varthabharthi


ನಿಮ್ಮ ಅಂಕಣ

ಮನುಷ್ಯನನ್ನು ನುಂಗುತ್ತಿರುವ ‘ಆಟೋಮೇಷನ್’

ವಾರ್ತಾ ಭಾರತಿ : 10 Sep, 2019
ಮಲ್ಲೆಪಲ್ಲಿ ಲಕ್ಷ್ಮಯ್ಯ ಕನ್ನಡಕ್ಕೆ: ಕಸ್ತೂರಿ

ಕಳೆದ 3, 4 ದಶಕಗಳಿಂದ ತಂತ್ರಜ್ಞಾನ ರಂಗದಲ್ಲಿ ಬರುತ್ತಿರುವ ಪರಿವರ್ತನೆಗಳು, ಯಾಂತ್ರೀಕರಣ ಮನುಷ್ಯನನ್ನು ಉತ್ಪಾದನೆಗೆ ದೂರ ಮಾಡುತ್ತಿದೆ. ಇದೇ ವ್ಯವಸಾಯರಂಗವನ್ನು ಮೊತ್ತಮೊದಲಿಗೆ ಕಬಳಿಸಿದೆ. ಮಣ್ಣಿಗೆ ಮನುಷ್ಯನಿಗೆ ಇರುವ ಸಂಬಂಧವನ್ನು ಒಡೆದು ಹಾಕಿದೆ. ಕಳೆದ ಎರಡು ವರ್ಷಗಳಿಂದ ಜರುಗದ ಪರಿವರ್ತನೆಗಳು ಕಳೆದ 30,40 ವರ್ಷಗಳಲ್ಲಿ ನಡೆದಿವೆ.


‘‘ವಿಶ್ವದಲ್ಲಿ ಅನೂಹ್ಯವಾದ ಪರಿವರ್ತನೆಗಳು ನಡೆಯಲಿವೆ. ಪ್ರಸ್ತುತ ಮುಂದುವರಿಯುತ್ತಿರುವ ಆರ್ಥಿಕ ಅಸಮಾನತೆಗಳು ಮತ್ತಷ್ಟು ಹೆಚ್ಚಾಗಿ, ಒಂದು ಅಸಾಧಾರಣವಾದ ಶ್ರೀಮಂತವರ್ಗ ಏರ್ಪಡಲಿದೆ. ದಿನದಿನಕ್ಕೂ ವಿಜ್ಞಾನ, ತಂತ್ರಜ್ಞಾನಗಳಿಂದ ಉಂಟಾಗುತ್ತಿರುವ ಬದಲಾವಣೆಗಳಿಂದ ಮಾನವ ಶರೀರದಲ್ಲಿನ ಜೀನ್ಸ್‌ಗಳಲ್ಲೂ ಬಹಳಷ್ಟು ಪರಿವರ್ತನೆಗಳನ್ನು ತಂದು, ದೀರ್ಘಕಾಲ ಜೀವಿಸುವ ವಿಧಾನಗಳನ್ನು ಕಂಡುಕೊಳ್ಳುತ್ತಾರೆ. ಅದರಿಂದ ಶ್ರೀಮಂತರಿಗೇ ಸೀಮಿತವಾದ ಒಂದು ಅಸಾಧಾರಣ ಮಾನವ ಜಾತಿ ಏರ್ಪಡುತ್ತದೆ. ಸಮಾಜದಲ್ಲಿ ದಾರಿದ್ರ ಅನುಭವಿಸುತ್ತಿರುವವರು ರಕ್ಷಣೆ, ಭದ್ರತೆಗಳ ಕೊರತೆಯಿಂದ ವಿಶ್ವಭೂಪಟದಿಂದ ಕಣ್ಮರೆಯಾಗುತ್ತಾರೆ’’ - ವಿಶ್ವವಿಖ್ಯಾತ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಸಾಮಾಜಿಕ, ಆರ್ಥಿಕ ಅಸಮಾನತೆಗಳಿಂದ ಕೂಡಿದ ಭವಿಷ್ಯತ್ ಚಿತ್ರಪಟವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಕಟ್ಟಕಡೆಯ ವ್ಯಾಖ್ಯಾನ ಇದು.

ವಿಶ್ವ ಪರಿವರ್ತನೆಗಳ ಮೇಲೆ ಸ್ಟೀಫನ್ ಹಾಕಿಂಗ್ ನಡೆಸಿದ ಸಂಶೋಧನೆಗಳು ಅಪೂರ್ವವಾದವು. ‘ಸುದೀರ್ಘ ಪ್ರಶ್ನೆ-ಸಂಕ್ಷಿಪ್ತ ಉತ್ತರಗಳು’ ಎಂಬ ಪುಸ್ತಕದಲ್ಲಿ ಈ ವಿಶ್ಲೇಷಣೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಮಾನವ ಸಮಾಜವನ್ನು ಅಲ್ಲೋಲ ಕಲ್ಲೋಲಗೊಳಿಸುವ ಆರ್ಥಿಕ ಅಸಮಾನತೆಗಳ ಮೇಲೆ ಸ್ಪಷ್ಟವಾದ, ವೌಲ್ಯಯುತವಾದ ಮಾಹಿತಿಯನ್ನು ಹೊರಹಾಕಿದ್ದಾರೆ. ಅದರ ಫಲವಾಗಿ ಆವಿಷ್ಕಾರಗೊಳ್ಳುವ ಒಂದು ಅಸಾಮಾನ್ಯ ಮಾನವ ಜಾತಿ ಕುರಿತು, ಅದೇ ವಿಧವಾಗಿ ಹಸಿವಿನಿಂದ, ಅಭದ್ರತೆಯಿಂದ ಕುಗ್ಗಿ ಕೃಶಿಸಿ ಹೋಗುವ ಮತ್ತೊಂದು ದೀನವರ್ಗದ ಕುರಿತು ಕಣ್ಣಿಗೆ ಕಟ್ಟಿದಂತೆ ತೋರಿಸಿದ್ದಾರೆ.

ಇದು ಕೇಳುವುದಕ್ಕೆ ಸ್ವಲ್ಪ ಸಂಕಟಕಾರಕವಾಗಿ ಇದ್ದಾಗ್ಯೂ... ವಿಶ್ವ ಪರಿವರ್ತನೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಪರಿಶೀಲಿಸಿ ಹೇಳಿದ ಅಕ್ಷರಸತ್ಯಗಳು ಇವು. ಅಂದು ಕಾರ್ಲ್ ಮಾರ್ಕ್ಸ್ ಬಂಡವಾಳದ ರೂಪದಲ್ಲಿ ಬೆಳೆಯುತ್ತಿರುವ ಅಸಮಾನತೆಗಳ ಕುರಿತು ಹೇಳಿದಾಗ ಟೀಕಿಸಿದವರು ಇದ್ದರು. ಮಾರ್ಕ್ಸಿಸ್ಟ್ ಮಹಾನಾಯಕರ ಸಿದ್ಧಾಂತಗಳೊಂದಿಗೆ ಅಷ್ಟಾಗಿ ಸಂಬಂಧ ಇಲ್ಲದ ಜಾಗತಿಕ ಮೇಧಾವಿ ಸ್ಟೀಫನ್ ಹಾಕಿಂಗ್ ವ್ಯಾಖ್ಯಾನಗಳು ಸಮಾಜಕ್ಕೆ ಚಾಟಿ ಏಟಿನಂತಿವೆ. ಮಾರ್ಕ್ಸಿಸ್ಟ್ ಸಿದ್ಧಾಂತ ಕೆಲಸಕ್ಕೆ ಬಾರದು ಎಂದು ತಳ್ಳಿ ಹಾಕುತ್ತಿರುವವರು ಇತ್ತೀಚೆಗೆ ಬೆಳೆಯುತ್ತಿರುವ ಆರ್ಥಿಕ ಅಸಮಾನತೆಗಳನ್ನು ತೊಲಗಿಸುವ ಆಲೋಚನೆ ಮಾಡಲಾರದೆ ಹೋಗುತ್ತಿದ್ದಾರೆ. ಆರ್ಥಿಕ ಅಸಮಾನತೆಗಳು ಭವಿಷ್ಯತ್ತಿನಲ್ಲಿ ವಿಶ್ವವನ್ನು ಧ್ವಂಸ ಮಾಡಬಲ್ಲವು ಎಂದು ಹೇಳಿದ ಸ್ಟೀಫನ್ ಹಾಕಿಂಗ್ ಎಚ್ಚರಿಕೆ ನಮ್ಮ ದೇಶಕ್ಕೆ ಸಹ ಅನ್ವಯಿಸುತ್ತದೆ. ಇದಕ್ಕೆ ನಮ್ಮ ದೇಶದಲ್ಲಿ ಆಗುತ್ತಿರುವ ಪರಿವರ್ತನೆಗಳು ಸಾಕ್ಷಗಳಾಗಿ ನಿಲ್ಲುತ್ತವೆ.

ವಿಶ್ವಾದ್ಯಂತ ಶ್ರೀಮಂತ-ಬಡವರ ಮಧ್ಯೆ ಆಕಾಶದಗಲ ಅಂತರಗಳು ಅನೂಹ್ಯವಾಗಿ ಬೆಳೆದು ಹೋಗುತ್ತಿವೆ. ಶೇ. 90 ಪ್ರಜೆಗಳು ಕಡುದಾರಿದ್ರವನ್ನು ಅನುಭವಿಸುತ್ತಿರುವಾಗ ಕೇವಲ ಶೇ. 10 ಮಂದಿಯ ಖಜಾನೆಯಲ್ಲಿ ಮಾನವ ಜಾತಿಯ ಸಂಪತ್ತೆಲ್ಲಾ ಬಂದಿಯಾಗಿದೆ. ಸಮಾಜದಲ್ಲಿನ ಅತ್ಯಧಿಕ ಮಂದಿ ಪ್ರಜೆಗಳು ನಿಲ್ಲಲು ನೆರಳಿಲ್ಲದೆ, ತುಂಡು ಭೂಮಿ ಇಲ್ಲದೆ ಸಹಜ ಸಂಪನ್ಮೂಲಗಳ ಮೇಲೆ ಎಂತಹ ಹಕ್ಕುಗಳೂ ಇಲ್ಲದೆ, ಕನಿಷ್ಠ ಉದ್ಯೋಗವೂ ಕೊರತೆಯಾಗಿ, ನಿಜವಾದ ಶಿಕ್ಷಣ, ಸ್ಥಿರತೆಯುಳ್ಳ ಉದ್ಯೋಗ, ಜೀವನ ಭದ್ರತೆ, ಸಾಮಾಜಿಕ ರಕ್ಷಣೆಗಳಿಗೆ ದೂರವಾಗಿ ಬದುಕು ಸಾಗಿಸುತ್ತಿದ್ದಾರೆ. ಒಂದು ಕಡೆ ಜನಜೀವನ ನಿತ್ಯ ದಾರಿದ್ರದಿಂದ ಒದ್ದಾಡುತ್ತಿದ್ದರೆ, ಮತ್ತೊಂದು ಕಡೆ ಮಾನವ ನಿಮಿತ್ತ ಇಲ್ಲದ, ಮಾನವ ಜಾತಿಯನ್ನು ಉತ್ಪಾದನಾ ರಂಗದಿಂದ ಅಟ್ಟೋಡಿಸುವ ಹೊಚ್ಚ ಹೊಸ ಅಭಿವೃದ್ಧಿ ಮಾದರಿ ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತ್ತಿದೆ. ಕಳೆದ 3, 4 ದಶಕಗಳಿಂದ ತಂತ್ರಜ್ಞಾನ ರಂಗದಲ್ಲಿ ಬರುತ್ತಿರುವ ಪರಿವರ್ತನೆಗಳು, ಯಾಂತ್ರೀಕರಣ ಮನುಷ್ಯನನ್ನು ಉತ್ಪಾದನೆಗೆ ದೂರ ಮಾಡುತ್ತಿದೆ. ಇದೇ ವ್ಯವಸಾಯರಂಗವನ್ನು ಮೊತ್ತಮೊದಲಿಗೆ ಕಬಳಿಸಿದೆ. ಮಣ್ಣಿಗೆ ಮನುಷ್ಯನಿಗೆ ಇರುವ ಸಂಬಂಧವನ್ನು ಒಡೆದು ಹಾಕಿದೆ. ಕಳೆದ ಎರಡು ವರ್ಷಗಳಿಂದ ಜರುಗದ ಪರಿವರ್ತನೆಗಳು ಕಳೆದ 30,40 ವರ್ಷಗಳಲ್ಲಿ ನಡೆದಿವೆ.

ಇಷ್ಟು ಕಾಲ ನೆಲೆಗೊಂಡಿದ್ದ ವ್ಯವಸಾಯ ಅಸ್ತವ್ಯಸ್ತಗೊಂಡಿದೆ. ಯಾಂತ್ರೀಕರಣ, ಆಧುನೀಕರಣಗಳ ಪ್ರಭಾವದಿಂದ ವ್ಯವಸಾಯದ ಮೇಲೆ ಆಧಾರಗೊಂಡು ಬದುಕುತ್ತಿದ್ದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು. 1977-78 ರಲ್ಲಿ 32ನೇ ಸರ್ವೇ ಪ್ರಕಾರ ಶೇ. 80 ಮಂದಿ ವ್ಯವಸಾಯದ ಮೇಲೆ ಆಧಾರಗೊಂಡು ಜೀವಿಸುತ್ತಿದ್ದರೆ, 2017- 18ರಲ್ಲಿ ಜರುಗಿದ ಸರ್ವೇ ಪ್ರಕಾರ ಇವರು ಶೇ. 55ಕ್ಕೆ ಇಳಿದು ಹೋಗಿದ್ದಾರೆ. ವ್ಯವಸಾಯ ಸಂಕ್ಷೋಭೆಯ ಮೊದಲ ಸಂತ್ರಸ್ತರು ಮಹಿಳೆಯರೇ ಎನ್ನುವುದು ಸತ್ಯ. ನಿಜಕ್ಕೂ ಒಂದೇ ಒಂದು ಟ್ರಾಕ್ಟರ್ ಕೆಲವು ನೂರು ಮಂದಿಯ ಜೀವನೋಪಾಯವನ್ನು ನುಂಗಿ ಹಾಕಿದೆ. ವಿಜ್ಞಾನ ತಂತ್ರಜ್ಞಾನವನ್ನು ವಿರೋಧಿಸುವುದು ನನ್ನ ಉದ್ದೇಶವಲ್ಲ. ಟ್ರಾಕ್ಟರ್‌ನಿಂದ ಕೊಯ್ಲು ಮಾಡುವುದು, ರಾಶಿ ಒಟ್ಟುವುದು, ಕಾಳು ಕೂಡಿಸುವುದು ಇವುಗಳಿಂದ ಹಿಡಿದು ಸಾಗಣೆ ಮಾಡುವವರೆಗೆ ಮನುಷ್ಯನ ಆವಶ್ಯಕತೆ ಇಲ್ಲದಂತೆ ಯಂತ್ರಗಳು ಮಾಡುತ್ತವೆ. ವಿವಿಧ ರೀತಿಯ ಕೆಲಸಗಳು ಮಾಡುವ ರೈತರು, ಕೂಲಿಗಳನ್ನು ಕೆಲಸದಿಂದ ಹೊರಹಾಕಿವೆ. ಅದರ ಮೇಲೆ ಅವಲಂಬಿಸಿದ ಮನುಷ್ಯರು ಕನಿಷ್ಟ 2, 3 ತಿಂಗಳ ಕಾಲ ಜೀವನೋಪಾಯವನ್ನು ಕಳೆದುಕೊಳ್ಳಬೇಕಾದ ದುರ್ಭರ ಪರಿಸ್ಥಿತಿ. ಒಟ್ಟಾರೆ ವ್ಯವಸಾಯ ರಂಗದಿಂದ ರೈತಾಂಗ ನಿರ್ಗಮಿಸಬೇಕಾದ ಸ್ಥಿತಿ ಹೊಂಚು ಹಾಕುತ್ತಿದೆ.

ವ್ಯವಸಾಯ ರಂಗದ ಬಳಿಕ ಯಾಂತ್ರೀಕರಣದ ಕಹಿ ಫಲಿತಾಂಶಗಳ ರುಚಿ ನೋಡಿದ ರಂಗ- ನಿರ್ಮಾಣ ರಂಗ. ಇಲ್ಲಿ ಎಷ್ಟೋ ಮಂದಿ ಕೆಲಸ ಮಾಡುತ್ತಿರುವಂತೆ ಕಂಡರೂ ಅಲ್ಲಿ ಮನುಷ್ಯರ ಆವಶ್ಯಕತೆ ತುಂಬಾ ತಗ್ಗಿ ಹೋಗಿರುವ ಮಾತು ವಾಸ್ತವ. ಕಳೆದ ನಲವತ್ತು ವರ್ಷಗಳಲ್ಲಿ ನಿರ್ಮಾಣ ರಂಗ ಬೆಳೆದಷ್ಟು ಪ್ರಮಾಣದಲ್ಲಿ ಕೂಲಿಗಳ ಬಳಕೆ ನಡೆಯಲಿಲ್ಲ. ಮುಖ್ಯವಾಗಿ ಸಿಮೆಂಟು, ಮರಳು ಮಿಕ್ಸಿಂಗ್ ಮಾಡುವ ಪ್ರಕ್ರಿಯೆ ಮತ್ತಿತರ ಕೆಲಸಗಳಿಗೆ ಯಂತ್ರಗಳನ್ನು ಬಳಸುತ್ತಿದ್ದಾರೆ. ಇದರ ಪರಿಣಾಮವಾಗಿ ಜೀವನೋಪಾಯವನ್ನು ಕಳೆದು ಕೊಳ್ಳುತ್ತಿರುವ ಸಾವಿರಾರು ಜನರ ಬದುಕು ದಿಕ್ಕೆಟ್ಟಿದೆ. ಇರುವ ಕಡೆ ಕೆಲಸ ಸಿಗದೇ, ಊರಿಗೆ ಊರೇ ಖಾಲಿ ಮಾಡಿ ವಲಸೆದಾರಿ ಹಿಡಿಯುತ್ತಿರುವ ಬಡವರ ಬದುಕುಗಳು ಬೇರೆಡೆಯೂ ಕೆಲಸ ಸಿಗದೆ ಕಂಗೆಟ್ಟಿದೆ.

ಬದುಕು ಭಾರವಾದ ಪ್ರಜೆಗಳಿಗೆ ಕನಿಷ್ಠ ಒಂದು ಹೊತ್ತಿನ ಆಹಾರ ಸಿಗಲು ಸಾಧ್ಯವಾಗುವಂತೆ ಉದ್ಯೋಗ ಭರವಸೆ ಯೋಜನೆ ತಂದರು. ಅದು ಸಹ ಭ್ರಷ್ಟಾಚಾರಮಯವಾಗಿ ಹೋಗಿದೆ. ಇದು ಶಾಶ್ವತ ಪರಿಹಾರವೂ ಅಲ್ಲ. ಪ್ರಜೆಗಳು ತಮ್ಮ ಕಾಲ ಮೇಲೆ ತಾವು ನಿಂತು ಬದುಕುವ ಪರಿಸ್ಥಿತಿಯನ್ನು ಕಲ್ಪಿಸಬೇಕು. ಪೆನ್ಷನ್‌ಗಳು, ರೂಪಾಯಿಗೆ ಕೆ.ಜಿ. ಅಕ್ಕಿಯಂತಹ ಯೋಜನೆಗಳು ಹಸಿವಿನಿಂದ ಒದ್ದಾಡದಂತೆ ಒಂದು ಭರವಸೆಯನ್ನೇನೋ ನೀಡುತ್ತಿವೆ. ಇವು ಬಡವರನ್ನು ಸಾಯದಂತೆ ಬದುಕಿಸುತ್ತಿವೆ. ಆದರೆ ಅವರ ಕಾಲುಗಳ ಮೇಲೆ ಧೃಡವಾಗಿ ನಿಲ್ಲುವ ಪರಿಸ್ಥಿತಿಯನ್ನು ಕಲ್ಪಿಸಲಾರವು.

ಇನ್ನೊಂದು ಕಡೆ ಈಗೀಗಷ್ಟೆ ಕೈಗಾರಿಕಾ ರಂಗದಲ್ಲಿ ಹೆಜ್ಜೆ ಇಡುತ್ತಿರುವ ಯುವಜನರ ಪರಿಸ್ಥಿತಿ ಮತ್ತಷ್ಟು ದಾರುಣವಾಗಿದೆ. ಹಿಂದಿನಂತೆ ಸಾಂಪ್ರದಾಯಿಕವಾಗಿ ಬರುವ ಆಫೀಸ್ ನೌಕರಿಗಳು, ಕೌಶಲ ಇಲ್ಲದ ಕೆಲಸಗಳ ಸ್ಥಾನದಲ್ಲಿ ಕಂಪ್ಯೂಟರ್‌ಗಳು, ಯಾಂತ್ರೀಕರಣ, ಆಧುನಿಕೀಕರಣ ಪ್ರವೇಶಿಸಿ ಸಾಮಾನ್ಯ ಡಿಗ್ರಿಗಳು, ಪಿಜಿಗಳು, ಪಿಎಚ್‌ಡಿಗಳು ಮಾಡಿದ ಲಕ್ಷಾಂತರ ಮಂದಿ ಅಗೋಚರವಾದ ಸ್ಥಿತಿಯಲ್ಲಿದ್ದಾರೆ.

ಕಂಪ್ಯೂಟರ್ ರಂಗ ಮೊದಲಿಗೆ ಎಷ್ಟೋ ಮಂದಿಗೆ ಆಶಾಕಿರಣದಂತೆ ಕಾಣಿಸಿತು. ಅದು ಸಹ ಮಸುಕಾಗುತ್ತಿದೆ. ಆಟೋಮೇಷನ್ ಇವತ್ತು ಒಂದು ಭೂತದಂತೆ ಬೇಟೆ ಆಡುತ್ತಿದೆ. ಪ್ರತಿದಿನವೂ ಕೆಲವು ನೂರುಮಂದಿ ಉದ್ಯೋಗಿಗಳು ಕಂಪ್ಯೂಟರ್ ರಂಗದಿಂದ ನಿರ್ಗಮಿಸುತ್ತಿದ್ದಾರೆ. ದೇಶದಲ್ಲಿನ ಉತ್ಪಾದನಾ ರಂಗದಲ್ಲಿ ಬರುವ ಯಾಂತ್ರೀಕರಣದಿಂದ ನೋವೇಕೆನ್ಸಿ ಬೋರ್ಡ್‌ಗಳು ನೇತಾಡುತ್ತಿವೆ. ಸೇವಾರಂಗ ಸಹ ಕ್ರಮೇಣ ಸ್ತಬ್ಧತೆಗೆ ಗುರಿಯಾಗುತ್ತಿದೆ. ಮೇಲಾಗಿ ದೇಶದಲ್ಲಿ ಶ್ರಮಿಸಬಲ್ಲ ಶಕ್ತಿ ಇರುವ ಯುವಜನರಲ್ಲಿ ಕೌಶಲ ಉಳ್ಳವರ ಸಂಖ್ಯೆ ಅತ್ಯಲ್ಪ. ನಮಗಿಂತ ಚಿಕ್ಕ ದೇಶವಾದ ದ. ಕೊರಿಯದಲ್ಲಿ ಕೌಶಲ ಉಳ್ಳ ಕಾರ್ಮಿಕರ ಸಂಖ್ಯೆ ಶೇ. 90, ಜಪಾನ್‌ನಲ್ಲಿ ಶೇ. 80, ಜರ್ಮನಿ ಶೇ. 75, ಬ್ರಿಟನ್ ಶೇ. 68, ಅವೆುರಿಕದಲ್ಲಿ ಶೇ. 52 ಇವೆ. ನಮ್ಮ ದೇಶದಲ್ಲಿ ಶ್ರಮಿಸಬಲ್ಲ ಶಕ್ತಿ ಇರುವವರು ವಿಶ್ವದ ಎಲ್ಲಾ ದೇಶಗಳೊಂದಿಗೆ ಹೋಲಿಸಿದರೆ ಶೇ. 28 ಇದ್ದಾರೆ. ಕೌಶಲ್ಯದ ಸ್ಥಾಯಿ ಮಾತ್ರ ಕೇವಲ ಶೇ. 4. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿಶ್ವವನ್ನು ಆಕ್ರಮಿಸುತ್ತಿರುವ ಸಮಯದಲ್ಲಿ ನಮ್ಮ ಯುವ ಜನತೆ ಕನಿಷ್ಠ ಕೌಶಲ್ಯದ ಹತ್ತಿರ ಸಹ ಇಲ್ಲ. ಇದು ಅಸಲೀ ಸಮಸ್ಯೆ.

ಯುವಜನತೆಯಲ್ಲಿ ವೃತ್ತಿ ಕೌಶಲ ಇಲ್ಲದೇ ಹೋಗುವುದಕ್ಕೆ ನಮ್ಮ ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ವಿದ್ಯೆಯಲ್ಲಿನ ಲೋಪಗಳು ಕಾರಣ. ನಾವು ಶಿಕ್ಷಣ ಎಂದರೆ ಕೇವಲ ಸಾಕ್ಷರತೆ ಎಂದು ಭ್ರಮಿಸುತ್ತಿದ್ದೇವೆ. ನಮ್ಮ ಪೂರ್ವಿಕರು ಕೋಟಿ ವಿದ್ಯೆಗಳೂ ಕೂಳಿಗೋಸ್ಕರವೇ ಅಂದರು. ಅಂದರೆ ಕೋಟಿಗಟ್ಟಲೆ ಓದುಗಳು ಎಂದಲ್ಲ. ಕೋಟಿ ಕೆಲಸಗಳು, ಅಂದರೆ ಯಾವುದೇ ಕೆಲಸವಾದರೂ ಹೊಟ್ಟೆಪಾಡಿಗೆ ಎಂದು ಅರ್ಥೈಸಬಹುದು. ಇವತ್ತು ವಿದ್ಯಾರ್ಥಿಗಳು ಎಷ್ಟು ಡಿಗ್ರಿಗಳ ಪಡೆದಿದ್ದರೂ ಅದರಲ್ಲಿ ವೃತ್ತಿ ಕೌಶಲಕ್ಕೆ ಜಾಗವಿಲ್ಲ. ಅದಕ್ಕೇ ನಮ್ಮ ಕೌಶಲ್ಯ ವೃತ್ತಿಗಳಿಗೆ ಶ್ರಮಕ್ಕೆ ದೂರವಾಗುತ್ತಿರುವ ತಾಯಿತಂದೆಯರು, ಅವರ ಹಿಂದೆಯೇ ಕೌಶಲ್ಯ ಇಲ್ಲದ ಡಿಗ್ರಿಗಳ ಹಿಡಿದುಕೊಂಡ ನಮ್ಮ ಯುವಪೀಳಿಗೆ ತಯಾರಾಗುತ್ತಲೇ ಇರುತ್ತಾರೆ.

ಈ ಪರಿಸ್ಥಿತಿಗಳನ್ನು ಬಳಸಿಕೊಂಡು ಕೆಲಮಂದಿ ಉದ್ಯಮಪತಿಗಳು, ಬಂಡವಾಳಗಾರರು ಇಡೀ ದೇಶದಲ್ಲಿನ ಸಹಜ ಸಂಪನ್ಮೂಲಗಳನ್ನು, ಸರಕಾರಿ ಖಜಾನೆಯನ್ನು ಲೂಟಿ ಮಾಡಿ ಅಲ್ಪಕಾಲದಲ್ಲೇ ಸಾವಿರಾರು ಕೋಟಿಗಳ ಒಡೆಯರಾಗುತ್ತಿದ್ದಾರೆ. ಅವರಿಗೆ ಆಗಲಿ, ಅವರನ್ನು ಪ್ರೋತ್ಸಾಹಿಸುತ್ತಿರುವ ಸರಕಾರಗಳಿಗೆ ಆಗಲಿ ದೇಶಸಂಪತ್ತಿನ ಅಭಿವೃದ್ಧಿಯೇ ಅಳತೆಗೋಲು.

ಆದರೆ ಕೋಟ್ಯಂತರ ಮಂದಿ ಪ್ರಜೆಗಳು ಶ್ರಮಕ್ಕೆ, ಸಂಪನ್ಮೂಲಗಳಿಗೆ, ಆಸ್ತಿಗೆ, ಆದಾಯಗಳಿಗೆ ದೂರವಾಗಿ ಪೆನ್ಷನ್‌ಗಳಿಂದ, ಇತರ ರೀತಿಯಲ್ಲಿ ಬರುವ ಹಣದಿಂದ ಪರಾಧೀನವಾದ ಬದುಕುಗಳನ್ನು ಸಾಗಿಸುತ್ತಿದ್ದಾರೆ. ಈ ಪರಿವರ್ತನೆ ಕ್ರಮೇಣ ಆಸ್ತಿಗಳು, ಆದಾಯಗಳು, ಸಂಪನ್ಮೂಲಗಳು ಎಲ್ಲ ವಿಧಗಳ ತಂತ್ರಜ್ಞಾನ ಪರಿಜ್ಞಾನದಲ್ಲಿ ಮನುಷ್ಯರ ನಿಮಿತ್ತ ಇಲ್ಲದೆ ಸಾಗುವ ಒಂದು ಕೇಂದ್ರೀಕೃತವಾದ ಅಭಿವೃದ್ಧಿಯತ್ತ ಪಯಣಿಸುತ್ತಿದೆ.

ದೇಶದ ಕೋಟ್ಯಂತರ ಮನುಷ್ಯರಿಗೆ ಹಸಿವೆಯಾದರೆ, ದಾಹವಾದರೆ ಸರಕಾರಗಳು ಕೆಲವು ಚಾರಿಟಿ ಸಂಸ್ಥೆಗಳತ್ತ ದೀನರಾಗಿ ನೋಡುವ ಪರಿಸ್ಥಿತಿ ಬರಲಿದೆ. ಪ್ರಜೆಗಳ ಮಧ್ಯೆ ಆರ್ಥಿಕ ಅಸಮಾನತೆಗಳು ದಿನದಿನಕ್ಕೂ ಹೆಚ್ಚಾಗುತ್ತಿವೆ. ಈ ಪರಿಸ್ಥಿತಿಗಳನ್ನು ಸಾಕಿ ಸಲಹುತ್ತಿರುವವರು ಹೇಗೋ ಇದನ್ನು ಸರಿಪಡಿಸುವುದಿಲ್ಲ. ಪ್ರಜೆಗಳೇ ಈ ಪರಿಸ್ಥಿತಿಗಳ ಕುರಿತು ಚಿಂತಿಸದಿದ್ದರೆ ಯಾರ್ಯಾರ ದಯೆ ದಾಕ್ಷಿಣ್ಯಗಳ ಮೇಲೋ ಆಧಾರಪಡಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ತಂತ್ರಜ್ಞಾನ ಯಂತ್ರಗಳು, ಬಂಡವಾಳಗಳು ಅಲ್ಲದೇ... ಮನುಷ್ಯರ ಭದ್ರತೆ, ಪ್ರಗತಿ, ರಕ್ಷಣೆ, ಆರೋಗ್ಯ ಕೇಂದ್ರ ಬಿಂದುಗಳಾಗಿ ಸಮಾಜ ಅಭಿವೃದ್ಧಿ ಹೊಂದುವಂತೆ ತಕ್ಷಣವೇ ಪ್ರಯತ್ನಗಳು ಆರಂಭವಾಗಬೇಕು.

(ಕೃಪೆ-ಸಾಕ್ಷಿ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)