varthabharthi


ಬೆಂಗಳೂರು

ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರ ಘೋಷಣೆ

ಬೆಂಗಳೂರು: ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ಒಕ್ಕಲಿಗ ಸಂಘಟನೆಗಳ ಪ್ರತಿಭಟನೆ

ವಾರ್ತಾ ಭಾರತಿ : 11 Sep, 2019

►ಕಾಂಗ್ರೆಸ್, ಜೆಡಿಎಸ್, ಕನ್ನಡ ಪರ ಸಂಘಟನೆಗಳು ಭಾಗಿ

ಬೆಂಗಳೂರು, ಸೆ.11: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಒಕ್ಕಲಿಗ ಸಂಘಟನೆಗಳು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.

ಡಿ.ಕೆ.ಶಿವಕುಮಾರ್‌ರನ್ನು ಬಂಧಿಸಿರುವುದು ಖಂಡಿಸಿ ಆಕ್ರೋಶಗೊಂಡ ಪ್ರತಿಭಟನಾಕಾರರು ಬೆಳಗ್ಗೆಯಿಂದಲೇ ರಾಜ್ಯದ ಮೂಲೆ ಮೂಲೆಗಳಿಂದ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜಮಾಯಿಸಿದ್ದರು. ಈ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ, ಧೃತಿಗೆಡಬೇಡಿ ಎಂಬ ಸಂದೇಶ ರವಾನಿಸಿದರು. ನಂತರ ಸ್ವಾತಂತ್ರ ಉದ್ಯಾನದವರೆಗೂ ಬೃಹತ್ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೇಂದ್ರ ಸರಕಾರದ ದ್ವೇಷದ ರಾಜಕಾರಣದ ವಿರುದ್ಧ ದಿನೇ ದಿನೇ ಜನ ದಂಗೆ ಏಳುತ್ತಿದ್ದಾರೆ. ಇಂದು ಮೊದಲ ಹಂತದಲ್ಲಿ ಒಕ್ಕಲಿಗ ಸಮುದಾಯ ತಿರುಗಿ ಬಿದ್ದಿದೆ. ಬಿಜೆಪಿ ಸೇರಿದವರು ಒಳ್ಳೆಯವರಾಗುತ್ತಾರೆ. ವಿರೋಧ ಪಕ್ಷದಲ್ಲಿರುವವರು ಕೆಟ್ಟವರಾಗಿದ್ದಾರೆ. ಬಿಜೆಪಿ ನಾಯಕರು ತಮ್ಮ ಸಿದ್ಧಾಂತವನ್ನು ಒಪ್ಪದವರ ವಿರುದ್ದ ರಾಜಕೀಯ ದ್ವೇಷ ಮಾಡುತ್ತಿದೆ ಎಂದು ಆಪಾದಿಸಿದರು.

ಚಿದಂಬರಂ ಮತ್ತು ಡಿ.ಕೆ.ಶಿವಕುಮಾರ್ ಅವರ ಮೇಲೆ ರಾಜಕೀಯ ದ್ವೇಷದಿಂದಲೇ ಈ ಕೆಲಸ ಮಾಡಲಾಗಿದೆ. ಇದು ಜನರಿಗೆ ಅರ್ಥವಾಗಿದೆ. ಡಿ.ಕೆ.ಶಿ ಅವರ ತಾಯಿ, ಮಗಳು, ಬಂಧು-ಬಳಗದವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಈ ರೀತಿಯ ಹೇಡಿ ರಾಜಕಾರಣವನ್ನು ಜನ ಸಹಿಸುವುದಿಲ್ಲ ಎಂದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಗುಜರಾತ್ ಶಾಸಕರಿಗೆ ರಕ್ಷಣೆ ಕೊಟ್ಟ ನಂತರದ ದಿನಗಳಿಂದಲೂ ಕೇಂದ್ರ ಸರಕಾರ ಡಿಕೆಶಿ ವಿರುದ್ದ ದ್ವೇಷ ಸಾಧಿಸುತ್ತಿತ್ತು. ಅವರನ್ನು ಬಲವಂತವಾಗಿ ಬಿಜೆಪಿಗೆ ಪಕ್ಷಾಂತರ ಮಾಡಿಸುವ ಪ್ರಯತ್ನಗಳನ್ನು ಮಾಡಿದ್ದರು ಎಂದು ಹೇಳಿದರು.

ಡಿಕೆಶಿ ಬಿಜೆಪಿ ಸೇರಲು ಒಪ್ಪದಿದ್ದರಿಂದ ಬಲವಂತವಾಗಿ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಒತ್ತಡದ ತಂತ್ರ ಅನುಸರಿಸಲಾಗುತ್ತಿದೆ. ನಮಗೆ ಕಾನೂನಿನ ಮೇಲೆ ನಂಬಿಕೆಯಿದೆ. ಡಿ.ಕೆ.ಶಿವಕುಮಾರ್ ಸಂಕಷ್ಟ ಪರಿಹಾರವಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಸಂಚಾರ ದಟ್ಟಣೆ: ನಗರದ ಬಸವನಗುಡಿಯಿಂದ ಸ್ವಾತಂತ್ರ ಉದ್ಯಾನದವರೆಗೂ 50 ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯುಂಟಾಗಿತ್ತು. ಬಿಎಂಟಿಸಿ, ಆಟೋ, ಬಸ್, ದ್ವಿಚಕ್ರ ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ನೌಕರರಿಗೆ ತೊಂದರೆ: ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಬಹುಮಹಡಿಗಳ ಕಟ್ಟಡ, ಸಿವಿಲ್ ನ್ಯಾಯಾಲಯ ಸೇರಿದಂತೆ ವಿವಿಧ ಸರಕಾರಿ, ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ನೌಕರರಿಗೆ ಪ್ರತಿಭಟನೆಯ ಬಿಸಿ ತಟ್ಟಿತು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೃಷ್ಣಭೈರೇಗೌಡ, ಚಲುವರಾಯಸ್ವಾಮಿ, ಶಾಸಕಿ ಸೌಮ್ಯರೆಡ್ಡಿ, ಮಾಜಿ ಶಾಸಕ ಬಾಲಕೃಷ್ಣ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಹಲವರಿದ್ದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಿಸಿ ಒಕ್ಕಲಿಗರು ಪ್ರತಿಭಟನೆ ನಡೆಸಿರುವುದು ತಪ್ಪು. ಇಂತಹ ವಿಷಯದಲ್ಲಿ ಜಾತಿ, ಸಮುದಾಯದ ನಡುವೆ ಗೊಂದಲ ಮಾಡಬಾರದು. ಬಿಜೆಪಿ ದ್ವೇಷದ ರಾಜಕಾರಣ ಮಾಡುವುದಿಲ್ಲ. ಅವರವರು ಮಾಡಿದ್ದು ಅವರು ಅನುಭವಿಸುತ್ತಾರೆ. ಸುಮ್ಮನೆ ಎಲ್ಲದ್ದಕ್ಕೂ ರಾಜಕೀಯ ಬಣ್ಣ ಹಚ್ಚಬಾರದು.

-ಬಿ.ಎನ್.ಬಚ್ಚೇಗೌಡ, ಸಂಸದ

ಸತ್ಯವಂತರಿಗೆ ಇದು ಕಾಲವಲ್ಲ. ಕೆಲ ಸಂದರ್ಭಗಳಲ್ಲಿ ಸತ್ಯ ಹೇಳಿದರೆ ಅದು ಅಪಥ್ಯವಾಗುತ್ತದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು, ಉಪ್ಪು ತಿಂದವರು ನೀರು ಕುಡಿಯಬೇಕು. ಅದರಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಂಬುದು ಇಲ್ಲ. ಜಾರಿ ನಿರ್ದೇಶನಾಲಯಕ್ಕೆ ಯಾವ ಜಾತಿ ಇದೆ, ಯಾವ ಪಕ್ಷಕ್ಕೆ ಸೇರಿದೆ. ಈ ಸಂಸ್ಥೆಯನ್ನು ಹುಟ್ಟುಹಾಕಿದವರು ಯಾರು, ತನಿಖೆ ಮಾಡುವುದು ತಪ್ಪು ಎಂದರೆ ಹೇಗೆ.

-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

ಡಿ.ಕೆ.ಶಿ.ಗಾಗಿ ಕಾನೂನು ಬದಲಿಸಲು ಸಾಧ್ಯವಿಲ್ಲ

ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರಿಗೋಸ್ಕರ ಈ ದೇಶದ ಕಾನೂನು ಬದಲಿಸಲು ಸಾಧ್ಯವಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದಾಗ ಯಡಿಯೂರಪ್ಪ ಹಾಗೂ ಜನಾರ್ದನರೆಡ್ಡಿಯನ್ನು ಬಂಧಿಸಿದಾಗ ನಾವು ಕಾನೂನು ಬದಲಿಸಿರಲಿಲ್ಲ ಎಂದು ಅಶೋಕ್ ಹೇಳಿದರು.

ಆಗ ಜನಾರ್ದನರೆಡ್ಡಿ, ಶಿವಕುಮಾರ್ ಸ್ನೇಹಿತರಾಗಿದ್ದರು. ಅವರಿಗೆ ಗೊತ್ತಿರಬೇಕು, ಸುಮ್ಮನೆ ಬಂಧಿಸಿಲ್ಲ. ತಪ್ಪು ಮಾಡದೆ ಇದ್ದರೆ ನ್ಯಾಯಾಲಯ ಇದೆ. ಅಲ್ಲಿ ತಪ್ಪಿತಸ್ಥ ಅಲ್ಲ ಎಂಬುದು ಸಾಬೀತು ಮಾಡಿ, ಆರಾಮವಾಗಿ ಓಡಾಡಿಕೊಂಡಿರಲಿ. ಯಡಿಯೂರಪ್ಪ ಬಂದಿಸಿದಾಗ ಕಾನೂನು ಇವರಿಗೆ ಅಡ್ಡಿ ಬರಲ್ಲ, ಶಿವಕುಮಾರ್ ಬಂಧಿಸಿದರೆ ಪ್ರತಿಭಟನೆ ಮಾಡುತ್ತಾರೆ. ಜಾತಿಯ ಹೆಸರಿನಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. ನಾಳೆ ಎಲ್ಲ ಜಾತಿಯವರು ಇದನ್ನೆ ಪ್ರಾರಂಭ ಮಾಡುತ್ತಾರೆ ಎಂದು ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)