varthabharthi

ನಿಮ್ಮ ಅಂಕಣ

ದೇವತಾಕಾರ್ಯದಲ್ಲಿ ಇನ್ನಿತರ ಮಾತೇಕೆ.....?

ವಾರ್ತಾ ಭಾರತಿ : 10 Sep, 2019
-ಹೈದರ್ ಅಲಿ, ಐವತ್ತೊಕ್ಲು,

ಮಾನ್ಯರೇ,

ಯಾವುದೇ ಧರ್ಮದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಯ ಆಗರವಾಗಬೇಕು. ಮನಸ್ಸು ಮನಸ್ಸುಗಳನ್ನು ಬೆಸೆಯಬೇಕು. ದೈವ ತೃಪ್ತಿ, ಇಷ್ಟಾರ್ಥ ಸಿದ್ಧ್ದಿ, ಸಂಕಷ್ಟ ನಿವಾರಣೆಗಳಿಗೆ ದೇವರ ಮೊರೆ, ಪ್ರಾರ್ಥನೆ....ಒಟ್ಟಾರೆ, ಲೋಕ ಕಲ್ಯಾಣ, ಲೌಕಿಕ ಬದುಕಿನ ಯಶಸ್ಸು, ಮೋಕ್ಷದ ಬಯಕೆ.......ಭಕ್ತಿಯ ಸಿಂಚನವಾಗಬೇಕು. ನಾಡಿನಲ್ಲಿ ಸುಭೀಕ್ಷೆ, ದೈವಾನುಗ್ರಹದ ಗುರಿಯಾಗಿರಬೇಕು.

ಆದರೆ, ದುರಂತವೆಂದರೆ ಇಂದು ಕೆಲವು ಸಂಘಟನೆಗಳು ನಡೆಸುವ ದೇವತಾ ಕಾರ್ಯಕ್ರಮಗಳು ಜನಮನವನ್ನು ಅರಳಿಸುವುದಕ್ಕಿಂತ ಕೆರಳಿಸುತ್ತವೆ. ಪಕ್ಕಾ ರಾಜಕೀಯ ವೇದಿಕೆಯಾಗುತ್ತಿವೆ. ಅಲ್ಲಿ ದಿಕ್ಸೂಚಿ ಭಾಷಣಕ್ಕೋ,ಧಾರ್ಮಿಕ ಉಪನ್ಯಾಸಕ್ಕೋ ಬರುವ ಅತಿಥಿಗಳೆನಿಸಿದವರು ಆಡುವ ಮಾತುಗಳು ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡುತ್ತವೆ.(ಕೆಲವರನ್ನು ಆಹ್ವಾನಿಸುವುದರ ಹಿಂದೆಯೇ ದುರುದ್ದೇಶಗಳಿರುತ್ತವೆ).

ಚಪ್ಪಾಳೆ ತಟ್ಟಲು, ಶಿಳ್ಳೆ ಹೊಡೆಯಲು ಒಂದಿಷ್ಟು ಮಂದಿ ಇದ್ದಾಗ ಅವರಿಗೆ ತಾವೊಂದು ದೇವತಾ ಕಾರ್ಯಕ್ರಮದ ವೇದಿಕೆಯಲ್ಲಿರುವುದೆಂಬ ಕನಿಷ್ಠ ಪರಿಜ್ಞಾನವೂ ಇರುವುದಿಲ್ಲ. ತಮ್ಮ ಧರ್ಮದ ಕಿಂಚಿತ್ತೂ ಅರಿವಿಲ್ಲದಿದ್ದರೂ ಅನ್ಯ ಧರ್ಮದ-ಧರ್ಮೀಯರ ಬಗ್ಗೆ ವಿಮರ್ಶಿಸುತ್ತಾರೆ. ಅವರ ವೇಷ ಭೂಷಣ, ಹೆಣ್ಣುಮಕ್ಕಳು, ಆರಾಧನಾಲಯಗಳು- ಕ್ರಮಗಳು, ಅವರ ದೇಶಪ್ರೇಮ....ಒಟ್ಟಾರೆ, ಜನಮನವನ್ನು ಕೆಡಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ.

ಅಲ್ಲಿ ಒಟ್ಟು ಕಾರ್ಯಕ್ರಮದ ಉದ್ದೇಶವೇ ವಿಫಲಗೊಳ್ಳುತ್ತದೆ. ಪ್ರಚೋದಿತ ಭಾಷಣ ಮಾಡಿ, ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಕೆಲವರಿಂದ ಚಪ್ಪಾಳೆ ಗಿಟ್ಟಿಸಿ ಅವರು ತೆರಳುತ್ತಾರೆ. ಪರಿಣಾಮ.... ಶಾಂತಿ, ಸಮಾಧಾನ, ಅನ್ಯೋನ್ಯತೆ ಇರುವ ನಾಡಲ್ಲಿ ಸಂಶಯದ, ಭಿನ್ನತೆಯ ಬೀಜ ಮೊಳಕೆಯೊಡೆಯುತ್ತವೆ. ಅವರು ನೀಡಿದ ಧರ್ಮದ ಅಫೀಮನ್ನು ಸೇವಿಸಿದ ಒಂದು ವಿಭಾಗ ಅನ್ಯಧರ್ಮೀಯರನ್ನು ದ್ವೇಷಿಸಲು ಆರಂಭಿಸುತ್ತದೆ. ಅವರ ಆರಾಧನಾಲಯಗಳು, ವ್ಯವಹಾರಗಳು, ಪದ್ಧತಿಗಳನ್ನು ನಾಶಗೊಳಿಸುವ ಪ್ರಯತ್ನಮಾಡುತ್ತದೆ. ದಿನಬೆಳಗಾದರೆ ಹೆಗಲಿಗೆ ಹೆಗಲುಕೊಟ್ಟು ದುಡಿಯುವ ಮಂದಿಯ ನಡುವೆ ಕೋಮುಭಾವನೆಯ ವಿಷಬೀಜ ಮೊಳೆಯುತ್ತದೆ. ರಾಜಕೀಯ ಪಕ್ಷಗಳು ಇದರ ದುರ್ಲಾಭ ಪಡೆದು, ಅಧಿಕಾರವನ್ನು ಪಡೆಯುತ್ತವೆ.
ದೇವತಾ ಕಾರ್ಯದಲ್ಲಿ ಇನ್ನಿತರ ಮಾತು ಸಲ್ಲದು. ಅದು ಮನುಷ್ಯ ಸ್ನೇಹಿ ವೇದಿಕೆಯಾಗಬೇಕು. ಇತರ ಧರ್ಮೀಯರೂ ಪಾಲ್ಗೊಳ್ಳುವ ಸೌಹಾರ್ದ ವಾತಾವರಣವಿರಬೇಕು. ಒಟ್ಟಾರೆ, ದೇವರು ಮೆಚ್ಚಿ ಹರಸುವ ಯಶಸ್ವಿ ಕಾರ್ಯಕ್ರಮವಾಗಬೇಕು. ಅದಕ್ಕಾಗಿ, ಲಂಗುಲಗಾಮಿಲ್ಲದೆ ನಾಲಗೆ ಹರಿಯಬಿಡುವ ಮಂದಿಯನ್ನು ದೂರವಿಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)