varthabharthi

ವಿಶೇಷ-ವರದಿಗಳು

ಪಿಎಸ್‌ಐ ಪರೀಕ್ಷೆಯಲ್ಲಿ 49ನೇ ಸ್ಥಾನ ಪಡೆದ ಭಟ್ಕಳದ ಮುಶಾಹಿದ್ ಅಹ್ಮದ್ ಶೇಖ್

ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಲು ಬಾಲ್ಯದಿಂದಲೇ ರ‍್ಯಾಂಕ್ ವಿಜೇತರಾಗಿರಬೇಕಾಗಿಲ್ಲ

ವಾರ್ತಾ ಭಾರತಿ : 11 Sep, 2019
ಸಂದರ್ಶನ: ಇಸ್ಮಾಯಿಲ್ ಝೌರೇಝ್

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನವಾಯತ ಮುಸ್ಲಿಮರಲ್ಲಿ ಲಾಗಾಯ್ತಿನಿಂದಲೂ ವ್ಯಾಪಾರ ಮತ್ತು ಉದ್ಯಮದತ್ತ ಒಲವು ಹೊಂದಿರುವವರೇ ಹೆಚ್ಚು. ಈಗ ಈ ಸಮುದಾಯದ ಮುಶಾಹಿದ್ ಅಹ್ಮದ್ ಶೇಖ್ ಅವರು ಕರ್ನಾಟಕ ಪಿಎಸ್‌ಐ (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ) ಪರೀಕ್ಷೆಯಲ್ಲಿ 49ನೇ  ಸ್ಥಾನ ಪಡೆದು  ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಬಿ.ಟೆಕ್(ಆರ್ಕಿಟೆಕ್ಟ್) ಪದವೀಧರರಾಗಿರುವ ಮುಶಾಹಿದ್  ಅವರು ತಮ್ಮ ಈ ಸಾಧನೆ ಬಗ್ಗೆ ‘ವಾರ್ತಾ ಭಾರತಿ’ ಜೊತೆ ಮಾತಾಡಿದ್ದಾರೆ. 

►ನಿಮ್ಮ ಬಾಲ್ಯ ಮತ್ತು ನಿಮ್ಮ ಶಿಕ್ಷಣದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿ

ನಾನು ಭಟ್ಕಳದಲ್ಲಿ 1992ರಲ್ಲಿ ಜನಿಸಿದ್ದು, ತಂದೆ ಹೊನ್ನಾವರದ ವಲ್ಕಿ ಮೂಲದವರು, ತಾಯಿ ಭಟ್ಕಳದವರು. ನಾನು ಪ್ರಾಥಮಿಕ ಶಿಕ್ಷಣ ಪಡೆದದ್ದು ಭಟ್ಕಳದ ಶಮ್ಸ್ ಮತ್ತು ಆನಂದಾಶ್ರಮ ಕಾನ್ವೆಂಟ್ ಶಾಲೆಗಳಲ್ಲಿ. ಶಾಲಾದಿನಗಳಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದ ನಾನು ಎಸೆಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಸಫಲನಾದೆ. ಪಿಯುಸಿಗಾಗಿ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜು ಸೇರಿದೆ. ಬೆಂಗಳೂರಿನ ಎಂ ಎಸ್ ರಾಮಯ್ಯ ಕಾಲೇಜಿನಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ ಬಳಿಕ ನಾಗರಿಕ ಸೇವೆಗೆ ಸೇರಲು ನಿರ್ಧರಿಸಿ ಅದಕ್ಕಾಗಿ ತಯಾರಿ  ಆರಂಭಿಸಿದೆ.

►ನೀವು ಪೊಲೀಸ್ ಸೇವೆಯತ್ತ ಒಲವು ಬೆಳೆಸಿಕೊಳ್ಳಲು ಕಾರಣವೇನು?

ನನ್ನ ತಂದೆ ಸೇನೆಯಲ್ಲಿ ಸಲ್ಲಿಸಿದ್ದ ಸೇವೆ ನನಗೆ ಅತ್ಯಂತ ಸ್ಫೂರ್ತಿದಾಯಕವಾಗಿತ್ತು. ಬಾಲ್ಯದಲ್ಲಿ ಅವರು ಸೇನೆಯ ಸಮವಸ್ತ್ರ ಧರಿಸಿದ್ದ ಚಿತ್ರಗಳನ್ನು ನೋಡುತ್ತಲೇ ಬೆಳೆದಿದ್ದೆ, ಹೀಗಾಗಿ ಬಾಲ್ಯದಿಂದಲೇ ಸಮವಸ್ತ್ರದ ಹುದ್ದೆಯ ಬಗ್ಗೆ ನಾನು ಒಲವು ಬೆಳೆಸಿಕೊಂಡಿದ್ದೆ. ಇಂಜಿನಿಯರಿಂಗ್ ಪದವಿ ಪೂರ್ಣಗೊಳ್ಳುತ್ತಿದ್ದಂತೆಯೇ ಆರ್ಕಿಟೆಕ್ಚರ್‌ ನಿಂದ ವಿಮುಖನಾಗಿ, ಸಿವಿಲ್ ಅಥವಾ ಪೊಲೀಸ್ ಸೇವೆಗೆ ಸೇರಲು ನಿರ್ಧರಿಸಿದೆ. ಮಂಗಳೂರಿನ ಏಸ್ ಅಕಾಡೆಮಿಯಲ್ಲಿ ಮೊದಲು ತರೆಬೇತಿ ಪಡೆದೆ. 

►ಭಟ್ಕಳ ಪಟ್ಟಣ ಕೆಲವು ತಪ್ಪು ಕಾರಣಗಳಿಂದಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಈ ಬಗ್ಗೆ ಏನಂತೀರಿ?

ನಿಜಕ್ಕೂ ಆ ಬಗ್ಗೆ ನಾನೆಂದೂ ತಲೆ ಕೆಡಿಸಿಕೊಂಡಿರಲಿಲ್ಲ. ಕೆಲವೊಮ್ಮೆ ಜನರು ಭಟ್ಕಳದ ಬಗ್ಗೆ ಪೂರ್ವಗ್ರಹ ಪೀಡಿತ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ, ಎಲ್ಲರೂ ಅದೇ ಮನೋಭಾವದವರಾಗಿರುವುದಿಲ್ಲ. ನನಗೆ ನನ್ನ ಶೈಕ್ಷಣಿಕ ಬದುಕಿನಲ್ಲಿ ಅಂತಹ ಯಾವುದೇ ಅಡೆತಡೆ ಬಂದಿಲ್ಲ. 

►ನಿಮಗೆ ಈ ಪರೀಕ್ಷೆ ಎದುರಿಸಿ ಯಶಸ್ವಿಯಾಗಲು ಬೆಂಬಲ ನೀಡಿದ್ದು ಯಾರು ?

ನಿಸ್ಸಂಶಯವಾಗಿ ನನ್ನ ಕುಟುಂಬ. ನನ್ನ ತಂದೆ, ತಾಯಿ ಸದಾ ನನ್ನ ಬೆಂಬಲವಾಗಿ ನಿಲ್ಲಲು ತುಂಬ ಕಷ್ಟಪಟ್ಟಿದ್ದಾರೆ. ನನ್ನ ಜೀವನದ ಪ್ರತಿಯೊಂದು ಹಂತಗಳಲ್ಲೂ ನನ್ನ ಕುಟುಂಬ ನನ್ನೊಂದಿಗಿತ್ತು. ವಿಶೇಷವಾಗಿ ನನ್ನ ತಾಯಿ ನನಗಾಗಿ ಬಹಳ ಶ್ರಮಪಟ್ಟಿದ್ದಾರೆ. ಅದನ್ನೆಂದೂ ಮರೆಯಲು ಸಾಧ್ಯವಿಲ್ಲ. 

►ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉತ್ತಮ ಅಂಕಗಳೊಂದಿಗೆ ಪಾಸ್ ಮಾಡುವುದು ಹೇಗೆ?

ಪ್ರತಿಯೊಂದು ಪರೀಕ್ಷೆಗೂ  ತನ್ನದೇ ಆದ ಸವಾಲುಗಳು ಮತ್ತು ಅಗತ್ಯಗಳಿರುತ್ತವೆ. ಎರಡನೆಯದಾಗಿ ಪ್ರತಿಯೊಂದೂ ಪರೀಕ್ಷೆಯಲ್ಲಿಯೂ ಪೈಪೋಟಿ ತೀರ ಹೆಚ್ಚಾಗುತ್ತಿದೆ. ಕೇವಲ 0.1 ಅಂಕದಿಂದಲೂ ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್ ಆಗಬಹುದು ಅಥವಾ ವಿಫಲವಾಗಬಹುದು. ಒಟ್ಟಾರೆಯಾಗಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಕನಿಷ್ಠ 2-3 ವರ್ಷಗಳ ಕಠಿಣ ಪರಿಶ್ರಮ ಅಗತ್ಯ  .

►ನಿಮ್ಮ ಯಶಸ್ಸಿನ ಮಂತ್ರವೇನು? ಇಂತಹ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆ ಮಾತ್ರವಲ್ಲ, ಉನ್ನತ 50ರಲ್ಲಿ ಸ್ಥಾನ ಪಡೆಯಲು ನಿಮಗೆ ಸಾಧ್ಯವಾಗಿದ್ದು ಹೇಗೆ?

ನಾನು ಯುಪಿಎಸ್‌ಸಿ ಪರೀಕ್ಷೆಗಾಗಿ ತಯಾರಿಯನ್ನು ಆರಂಭಿಸಿದ್ದೆ.  ಬಳಿಕ ಪಿಎಸ್‌ಐ ಪರೀಕ್ಷೆಗೆ ಹಾಜರಾಗಿದ್ದೆ. ರಿವಿಶನ್ ಅಥವಾ ಪುನರ್‌ ಮನನ ಮತ್ತು ಸಮಯದ ಸದುಪಯೋಗ ಇವೆರಡೇ ಕಠಿಣ ಪರೀಕ್ಷೆಗಳನ್ನು ದಾಟಲು ನೆರವಾಗುವ ಕೌಶಲಗಳು. ಇದರ ಹೊರತಾಗಿ ಪರೀಕ್ಷೆಗೆ ಹಾಜರಾಗುವ ಎಲ್ಲ ಅಭ್ಯರ್ಥಿಗಳ ಜ್ಞಾನದ ಮಟ್ಟ ಹೆಚ್ಚುಕಡಿಮೆ ಒಂದೇ ಆಗಿರುತ್ತದೆ. ವ್ಯತ್ಯಾಸವನ್ನುಂಟು ಮಾಡುವುದು ಏಕಾಗ್ರತೆಯಿಂದ ಮಾಡುವ ಪುನರ್‌ಮನನ ಮಾತ್ರ.

►ಓರ್ವ ಪೊಲೀಸ್ ಅಧಿಕಾರಿಯಾಗಿ ಸಮಾಜಕ್ಕೆ ಯಾವ ರೀತಿಯ ಸೇವೆ ನೀಡಲು ನೀವು ಬಯಸಿದ್ದೀರಿ?

ಇದನ್ನು ನಾನು ‘ಸಮಾಜಕ್ಕೆ ಸೇವೆ’ಗಿಂತಲೂ ‘ಸಮಾಜಕ್ಕೆ ನೆರವು’ ಎಂದು ಹೇಳಲು ಬಯಸುತ್ತೇನೆ. ನಾವು  ಜನರನ್ನು ಸಮರ್ಥರನ್ನಾಗಿಸಬೇಕು. ಪೊಲೀಸ್ ಎನ್ನುವುದು ಎಂದಾದರೂ ಏನಾದರೂ ಸಂಭವಿಸಿದಾಗ ಜನತೆ ಮತ್ತು ಸರಕಾರದ ನಡುವಿನ ಮೊದಲ ಕೊಂಡಿ. ಹೀಗಾಗಿ ಪೊಲೀಸ್ ವೃತ್ತಿಯು ಜನರೊಂದಿಗೆ ನಿಕಟವಾಗಿ ಬೆರೆಯಲು ನೆರವಾಗುತ್ತದೆ. ಇದೇ ಕಾರಣದಿಂದ ನಾನು ಪೊಲೀಸ್ ಇಲಾಖೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ.

►ಯುಪಿಎಸ್‌ಸಿಯಂತಹ ಇತರ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಯೋಜನೆ ಇದೆಯೇ?

ಹೌದು, ಖಂಡಿತವಾಗಿಯೂ ಇದೆ. ನಾನು ಸದಾ ಜನತೆ ಮತ್ತು ಸಮಾಜಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ. ಹೀಗಾಗಿ ನಾನು ಎಷ್ಟೇ ಉತ್ತಮ ಸ್ಥಾನವನ್ನೂ ತಲುಪಿದರೂ ಈ ನನ್ನ ನಿಲುವಿಗೆ ಬದ್ಧನಾಗಿರುತ್ತೇನೆ. ಹೀಗಾಗಿ ಇದಕ್ಕಿಂತ ಉನ್ನತ ಮತ್ತು ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಸದವಕಾಶ ದೊರೆತರೆ, ಆ ಅವಕಾಶಕ್ಕೆ ನಾನು ಅರ್ಹ ಎಂದು ಖಚಿತವಾದರೆ ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ.

►ನಾಗರಿಕ ಸೇವೆಯನ್ನು ಸೇರಬಯಸುವ ವಿದ್ಯಾರ್ಥಿಗಳಿಗೆ  ನಿಮ್ಮ ಸಲಹೆ ಏನು?

ನೋಡಿ, ಶಾಲಾ ಶಿಕ್ಷಣ ನಿರ್ಣಾಯಕವಾದ ಭಾಗ ನಿಜ. ಆದರೆ, ಭವಿಷ್ಯ ಎಲ್ಲವೂ ಅಲ್ಲಿಯೇ ನಿರ್ಧಾರವಾಗುವುದಿಲ್ಲ. ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದೆ. ಹೀಗಾಗಿ ಸಾಧಾರಣ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭೇದಿಸಲು ಸಾಧ್ಯವಿಲ್ಲ ಎಂದು ಅರ್ಥವಲ್ಲ. ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯೇ ಆಗಿರಬೇಕು ಎಂದೇನಿಲ್ಲ. ಆಸಕ್ತಿ, ಉತ್ಸಾಹ ಏನೇ ಇರಲಿ, ದೃಢನಿರ್ಧಾರ, ಕಠಿಣ ಪರಿಶ್ರಮ, ಏಕಾಗ್ರತೆಯಿಂದ ಅಧ್ಯಯನ ಮುಖ್ಯ . ಅತ್ಯುತ್ತಮ ಪ್ರಯತ್ನವು ಖಂಡಿತ ಯಶಸ್ಸನ್ನು ತಂದುಕೊಡುತ್ತದೆ. ಎಲ್ಲಕ್ಕಿಂತ ಹೆಚ್ಚು ಮುಖ್ಯವಾದುದು, ಮಾಡುವ ಕೆಲಸದಲ್ಲಿ ಸಂಪೂರ್ಣ ತೃಪ್ತಿ ಇರಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)