varthabharthi

ರಾಷ್ಟ್ರೀಯ

ವಿಮಾನ ನಿಲ್ದಾಣದಲ್ಲಿ 81 ವರ್ಷದ ವೃದ್ಧನಂತೆ ವೇಷ ಹಾಕಿದ ಯುವಕನ ಬಂಧನ

ವಾರ್ತಾ ಭಾರತಿ : 10 Sep, 2019

ಹೊಸದಿಲ್ಲಿ, ಸೆ. 10: ವೃದ್ಧನಂತೆ ಸೋಗು ಹಾಕಿ ನಕಲಿ ಪಾಸ್‌ ಪೋರ್ಟ್ ಬಳಸಿ ವಿಮಾನ ಯಾನ ಮಾಡಿದ 32 ವರ್ಷದ ವ್ಯಕ್ತಿಯೋರ್ವನನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಅಹ್ಮದಾಬಾದ್ ನಿವಾಸಿಯಾಗಿರುವ ಜಯೇಶ್ ಪಟೇಲ್ ವೃದ್ಧರಂತೆ ಕೂದಲು ಹಾಗೂ ಗಡ್ಡ ಬಿಳುಪು ಮಾಡಿಕೊಂಡು ವೀಲ್‌ಚಯರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ವಿಮಾನ ಹತ್ತಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ಬಂದಿಳಿದಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. 81ರ ಹರೆಯದ ಆಮ್ರಿಕ್ ಹೆಸರಿನಲ್ಲಿ ಈತ ನಕಲಿ ಪಾಸ್‌ಪೋರ್ಟ್ ಹೊಂದಿದ್ದ ಎಂದು ಅವರು ತಿಳಿಸಿದ್ದಾರೆ.

ವೀಲ್ ಚಯರ್‌ನಿಂದ ಎದ್ದು ನಿಂತುಕೊಳ್ಳಲು ಅಸಮರ್ಥತೆ ತೋರಿಸುತ್ತಿದ್ದ ಹಾಗೂ ನೇರ ನೋಟಕ್ಕೆ ಹಿಂಜರಿಯುತ್ತಿದ್ದ ಹಿನ್ನೆಲೆಯಲ್ಲಿ ಆತನ ಬಗ್ಗೆ ಸಿಐಎಸ್‌ಎಫ್ ಸಿಬ್ಬಂದಿಗೆ ಅನುಮಾನ ಉಂಟಾಗಿತ್ತು. ವಿವರವಾಗಿ ಪರಿಶೀಲಿಸಿದ ಬಳಿಕ ಆತನ ಮೂಲ ಗುರುತು ಪತ್ತೆಯಾಯಿತು ಎಂದು ಅವರು ಹೇಳಿದ್ದಾರೆ.

ಆತನ ಚರ್ಮದ ವಿನ್ಯಾಸ ಹಾಗೂ ಕಾಣುವಿಕೆಯಲ್ಲಿ ಭಾವಚಿತ್ರದಲ್ಲಿ ಇರುವುದಕ್ಕಿಂತ ಕಡಿಮೆ ಪ್ರಾಯ ಕಂಡು ಬಂದಿತ್ತು. ಆತ ತನ್ನ ಪ್ರಾಯ ಮರೆ ಮಾಚಲು ಶೂನ್ಯ ಪವರ್‌ನ ಕನ್ನಡಕ ಧರಿಸಿದ್ದ ಎಂದು ಅವರು ತಿಳಿಸಿದ್ದಾರೆ. ಅನಂತರ ಆತನನ್ನು ಮುಂದಿನ ತನಿಖೆಗೆ ವಲಸೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಎಂದು ಸಿಐಎಸ್‌ಎಫ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)