆದರು.

ಜೂನಿಯರ್ ಮಹಿಳಾ ಇವೆಂಟ್‌ನಲ್ಲಿ 252.2 ಅಂಕ ಗಳಿಸಿದ ಮೆಹುಲಿ ಮೊದಲ ಸ್ಥಾನ ಪಡೆದರು. ಪಂಜಾಬ್‌ನ ಖುಷಿ ಸೈನಿ(248.8)ಎರಡನೇ ಸ್ಥಾನ ಪಡೆದರು. ಮಧ್ಯಪ್ರದೇಶದ ಮಾನ್ಸಿ(227.5) ಹಾಗೂ ಶ್ರೇಯಾ ಅಗರ್ವಾಲ್(205.8)ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಜೂನಿಯರ್ ಮಹಿಳಾ ಇವೆಂಟ್‌ನ ಯೂತ್ ವಿಭಾಗದಲ್ಲಿ ಹಿಮಾಚಲ ಪ್ರದೇಶದ ಝೀನಾ ಫೈನಲ್‌ನಲ್ಲಿ 252.5 ಅಂಕ ಗಳಿಸಿ ಜಯಶಾಲಿಯಾದರು.

ಪುರುಷರ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ 31 ಅಂಕ ಗಳಿಸಿದ ಅನ್ಹಾದ್ ಒಲಿಂಪಿಯನ್ ಗುರುಪ್ರೀತ್ ಸಿಂಗ್(26)ರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಕೇರಳದ ಥಾಮಸ್ ಜಾರ್ಜ್(23 ಅಂಕ)ಮೂರನೇ ಸ್ಥಾನ ಪಡೆದಿದ್ದಾರೆ.

ಜೂನಿಯರ್ ಪುರುಷರ ಇವೆಂಟ್‌ನಲ್ಲಿ ಚಂಡಿಗಡದ ವಿಜಯವೀರ್ ಸಿಂಗ್ 31 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಆದರ್ಶ್ ಸಿಂಗ್(26) ಎರಡನೇ ಹಾಗೂ ವಿಜಯವೀರ್ ಸಹೋದರ ಉದಯವೀರ್(25)ಮೂರನೇ ಸ್ಥಾನ ಪಡೆದು ಕಂಚು ಜಯಿಸಿದರು.

ಏರ್‌ಫೋರ್ಸ್‌ನ ಭಾರತದ ಶೂಟರ್ ಪಾರುಲ್ ಕುಮಾರ್ ಪುರುಷರ 3 ಪೊಸಿಶನ್ಸ್ ಫೈನಲ್‌ನಲ್ಲಿ 458.3 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ಆರ್ಮಿಯ ಸತ್ಯೇಂದ್ರ ಸಿಂಗ್(456.5)ಎರಡನೇ ಹಾಗೂ ಚೈನ್ ಸಿಂಗ್(443.1)ಮೂರನೇ ಸ್ಥಾನ ಪಡೆದಿದ್ದಾರೆ. ಉದಯೋನ್ಮುಖ ಶೂಟರ್ ಐಶ್ವರ್ಯ ಪ್ರತಾಪ್ ಸಿಂಗ್ ಥೋಮರ್ ಪುರುಷರ ಜೂನಿಯರ್ ತ್ರಿ ಪೊಸಿಶನ್ಸ್ ಸ್ಪರ್ಧೆಯ ಫೈನಲ್‌ನಲ್ಲಿ 453.5 ಅಂಕ ಗಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)