varthabharthi


ರಾಷ್ಟ್ರೀಯ

ಮಾಜಿ ಕಾಂಗ್ರೆಸ್ ಅಭ್ಯರ್ಥಿಯ ಆರೋಪ

ನಾಮಪತ್ರ ಹಿಂಪಡೆಯಲು ಬಿಜೆಪಿ ನಾಯಕ ರಮಣ್ ಸಿಂಗ್, ಅಜಿತ್ ಜೋಗಿಯಿಂದ 7 ಕೋಟಿ ರೂ. ಡೀಲ್

ವಾರ್ತಾ ಭಾರತಿ : 11 Sep, 2019

ಭೋಪಾಲ್, ಸೆ.11:  ಛತ್ತೀಸಗಢದ ಅಂತಘರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಿಂದ ಹಿಂದೆ ಸರಿದು ಐದು ವರ್ಷಗಳ ನಂತರ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಮಂತುರಾಮ್ ಪವಾರ್ ಅವರು ಸ್ಫೋಟಕ ಮಾಹಿತಿ ಹೊರಗೆಡಹಿದ್ದು, ಆಗಿನ ಮುಖ್ಯಮಂತ್ರಿ ರಮಣ್ ಸಿಂಗ್, ಮಾಜಿ ಸಿಎಂ ಅಜಿತ್ ಜೋಗಿ, ಪುತ್ರ ಅಮಿತ್ ಜೋಗಿ ಮತ್ತಿತರರು ಚುನಾವಣೆಯ ಮೇಲೆ ಪ್ರಭಾವ ಬೀರಲು ಹಾಗೂ ತನ್ನ  ನಾಮಪತ್ರ ವಾಪಸ್ ಪಡೆಯಲು 7 ಕೋಟಿ ರೂ.  ಮೊತ್ತದ ಡೀಲ್ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಆಗ ಕಣದಲ್ಲಿದ್ದ 12 ಅಭ್ಯರ್ಥಿಗಳಲ್ಲಿ ಮಂತುರಾಮ್ ಒಬ್ಬರಾಗಿದ್ದರೂ ಕೊನೇ ಕ್ಷಣದಲ್ಲಿ ಕಣದಿಂದ ವಾಪಸ್ ಸರಿದ ಕಾರಣ ಬಿಜೆಪಿಯ ಭೋಜರಾಜ್ ನಾಗ್ ಅವರಿಗೆ ಸುಲಭದ ಜಯ ದೊರಕಿತ್ತು. ಮಂತುರಾಂ ನಂತರ ಆಗಿನ ಆಡಳಿತ ಬಿಜೆಪಿ ಪಕ್ಷಕ್ಕೆ ಸೇರಿದ್ದರು. ರಾಜ್ಯದಲ್ಲಿ ಈಗ ವಿಪಕ್ಷವಾಗಿರುವ ಬಿಜೆಪಿ ಮಂತುರಾಮ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಮಂಗಳವಾರ ಪಕ್ಷದಿಂದ ವಜಾಗೊಳಿಸಿದೆ.

ಕಳೆದ ಶನಿವಾರ ಮಂತುರಾಮ್ ಅವರು ರಾಯಪುರ್ ನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 164 ಅನ್ವಯ ಪ್ರಕರಣ ದಾಖಲಿಸಿ ರಮಣ್ ಸಿಂಗ್, ಆಗಿನ ಪಿಡಬ್ಲ್ಯುಡಿ ಸಚಿವ ರಾಜೇಶ್ ಮುನತ್, ಮಾಜಿ ಸಿಎಂ ಅಜಿತ್ ಜೋಗಿ, ಅವರ ಪುತ್ರ ಅಮಿತ್ ಮತ್ತಿತರರು ತನ್ನ ನಾಮಪತ್ರ ವಾಪಸ್ ಪಡೆಯುವಂತೆ ಬಲವಂತ ಪಡಿಸಿದ್ದರೆಂದು ಆರೋಪಿಸಿದ್ದಾರೆ.

ಆಗಿನ ಪಿಡಬ್ಲ್ಯುಡಿ ಸಚಿವರ ನಿವಾಸದಲ್ಲಿ ಈ 7 ಕೋಟಿ ರೂ. ಡೀಲ್ ಗೆ ಬರಲಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಡೀಲ್ ನಂತೆ 7 ಕೋಟಿ ರೂ.ಗಳನ್ನು ಆಗಿನ ಸಚಿವ ಕಾಂಗ್ರೆಸ್ ನಾಯಕ ಫಿರೋಝ್ ಸಿದ್ದೀಕ್ ಗೆ ಹಸ್ತಾಂತರಿಸಿದ್ದರು ಹಾಗೂ ಇದರಲ್ಲಿ ನನಗೆ ನಯಾ ಪೈಸೆ ದೊರಕಿಲ್ಲ, ನನ್ನ ಆಸ್ತಿ ಹಾಗೂ ಸಂಪತ್ತಿನ ತನಿಖೆಗೂ ಸಿದ್ಧ ಎಂದಿದ್ದಾರೆ.

ತಮ್ಮ ಹೇಳಿಕೆ ದಾಖಲಿಸಿಕೊಂಡ ನಂತರ ಅವರು ತಮ್ಮ ಹಾಗೂ ತಮ್ಮ ಕುಟುಂಬದ  ಜೀವಕ್ಕೆ ಅಪಾಯವಿದೆ ಎಂದು ದೂರಿದ್ದರಿಂದ  ಅವರಿಗೆ ರಕ್ಷಣೆಯೊದಗಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)