varthabharthi

ಕರಾವಳಿ

‘ಒಗ್ಗಟ್ಟಾಗಿ ತಳಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ಪಾಲ್ಗೊಳ್ಳೋಣ’

ವಾರ್ತಾ ಭಾರತಿ : 11 Sep, 2019

ಉದ್ಯಾವರ, ಸೆ.11: ಕಾಂಗ್ರೆಸ್‌ನ ಅಭಿವೃದ್ಧಿ ಮತ್ತು ಜನಪರ ಕೆಲಸಗಳನ್ನು ಎದುರಿಸಲಾಗದೇ ಬಿಜೆಪಿಯವರು ಧರ್ಮ, ಗಡಿ, ಸೈನ್ಯ ಮೊದಲಾದ ಭಾವನಾತ್ಮಕ ಸಂಗತಿಗಳನ್ನು ಮುನ್ನಲೆಗೆ ತಂದು ಅಪಪ್ರಚಾರ ಮಾಡಿ ಜನತೆಯ ಮಾನಸಿಕತೆಯನ್ನು ಭಾವನಾತ್ಮಕವಾಗಿ ಭ್ರಷ್ಟಗೊಳಿಸಿ ಅಧಿಕಾರವನ್ನು ಹಿಡಿದಿರ ಬಹುದು. ಇದೇನೂ ಶಾಶ್ವತವಲ್ಲ. ಜನರಿಗೆ ಇವರ ಮೋಸದ ಅರಿವಾದಾಗ ಖಂಡಿತಾ ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಉದ್ಯಾವರದಲ್ಲಿ ನಡೆದ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಹೀಗಾಗಿ ನಮ್ಮ ಕಾರ್ಯಕರ್ತರು ದೃತಿಗೆಡಬೇಕಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸೋಲು ಏನೂ ಹೊಸತಲ್ಲ. ಸೋತ ಕಾಂಗ್ರೆಸ್ ಪಕ್ಷ ಫಿನಿಕ್ಸ್‌ನಂತೆ ಎದ್ದು ಬಂದ ಇತಿಹಾಸ ನಮ್ಮ ಮುಂದೆ ಇದೆ. ನಾವೆಲ್ಲಾ ಒಗ್ಗಟ್ಟಾಗಿ ತಳಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಪಾಲ್ಗೊಳೋಣ ಎಂದವರು ಹೇಳಿದರು.

ರಾಜ್ಯದ ಇಂದಿನ ಸ್ಥಿತಿ ಕಂಡಾಗ ವಿಧಾನಸಭಾ ಚುನಾವಣೆ ಈ ವರ್ಷಾಂತ್ಯದಲ್ಲಿ ಬರುವ ಸಾಧ್ಯತೆಗಳು ಇವೆ. ಅದರೊಂದಿಗೆ ಪಂಚಾಯತ್ ಚುನಾವಣೆಗಳೂ ನಮ್ಮ ಮುಂದಿದೆ. ಈ ಬಗ್ಗೆ ನಾವು ಗಂಭೀರವಾಗಿ ಆಲೋಚನೆ ಮಾಡಿ ಕಾರ್ಯೋನ್ಮುಖರಾಗಬೇಕಾಗಿದೆ. ಪಂಚಾಯತ್ ಚುನಾವಣೆಗೆ ಈಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೆಲಸ ಪ್ರಾರಂಭಿಸಲು ಬೂತು ಮಟ್ಟದ ಸಂಘಟನೆ ಮಾಡಬೇಕು ಎಂದರು.

ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ದೇಶದ ಆರ್ಥಿಕ ಸ್ಥಿತಿ ಕಂಡು ಕೇಳರಿಯದ ರೀತಿಯಲ್ಲಿ ಕುಸಿಯುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಆದರೆ ನಮ್ಮನ್ನಾಳುವ ಮಂದಿಗೆ ಇದು ತಟ್ಟುತ್ತಾ ಇಲ್ಲ. ಲಕ್ಷಾಂತರ ಜನ ಉದ್ಯೋಗಕೊಂಡರೆ ಇವರು ಅದರ ಎದುರು ಪಾಕಿಸ್ತಾನ ತಂದು ನಿಲ್ಲಿಸುತ್ತಾರೆ. ಪ್ರತಿ ಸಮಸ್ಯೆಗೂ ಭಾವನಾತ್ಮಕ ವಿಷಯವನ್ನು ತಂದು ವಿಷಯದ ಗಂಭೀರತೆಯನ್ನು ತಿಳಿಗೊಳಿಸುತ್ತಾರೆ. ಈ ರೀತಿಯಲ್ಲಿ ಬಿಜೆಪಿಯ ಜನರ ದಾರಿ ತಪ್ಪಿಸುವ ಹುನ್ನಾರವನ್ನು ವಿಫಲಗೊಳಿಸಲು ನಮ್ಮ ಕಾರ್ಯಕರ್ತರು ಸಜ್ಜಾಗಬೇಕು ಎಂದರು.

ಅಧ್ಯಕ್ಷತೆಯನ್ನು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ ್ಷಗಿರೀಶ್‌ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಉಪಸ್ಥಿತರಿದ್ದರು. ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಆಬಿದ್ ಆಲಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)