varthabharthi


ಬೆಂಗಳೂರು

ಹುತಾತ್ಮ ಅರಣ್ಯ ಸಿಬ್ಬಂದಿ ಪರಿಹಾರ 30 ಲಕ್ಷಕ್ಕೆ ಹೆಚ್ಚಳ: ಮುಖ್ಯಮಂತ್ರಿ ಯಡಿಯೂರಪ್ಪ

ವಾರ್ತಾ ಭಾರತಿ : 11 Sep, 2019

ಬೆಂಗಳೂರು: ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗುವ ಅರಣ್ಯ ಇಲಾಖೆ ಸಿಬ್ಬಂದಿ ಕುಟುಂಬಗಳಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು 20 ಲಕ್ಷ ರೂ. ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

ಅವರು ಇಂದು ನಗರದ ಅರಣ್ಯ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಅರಣ್ಯ ಸಿಬ್ಬಂದಿಗೆ ಗೌರವ ಸಲ್ಲಿಸಿದ ನಂತರ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ. 22ರಷ್ಟು ಅರಣ್ಯ ಪ್ರದೇಶ ಇರುವುದು ನೆಮ್ಮದಿ ನೀಡುವ ವಿಚಾರ. ಇದಕ್ಕಾಗಿ ಹಗಲಿರುಳು ಶ್ರಮಿಸುವ ಅರಣ್ಯ ಸಿಬ್ಬಂದಿಯ ಕಾಯಕ ಶ್ಲಾಘನೀಯ ಎಂದು ತಿಳಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯದಲ್ಲಿರುವಾಗ ಮೃತಪಟ್ಟರೆ ನೀಡುವ ಪರಿಹಾರ ಮೊತ್ತವನ್ನು ಪೊಲೀಸ್ ಇಲಾಖೆಗೆ ಸರಿ ಸಮನಾಗಿ ಹೆಚ್ಚಿಸುವು ದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಅಲ್ಲದೆ, ಹುತಾತ್ಮರ ಕುಟುಂಬಗಳ ಕ್ಷೇಮಾಭಿವೃದ್ಧಿಗೂ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ದಿನಗೂಲಿ ನೌಕರರ ಸಮಸ್ಯೆ ಕುರಿತು ಸಹ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿ ಸರ್ವೋಚ್ಛ ತ್ಯಾಗವನ್ನು ಮಾಡಿದಂತಹ ಸಮರ್ಪಣಾ ಮನೋಭಾವದ ಹಲವಾರು ಅರಣ್ಯ ಅಧಿಕಾರಿಗಳ ಹೆಸರುಗಳು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಇಂದಿಗೂ ಹಚ್ಚಹಸಿರಾಗಿ ರಾರಾಜಿಸುತ್ತಿವೆ. ಇವರ ಅಸಾಧಾರಣ ಪ್ರಯತ್ನಗಳು, ಧೈರ್ಯಶೀಲ ಕಾರ್ಯಗಳು ಅಪಾಯಕ್ಕೆ ಒಳಗಾದ, ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ವನ್ಯ ಜೀವಿಗಳನ್ನು ಸಂರಕ್ಷಿಸಿ ಕಾಪಾಡಲು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದೆ ಎಂದು ಮುಖ್ಯಮಂತ್ರಿ ಗಳು ಬಣ್ಣಿಸಿದರು.

ಈ ಹಿಂದೆ ಕುಖ್ಯಾತ ಕಾಡುಗಳ್ಳ ವೀರಪ್ಪನ್‍ನ ಮೋಸದ ಬಲೆಗೆ ಸಿಲುಕಿ  ಶ್ರೀ ಪಿ. ಶ್ರೀನಿವಾಸ್, ಭಾರತೀಯ ಅರಣ್ಯ ಸೇವಾ ಅಧಿಕಾರಿ ಇವರು ಹುತಾತ್ಮರಾಗಿದ್ದರು. ಇವರು ಸಹ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಇವರ ಕಾರ್ಯದಕ್ಷತೆ ಪ್ರಾಮಾಣಿಕತೆ ಹಾಗೂ ಅಮೋಘ ಸೇವೆಯನ್ನು ಮೆಚ್ಚಿ ಭಾರತ ಸರ್ಕಾರ ಇವರಿಗೆ “ಕೀರ್ತಿ ಚಕ್ರ” ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿರುವುದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಸಂದೀಪ್ ದವೆ , ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನ ಟಿ ಶ್ರೀಧರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)