varthabharthi


ಸಂಪಾದಕೀಯ

‘ಪ್ಲಾಸ್ಟಿಕ್ ನಿಷೇಧ’ ಅಗತ್ಯ, ಆದರೆ...

ವಾರ್ತಾ ಭಾರತಿ : 10 Sep, 2019

ಒಬ್ಬನಿಗೆ ಮಾರಕ ರೋಗ ಬಂದಿರುತ್ತದೆ. ಶಸ್ತ್ರಕ್ರಿಯೆ ಅನಿವಾರ್ಯ. ಆದರೆ ನುರಿತ ವೈದ್ಯನೊಬ್ಬ ಅನಿವಾರ್ಯ ಎಂದಾಕ್ಷಣ ಆತುರದಲ್ಲಿ ಒಮ್ಮೆಗೆ ಶಸ್ತ್ರಕ್ರಿಯೆಗೆ ಇಳಿಯುವುದಿಲ್ಲ. ಮೊದಲು ಆ ರೋಗದ ಆಳವನ್ನು ತಿಳಿದುಕೊಳ್ಳುತ್ತಾನೆ. ಮುಖ್ಯವಾಗಿ ಶಸ್ತ್ರಕ್ರಿಯೆಯನ್ನು ಆತನ ದೇಹ ತಾಳಿಕೊಳ್ಳಬಹುದೋ ಎನ್ನುವುದನ್ನು ಪರೀಕ್ಷಿಸುತ್ತಾನೆ. ಕೆಲವೊಮ್ಮೆ ಆತ ರೋಗದ ಕಾರಣಕ್ಕಿಂತ, ಶಸ್ತ್ರಕ್ರಿಯೆಯ ಕಾರಣದಿಂದಲೇ ಮೃತಪಡುವ ಸಾಧ್ಯತೆಗಳಿರುತ್ತವೆ. ಶಸ್ತ್ರಕ್ರಿಯೆಯಿಂದ ಆತನ ಇತರ ಅಂಗಗಳು ವಿಫಲಗೊಂಡು ರೋಗ ಇನ್ನಷ್ಟು ಉಲ್ಬಣಗೊಳ್ಳುವ ಅಪಾಯಗಳಿರುತ್ತವೆ. ರೋಗವನ್ನು ಗುಣ ಪಡಿಸುವ ಮಾರ್ಗಕ್ಕಿಂತಲೂ ರೋಗಿಯನ್ನು ಹೆಚ್ಚು ಕಾಲ ಬದುಕಿಸುವ ದಾರಿಯನ್ನು ವೈದ್ಯ ಹುಡುಕುತ್ತಾನೆ. ಆದರೆ ಆಗಷ್ಟೇ ಕಲಿತು ಬಂದ ಅರೆ ವೈದ್ಯ ಮಾತ್ರ ‘ತಕ್ಷಣ ರೋಗಿಯ ಶಸ್ತ್ರಕ್ರಿಯೆ’ಗೆ ಇಳಿದು ರೋಗಿಯ ಪರಿಸ್ಥಿತಿಯನ್ನು ಇನ್ನಷ್ಟು ಚಿಂತಾಜನಕ ಗೊಳಿಸುತ್ತಾನೆ. ಒಬ್ಬ ಅರೆವೈದ್ಯನಿಂದ ನಡೆದ ‘ನೋಟು ನಿಷೇಧ’ದ ಶಸ್ತ್ರಕ್ರಿಯೆಯಿಂದ ದೇಶ ಹೇಗೆ ತತ್ತರಿಸಿ ಕೂತಿತು ಎನ್ನುವುದನ್ನು ನಾವಿಂದು ನೋಡುತ್ತಿದ್ದೇವೆ. ಸ್ವತಃ ವೈದ್ಯನೂ ಅಲ್ಲದ, ಇತರ ನುರಿತ ಹಿರಿಯ ವೈದ್ಯರ ಸಲಹೆಯನ್ನೂ ಪಡೆಯದ ಪರಿಣಾಮ ಇದು.

‘ಕಪ್ಪು ಹಣ’ವನ್ನು ಹೊರತರುತ್ತೇನೆ ಎಂದು ಹೊರಟವರು ಅದರಲ್ಲಿ ವಿಫಲವಾದುದು ಮಾತ್ರವಲ್ಲ, ದೇಶದ ಆರ್ಥಿಕತೆಯ ಕಿಡ್ನಿ, ಲಿವರ್‌ಗಳಿಗೂ ಹಾನಿಯುಂಟು ಮಾಡಿದ್ದಾರೆ. ನೋಟು ನಿಷೇಧದ ಬೆನ್ನಿಗೇ ಅವರು ಜಾರಿಗೆ ತಂದ ತೆರಿಗೆ ಸುಧಾರಣೆ ರೋಗಿಯ ಪ್ರಾಣವನ್ನು ಇನ್ನಷ್ಟು ಅಪಾಯಕ್ಕೆ ದೂಡಿತು. ಜಿಎಸ್‌ಟಿಯಿಂದ ವ್ಯಾಪಾರ ಸುಗಮವಾಗುವ ಬದಲು, ಸಹಸ್ರಾರು ಜನರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತಹ ಸ್ಥಿತಿ ನಿರ್ಮಾಣವಾಯಿತು. ಈಗ ಮೋದಿಯವರು ಕೇಳಬಹುದು ‘‘ಹಾಗಾದರೆ ಕಪ್ಪು ಹಣಕ್ಕೆ ಕಡಿವಾಣ ಹಾಕಲು ಹೊರಟದ್ದು ತಪ್ಪೇ? ತೆರಿಗೆಯನ್ನು ಸುಲಭಗೊಳಿಸಲು ಮುಂದಾದುದು ತಪ್ಪೇ?’’. ಕಪ್ಪು ಹಣಕ್ಕೆ ಕಡಿವಾಣ ಹಾಕುವುದು, ತೆರಿಗೆಯಲ್ಲಿ ಸುಧಾರಣೆ ತರುವುದು ಎರಡೂ ದೇಶದ ಅಗತ್ಯವೇ ಆಗಿದೆ.

ಆದರೆ ಅದಕ್ಕಾಗಿ ನುರಿತ ಆರ್ಥಿಕ ತಜ್ಞರ ಸಲಹೆ, ಮಾರ್ಗದರ್ಶನಗಳನ್ನು ಮೊದಲು ಮೋದಿಯವರು ತಮ್ಮದಾಗಿಸಿಕೊಳ್ಳುವ ಅಗತ್ಯವಿತ್ತು. ಈ ದೇಶದ ಅರ್ಥವ್ಯವಸ್ಥೆಯ ಸೂಕ್ಷ್ಮಗಳನ್ನು ಅರಿತು ಶಸ್ತ್ರಕ್ರಿಯೆಗೆ ಇಳಿಯಬೇಕಾಗಿತ್ತು. ಇತ್ತೀಚೆಗೆ ಜಾರಿಗೆ ಬಂದ ಮೋಟರ್ ಕಾಯ್ದೆಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಆರ್ಥಿಕ ಸುಧಾರಣೆಗಳಿಂದ ಭಾರತದ ಉದ್ಯಮಗಳು ಒಂದೊಂದಾಗಿ ನೆಲ ಕಚ್ಚುತ್ತಿರುವ ಹೊತ್ತಿನಲ್ಲೇ, ‘ಪ್ಲಾಸ್ಟಿಕ್ ನಿಷೇಧ’ದ ದಂಡವನ್ನು ಕೈಗೆತ್ತಲು ಮೋದಿಯವರು ಸಿದ್ಧತೆ ನಡೆಸುತ್ತಿದ್ದಾರೆ. ಈ ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಹುದೊಡ್ಡ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ.

ಪ್ಲಾಸ್ಟಿಕ್ ತ್ಯಾಜ್ಯಗಳ ಬಳಕೆಯನ್ನು ಸಾರ್ವಜನಿಕರು ಅದೆಷ್ಟು ಬೇಜವಾಬ್ದಾರಿಯಾಗಿ ನಿರ್ವಹಿಸುತ್ತಿದ್ದಾರೆಂದರೆ, ಮುಂದಿನ ದಿನಗಳಲ್ಲಿ ನಮ್ಮ ಭೂಮಿಯ ಅರ್ಧ ಭಾಗವನ್ನು ಈ ಪ್ಲಾಸ್ಟಿಕ್ ತ್ಯಾಜ್ಯಗಳೇ ಆಹುತಿ ತೆಗೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆಯ ವಿರುದ್ಧ ತುರ್ತಾಗಿ ಕ್ರಮ ತೆಗೆದುಕೊಳ್ಳುವ ಅಗತ್ಯವಂತೂ ಇದ್ದೇ ಇದೆ. ಆದರೆ ಪ್ಲಾಸ್ಟಿಕ್ ಉದ್ಯಮ ಕೂಡ, ದೇಶದ ಆರ್ಥಿಕ ವ್ಯವಹಾರಗಳಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿದೆ. ಮತ್ತು ಸದ್ಯ ಒಂದೊಂದೇ ಉದ್ಯಮಗಳು ಕುಸಿಯುತ್ತಿರುವ ಈ ದಿನಗಳಲ್ಲಿ ಮೋದಿಯವರು ಅವರು ಪ್ಲಾಸ್ಟಿಕ್ ವಿರುದ್ಧ ತೆಗೆದುಕೊಳ್ಳಬಹುದಾದ ನಿರ್ಧಾರ ದೇಶದ ಆರ್ಥಿಕ ಹಿಂಜರಿತದ ಮೇಲೆ ಇನ್ನಷ್ಟು ದುಷ್ಪರಿಣಾಮಗಳನ್ನು ಬೀರುವ ಎಲ್ಲ ಸಾಧ್ಯತೆಗಳಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಈ ದೇಶದ ಪರಿಸರ ರಕ್ಷಣೆ ತುರ್ತು ಅಗತ್ಯವೇ ಆಗಿದ್ದರೂ, ಆ ಕುರಿತಂತೆ ಕಾನೂನು ಜಾರಿಗೊಳಿಸಲು ವಾತಾವರಣ ಸೂಕ್ತವಾಗಿಲ್ಲ ಎನ್ನುವುದು ಅವರ ನಿಲುವಾಗಿದೆ.

 ಪ್ರಧಾನಿ ಮೋದಿ ಸದ್ಯ ತಮ್ಮ ದೃಷ್ಟಿಯನ್ನು ಒಮ್ಮೆ ಬಳಸಬಹುದಾದ ಪ್ಲಾಸ್ಟಿಕ್ ಮೇಲೆ ನೆಟ್ಟಿದ್ದು, ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ಚೀಲಗಳು, ಕಪ್, ಪ್ಲೇಟ್, ಸಣ್ಣ ಬಾಟಲಿ, ಸ್ಟ್ರಾ, ಇತರ ಕೆಲವೊಂದು ಸಣ್ಣ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಘೋಷಿಸುವ ಮೂಲಕ ಪ್ಲಾಸ್ಟಿಕ್ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಈ ಅಭಿಯಾನ ಮೋದಿಯ ಅಪ್ಪಟ ಅಭಿಮಾನಿಗಳು ಮಾತ್ರವಲ್ಲದೆ ಅವರ ಎಡ ವಿರೋಧಿಗಳು ಮತ್ತು ಯಾವುದೇ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧ ಹೊಂದಿರುವ ಸಾಮಾನ್ಯ ಜನರಿಂದಲೂ ಶ್ಲಾಘನೆಗೆ ಒಳಗಾಗುವುದು ಖಚಿತ. ಆದರೆ ಇದು ತಕ್ಷಣಕ್ಕೆ ಸೃಷ್ಟಿಸುವ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಹೋದರೆ ದೇಶ ಇನ್ನಷ್ಟು ಅವಾಂತರಗಳಿಗೆ ಸಾಕ್ಷಿಯಾಗಬೇಕಾಗುತ್ತದೆ.

ನಿಷೇಧದ ನಿಯಮಗಳನ್ನು ಗಮನಿಸಿದರೆ,ಪ್ಲಾಸ್ಟಿಕ್ ಉದ್ಯಮದಲ್ಲಿ ಸದ್ಯದ ಹೂಡಿಕೆ, ಯಂತ್ರಗಳು, ವ್ಯವಹಾರ ಪ್ರಕ್ರಿಯೆ ಮತ್ತು ಉದ್ಯೋಗ ಭಾರೀ ಪ್ರಮಾಣದಲ್ಲಿ ನಷ್ಟವಾಗಲಿವೆ. ಉದ್ದಿಮೆಗಳು ಉಪಯೋಗವಿಲ್ಲದ ಸಾಧನಗಳನ್ನು ಹೊಂದಿರುವ ಕಾರಣ ಹಳೆಯ ಯಂತ್ರಗಳನ್ನು ಬದಲಾಯಿಸಲು ಹೆಚ್ಚುವರಿ ವೆಚ್ಚ ಭರಿಸಬೇಕಾಗುತ್ತದೆ. ಬೃಹತ್ ಕಂಪೆನಿಗಳು ಅಗತ್ಯವಿರುವ ಹೆಚ್ಚಿನ ಬಂಡವಾಳವನ್ನು ಹೂಡಲು ಸಮರ್ಥವಾಗಿರಬಹುದು. ಆದರೆ ಮಧ್ಯಮ ಮತ್ತು ಸಣ್ಣ ಉದ್ಯಮದಾರರಿಗೆ ಇದು ಕಷ್ಟವಾಗಬಹುದು. ದೇಶಾದ್ಯಂತವಿರುವ ಸಹಸ್ರಾರು ಸಣ್ಣ ಪ್ಲಾಸ್ಟಿಕ್ ತಯಾರಿಕಾ ಘಟಕಗಳನ್ನು ಮುಚ್ಚಬೇಕಾಗುತ್ತದೆ ಮತ್ತು ಇದನ್ನು ಅವಲಂಬಿಸಿರುವ ಉದ್ಯೋಗ ಸರಪಣಿಗಳೂ ಕತ್ತರಿಸಲ್ಪಡುತ್ತವೆ. ಬಿದ್ದು ಹೋಗಿರುವ ಆರ್ಥಿಕತೆಯ ಮೇಲೆ ಇದು ಇನ್ನಷ್ಟು ಆಘಾತವನ್ನು ಮಾಡಬಹುದು. ಸಹಸ್ರಾರು ಮಂದಿ ಈ ಕಾರಣದಿಂದ ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ. ಮಗದೊಂದೆಡೆ, ಪ್ಲಾಸ್ಟಿಕ್ ಚೀಲಗಳ ನಿಷೇಧ ಸಣ್ಣ ವ್ಯಾಪಾರಿಗಳ ಮೇಲೆಯೂ ನೇರ ಪರಿಣಾಮವನ್ನು ಬೀರಲಿದೆ. ಮುಖ್ಯವಾಗಿ ಮೀನು, ಮಾಂಸ ಮತ್ತು ಹೊಟೇಲು ಆಹಾರ ಪೂರೈಕೆಗಳಿಗೆ ತೊಡಕಾಗಲಿದೆ.

ವ್ಯಾಪಾರ ವಹಿವಾಟುಗಳಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆಗಳಿವೆ. ಪ್ಲಾಸ್ಟಿಕ್ ನಿಷೇಧದ ಹೊರೆಯ ಭಾರಕ್ಕೆ ಬಡವರ ಆರ್ಥಿಕ ಬೆನ್ನುಮೂಳೆ ಮುರಿಯಲಿದೆ. ಅನೇಕ ದಿನಬಳಕೆಯ ಮತ್ತು ಅಗತ್ಯದ ವಸ್ತುಗಳನ್ನು ಕಡಿಮೆ ವೆಚ್ಚದ ಪ್ಲಾಸ್ಟಿಕ್‌ನಿಂದ ಪ್ಯಾಕ್ ಮಾಡಲಾಗಿರುತ್ತದೆ. ಆದುದರಿಂದ ಅವುಗಳು ಬಡವರಿಗೆ ಕೈಗೆಟಕುವ ದರದಲ್ಲಿ ಸಿಗುತ್ತಿವೆ. ಹಾಲು ಮತ್ತು ಬಿಸ್ಕತ್ ಪ್ಯಾಕೆಟ್, ಪ್ರಸಾದನ ಸಾಮಗ್ರಿಗಳು ಇವುಗಳಲ್ಲಿ ಸೇರಿವೆ. ಸೂಪರ್ ಮಾರ್ಕೆಟ್‌ಗಳು ನಿಮಗೆ ಬಟ್ಟೆ ಚೀಲಗಳಿಗೆ 15ರೂ. ದರ ವಿಧಿಸಲು ಸಾಧ್ಯವಾದರೆ ಹಣ್ಣು ಮತ್ತು ತರಕಾರಿ ಮಾರುವ ಬೀದಿ ವ್ಯಾಪಾರಿಗಳು ಹಾಗೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ವಿರುದ್ಧವಾಗಿ, ನಮ್ಮದೇ ಸ್ವಂತ ಚೀಲಗಳನ್ನು ತರಬೇಕೆಂಬ ಹೆಚ್ಚುವರಿ ತೊಂದರೆ ಸಣ್ಣ ವ್ಯಾಪಾರಿಗಳ ವಿರುದ್ಧವೇ ಕೆಲಸ ಮಾಡಲಿದೆ. ಭಾರತೀಯ ಆದಾಯದಲ್ಲಿ ನಾವು ಪಾಶ್ಚಾತ್ಯ ಜೀವನ ಅನುಸರಿಸಲು ಬಯಸಿದಾಗ ಅದರ ಹೆಚ್ಚುವರಿ ಆರ್ಥಿಕ ವೆಚ್ಚವನ್ನು ಬಡವರು ಹೊರಬೇಕಾಗುತ್ತದೆ. ಸದ್ಯ ನಾವು ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎನ್ನುವುದು ಮೋದಿ ಸರಕಾರದ ನೀತಿನಿರೂಪಕರ ತಲೆಯಲ್ಲಿರಬೇಕು. ಒಮ್ಮೆ ಬಳಸುವ ಪ್ಲಾಸ್ಟಿಕ್ ನಿಷೇಧವು ಉತ್ತಮ ವಿಷಯವಾಗಿದ್ದರೂ ಅದನ್ನು ಜಾರಿಗೆ ತರಲು ಇದು ಸಕಾಲವೇ? ಸರಕಾರ ಈ ಪ್ರಶ್ನೆಯನ್ನು ಇನ್ನೊಮ್ಮೆ ತನಗೆ ತಾನೇ ಕೇಳಿಕೊಳ್ಳಬೇಕು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)